Saturday, 23rd November 2024

ಕಾಂಗ್ರೆಸಿಗರೇ, ಜವಾಹರ್ ಪಾಯಿಂಟ್ ನೆನಪಿದೆಯೇ?

-ಗುರುರಾಜ್ ಗಂಟೆಹೊಳೆ

ಅಖಂಡ ಭಾರತವು ‘ವಿಶ್ವಗುರು’ ಪರಿಕಲ್ಪನೆಯೊಂದಿಗೆ ವಿಶ್ವದೆಲ್ಲೆಡೆ ತನ್ನ ಹಿರಿಮೆಯನ್ನು ಸಾರುತ್ತಿರುವ ಕಾಲಮಾನವಿದು. ಶಿಕ್ಷಣ, ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸ್ವಂತಿಕೆ ಮೆರೆಯುತ್ತ, ತನ್ನದೇ ಆದ ಸತ್ವದ ಮೇಲೆ ನಮ್ಮ ಹೆಮ್ಮೆಯ ಭಾರತ ಮುನ್ನಡೆಯುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಎಂಬಂತೆ ಚಂದ್ರಯಾನ-೩ ಯಶಸ್ವಿಯಾಗಿದ್ದು, ಇಡೀ ದೇಶವೇ ಈ ಸಂಭ್ರಮವನ್ನು ಆಚರಿಸುತ್ತಿದೆ. ವೇದಗಳ ಕಾಲದಲ್ಲಿಯೇ
ವಿಜ್ಞಾನದಲ್ಲಿ ಪ್ರಗತಿಯನ್ನು ಕಂಡಿದ್ದ ಭಾರತ ಇಂದಿಗೂ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯಿಂದ ಸಾಕಷ್ಟು ಹಿರಿಮೆಗೆ ಪಾತ್ರವಾಗಿದೆ. ಭಾರತದ ಕಲೆ, ವಾಸ್ತುಶಿಲ್ಪಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿರುವ ಅಂಶಗಳಾಗಿವೆ.  ದೈವಿಕ, ಸಾಂಸ್ಕೃತಿಕ ಪರಂಪರೆ ನಮ್ಮ ಭವ್ಯಭಾರತದ ಮೇರುಶಿಖರಗಳಾಗಿವೆ. ಆದರೆ ಭಾರತದಲ್ಲಿರುವ ಕೆಲವು ತಥಾಕಥಿತ ಬುದ್ಧಿಜೀವಿಗಳಿಗೆ ಇದರ ಮಹತ್ವ ತಿಳಿಯದೇ ಇರುವುದು ನಿಜಕ್ಕೂ ವಿಪ
ರ್ಯಾಸ ಎನ್ನಬಹುದು. ಚಂದ್ರಯಾನ-೩ ಉಡಾವಣೆಯ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ರಾಕೆಟ್ ಮಾದರಿಯೊಂದಿಗೆ ತೆರಳಿ ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ತಿಮ್ಮಪ್ಪನಲ್ಲಿ ಪ್ರಾರ್ಥಿಸಲಾಗಿತ್ತು.

