Thursday, 19th September 2024

ಬುದ್ದೀ ಅನ್ನೋದ್ರಲ್ಲಿ ಅಮ್ಮ ಎನ್ನುವ ಕೂಗಿತ್ತು

-ಡಾ.ಪರಮೇಶ್
ಮಠದಲ್ಲಿ ವ್ಯಾಸಂಗ ಮಾಡುವ ೧೦ ಸಾವಿರ ಮಕ್ಕಳಲ್ಲಿ ೨೦೦ ರಿಂದ ೩೦೦ ಮಕ್ಕಳು ಅನಾಥ ಮಕ್ಕಳಿದ್ದಾರೆ. ಅವರನ್ನ ನೋಡಿಕೊಳ್ಳಲು ಯಾರೂ ಇಲ್ಲ. ಅವರಿಗೆ ತನ್ನವರು ಯಾರು ಎಂಬುದೂ ಕೂಡ ಗೊತ್ತಿಲ್ಲ. ಅಂತಹ ಮಕ್ಕಳ ಬಗ್ಗೆ ಶ್ರೀಗಳಿಗೆ
ಅತೀವ ಕಾಳಜಿ ಇತ್ತು. ‘ಅನಾಥ ಮಕ್ಕಳು ರಾಜ್ಯದಲ್ಲಿ ಎಲ್ಲಾದರೂ ಕಂಡರೆ ತಂದು ಮಠಕ್ಕೆ ಬಿಡಿ’ ಎಂದು ಶ್ರೀಗಳು ಹೋದಲ್ಲೆಲ್ಲಾ ಹೇಳುತ್ತಿದ್ದರು.‘ಅನಾಥ ಮಕ್ಕಳಿಗೆ ನಾವು ಶ್ರೇಷ್ಠವಾದದ್ದೇನಾದರೂ ಕೊಡುವಂತಿದ್ದರೆ. ಅದು
ಪ್ರೀತಿ ವಾತ್ಸಲ್ಯ ಮಾತ್ರ! ಒಂದು ಬೀಜ ಹಣ್ಣಿನಿಂದ ಬೇರ್ಪಟ್ಟು ಭೂಮಿಗೆ ಸೇರಿದಾಗ ಅದಕ್ಕೆ ಗಾಳಿ, ಬೆಳಕು ಎನ್ನುವ ಪ್ರೀತಿ ಸಂಸ್ಕಾರ ಸಿಕ್ಕರೆ, ಹೇಗೆ ಅದು ಭೂಮಿಯ ಆಳಕ್ಕೆ ಬೇರನ್ನ ಬಿಟ್ಟು ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತದೆಯೋ, ಹಾಗೆ, ಅನಾಥ ಮಕ್ಕಳಿಗೆ ನಾವು ಗಾಳಿ, 
ಬೆಳಕು ಎನ್ನುವ ಅಕ್ಕರೆ, ವಾತ್ಸಲ್ಯವನ್ನ ನೀಡಿದರೆ ಅವರು ಸಮೃದ್ಧವಾಗಿ ಬೆಳೆಯುತ್ತಾರೆ’ ಎಂದು ಶ್ರೀಗಳು ಹೇಳುತ್ತಿದ್ದರು.

