Saturday, 23rd November 2024

ಗುರುಭಕ್ತಿ ದಿನಾಚರಣೆಗಷ್ಟೇ ಸೀಮಿತವಾಗದಿರಲಿ

-ಬಸವನಗೌಡ ಹೆಬ್ಬಳಗೆರೆ

ಹಿಂದಿನ ಕಾಲದಲ್ಲಿ ವದ್ಯಾರ್ಥಿಗಳು ಗುರುಗಳನ್ನು ಹೆಚ್ಚು ಗೌರವಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ಧೋರಣೆಯೂ ಬದಲಾಗಿದೆ. ಇದಕ್ಕೆ ಆಧುನೀಕರಣದ ಪ್ರಭಾವ, ಕೆಲ ನಿಯಮಗಳು, ತಂದೆ-ತಾಯಿಯರು ತಮ್ಮ ಮಕ್ಕಳ ಬಗ್ಗೆ ತೋರುವ “ಧೃತರಾಷ್ಟ್ರ ಪ್ರೇಮ” ಕಾರಣವಿರಬಹುದು.

‘ದೇಶವೊಂದರ ಭವಿಷ್ಯವು ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ’ ಎನ್ನುತ್ತದೆ ಕೊಠಾರಿ ಶಿಕ್ಷಣ ಆಯೋಗ. ಅದು ಸಾಧ್ಯವಾಗುವುದು ಓರ್ವ ಸಮರ್ಥ ಶಿಕ್ಷಕನಿಂದಲೇ ವಿನಾ, ಕೊಠಡಿಯ ‘ಸ್ಟೇಟಸ್’ನಿಂದಲ್ಲ. ಇತ್ತೀಚೆಗೆ ಗೂಗಲ್‌ನಲ್ಲಿ ‘ಉದಾತ್ತ ಉದ್ಯೋಗ’ ಯಾವುದು? ಎಂದು ಶೋಧಿಸಿದಾಗ ‘ಶಿಕ್ಷಕ ವೃತ್ತಿ’ ಎಂದೇ ತೋರಿಸಿತು. ಸೇವೆಗೈಯಬಹುದಾದ ವಿವಿಧ ವೃತ್ತಿಗಳಿದ್ದರೂ, ಅವನ್ನು ಸೃಜಿಸುವ ಕಾರ್ಯ ಶಿಕ್ಷಕರದಾಗಿರುವುದರಿಂದ ಈ ವೃತ್ತಿಯ ಮೇಲೆ ಅಪಾರ ಜವಾಬ್ದಾರಿಯಿದೆ. ಒಬ್ಬ ಎಂಜಿನಿಯರ್ ತಪ್ಪು ಮಾಡಿದರೆ ಒಂದು ಯೋಜನೆ ಹಾಳಾಗಬಹುದು, ಒಬ್ಬ ವೈದ್ಯ ತಪ್ಪುಮಾಡಿದರೆ ರೋಗಿಯ ಆರೋಗ್ಯದಲ್ಲಿ ವ್ಯತ್ಯ
ಯವಾಗಬಹುದು. ಆದರೆ ಓರ್ವ ಶಿಕ್ಷಕ ತಪ್ಪು ಮಾಡಿದರೆ ಇಡೀ ಜನಾಂಗವೇ ಹಾಳಾಗುತ್ತದೆ ಎನ್ನುತ್ತಾರೆ ಬಲ್ಲವರು. ಹೆತ್ತವರು ಮಕ್ಕಳಿಗೆ ಜನ್ಮಕೊಡಬಹುದು, ಆದರೆ ಆ ಜೀವದ ಜೀವನವನ್ನು ಬದಲಿಸುವ ಶಕ್ತಿ ಗುರುವಿಗಿದೆ. ಇದಕ್ಕೆಂದೇ ‘ಮಾತೃದೇವೋಭವ’, ‘ಪಿತೃದೇವೋಭವ’ ನಂತರ ‘ಆಚಾರ್ಯ ದೇವೋಭವ’ ಎಂದಿದ್ದಾರೆ ನಮ್ಮ ಪೂರ್ವಿಕರು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದ, ‘ಹರ ಮುನಿದರೂ ಗುರು ಕಾಯುವನು’ ಎಂಬ ಮಾತು ಗುರುವಿನ ಮಹತ್ವವನ್ನು ಸಾರುತ್ತವೆ.