ಇಲ್ಲಿಂದ ಪ್ರಾರಂಭವಾಯಿತು ಬುದ್ಧಿಜೀವಿಗಳ ಟೀಕೆ. ಅದು ಚಂದ್ರಯಾನವಾ, ಮಂಗಳಯಾನವಾ ಎಂದು ತಿಳಿಯದ ಮಟ್ಟಿಗೆ ತಲೆ ಕೆಡಿಸಿಕೊಂಡ ಬುದ್ಧಿಜೀವಿಗಳು ಇಂದಿಗೂ ತಮ್ಮ ಅಸೂಯೆಯನ್ನು ಹೊರಹಾಕಲಾಗದೆ ಸಂದಿಗ್ಧ ಪರಿಸ್ಥಿತಿಗೆ ತಲುಪಿದ್ದಾರೆ. ಇವರಲ್ಲಿ ಕೆಲವರು ಮಾಧ್ಯಮದ ಎದುರು ನಿಂತು ಹಿಂದೂಧರ್ಮವನ್ನು ತೆಗಳಿ, ಜೀವನದಲ್ಲಿ ಕಷ್ಟ ಬಂದಾಗ ದೇವರ ಸನ್ನಿಧಿಗೆ ಹೋಗಿ ಶಾಂತಿ ಮಾಡಿಸುವುದನ್ನು, ಹವನ-ಹೋಮಗಳನ್ನು ಮಾಡಿಸಿ ತಮ್ಮ ಪಾಪ ತೊಳೆದುಕೊಳ್ಳುವುದನ್ನು ನೆನಪಿಸಿಕೊಂಡರೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುವುದುಂಟು! ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನನೌಕೆ ಇಳಿಸಿದ ವಿಶ್ವದ ಮೊಟ್ಟಮೊದಲ ದೇಶವೆನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು, ಈ ಸಂಭ್ರಮವನ್ನು ಇಸ್ರೋ ತಂಡದೊಂದಿಗೆ ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದರು. ‘ಬೆಳಗ್ಗೆ ಬೇಗ ಬರುತ್ತೇನೆ, ನನ್ನನ್ನು ಅಭಿನಂದಿಸುವ ಕೆಲಸವನ್ನೆಲ್ಲ ಇಟ್ಟುಕೊಳ್ಳಬೇಡಿ’ ಎಂದು ರಾಜ್ಯ ಬಿಜೆಪಿಗೆ ಮೋದಿ ತಿಳಿಸಿದ್ದರು. ಆದರೂ ಅವರ ಆಗಮನದ ವೇಳೆ ನಮ್ಮ ಬಿಜೆಪಿ ನಾಯಕರು ಮೋದಿ ಮೇಲಿನ ಅಭಿಮಾನದಿಂದ ರಸ್ತೆ ಬದಿಯಲ್ಲಿ ನಿಂತು ಅವರಿಗೆ ಸ್ವಾಗತ ಕೋರಿದ್ದರು. ಇದನ್ನೇ ಕಾರಣವಾಗಿಟ್ಟುಕೊಂಡ ಕಾಂಗ್ರೆಸ್ ತೀರಾ ಕೀಳುಮಟ್ಟಕ್ಕಿಳಿದು ಬಿಜೆಪಿ ನಾಯಕರನ್ನು ಟೀಕಿಸತೊಡಗಿತು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಮೋದಿಯವರು ‘ಶಿವಶಕ್ತಿ ಪಾಯಿಂಟ್’ ಎಂದು ಹೆಸರಿಟ್ಟ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ರಶೀದ್ ಅಲ್ವಿ ಪ್ರತಿಕ್ರಿಯೆ ನೀಡಿ, ‘ಚಂದ್ರನ ಮೇಲೆ ಹೆಗ್ಗುರುತು ನಾಮಕರಣ ಮಾಡುವ ಅಧಿಕಾರ ಮೋದಿಗಿಲ್ಲ’ ಎಂದು ಗುಡುಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಚಂದ್ರಯಾನದಲ್ಲಿ ನಾವು ಯಶಸ್ವಿಯಾಗಿದ್ದು ಖುಷಿಯ ವಿಚಾರ; ಆದರೆ ಚಂದ್ರನ ಅಥವಾ ಅಲ್ಲಿಯ ಒಂದು ಬಿಂದುವಿನ ಮಾಲೀಕರಾಗಲು ಸಾಧ್ಯವಿಲ್ಲ’ ಎಂದಿದ್ದಾರೆ. ರಶೀದ್ ಅಲ್ವಿ ಅವರೇ, ಹಾಗಾದರೆ ೨೦೦೮ರ ನವೆಂಬರ್ ೧೪ರಂದು ಇಸ್ರೋ ‘ಮೂನ್ ಇಂಪ್ಯಾಕ್ಟರ್ ಪ್ರೋಬ್’ ಅನ್ನು ಕಳುಹಿಸಿದ್ದು, ಅದರ ಲ್ಯಾಂಡಿಂಗ್ ಪಾಯಿಂಟ್ ಅನ್ನು ‘ಜವಾಹರ್
ಪಾಯಿಂಟ್’ ಎಂದು ಹೆಸರಿಸಲು ಅವಕಾಶ ಕೊಟ್ಟಿದ್ದು ಯಾರು? ಆವಾಗ ನಿಮಗೆ ಹಕ್ಕಿನ ಅರಿವಿರಲಿಲ್ಲವೇ?

ಮೋದಿಯವರು, ‘ಶಿವನು ಸಕಾರಾತ್ಮಕ ಶಕ್ತಿಯ ಸ್ವರೂಪವಾದ ಕಾರಣ, ನಮ್ಮ ವಿಜ್ಞಾನಿಗಳ ಈ ಸಾಧನೆಗೆ ಸಂಪ್ರದಾಯಬದ್ಧವಾಗಿ ಹೆಸರಿಡೋಣ’ ಎಂದು ಹೇಳಿ ‘ಶಿವಶಕ್ತಿ ಪಾಯಿಂಟ್’ ಎಂದು ಹೆಸರಿಸಿದ್ದರು. ಆದರೆ ಈಗ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದು, ಅವರ ಕೋಪವಿರುವುದು ಶಿವನ ಮೇಲಾ ಅಥವಾ ಮೋದಿಯವರ ಮೇಲಾ? ಎಂಬ ಗೊಂದಲ ಶುರುವಾಗಿದೆ! ಭಾರತದ ನಾನಾ ಭಾಗಗಳಲ್ಲಿ ಜವಾಹರಲಾಲ್ ನೆಹರು ಹೆಸರಿನಲ್ಲಿ ವಿಶ್ವವಿದ್ಯಾಲಯ, ಕ್ರೀಡಾಂಗಣ, ಸಂಸ್ಥೆ, ರಸ್ತೆಗಳನ್ನಷ್ಟೇ ಅಲ್ಲದೆ ಚಂದ್ರನಲ್ಲೂ ನೆಹರು ಹೆಸರು ಸ್ಥಾಪಿಸಿ ವ್ಯಕ್ತಿಪೂಜೆ ಮಾಡುತ್ತಿರುವ ಕಾಂಗ್ರೆಸ್ ನಾಯಕರು, ಈಗ ಮಾತ್ರ ‘ಶಿವಶಕ್ತಿ ಪಾಯಿಂಟ್’ ಎನ್ನುವ ಹೆಸರನ್ನು ಕೇಳಿ ಉರಿದು ಬೀಳುತ್ತಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಮಾತನಾಡಿ, ‘ಈ ಹಿಂದೆ ಚಂದ್ರಯಾನ-೨ ನೌಕೆ ಬಿದ್ದ ಜಾಗಕ್ಕೆ ‘ತಿರಂಗಾ ಪಾಯಿಂಟ್’ ಎಂದೂ, ಚಂದ್ರ ಯಾನ-೩ರ ವಿಕ್ರಮ್ ನೌಕೆ ಲ್ಯಾಂಡ್ ಆದ ಜಾಗಕ್ಕೆ ‘ಶಿವಶಕ್ತಿ ಪಾಯಿಂಟ್’ ಎಂದೂ ಹೆಸರಿಟ್ಟಿದ್ದು ನಮ್ಮೆಲ್ಲರಿಗೂ ಖುಷಿ ತಂದಿದೆ.

ಈ ಹೆಸರುಗಳ ಮಹತ್ವವನ್ನು ಪ್ರಧಾನಿಯವರು ನಮಗೆ ವಿವರಿಸಿದ್ದು, ಇವೆರಡೂ ಹೆಸರುಗಳು ನಮ್ಮ ದೇಶದ ಸಂಕೇತವಾಗಿವೆ. ನಾನೊಬ್ಬ ಅನ್ವೇಷಕನಾಗಿದ್ದು ಹೊರಗೆ ವೈಜ್ಞಾನಿಕ ಅನ್ವೇಷಣೆ ಮಾಡುವುದರ ಜತೆಜತೆಗೆ ಅಧ್ಯಾತ್ಮಿಕವಾಗಿಯೂ ನನ್ನೊಳಗೆ ಅನ್ವೇಷಣೆ ಮಾಡುತ್ತೇನೆ’ ಎಂದಿದ್ದರು. ಚಂದ್ರಯಾನ-೩ರ ಯಶಸ್ಸಿನ ಸಂಭ್ರಮಾಚರಣೆ ಪ್ರಯುಕ್ತ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಚಂದ್ರಯಾನ ಯಶಸ್ಸಿಗೆ ನಾರಿಶಕ್ತಿಯ ಕೊಡುಗೆಯಿದೆ ಎಂದಿದ್ದರು. ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಡೈರೆಕ್ಟರ್ ಹೀಗೆ ಅನೇಕ ಹುದ್ದೆಗಳನ್ನು ನಿರ್ವಹಿಸುವ ಮೂಲಕ ನಾರಿಯರು ಚಂದ್ರಯಾನ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಕೊಂಡಾಡಿದ್ದರು. ದಿನ ಬೆಳಗಾದರೆ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸುವ ಕಾಂಗ್ರೆಸ್ಸಿಗರೇ, ಟೀಕೆ ಯಾವಾಗಲೂ ಆರೋಗ್ಯಕರವಾಗಿರಲಿ ಅಥವಾ ಒಂದೊಳ್ಳೆ ಬದಲಾವಣೆಗೆ ಕಾರಣವಾಗಲಿ. ಕೇವಲ ಧರ್ಮವಿರೋಧಿ ಹಾಗೂ ಕೋಮುವಾದದ ನೀತಿಯನ್ನು ಅನುಸರಿಸಿ ಜನರನ್ನು ಮರುಳುಮಾಡಬಹುದು ಎಂದು ತಿಳಿದಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿಯಷ್ಟೇ. ವಿದೇಶಿ ಶಿಕ್ಷಣ ಪದ್ಧತಿಯ ಪ್ರಭಾವದಿಂದಾಗಿ ಗತಿಸಿಹೋಗಿರುವ ಶೋಧನೆಯ ಶಕ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿರುವ ಇಸ್ರೋ, ಪ್ರಾಚೀನ ವೈಜ್ಞಾನಿಕ ಪರಂಪರೆಯ ವೈಭವದೊಂದಿಗೆ ಸದೃಢವಾಗಿ ನಿಲ್ಲಲು ಸಜ್ಜಾಗಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ.

ಸೂರ್ಯನತ್ತ ಪಯಣಿಸಲಿದೆ ಇಸ್ರೋ:
ಸೂರ್ಯನ ಹೊರಮೈ ವಾತಾವರಣ ಮತ್ತು ಭೂಮಿಯ ಮೇಲೆ ಅದರ ಪರಿಣಾಮಗಳನ್ನು ಅಧ್ಯಯನ ನಡೆಸುವ ಗುರಿ ಹೊಂದಿದೆ ಇಸ್ರೋ. ಇದು ಹಮ್ಮಿಕೊಂಡಿರುವ ‘ಆದಿತ್ಯ-ಎಲ್ ೧’ ಕಾರ್ಯಕ್ರಮವು ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ಕಾರ್ಯಾಚರಣೆಯಾಗಿದೆ. ಭೂಮಿಯಿಂದ ಸುಮಾರು ೧.೫ ಮಿಲಿಯನ್ ಕಿ.ಮೀ. ದೂರದಲ್ಲಿರುವ ಸೂರ್ಯ-ಭೂಮಿ ವ್ಯವಸ್ಥೆಯ ‘ಲಾಂಗ್ರೇಜ್ ಪಾಯಿಂಟ್ ೧’ ಸುತ್ತಲ ಹಾಲೋ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಲಾಂಗ್ರೇಜ್ ಪಾಯಿಂಟ್‌ಗಳು ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆ ಶಕ್ತಿಗಳ ಆಕರ್ಷಣೆ ಮತ್ತು ವಿಕರ್ಷಣೆಯ ವರ್ಧಿತ ಪ್ರದೇಶಗಳನ್ನು ಉತ್ಪಾದಿಸುತ್ತವೆ. ಅಂದರೆ ಇವು ಬಾಹ್ಯಾಕಾಶದಲ್ಲಿ ‘ಪಾರ್ಕಿಂಗ್ ಸ್ಪಾಟ್’ಗಳಾಗಿದ್ದು, ಬಾಹ್ಯಾಕಾಶ ನೌಕೆಯು ಕನಿಷ್ಠ ಇಂಧನ ಬಳಕೆಯೊಂದಿಗೆ ಸ್ಥಿರ ಸ್ಥಾನದಲ್ಲಿ ಉಳಿಯಲು ಇವನ್ನು ಬಳಸಬಹುದು. ಇದರಿಂದ ಸೂರ್ಯನನ್ನು ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ವೀಕ್ಷಿಸಲು ಸಾಧ್ಯವಿದೆ. ಸೂರ್ಯನ ಕರೋನಾ, ವರ್ಣಗೋಳ ಮತ್ತು ಫೋಟೋ ಸ್ಫಿಯರ್ ಅನ್ನು ಅಧ್ಯಯನ ಮಾಡುವುದು ‘ಆದಿತ್ಯ-ಎಲ್ ೧’ ಮಿಷನ್‌ನ ಉದ್ದೇಶ. ಜತೆಗೆ ಇದು ಸೂರ್ಯನಿಂದ ಹೊರಹೊಮ್ಮುವ ಕಣದ ಹರಿವು ಮತ್ತು ಕಾಂತೀಯ ಕ್ಷೇತ್ರದ ಶಕ್ತಿಯ ವ್ಯತ್ಯಾಸವನ್ನು ಅಧ್ಯಯನ ಮಾಡುತ್ತದೆ. ಇದರ ಉಡಾವಣೆಗೆಂದು ಪಿಎಸ್‌ಎಲ್‌ವಿ ಕ್ಷಿಪಣಿಯನ್ನೇ ಬಳಸುವುದಾಗಿ ಇಸ್ರೋ ತಿಳಿಸಿದೆ.

ಆರು ವಿಶೇಷ ಉಪಕರಣಗಳನ್ನು ಪ್ರತ್ಯೇಕ ಉದ್ದೇಶಗಳಿಗಾಗಿ ಈ ಉಪಗ್ರಹದಲ್ಲಿ ಅಳವಡಿಸಲಾಗಿದ್ದು, ಸೂರ್ಯನ ಮೇಲ್ಮೈ ಅಧ್ಯಯನಕ್ಕಾಗಿ ಇವು ನೀಡುವ ಕೊಡುಗೆ ತುಂಬಾ ಉಪಯುಕ್ತವಾಗಿರುತ್ತದೆ ಎನ್ನಲಾಗಿದೆ.
ಸೂರ್ಯನ ಅತ್ಯಂತ ಹೊರಭಾಗದ ಅನಿಲ ಪದರವಾದ ಕರೋನಾದ ಅಧ್ಯಯನಕ್ಕಾಗಿ ‘ವಿಸಿಬಲ್ ಎಮಿಷನ್ ಕರೋನಾಗ್ರಾಫ್’ ಅಳವಡಿಸಲಾಗಿದ್ದರೆ, ಸೂರ್ಯನ ಛಾಯಾಚಿತ್ರಗಳನ್ನು ತೆಗೆಯುವುದಕ್ಕೆಂದು ‘ಸೋಲಾರ್ ಅಲ್ಟ್ರಾವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್’ ಇದೆ. ಸೂರ್ಯನ ಮೇಲ್ಮೈಯಲ್ಲಿ ವಿವಿಧ ಭಾಗಗಳ ಉಷ್ಣತೆ ಯನ್ನು ಎಕ್ಸ್‌ರೇ ಬೆಳಕಿನ ಮೂಲಕ ತಿಳಿದುಕೊಳ್ಳಲು ‘ಸೋಲಾರ್ ಲೋ ಎನರ್ಜಿ ಸ್ಪೆಕ್ಟ್ರೋಮೀಟರ್’ ಮತ್ತು ಸೂರ್ಯನ ಮೇಲ್ಮೈ ಮೇಲೆ ನಡೆಯುವ ಸ್ಫೋಟಗಳ ಅಧ್ಯಯನಕ್ಕಾಗಿ ‘ಹೈ ಎನರ್ಜಿ ಎಲ್೧ ಆರ್ಬಿಟಿಂಗ್ ಎಕ್ಸ್ ರೇ ಸ್ಪೆಕ್ಟ್ರೋಮೀಟರ್’ ವ್ಯವಸ್ಥೆಗೊಳಿಸಲಾಗಿದೆ. ಸೂರ್ಯನು ವಾತಾವರಣಕ್ಕೆ ಬಿಡುಗಡೆಗೊಳಿಸುವ ವಿಂಡ್ ಕಣಗಳನ್ನು ವೀಕ್ಷಿಸಲು ‘ಆದಿತ್ಯ ಸೋಲಾರ್‌ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್’ ಅಳವಡಿಸಲಾಗಿದೆ. ಬಾಹ್ಯಾಕಾಶದಲ್ಲಿ ಹವಾಮಾನ ಕೇಂದ್ರದ ರೀತಿಯಲ್ಲಿ ಕೆಲಸ
ಮಾಡುವ ‘ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ’ ಎಂಬ ಉಪಕರಣವನ್ನು ಅಳವಡಿಸಲಾಗಿದೆ. ಭೂಮಿಯ ಹತ್ತಿರವಿರುವ ಮತ್ತು ಬಾಹ್ಯಾಕಾಶದಲ್ಲಿರುವ ಕಾಂತಕ್ಷೇತ್ರಗಳ ದಿಕ್ಕನ್ನು ಅಳೆಯಲು ‘ಮ್ಯಾಗ್ನೆಟೋಮೀಟರ್’ ಅನ್ನು ಕೂಡ ಉಪಗ್ರಹದಲ್ಲಿ ವ್ಯವಸ್ಥಿತವಾಗಿ ಅಳವಡಿಸಲಾಗಿದೆ.