ಮಠದ ಬೇರೆಲ್ಲಾ ಮಕ್ಕಳು ಒಂದೆಡೆಯಾದರೆ, ಯಾರೂ ಇಲ್ಲದ ಮಕ್ಕಳಿಗೆ ಶ್ರೀಗಳು ಅಕ್ಷರಶಃ ತಾಯಿಯಾಗಿದ್ದರು. ಅವರ ಅಂತಃಕರಣದ ಪ್ರೀತಿಯ ಮಡಿಲಿನಲ್ಲಿ ಮಕ್ಕಳು ಬೆಳೆಯುತ್ತಿದ್ದರು.
ರಜಾ ಅವಧಿಯಲ್ಲಿ ಮಕ್ಕಳು ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಎಲ್ಲರನ್ನೂ ಕಳುಹಿಸಿ ಮೂಕ ಭಾವದಿಂದ ತನ್ನವರಾರೂ ಇಲ್ಲವೆಂಬಂತೆ ನೋಡುತ್ತಿದ್ದ ಮಕ್ಕಳ ಬೆನ್ನಮೇಲೆ ಶ್ರೀಗಳ
ಅಮೃತಹಸ್ತ ಸದಾ ಇರುತ್ತಿತ್ತು. ಅಪ್ಪ ಅಮ್ಮ ಯಾರು ಎಂದು ಗೊತ್ತಿಲ್ಲ. ಇತ್ತ ನಿತ್ಯ ಆಡುತ್ತಿದ್ದ ಸ್ನೇಹಿತರೂ ಇಲ್ಲವೆಂದಾಗ ಆ ಮಕ್ಕಳಿಗೆ ನೆನಪಾಗುತ್ತಿದ್ದದ್ದು ಮಾತೃಸ್ವರೂಪಿ ಶ್ರೀಗಳು. ಶ್ರೀಗಳು ಅಷ್ಟೇ,
ಅವರನ್ನ ಅಕ್ಕರೆಯಿಂದ ಪೊರೆಯುತ್ತಿದ್ದರು. ಅನಾಥ ಮಕ್ಕಳಿಗೆ ದೇವರೇ ತಂದೆ ತಾಯಿ. ದೇವರ ಮಕ್ಕಳನ್ನ ನಾವು ಬೀದಿಯಲ್ಲಿ ಬಿಡಬಾರದು. ‘ಎಲ್ಲಾ ಇದ್ದವರು ಏನೂ ಇಲ್ಲದವರಿಗೆ ಆಸರೆಯಾಗಿರುವುದು ನಿಜವಾದ ಮನುಷ್ಯತ್ವ’
ಎಂದು ಸದಾ ಶ್ರೀಗಳು ಹೇಳುತ್ತಿದ್ದರು. ರಜಾ ದಿನಗಳಲ್ಲಿ ಆ ಮಕ್ಕಳು ನಿತ್ಯ ಶ್ರೀಗಳು ಶಿವಪೂಜೆ ಮುಗಿಸಿ ಬರುವ ವೇಳೆಗೆ ಮಠದ ಅವರ ಕಚೇರಿಯ ಪ್ರಾಂಗಣದಲ್ಲಿ ಕುಳಿತಿರಬೇಕಿರುತ್ತಿತ್ತು.
ಬಂದ ತಕ್ಷಣ ಶ್ರೀಗಳು ಮಕ್ಕಳನ್ನ ಸುತ್ತಲೂ ಕುಳ್ಳಿರಿಸಿಕೊಂಡು ಒಬೊಬ್ಬರನ್ನೇ ಮಾತನಾಡಿಸುತ್ತಾ ಅವರ ಬೆನ್ನು ತಡವುತ್ತಾ, ಅವರಿಗೆ ಕಥೆ ಹೇಳುತ್ತಾ ಅವರಿಗೆ ಇರುವ ಕೊರಗನ್ನ ನಿವಾರಿಸುತ್ತಿದ್ದರು. 
ಮಕ್ಕಳು ತಮ್ಮ ಜನ್ಮಕ್ಕೆ ಕಾರಣವಾಗಿ ಬೀದಿಗೆ ಬಿಟ್ಟ ತಂದೆ ತಾಯಿಯರ ಬಗ್ಗೆ ಯಾವತ್ತು ಶಾಪ ಹಾಕಿಲ್ಲ. ಕಾರಣ,ಶ್ರೀಗಳು,‘ಪ್ರತಿಯೊಂದು ಜೀವಿಯ ಹುಟ್ಟು ಹೇಗೆ ಆಗುತ್ತದೆ ಎಂಬುದು ಮುಖ್ಯವಲ್ಲ
ಆ ಜೀವಿ ತನ್ನ ಜೀವಿತ ಅವಧಿಯನ್ನ ಮುಗಿಸುವಾಗ ಎಷ್ಟು ಜೀವಗಳು ನೊಂದು ಕಣ್ಣೀರು ಹಾಕುತ್ತವೆ ಎಂಬುದು ಮುಖ್ಯ. ಜನ್ಮ ಕೊಟ್ಟವರು ಅವರು ಕೆಟ್ಟವರಾಗಿದ್ದರೂ ದೇವರೇ. ನೀಡಿದ ಜನ್ಮವನ್ನ
ಸಾರ್ಥಕವಾಗಿಸಿಕೊಳ್ಳುವ ಕಡೆಗೆ ನಮ್ಮ ಗುರಿಯಿರಬೇಕೇ ವಿನಃ ಜನ್ಮ ಕೊಟ್ಟವರ ಬಗ್ಗೆ ಯೋಚಿಸಬಾರದು. ನಾನು ಅನಾಥ ಎಂದು ಕೊಂಡರೆ ನಮ್ಮ ಬದುಕಿನ ಒಳಗಣ್ಣು ಚಿಕ್ಕದಾಗುತ್ತದೆ. ನಾನು ದೇವರ ಮಗ ಎಂದುಕೊಂಡರೆ ನಮ್ಮ ದೃಷ್ಟಿ
ವಿಸ್ತಾರವಾಗುತ್ತದೆ’ ಎಂದು ಮಕ್ಕಳಿಗೆ ಹೇಳುತ್ತಿದ್ದರು. ಕೆಲ ಮಕ್ಕಳು ತಮ್ಮ ಒಂಟಿತನದ ಯಾತನೆಯಿಂದ ಬಿಸಿ ಗಾಜಿನಂತಾಗಿ ಶ್ರೀಗಳು ಮುಟ್ಟಿದರೆ ಸಾಕು ಕಣ್ಣೀರು ತುಂಬಿಕೊಂಡು ಬಿಕ್ಕಳಿಸುತ್ತಿದ್ದರು.
ಶ್ರೀಗಳು ಅವರನ್ನ ಅತ್ಯಂತ ಪ್ರೇಮದಿಂದ ಮಾತನಾಡಿಸಿ ಸಿಹಿ ನೀಡಿ ಮುದ್ದಿಸುತ್ತಿದ್ದರು. ತನ್ನವರಾರು ಎಂದು ಗೊತ್ತಿಲ್ಲದ ಮಕ್ಕಳ ಕಣ್ಣಲ್ಲಿ ನೋವಿನ ಕಣ್ಣೀರು ತುಂಬಿ, ತಾಯಿಯಾದ ಶ್ರೀಗಳ ಮೇಲಿನ ಭಕ್ತಿ ಪರಿವರ್ತನೆಯಾಗಿ
ತುಳುಕುತ್ತಿತ್ತು. ‘ಬುದ್ದೀ’ ಅನ್ನೋದ್ರಲ್ಲಿ ‘ಅಮ್ಮ’ ಎನ್ನುವ ಕೂಗಿತ್ತು.