‘ದೇವರು ಹಾಗೂ ಗುರು ನನ್ನೆದುರು ನಿಂತರೆ ಮೊದಲು ಗುರುವಿಗೆ, ನಂತರ ದೇವರಿಗೆ ನಮಸ್ಕರಿಸುತ್ತೇನೆ’ ಎಂದಿದ್ದಾರೆ ಕಬೀರದಾಸರು. ಗುರುವಿನ ಶಿಷ್ಯಪ್ರೇಮ ಮತ್ತು ಶಿಷ್ಯನ ಗುರುಭಕ್ತಿಯ ಕುರಿತು ಇತಿಹಾಸದ ಪುಟಗಳಲ್ಲಿ ಹಲವಾರು ಕಥನಗಳಿವೆ. ಶಿಕ್ಷಕ ವೃತ್ತಿಯ ಬಗ್ಗೆ ಇಷ್ಟೆಲ್ಲಾ ಹೇಳಿದ್ದರೂ, ಇಂದು ಬಹುತೇಕರು ಡಾಕ್ಟರ್, ಎಂಜಿನಿಯರ್ ಆಗಲು ಇಷ್ಟಪಡುತ್ತಾರೆಯೇ ವಿನಾ, ಶಿಕ್ಷಕ ವೃತ್ತಿ ಅವರ ಆದ್ಯತೆಯಲ್ಲ. ಒಂದೊಮ್ಮೆ
ಶಿಕ್ಷಕರಾದರೂ ‘ By chance’ ಆಗಿ ಆ ವೃತ್ತಿಯನ್ನು ಅಪ್ಪುವರೇ ವಿನಾ, ‘ By choice’ ಆಗಿ ಅಲ್ಲ! ಬೇಗ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂಬ ಆಸೆಯಿಂದ ಶಿಕ್ಷಕ ತರಬೇತಿ ಕೋರ್ಸ್‌ಗಳಿಗೆ ಸೇರುವವರ ಸಂಖ್ಯೆ ಹೆಚ್ಚಿದೆ. ಮಾಸ್ಟರ್ ಡಿಗ್ರಿ ಓದಿದ್ದು ಶಿಕ್ಷಕ ವೃತ್ತಿ ಸೇರಲು ಬಯಸುವವರಿಗೆ ಬಿ.ಎಡ್ ಕಡ್ಡಾಯ ಮಾಡಿರುವುದರಿಂದ ಆ ಕೋರ್ಸ್‌ಗೆ ಸೇರುವವರ ಸಂಖ್ಯೆ ಹೆಚ್ಚಿದೆ. ಇಂದು ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕ ತರಬೇತಿ ಕೋರ್ಸ್ ಮುಗಿಸದೆ ಬರೀ ಡಿಗ್ರಿ ಓದಿರುವವರನ್ನೇ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಮಕ್ಕಳ ಕಲಿಕೆಯ ದೃಷ್ಟಿಯಲ್ಲಿ ಅಷ್ಟೊಂದು ಸಮಂಜಸ ನಡೆಯಲ್ಲ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಹೆಚ್ಚು ಗೌರವಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ಧೋರಣೆಯೂ ಬದಲಾಗಿದೆ. ‘ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಹೊಡೆದು ಬುದ್ಧಿಯ ಕಲಿಸಿದೊಡೆ ಮಹಾಪ್ರಸಾದವೆಂದ
ನಯ್ಯಾ, ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಯ್ದು ಬುದ್ಧಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯ, ದ್ವಾಪರ ಯುಗದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯಾ, ಕಲಿ ಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದೊಡೆ ಮಹಾಪ್ರಸಾದವೆಂದನಯ್ಯಾ, ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು’ ಎಂಬ
ಅಲ್ಲಮಪ್ರಭುವಿನ ವಚನವು ಬದಲಾಗಬಹುದಾದ ಗುರು- ಶಿಷ್ಯರ ಬಾಂಧವ್ಯದ ಬಗ್ಗೆ ಬಹು ಹಿಂದೆಯೇ ಸೂಕ್ಷ್ಮವಾಗಿ ತಿಳಿಸಿದೆ! ಅಂತೆಯೇ ಅಂದು ‘ಗುರುವೇ ನಮಃ’ ಎಂದು ಇದ್ದದ್ದು ಇಂದು ‘ಗುರುವೇನು ಮಹಾ?’ ಎಂದು ಕೇಳುವಂತಾಗಿದೆ! ಇದಕ್ಕೆ ಆಧುನೀಕರಣದ ಪ್ರಭಾವ, ಕೆಲ ನಿಯಮಗಳು, ತಂದೆ-ತಾಯಿಯರು ತಮ್ಮ ಮಕ್ಕಳ ಬಗ್ಗೆ ತೋರುವ ‘ಧೃತರಾಷ್ಟ್ರ ಪ್ರೇಮ’ ಕಾರಣವಿರಬಹುದು.