ಬಾಹ್ಯಾಕಾಶದಲ್ಲಿರುವ ವಿಸ್ಮಯಗಳನ್ನು ಜಗತ್ತಿಗೆ ತಿಳಿಸಲು ಅಮೆರಿಕ, ಚೀನಾ ಮತ್ತು ರಷ್ಯಾ ಪೈಪೋಟಿ ನಡೆಸುತ್ತಿರುವುದು ಗೊತ್ತೇ ಇದೆ. ವಿವಿಧ ಗ್ರಹಗಳು ಮತ್ತು ಉಪಗ್ರಹಗಳ ಕುರಿತಾದ ಅಧ್ಯಯನದ ಮೂಲಕ
ಅಽಪತ್ಯ ಸ್ಥಾಪಿಸುವ ನಿಟ್ಟಿನಲ್ಲಿ ಈ ಅಗ್ರದೇಶಗಳು ಕೆಲಸ ಮಾಡುತ್ತಲೇ ಇವೆ. ಆದರೆ ಇವುಗಳಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರುವ ಇಸ್ರೋ, ತನ್ನ ಮೇಧಾವಿ ವಿಜ್ಞಾನಿ ಗಣವನ್ನು ಉಪಯೋಗಿಸಿ ಜಗತ್ತಿನ ಚೈತನ್ಯಪುಂಜವಾದ ಸೂರ್ಯನ ರಹಸ್ಯವನ್ನು ಭೇದಿಸಲು ಹೊರಟಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಪ್ರಮುಖ ಹೆಜ್ಜೆಯಾಗಿದೆ. ಜಾಗತೀಕರಣದ ಪ್ರಭಾವದಿಂದಾಗುತ್ತಿರುವ ಪ್ರತಿಭಾ
ಪಲಾಯನವು ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಹೇಳುವ ಕಾಲವೀಗ ಕಳೆದುಹೋಗಿದೆ. ‘ದೇಶಕ್ಕಾಗಿ ಸೇವೆ ಸಲ್ಲಿಸುತ್ತೇವೆ’ ಎಂದು ಸ್ವಾಭಿಮಾನದಿಂದ ಎದೆತಟ್ಟಿ ಹೇಳುವ ಮೇಧಾವಿ ವಿಜ್ಞಾನಿಗಳ ಗಣ ಇಂದು ನಮ್ಮೊಂದಿಗಿದೆ. ವಿದೇಶಿ ಶಿಕ್ಷಣ ನೀತಿಯಿಂದಾಗಿ ಗತಿಸಿಹೋದ ಶೋಧನೆಯ ಕಿಚ್ಚನ್ನು ಮತ್ತೆ ಹಚ್ಚಿ, ವೈಜ್ಞಾನಿಕ ಪರಂಪರೆಯ ವೈಭವವನ್ನು ಮರುಸ್ಥಾಪಿಸುವ ಸಲುವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟೊಂಕಕಟ್ಟಿ ನಿಂತಿದೆ. ಚಂದ್ರಯಾನ, ಸೂರ್ಯಯಾನ ದಂಥ ಪ್ರಯೋಗಗಳು ಯಶಸ್ಸನ್ನು ಕಂಡು, ನವಭಾರತದ ಶಕ್ತಿ ಇನ್ನಷ್ಟು ಹೆಚ್ಚಾಗಬೇಕು ಎಂಬುದು ನಮ್ಮೆಲ್ಲರ ಆಶಯ.
(ಲೇಖಕರು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರು)