Thursday, 19th September 2024

ಶಿಕ್ಷಕರಿಗೆ ಸಮಷ್ಟಿಜ್ಞಾನ ಬೇಕು

-ಎನ್.ಆರ್.ಪವಿತ್ರ

ಇಂದು ಶಿಕ್ಷಕನ ಪಾತ್ರ ಬದಲಾಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಹಾಗೆ ಶಿಕ್ಷಕರು ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಇಂದಿನ ಶಿಕ್ಷಕರು ಹಲವಾರು ಒತ್ತಡಗಳ ನಡುವೆಯೂ ತರಗತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.

ಆಧುನಿಕ ಶಿಕ್ಷಣ ಪದ್ಧತಿಯು ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣವಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನೇ ಗುರಿಯಾಗಿರಿಸುವ ಈ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಒಂದು ಮಗುವಿನ
ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಹಲವಾರು ಪಾತ್ರಗಳನ್ನು ನಿರ್ವಹಿಸಿ ಯಶಸ್ವಿ ಯಾಗುವುದೆಂದರೆ ಅಷ್ಟು ಸುಲಭವಲ್ಲ. ಒಂದು ಕಾಲವಿತ್ತು, ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿರಲೇಬೇಕು, ಗುರುವಿನಿಂದ ಕಲಿಯದ ವಿದ್ಯೆ ವಿದ್ಯೆಯೇ ಅಲ್ಲ ಎಂದು ಸಮಾಜ ಒಪ್ಪಿತ್ತು. ಆದರೆ ಇಂದು ಕಾಲ ಬದಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಶಿಕ್ಷಣ ಪದ್ಧತಿಯಲ್ಲಿ ಮಗುವಿನ ಕಲಿಕೆಗೆ ಹಲವಾರು ರೀತಿಯಲ್ಲಿ ಅವಕಾಶಗಳಿವೆ. ಇಂದಿನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಕಲಿಕೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಚಟುವಟಿಕೆ ಆಧಾರಿತ ಕಲಿಕೆಗೆ (activity based learning) ಹೆಚ್ಚು ಮಹತ್ವ ವಿದೆ. ಶಿಕ್ಷಕರಾದವರು ಸೃಜನಾತ್ಮಕ ಚಟುವಟಿಕೆಗಳನ್ನು ಸಿದ್ಧಪಡಿಸಿ ಕಲಿಕಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಅವರಿಗೆ ತಂತ್ರಜ್ಞಾನದ ಅರಿವು ಹಾಗೂ ತಾವು
ಮಾಡುವ ಪಾಠದ ಬಗ್ಗೆ ಸಮಗ್ರ ತಿಳಿವಳಿಕೆ ಇರಬೇಕು. ಆಗ ಮಾತ್ರವೇ ಚಟುವಟಿಕೆ ಆಧಾರಿತ ಶಿಕ್ಷಣ ಯಶಸ್ವಿಯಾಗಲು ಸಾಧ್ಯ. ಇದೇ ರೀತಿಯಲ್ಲಿ ‘outcome based education’ ಎಂಬ ಪರಿಕಲ್ಪನೆ ಮೂಲಕ ಶಿಕ್ಷಣ ನೀಡುವುದು ಇಂದಿನ ದಿನಗಳಲ್ಲಿ ಬಹುಚರ್ಚಿತ ವಿಷಯವಾಗಿದೆ. ಈ ವ್ಯವಸ್ಥೆಯಲ್ಲಿ, ಪ್ರತಿ ಹಂತದಲ್ಲಿ ಮಗುವಿನ ಕಲಿಕೆಯನ್ನು ಗಮನಿಸಿ ಮೌಲ್ಯಮಾಪನ ಮಾಡುವ ಮೂಲಕ ಶಿಕ್ಷಣ ನೀಡಲಾಗುವುದು. ಇಲ್ಲಿ ಶಿಕ್ಷಕರಾದವರು ತಾವು ಪಾಠ-ಪ್ರವಚನ ಮಾಡುವಾಗ ಸರಿಯಾದ ಕ್ರಮ ಅಳವಡಿಸಿಕೊಂಡಾಗ ಮಾತ್ರ ಪ್ರತಿ ಹಂತದಲ್ಲೂ ಅವರು ಮೌಲ್ಯಮಾಪನ ಮಾಡಲು ಸಾಧ್ಯ. ಈ ಬಗ್ಗೆ ಅವರಿಗೆ ಸಮಷ್ಟಿ ಜ್ಞಾನವಿರಬೇಕಾದ್ದು
ಅಗತ್ಯ.