ಇಂದು ಶಿಕ್ಷಕ ಶಿಕ್ಷಕನಾಗಿ ಉಳಿದಿಲ್ಲ. ಶಿಕ್ಷಣ ನಿಂತ ನೀರಲ್ಲ, ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಅಂತೆಯೇ ಶಿಕ್ಷಕನ ಹೆಸರೂ ಬದಲಾಗಿದೆ. ಅವನು ಸುಗಮಕಾರನಾಗಿದ್ದಾನೆ, ಅನುಕೂಲಿಸುವವ, ಮಾರ್ಗದರ್ಶಿ ಆಗಿದ್ದಾನೆ. ಬೋಧನಾ ಕಲಿಕಾ ತಂತ್ರಗಳು ಬದಲಾಗಿವೆ. ಶಿಕ್ಷಣ ಪ್ರಕ್ರಿಯೆಯಲ್ಲಿ ಬರುವ ವಿದ್ಯಾರ್ಥಿ, ಪಠ್ಯಕ್ರಮ, ಶಿಕ್ಷಕ ಇವುಗಳಲ್ಲಿ ಮೊದಲು ಗುರುಕೇಂದ್ರಿತ ಪದ್ಧತಿ, ನಂತರ ಪಠ್ಯಕ್ರಮ ಕೇಂದ್ರಿತ ಪದ್ಧತಿ, ತದನಂತರ ವಿದ್ಯಾರ್ಥಿ ಕೇಂದ್ರಿತ ಪದ್ಧತಿಯಾಗಿ ಬದಲಾಗಿದೆ. ಹಿಂದಿನಂತೆ ಮಕ್ಕಳು ಜ್ಞಾನವನ್ನು ಬರೀ ಶಿಕ್ಷಕನಿಂದಲೇ ಕಲಿಯಬೇಕೆಂದಿಲ್ಲ. ಕಲಿಯಲು ಬೇಕಾದಷ್ಟು ಅವಕಾಶಗಳಿವೆ. ಹಣ ಕೊಟ್ಟರೆ ಮನೆಗೇ ಬಂದು ಟ್ಯೂಷನ್ ಹೇಳಿಕೊಡುವ ಮೇಷ್ಟ್ರುಗಳಿದ್ದಾರೆ. ಆನ್‌ಲೈನಿನಲ್ಲಿ ಕಲಿಯೋ ಅವಕಾಶಗಳಿವೆ. ಈ ಕಾರಣಗಳಿಂದಾಗಿ ಶಿಕ್ಷಕನನ್ನೇ ಅವಲಂಬಿಸಿ ಕಲಿಯಬೇಕಾದ ಅನಿವಾರ್ಯ ಇಲ್ಲ ಎಂಬ ಮನೋಸ್ಥಿತಿ ಮಹಾನಗರಗಳಲ್ಲಿ ಇದ್ದರೆ, ಇವ್ಯಾವ ಸೌಲಭ್ಯವಿಲ್ಲದ ಹಳ್ಳಿ  ಕಡೆಗಳಲ್ಲಿ ಇಂದಿಗೂ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ.

ಆದ್ದರಿಂದ, ಶಿಕ್ಷಕನೂ ವೃತ್ತಿದಕ್ಷತೆಯಿಂದ ಬೋಧಿಸಬೇಕು. ಶಾಲೆಯ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಿ ಅವರನ್ನು ಕಲಿಕೆಗೆ ಪ್ರೇರೇಪಿಸಬೇಕು. ಇಂದು ಸಮಾಜ ಬದಲಾಗಿದೆ. ಶಾಲೆಯು ಸಮಾಜದ ಒಂದು ಭಾಗ. ಶಾಲೆಯ ಪ್ರಮುಖ ಅಂಗವಾದ ಶಿಕ್ಷಕನೂ ಸಮಾಜದ ಭಾಗವೇ. ಹಾಗಾದರೆ ಅವರೂ ಬದಲಾಗ ಬೇಕಲ್ಲವೇ? ಸಮಾಜದಲ್ಲಿರುವ ಪ್ರತಿಯೊಬ್ಬರೂ ಬದಲಾಗಿ ಶಿಕ್ಷಕ ಮಾತ್ರ ಹಿಂದಿನಂತೆಯೇ ಇರಬೇಕು ಅನ್ನೋದು
ಯಾವ ನ್ಯಾಯ? ಯಾಕೆಂದರೆ ಕೆಲವರು ಶಿಕ್ಷಕರ ಉಡುಗೆ ತೊಡುಗೆಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ನಮ್ಮ ಕಾಲದಲ್ಲಿ ನಮ್ಮ ಮೇಷ್ಟ್ರು ಹಾಗಿದ್ದರು, ಹೀಗಿದ್ದರು ಎಂದು ಕಥೆ ಹೇಳುವುದಕ್ಕೆ ಶುರು ಮಾಡುತ್ತಾರೆ. ‘ಹಿಂದೆ ಎಂಥಾ ಗುರು ಪರಂಪರೆ ಇತ್ತು. ದ್ರೋಣರಿಗೆ ಏಕಲವ್ಯ ಹೆಬ್ಬೆರಳನ್ನೇ ಕೊಟ್ಟಿದ್ದ’ ಎಂದು ಭಾಷಣ ಮಾಡುತ್ತಾರೆ. ಅವರ ಮಾತಿನಂತೆ ಆಗುವುದಾದರೆ ಹಿಂದಿನವರು ಕೊಡುತ್ತಿದ್ದ ಶಿಕ್ಷೆಯನ್ನು ಈಗಿನವರು ಅಪ್ಪಿ ತಪ್ಪಿ
ಕೊಟ್ಟರೆ ಪೋಷಕರಾದವರು ಸುಮ್ಮನೆ ಇರುತ್ತಾರೆಯೇ? ಒಂದೊಮ್ಮೆ ದ್ರೋಣರಂಥ ಗುರುಗಳು ಇಂದು ಇದ್ದಿದ್ದರೆ ಅವರ ಸ್ಥಿತಿ ಏನಾಗುತ್ತಿತ್ತು ಎಂದು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ! ಆದಾಗ್ಯೂ, ತೀರಾ ಹಿಂದಿನವರಂತೆ ಅಲ್ಲದಿದ್ದರೂ ಸಭ್ಯ ರೀತಿಯಲ್ಲಿರುವ ಉಡುಪುಗಳನ್ನು ಶಿಕ್ಷಕ ವೃತ್ತಿಯವರು ಧರಿಸಿದರೆ ಚೆಂದವೇನೋ. Consciously teachers teach what they know but unconsciously they teach what they are ಎಂಬ ಮಾತು, ಶಿಕ್ಷಕರ ಪ್ರತಿ ನಡೆಯೂ ಉತ್ತಮವಾಗಿರಬೇಕು ಎಂಬುದರ ದ್ಯೋತಕ. ಇಂದು ಕಲಿಯಲು ಏನೆಲ್ಲಾ ತಂತ್ರಜ್ಞಾನಗಳಿದ್ದರೂ ಅವು ಶಿಕ್ಷಕನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಏಕೆಂದರೆ ಅವು ನೀಡಬಹುದಾದ ಜ್ಞಾನ ಮಕ್ಕಳ ‘ಐಕ್ಯೂ’ವನ್ನು (ಇಂಟೆಲಿಜೆನ್ಸ್ ಕೋಷಂಟ್) ಹೆಚ್ಚಿಸಬಹುದಷ್ಟೇ. ಆದರೆ ಮಕ್ಕಳ ‘ಇಕ್ಯೂ’(ಇಮೋಷನಲ್ ಕೋಷಂಟ್), ‘ಎಸ್ ಕ್ಯೂ’(ಸೋಷಿಯಲ್ ಕೋಷಂಟ್), ‘ಎಕ್ಯೂ’ (ಅಡ್ವರ್ಸಿಟಿ ಕೋಷಂಟ್) ಹೀಗೆ ಸಮಾಜದಲ್ಲಿ ಉತ್ತಮನಾಗಿ ಬಾಳ ಬೇಕಾದ ಈ ಎಲ್ಲಾ ಕೋಷಂಟ್‌ಗಳನ್ನು ಹೆಚ್ಚಿಸಲು ಯಾವುದೇ ತಂತ್ರಜ್ಞಾನದಿಂದ ಸಾಧ್ಯವಿಲ್ಲ. ಅದಕ್ಕೇನಿದ್ದರೂ ಶಿಕ್ಷಕರು ಬೇಕು. ಭವ್ಯ ಜನಾಂಗವನ್ನು ನಿರ್ಮಿಸುವ ಅವಕಾಶ ಶಿಕ್ಷಕರಿಗಿದೆ. ಇದಕ್ಕಾಗಿ ಅವರು ಹೆಮ್ಮೆ ಪಡಬೇಕು.

ಆದರೆ, ತಮ್ಮ ವೃತ್ತಿಗಿಂತ ಸೈಡ್ ಬಿಜಿನೆಸ್‌ಗೆ ಹೆಚ್ಚು ಗಮನ ಕೊಡುವ ಶಿಕ್ಷಕರು ಎಲ್ಲೋ ಕೆಲವರು ಇರಬಹುದು. ಹಾಗಂತ ಎಲ್ಲರನ್ನೂ ಅದೇ ರೀತಿ ನೋಡುವುದು ತಪ್ಪು. ಇಂದಿಗೂ ಅನೇಕ ಶಿಕ್ಷಕರು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ತಮ್ಮ ವೃತ್ತಿಯ ಜತೆಜತೆಗೆ ಇಲಾಖೆ ವಹಿಸಿದ ಇತರೆ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅಂಥ ಎಲ್ಲಾ ಮಹನೀಯರನ್ನೂ ಗೌರವಿಸಲು ಆಚರಿಸುವ ಹಬ್ಬವೇ
ಶಿಕ್ಷಕರ ದಿನ. ಆದರೆ ಈ ದಿನ ಮಾತ್ರವೇ ಅವರನ್ನು ಹೊಗಳಿ ಅಟ್ಟಕ್ಕೇರಿಸುವಂತಾಗಬಾರದು; ಅವರ ಬೇಡಿಕೆಗಳನ್ನೂ ಈಡೇರಿಸಬೇಕು. ‘ಶಿಕ್ಷಕರ ದಿನ’ ಎಂಬ ಈ ಆಚರಣೆಯನ್ನು ಶಿಕ್ಷಕರು ತಾವೇ ಆಚರಿಸಿಕೊಳ್ಳುವಂತಾಗಬಾರದು. ಮಕ್ಕಳ ಜತೆಗೆ ಊರವರೆಲ್ಲಾ ಸೇರಿ ಆಚರಿಸಿ ಸಂಭ್ರಮಿಸುವಂತಾಗಬೇಕು. ಈ ಗೌರವವೂ ಈ ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಮಗೆ ವಿದ್ಯೆ ಕಲಿಸಿದವರನ್ನು ಪ್ರತಿ ಕ್ಷಣವೂ ಆರಾ
ಧಿಸಬೇಕು. ಆಗಲೇ ಇಂಥ ಪರಿಕಲ್ಪನೆಗೆ ಸಾರ್ಥಕ್ಯ ಒದಗುತ್ತದೆ.
(ಲೇಖಕರು ಪ್ರೌಢಶಾಲಾ ಶಿಕ್ಷಕರು)