Thursday, 19th September 2024

ಭಕ್ತಿಯಿಂದ ನೀಡಿದ ಪೊರಕೆ ದೇವರ ಗುಡಿ ಮುಟ್ಟಿತು

– ಡಾ.ಪರಮೇಶ್

ಶ್ರೀಗಳು ದಾನದಿಂದ ಪಡೆಯುತ್ತಿದ್ದ ಪ್ರತಿಯೊಂದಕ್ಕೂ ಬಹಳ ಬೆಲೆ ನೀಡುತ್ತಿದ್ದರು. ಒಮ್ಮೆ ಜಿಲ್ಲೆಯ ಭಾಗಕ್ಕೆ ಹೋದರೆ ಶ್ರೀಗಳು ಮೂರು ದಿನ ಮರಳಿ ಮಠಕ್ಕೆ ಬರುತ್ತಿರಲಿಲ್ಲ. ಆ ಹಳ್ಳಿಗಳಿಗೆ ಹೋಗುವುದು
ಅಲ್ಲಿಯೇ  ಅಲ್ಲಿಯೇ ಇರುವ ಶಾಲೆಯೋ ಅಥವಾ ದೇವಸ್ಥಾನದಲ್ಲಿಯೋ ತಂಗುತ್ತಿದ್ದರು. ಎಂತಹ ಐಷಾರಾಮಿ ವ್ಯವಸ್ಥೆ ಮಾಡಿದ್ದರೂ ಅವರಿಗೆ ಆಗುತ್ತಿರಲಿಲ್ಲ. ‘ಆ ಐಷಾರಾಮಿತ್ವ ನಮ್ಮ ಮನಸ್ಸನ್ನು ಭೋಗ ಜೀವನದ ಕಡೆಗೆ ಸೆಳೆಯುತ್ತದೆ. ಹಾಗಾಗಿ, ನಾವು ಎಂದಿಗೂ ಅಚಲ ಗುರಿಯನ್ನ ಸಾಧಿಸಲು ಸರಳ ಜೀವನ ಶೈಲಿಯ, ವೈರಾಗ್ಯದ ನೆರಳಲ್ಲಿ ಸಾಗಬೇಕೇ ಹೊರತು, ಐಷಾರಾಮಿಯ ಸೆಳೆತಕ್ಕೆ ಸಿಲುಕಿ ಇಲ್ಲಿಯೇ ಉಳಿಯಬಾರದು’ ಎಂಬುದು ಶ್ರೀಗಳ ಸದಾಕಾಲದ ಬದುಕಿನ ತತ್ವಗಳಲ್ಲಿ ಒಂದಾಗಿತ್ತು. ಹೀಗೆ ಹಳ್ಳಿಗಳಿಗೆ ಭಿಕ್ಷಾಟನೆಗೆ ಹೋಗುವಾಗ ಒಮ್ಮೆ ಚಾಮರಾಜನಗರದ ಹಳ್ಳಿಯೊಂದಕ್ಕೆ ಪ್ರಯಾಣ ಬೆಳಸಬೇಕಾಯಿತು. ಅಲ್ಲಿ ನಡೆದ ಘಟನೆಯನ್ನ ಮಠದ ಹಿರಿಯರೊಬ್ಬರು ನನಗೆ ಹೇಳಿದ್ದರು. ಆ ಊರಿನ ಭಕ್ತರು ಪಟ್ಟಿಮಾಡಿದ್ದ ಭಕ್ತರ ಮನೆಗೆ ಶ್ರೀಗಳನ್ನ ಕರೆದುಕೊಂಡು ಹೋಗುತ್ತಿದ್ದರು. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಶ್ರೀಗಳಿಗೆ ಒಂದು ಗುಡಿಸಲು ಕಣ್ಣಿಗೆ ಬೀಳುತ್ತದೆ. ಅದರ ಮುಂದೆ ೫೦ ವರ್ಷದ ಒಬ್ಬಾಕೆ ನಿಂತು ಶ್ರೀಗಳ ಕಡೆಗೆ ಭಕ್ತಿಯಿಂದ ಕೈ ಮುಗಿದು ನಿಂತಿರುತ್ತಾಳೆ. ಶ್ರೀಗಳು ಆಕೆಯನ್ನ ಮಾತನಾಡಿಸಲು ಮುಂದಾಗುತ್ತಾರೆ. ಆದರೆ, ಊರಿನ ಪ್ರಮುಖರು ‘ಬುದ್ದಿ ಆಕೆ ನಿರ್ಗತಿಕಳು. ಅವಳಲ್ಲಿ ನಿಮಗೆ ಕೊಡಲು ಏನೂ ಇಲ್ಲ. ಸಾಕಷ್ಟು ಸಮಯವಾಗಿದೆ, ಹೊರಡೋಣ’ ಎಂದು ಹೊರಡಲು ಮುಂದಾಗುತ್ತಾರೆ. ‘ಇಲ್ಲ ಅವಳಲ್ಲಿ ದಾನಕ್ಕೆ ಏನೋ ಇದೆ’ ಎನ್ನುತ್ತಾ ಶ್ರೀಗಳು ಆಕೆಯ ಗುಡಿಸಲಿನ ಕಡೆಗೆ ನಡೆದೇ ಬಿಡುತ್ತಾರೆ.

ಆ ಹೆಂಗಿಸಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ಗುಡಿಸಲಿನಲ್ಲಿ ಶ್ರೀಗಳಿಗೆ ಚಾಪೆ ಹಾಕುತ್ತಾಳೆ. ಶ್ರೀಗಳ ಕಣ್ಣಿನಲ್ಲೂ ಆ ಭಕ್ತೆಯ ಮನೆಗೆ ಹೋದ ಸಂತಸ. ಆಕೆ ಶ್ರೀಗಳೊಂದಿಗೆ ತಮ್ಮ ಸಂಕಷ್ಟಗಳನ್ನೆಲ್ಲಾ ಹೇಳಿಕೊಳ್ಳುತ್ತಾಳೆ. ತನಗೆ ಮಕ್ಕಳಿಲ್ಲದಿರುವುದು ಗಂಡ ಕುಡಿತ ದಾಸನಾಗಿದ್ದಾನೆ. ಇರೋ ಇನ್ನಷ್ಟು ವರ್ಷದಲ್ಲಿ ನೆಮ್ಮದಿಯಾಗಿ ಸಾಯಲೂ ಆಗುತ್ತಿಲ್ಲ ಎಂದೆಲ್ಲಾ ನೋವನ್ನ ತೋಡಿಕೊಳ್ಳುತ್ತಾಳೆ. ಶ್ರೀಗಳು ತಾಳ್ಮೆಯಿಂದ ಕೇಳಿಸಿಕೊಂಡು ‘ಎಲ್ಲವೂ ಶಿವನಿಚ್ಚೆ. ತಾಯಿ ನೀನು ಈಗ ಅನುಭವಿಸುತ್ತಿರುವ ಸಂಕಟಗಳನ್ನ ಶಿವನಿಗೆ ಅರ್ಪಿಸು. ಶಿವನು ನಿನ್ನ ಸಂಕಟ ನೋಡಲಾಗದೆ ಒಳ್ಳೆಯದನ್ನ ಮಾಡುತ್ತಾನೆ. ಕಾಯಕದ ಬಗ್ಗೆ ನಂಬಿಕೆ ಇಡು’ ಎಂದು ಸಮಾಧಾನ ಮಾಡುತ್ತಾರೆ. ಆ ಮಹಿಳೆಗೆ ಶ್ರೀಗಳಿಗೆ ಉಪಚಾರ ಮಾಡಲು ಏನೂ ಇಲ್ಲದಾಗಿ ‘ಬುದ್ದಿ ನಾನು ಸೋಗೆ ಕಡ್ಡಿಯ ಪೊರಕೆ ಮಾಡಿ, ಮಾರಿ ಜೀವನ ಮಾಡುವವಳು. ನೀವು ಬರ್ತೀರಾ ಎಂದು ಒಂದು ವಾರದ ಹಿಂದೆಯೇ ತಿಳಿಯಿತು. ಇಡೀ ವಾರ ನಿಮ್ಮ ಧ್ಯಾನ ಮಾಡುತ್ತಲೇ ಸೋಗೆಯ ನಾಲ್ಕು ಪೊರೆಕೆಗಳನ್ನ ಮಾಡಿದ್ದೇನೆ. ಅದನ್ನು ಬಿಟ್ಟು ನನ್ನಲ್ಲಿ ಏನೂ ಇಲ್ಲ ದಯಮಾಡಿ ಅರ್ಪಿಸಿಕೊಳ್ಳಿ’ ಎಂದು ಶ್ರೀಗಳಿಗೆ ನೀಡಲು ಮುಂದಾಗುತ್ತಾಳೆ.

ಶ್ರೀಗಳ ಕಣ್ಣಿನಲ್ಲಿ ಆನಂದದ ಭಾಷ್ಪ ತುಂಬಿಕೊಳ್ಳುತ್ತದೆ. ಆಕೆ ಮಹಾದಾನಿಯಾಗಿ ಕಾಣಿಸುತ್ತಾಳೆ. ತಾನು ಒಂದು ತುತ್ತು ಬೇಕೆಂದರೂ ಸೋಗೆ ಕಡ್ಡಿಯ ಪೊರಕೆ ಮಾರಿ ಬದುಕಬೇಕು. ಆದರೆ, ಆಕೆ ಒಂದು ವಾರದಿಂದ ಮಠಕ್ಕಾಗಿ ತನ್ನ ಹೊಟ್ಟೆ ಕಟ್ಟಿಟ್ಟಿದ್ದಳಾ? ಎಂದು ಸಂತೋಷದಿಂದ ಆಕೆಯಿಂದ ಪೊರಕೆಗಳನ್ನ ಸ್ವೀರಿಸುತ್ತಾರೆ. ಸ್ವೀಕರಿಸಿದ ಆ ಪೊರಕೆಗಳನ್ನು, ತಮ್ಮ ಕಾರಿನ ಹಿಂಬದಿ ಸೀಟಿನಲ್ಲೇ ಹಾಕಿಸಿಕೊಂಡು ಬಂದು ಮಠದ ಬೆಟ್ಟದ ಮೇಲಿನ ಸಿದ್ದಲಿಂಗೇಶ್ವರ ಗರ್ಭಗುಡಿಯ ಸ್ವಚ್ಛತೆಗೆ ಕೊಡುವಂತೆ ತಿಳಿಸುತ್ತಾರೆ. ಇದೊಂದು ಉದಾಹರಣೆ ಸಾಕು, ಶ್ರೀಗಳು ದಾನದ ಮಹತ್ವವನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂಬುದಕ್ಕೆ. ಒಬ್ಬ ವ್ಯಕ್ತಿ ತನ್ನಲ್ಲಿ ಹೆಚ್ಚಾಗಿ ಇಟ್ಟಿದ್ದನ್ನ ಕೊಡುವುದು ದಾನವಲ್ಲ. ಯಾವ ವ್ಯಕ್ತಿ ತನಗೆ ಅವಶ್ಯವಾಗಿರುವುದರಲ್ಲೇ ಸ್ವಲ್ಪವನ್ನು ಇನ್ನೊಬ್ಬರಿಗೆ ದಾನವನ್ನಾಗಿ ನೀಡುತ್ತಾನೋ ಅದೇ ನಿಜವಾದ ದಾನ ಎಂದು ಶ್ರೀಗಳು ಸದಾ ಹೇಳುತ್ತಿದ್ದರು. ಇನ್ನೊಮ್ಮೆ ಶ್ರೀಗಳನ್ನು ಭಿಕ್ಷಾಟನೆಯ ಸಮಯದಲ್ಲಿ ಒಂದು ಬಡ ಕುಟುಂಬದ ಹೆಂಗಸು ‘ಬುದ್ದಿ ನಮ್ಮ ಮನೆಗೆ ಬನ್ನೀ’ ಎಂದು ಕರೆಯುತ್ತಾಳೆ. ತಕ್ಷಣವೇ ಶ್ರೀಗಳು ಆಕೆಯ ಮನೆಗೆ ಹೋಗಿ ಬಿಡುತ್ತಾರೆ. ಯಾವ ಸಿದ್ಧತೆಯೂ ಆ ಮನೆಯಲ್ಲಿ ಶ್ರೀಗಳಿಗಾಗಿ ಇರಲಿಲ್ಲ.

ಮನೆಯ ಹೊರಗಿನ ಜಗುಲಿಯಲ್ಲೇ ಶ್ರೀಗಳು ಕೂರುತ್ತಾರೆ. ಆಕೆ ಮತ್ತು ಆಕೆಯ ಗಂಡ ಮನೆಯಲ್ಲಿರುವ ಸಣ್ಣಪುಟ್ಟ ದವಸ ಧಾನ್ಯಗಳೊಂದಿಗೆ ಎಲೆ ಅಡಿಕೆಯ ಮೇಲೆ ಒಂದು ರೂಪಾಯಿಯ ಐದು ನಾಣ್ಯಗಳನ್ನ ಇಟ್ಟು
ಕೊಡುತ್ತಾರೆ. ಶ್ರೀಗಳಿಗೆ ಅದೇ ಪರಮ ದಾನವಾಗಿತ್ತು. ಆ ಐದು ರೂಪಾಯಿಯನ್ನ ಜೋಪಾನದಿಂದ ತಂದು ಶಿವನ ಪೂಜೆಗೆ ಕೊಳ್ಳಬೇಕಿದ್ದ ತೈಲಕ್ಕೆ ಹಣ ಕೊಡಲು ಹೇಳುತ್ತಾರೆ. ಒಂದು ನಿರ್ಗತಿಕ ಹೆಂಗಸಿಂದ ಬಂದ ಪೊರಕೆ ಗರ್ಭಗುಡಿಗೆ ಸೇರಿದರೆ ಒಂದು ಬಡ ಕುಟುಂಬದಿಂದ ಬಂದ ಐದು ರೂ ಶಿವಪೂಜೆಗೆ ತೈಲವಾಗುತ್ತದೆ. ಶ್ರೀಗಳು ತನ್ನ ಬಡವ ಭಕ್ತರು ನೀಡುವ ಒಂದೊಂದು ರೂಪಾಯಿಯ ಮುಂದೆ ಲಕ್ಷ ಲಕ್ಷ ಲೆಕ್ಕವಲ್ಲ. ದಾಸೋಹಕ್ಕಾಗಿ ಭಿಕ್ಷಾಟನೆ ಮಾಡುತ್ತಿದ್ದ ಶ್ರೀಗಳ ಜೋಳಿಗೆ ಭಕ್ತರ ಬೆವರು ಹರಿಸಿ ದುಡಿದ ಒಂದೊಂದು ರೂಪಾಯಿಯಿಂದ ತುಂಬುತ್ತಿತ್ತು. ಅದು ದಾಸೋಹದ ಮೂಲಕ ಮತ್ತದೇ ಬಡವರ ಹೊಟ್ಟೆ ಸೇರುತ್ತಿತ್ತು. ಅದೇ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆಗುತ್ತಿತ್ತು. ದಾನಕ್ಕೂ ಸೇವೆಗೂ ಶ್ರೀಗಳು ಕೊಂಡಿಯಾಗಿದ್ದರು.

Leave a Reply

Your email address will not be published. Required fields are marked *