ಒಂದು ಮಗುವಿಗೆ ಶಿಕ್ಷಣ ನೀಡುವ ಪ್ರಕ್ರಿಯೆಯಲ್ಲಿ ಹಲವರು ಪ್ರಮುಖ ಪಾತ್ರ ವಹಿಸುವರು. ಅದರಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಗುವಿಗೆ ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಾಣ ಮಾಡಿದಾಗ ಮಾತ್ರ ಕಲಿಕೆಯು ಸರಳ ಮತ್ತು ಸುಲಭವಾಗಲು ಸಾಧ್ಯ. ಆದರೆ ಇಂದು ಪೋಷಕರು ನಾನಾ ಕಾರಣದಿಂದ ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ‘ಮೆಂಟರ್’ ಎಂಬ ಪರಿಕಲ್ಪನೆ ಶಿಕ್ಷಣ ವ್ಯವಸ್ಥೆಯಲ್ಲಿ ಬಹು ಚರ್ಚಿತ ವಿಷಯವಾಗಿದೆ. ಗುರುವಾದವನು ಪ್ರತಿಯೊಂದು ಮಗುವಿಗೂ ಮೆಂಟರ್ ಸ್ಥಾನದ ಮೂಲಕ ಪೋಷಕರ ಪಾತ್ರ ನಿರ್ವಹಿಸಬೇಕಾಗಿದೆ. ಈ ಪಾತ್ರ ಮೇಲ್ನೋಟಕ್ಕೆ ಸರಳವಾಗಿ ಕಂಡುಬಂದರೂ, ಅದರ ಆಳ-ಅಗಲ-ವ್ಯಾಪ್ತಿ ಸಂಕೀರ್ಣವಾಗಿವೆ. ಇದನ್ನು ಶಿಕ್ಷಕರು ನಿಭಾಯಿಸುವುದು ಸುಲಭವಲ್ಲ.  ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮೌಲ್ಯವನ್ನು ಬೆಳೆಸುವುದು ಶಿಕ್ಷಣದ ಪ್ರಮುಖ ಉದ್ದೇಶ.

ಇದನ್ನು ನಾವು ಮೌಲ್ಯಾಧಾರಿತ ಶಿಕ್ಷಣ ಎನ್ನುತ್ತೇವೆ. ಪ್ರತಿಯೊಬ್ಬ ಶಿಕ್ಷಕರಿಗೂ ಸಾಮಾಜಿಕ ಮೌಲ್ಯದ ಬಗ್ಗೆ ಅರಿವಿರಬೇಕು, ಶಿಕ್ಷಣದಲ್ಲಿ ಆ ಮೌಲ್ಯಗಳನ್ನು ಹೇಗೆ ಅಳವಡಿಸಬೇಕು ಎಂಬ ಬಗ್ಗೆ ಸ್ಪಷ್ಟಕಲ್ಪನೆ ಇರಬೇಕು. ಮೌಲ್ಯಯುತ ಶಿಕ್ಷಣದಲ್ಲಿ, ಶಿಕ್ಷಕರು ತಮ್ಮ ವೈಯಕ್ತಿಕ ಬದುಕಿನಲ್ಲೂ ಸಾಮಾಜಿಕ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರವೇ ಅವರು ಆದರ್ಶ ಶಿಕ್ಷಕರಾಗಲು ಸಾಧ್ಯ. ಆದರೆ ಇಂದಿನ ಜಾಗತೀಕರಣ ಯುಗದಲ್ಲಿ ಈ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಪ್ರತಿಯೊಬ್ಬ ಶಿಕ್ಷಕರಿಗೂ ಸವಾಲಿನ ಸಂಗತಿಯಾಗಿದೆ. ಜತೆಗೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸುವ ಅಧಿಕಾರ ಕಡಿಮೆಯಾಗಿದೆ. ಹಾಗೆಯೇ ವಿದ್ಯಾರ್ಥಿಗಳ ಏಕಾಗ್ರತೆ ಯನ್ನು ಹಾಳುಮಾಡುವಂಥ ಸಾಧನಗಳು ಬಹಳಷ್ಟು ಇರುವುದರಿಂದ, ಇವೆಲ್ಲವನ್ನೂ ಮೀರಿ ಜ್ಞಾನ ನೀಡಬೇಕಾದ ವಾತಾವರಣ ನಿರ್ಮಾಣವಾಗಿದೆ.

ಇಂದು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಯೊಬ್ಬ ಗುರುಗಳಿಂದ ಸಾಕಷ್ಟು ನಿರೀಕ್ಷಿಸಲಾಗುತ್ತಿದೆ. ಗುರುವೆನಿಸಿಕೊಂಡವರು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಹಲವಾರು ಸಾಮಾಜಿಕ ಮತ್ತು ಸರಕಾರಿ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಈ  ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದಾಗ, ಪರಿಹಾರಗಳನ್ನೂ ಅವರೇ ಕಂಡುಕೊಳ್ಳಬೇಕಾಗಿದೆ. ಹೀಗೆ, ಶಿಕ್ಷಕರೆನಿಸಿಕೊಂಡವರು ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖಿ ಪಾತ್ರವನ್ನು ನಿರ್ವಹಿಸಬೇಕಾದ ಅನಿವಾರ್ಯ ನಿರ್ಮಾಣವಾಗಿದೆ. ಇವೆಲ್ಲ ಸವಾಲುಗಳನ್ನು ಮೀರಿದ ಶಿಕ್ಷಕರು ಮಾತ್ರವೇ ‘ಆದರ್ಶ ಶಿಕ್ಷಕ’ರಾಗಲು ಸಾಧ್ಯ, ಅಲ್ಲವೇ? ಸ್ವಾಮಿ ವಿವೇಕಾನಂದರು ಓರ್ವ ಆದರ್ಶ ಶಿಕ್ಷಕನಲ್ಲಿರಬೇಕಾದ ಗುಣಗಳ ಬಗ್ಗೆ ಒಮ್ಮೆ ಮಾತನಾಡುತ್ತಾ, ‘ಶಿಕ್ಷಕನ ಕೆಲಸವು ಕೇವಲ ಪ್ರೀತಿಯಿಂದ, ಶುದ್ಧಪ್ರೀತಿಯಿಂದ ಮಾನವ ಕುಲಕ್ಕಾಗಿ ಮಾಡುವ ಕಾಯಕ’ ಎಂದು ತಿಳಿಸಿದರು.

ಶಿಕ್ಷಕರ ಕೆಲಸವು ಒಂದು ಶ್ರೇಷ್ಠವಾದ ವೃತ್ತಿ. ಅದಕ್ಕಿಂತಲೂ ಮುಖ್ಯವಾಗಿ ಅದೊಂದು ಮನೋಧರ್ಮ. “Good teachers are born, not made’ ಎಂಬುದು ಒಂದು ಹಳೆಯ ಉಕ್ತಿ. ಸಮಾಜಸೇವೆಯಲ್ಲಿ ನಿರತನಾದ ಶಿಕ್ಷಕನು ಹಲವು ಕೌಶಲಗಳ ವ್ಯಕ್ತಿಯಾಗಿ, ಮಾರ್ಗದರ್ಶಕನಾಗಿ, ತತ್ತ್ವಜ್ಞಾನಿಯಾಗಿ, ಆಡಳಿತಗಾರನಾಗಿ, ಬೋಧಕನಾಗಿ, ಸ್ನೇಹಿತನಾಗಿ, ಮೇಲ್ವಿಚಾರಕನಾಗಿಯೂ ತನ್ನ ವೃತ್ತಿಧರ್ಮದ ಪಾತ್ರಗಳನ್ನು ನಿರ್ವಹಿಸುವನು.
ಎಲ್ಲಕ್ಕಿಂತ ಮಿಗಿಲಾಗಿ, ನಿಷ್ಕಲ್ಮಶವಾದ ಮಗುವಿನ ಮನಸ್ಸಿನಲ್ಲಿ ತಾಯಿಯ ನಂತರದ ಸ್ಥಾನವನ್ನು ತುಂಬುವನು. ಇಂದು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾ ವಣೆಗಳಾಗಿವೆ. ಇದರ ಜತೆಗೆ ಶಿಕ್ಷಕನ ಪಾತ್ರವೂ ಬದಲಾಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಹಾಗೆ ಶಿಕ್ಷಕರು ಹೊಂದಿಕೊಂಡು ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಇಂದಿನ ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ ಹಾಗೂ ಒತ್ತಡಗಳ
ನಡುವೆಯೂ ತರಗತಿಯ ಕೋಣೆಯಲ್ಲಿ ನವೋತ್ಸಾಹ ದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಇವೆಲ್ಲವೂ ಸಾಧ್ಯವಾಗುವುದು ಅವರು ತಮ್ಮ ವೃತ್ತಿಯನ್ನು ಪ್ರೀತಿಸಿದಾಗ ಮಾತ್ರ. ಒಬ್ಬ ಆದರ್ಶ ಗುರುವಾದವನು
ತಾನು ಮಾಡುವ ಕಾರ್ಯವನ್ನು ನಿಷ್ಠೆಯಿಂದ, ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದಾಗ ಮಾತ್ರ ವಿದ್ಯಾರ್ಥಿಯ ಮನ ಗೆಲ್ಲಲು ಸಾಧ್ಯ ಹಾಗೂ ಸದಾ ಆತನ ಮನದಲ್ಲಿ ಉಳಿಯಲು ಸಾಧ್ಯ.

ಒಬ್ಬ ಉತ್ತಮ ಶಿಕ್ಷಕ ತನ್ನ ವೃತ್ತಿಯನ್ನು ಪ್ರೀತಿಸಿ, ಅದಕ್ಕೆ ನ್ಯಾಯವನ್ನು ಒದಗಿಸಿದರೆ ಮಾತ್ರ ಸಮಾಜದಲ್ಲಿ ಗೌರವವನ್ನು ಸಂಪಾದಿಸುವನು ಮತ್ತು ಗುರುತಿಸಲ್ಪಡುವನು. ಹಾಗಾಗಿ ಅಬ್ದುಲ್ ಕಲಾಂರವರು ತಾವು ರಾಷ್ಟ್ರಪತಿ ಹುದ್ದೆ ತ್ಯಜಿಸಿದ ನಂತರವೂ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದರು. ತಮ್ಮ ಕೊನೆಯ ಉಸಿರಿರುವವರೆಗೂ ಈ ವೃತ್ತಿಯಲ್ಲಿ ಕಳೆದರು. ಇಂಥ ಮಹಾನ್ ವ್ಯಕ್ತಿಯನ್ನು ನೆನೆಯುವುದು ಅಗತ್ಯ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಇಂಥ ಮಹಾನ್ ಚೇತನಗಳನ್ನು ನೆನಪಿಸಿಕೊಳ್ಳಲು ಪ್ರಮುಖ ಕಾರಣ, ಅಲ್ಲವೇ?
(ಲೇಖಕಿ, ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿ)