Thursday, 19th September 2024

ಸ್ವಾತಂತ್ರ್ಯ ಎಂಬುದು ಎಲ್ಲರಿಗೂ ಸಮಾನವಲ್ಲ!

-ಡಾ. ದಯಾನಂದ ಲಿಂಗೇಗೌಡ

ಮೊನ್ನೆ ನನಗೆ ವಿಪರೀತ ಜ್ವರ. ಸಾಧಾರಣವಾಗಿ ಜ್ವರ ಬಂದ ಒಂದೆರಡು ದಿನ ಯಾವುದೇ ಔಷಧ ತೆಗೆದುಕೊಳ್ಳುವುದಿಲ್ಲ. ದೈನಂದಿನ ಕೆಲಸಕ್ಕೆ ಶಕ್ತನಾಗಿದ್ದರೆ, ತಡವಾದರೂ ಪರವಾಗಿಲ್ಲ ತಂತಾನೇ ಜ್ವರ ಕಮ್ಮಿಯಾಗುವವರೆಗೂ ಔಷಧ ಸೇವಿಸುವುದಿಲ್ಲ. ಬೇಗ ಗುಣವಾಗಲೆಂದೋ ಅಥವಾ ಅನವಶ್ಯಕವಾಗಿಯೋ ಯಾವುದೇ ಔಷಧ ಸೇವನೆ ಒಳ್ಳೆಯದಲ್ಲ ಎಂಬುದು ನನ್ನ ಭಾವನೆ. ಆದರೆ ಈ ಬಾರಿ, ಎದ್ದುಕೂರಲೂ ಆಗದಷ್ಟು ಸುಸ್ತು ಉಂಟುಮಾಡಿತ್ತು ಜ್ವರ. ಎರಡು ದಿನವಾದರೂ ಕಡಿಮೆಯಾಗದಿದ್ದಕ್ಕೆ ಮಾತ್ರೆ ತರಿಸಿಕೊಂಡೆ. ಎಂಥ ಜ್ವರವಿದ್ದರೂ ಪ್ಯಾರಾಸಿಟಮಾಲ್ ಸೇವಿಸಿದಾಗ ತಾತ್ಕಾಲಿಕವಾಗಿಯಾದರೂ ಮೈ ತಣ್ಣಗಾಗು
ತ್ತದೆ. ಆದರೆ ಅಂದು ಆಂಟಿಬಯಾಟಿಕ್ಸ್ ಜತೆ ಪ್ಯಾರಾಸಿಟಮಾಲ್ ಮಾತ್ರೆ ತಿಂದರೂ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಮಾತ್ರೆಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿತು. ಬೇರೆ ಕಂಪನಿಯ ಅದೇ ಮಾತ್ರೆಗಳನ್ನು ನುಂಗಿ ದಾಕ್ಷಣ ಜ್ವರ ಮಾಯವಾಯಿತು, ಮೊದಲು ಸೇವಿಸಿದ್ದು ಕಳಪೆ/ನಕಲಿಮಾತ್ರೆ ಎಂಬುದು ಖಾತ್ರಿಯಾಯಿತು. ಮಾತ್ರೆ ಗುಣಮಟ್ಟದ್ದೋ ಅಲ್ಲವೋ ಎಂದು ಸುಲಭವಾಗಿ ಕಂಡುಹಿಡಿಯಬಹುದು, ಕೆಲವೊಮ್ಮೆ ಅದಷ್ಟು ಸುಲಭವಲ್ಲ. ಉದಾಹರಣೆಗೆ, ಮಾತ್ರೆ ಸೇವಿಸಿಯೂ ಕ್ಯಾನ್ಸರ್ ಗುಣವಾಗದಿದ್ದರೆ ಅದಕ್ಕೆ ಕಾರಣ ಕಳಪೆ ಔಷಧವೋ ಅಥವಾ ನಿಜಕ್ಕೂ ಕ್ಯಾನ್ಸರ್ ಬೆಳೆಯುತ್ತಿದೆಯೋ ಎಂದು ಸುಲಭಕ್ಕೆ ತಿಳಿಯಲಾಗದು. ಕಳೆದ ತಿಂಗಳು, ರಕ್ತದ ಕ್ಯಾನ್ಸರ್ ಚಿಕತ್ಸೆಗೆಂದು ಬಳಸಲಾಗುವ ‘ಅಸ್ಪರಿಜಿನಸೇ’ ಎಂಬ ಔಷಧ ಮಾರುವ ೧೦ ಕಳಪೆ ಕಂಪನಿಗಳ ಹೆಸರು ಪ್ರಕಟಿಸಿರುವ ವೈದ್ಯಕೀಯ ನಿಯತಕಾಲಿಕವೊಂದು, ಇವುಗಳ ಔಷಧ ಸೇವಿಸಿದರೆ ಕ್ಯಾನ್ಸರ್ ಗುಣವಾಗದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಭಾರತದ (೧೦) ಮತ್ತು ಚೀನಾದ ಪ್ರತಿಷ್ಠಿತ ಕಂಪನಿಗಳು ಈ ಪಟ್ಟಿಯಲ್ಲಿವೆ! ಕಳಪೆ ಕಂಪನಿಗಳ ಹೆಸರನ್ನು ಹೀಗೆ ಬಹಿರಂಗವಾಗಿ ಪ್ರಕಟಿಸಿದ್ದು ವಿರಳ ಸಂಗತಿ.

ಏಕೆಂದರೆ ಈ ಕಂಪನಿಗಳು ಸರಕಾರಗಳನ್ನೇ ಉರುಳಿಸಬಲ್ಲವು. ಇನ್ನು ಸಾಮಾನ್ಯ ವೈದ್ಯರು ಅವಕ್ಕೆ ಇರುವೆಯಂತೆ! ನಮ್ಮ ಆಸ್ಪತ್ರೆಯಲ್ಲಿ ಔಷಧದ ಗುಣಮಟ್ಟದ ಬಗ್ಗೆ ಗಮನವಿಡಲು ಒಂದು ತಂಡವಿದ್ದು, ನಿರ್ದಿಷ್ಟ ಕಾಯಲೆಗೆ ಸಂಬಂಧಿಸಿ ಆಸ್ಪತ್ರೆಯ ಔಷಧ ಮಳಿಗೆಯಲ್ಲಿ ಯಾವ ಕಂಪನಿಯ ಔಷಧವಿರಬೇಕೆಂಬುದನ್ನು ಅದು ನಿರ್ಧರಿಸುತ್ತದೆ. ಈ ನಿರ್ಧಾರಕ್ಕೆ ವೈದ್ಯರ ಪೂರ್ವಾನುಭವ, ಔಷಧದ ದರ, ಗುಣಮಟ್ಟ ಮತ್ತು ಕೆಲವೊಮ್ಮೆ ಲ್ಯಾಬ್ ಪರೀಕ್ಷೆ ಆಧಾರವಾಗಿರುತ್ತದೆ. ಔಷಧದ ಮೇಲೆ ವೈದ್ಯರು/ರೋಗಿಗಳಿಂದ ದೂರುಗಳಿದ್ದರೆ, ಅಂಥವನ್ನು ಮಳಿಗೆಯಿಂದ ತೆಗೆಯಲಾಗುತ್ತದೆ. ಸಂಸ್ಥೆಗಳ ಮಾಲೀಕತ್ವದ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಇಂಥ ಅನುಕೂಲವನ್ನು ನಿರೀಕ್ಷಿಸಬಹುದು; ಸಣ್ಣಪುಟ್ಟ ಆಸ್ಪತ್ರೆಗಳಲ್ಲಿ ಇಂಥ ತಂಡವಿರಲು ಸಾಧ್ಯವಿಲ್ಲ. ಇಂಥ ವ್ಯವಸ್ಥೆಗೆ ಭಾರಿ ಖರ್ಚು ಬರುವುದರಿಂದ ದೊಡ್ಡ ಕಾರ್ಪೊರೇಟ್ ಇದಕ್ಕೆ ಮುಂದಾಗುವ ಸಂಭವ ಕಮ್ಮಿ. ಇನ್ನು ಸಣ್ಣ ಕ್ಲಿನಿಕ್‌ನ ವೈದ್ಯರು, ರೋಗಿ ಗುಣವಾಗದಿದ್ದರೆ ತಮ್ಮ ಚಿಕಿತ್ಸೆಯಲ್ಲೇ ತಪ್ಪಾಗಿರಬಹುದು ಅಂದುಕೊಳ್ಳು ತ್ತಾರೆಯೇ ವಿನಾ, ಸೀಮಿತಾನುಭವದ ಕಾರಣದಿಂದಾಗಿ ‘ಔಷಧದಲ್ಲಿ ತೊಂದರೆ ಇರಬಹುದು’ ಎಂದು ಯೋಚಿಸುವುದಿಲ್ಲ. ನಮ್ಮಲ್ಲಿ ಮೈಕ್ರೋಬಯಾಲಜಿ ವಿಭಾಗದವರು ಆಂಟಿ ಬಯಾಟಿಕ್ಸ್‌ಗಳ ಗುಣಮಟ್ಟವನ್ನು ಲ್ಯಾಬ್‌ನಲ್ಲಿ ಹಲವು ಸಲ ಪರೀಕ್ಷಿಸಿದ್ದಿದೆ. ಕೆಲವೊಮ್ಮೆ ಶೇ.೩೦ಕ್ಕಿಂತ ಕಡಿಮೆ ಸಾಂದ್ರತೆ ಇರುವುದು, ಕೆಲ ಕಂಪನಿಗಳ ಗಯಳಿಗೆಯಲ್ಲಿ ಔಷಧವೇ ಇಲ್ಲದಿರುವುದೂ ಕಂಡುಬಂದಿದೆ!

ಆದರೆ ಏನೂ ಮಾಡುವಂತಿಲ್ಲ; ಹೆಚ್ಚೆಂದರೆ ಆ ಔಷಧವನ್ನು ನಿಲ್ಲಿಸ ಬಹುದು. ಕಂಪನಿಗೆ ಪತ್ರ ಬರೆದರೆ, ‘ನಮ್ಮ ಔಷಧದಲ್ಲಿ ಯಾವ ತೊಂದರೆಯಿಲ್ಲ, ನಿಮ್ಮ ಪರೀಕ್ಷೆಯಲ್ಲೇ ತಪ್ಪಿರ ಬಹುದು’ ಎಂಬ ಸಿದ್ಧ ಉತ್ತರ ಬರುತ್ತದೆ. ಉತ್ಸಾಹ ವಿದ್ದರೆ, ಕಂಪನಿಗಳ ಹೆಸರು ಉಲ್ಲೇಖಿಸದೆಯೇ ಲೇಖನ ಬರೆಯ ಬಹುದು, ಇನ್ನೂ ಹೆಚ್ಚಿಗೆ ಮಾಡಹೊರಟರೆ ಜೀವಕ್ಕೆ ಆಪತ್ತು! ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ (ಎನ್ ಎಂಸಿ) ಇತ್ತೀಚಿನ ಆದೇಶ ಇಷ್ಟೆಲ್ಲ ಪೀಠಿಕೆಗೆ ಕಾರಣ. ಎಲ್ಲ ವೈದ್ಯರೂ ಜನರಿಕ್ ಔಷಧಗಳನ್ನೇ ಬರೆಯಬೇಕೆಂಬ ಆದೇಶ ೨-೩ ವರ್ಷದ ಹಿಂದೆಯೇ ಬಂದಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಮತ್ತದೇ ಆದೇಶವನ್ನು ನೀಡಲಾಗಿದೆ. ಮೇಲ್ನೋಟಕ್ಕಿದು ಸರಿಯೆನಿಸಿದರೂ, ಇದರ ಅನುಷ್ಠಾನದಲ್ಲಿ ಸಾಕಷ್ಟು ತೊಡಕುಗಳಿವೆ. ಜನರಿಕ್ ಔಷಧ ಎಂದರೇನು ಎಂದು ಮೊದಲು ಅರಿಯೋಣ. ಹೊಸ ಔಷಧವೊಂದು ಮಾರುಕಟ್ಟೆಗೆ ಬಂದಾಗ, ಅದರ ತಯಾರಿ ಹಕ್ಕು ಕೆಲ ವರ್ಷದವರೆಗೆ ಅದನ್ನು ಕಂಡುಹಿಡಿದ (ಮೂಲ) ಕಂಪನಿಗಷ್ಟೇ ಇರುತ್ತದೆ. ಆ ಪೇಟೆಂಟ್ ಅವಧಿ ಮುಗಿದ ನಂತರ (ಸಾಮಾನ್ಯವಾಗಿ ೭ ವರ್ಷ) ಅದನ್ನು ಯಾರಾದರೂ ತಯಾರಿಸಬಹುದು. ಕೆಲವೊಮ್ಮೆ ಮೂಲ ಕಂಪನಿಯೇ ಆ ಔಷಧ ತಯಾರಿ ವಿಧಾನವನ್ನು ಬೇರೆಯವರಿಗೆ ಮಾರಬಹುದು ಅಥವಾ ಅದನ್ನು ಬೇರೆ ಕಂಪನಿಯವರು ಅನ್ಯಮೂಲಗಳಿಂದ ಅರಿಯಬಹುದು. ಹೀಗೆ ಮೂಲಕಂಪನಿ ಬಿಟ್ಟು ಅನ್ಯರು ತಯಾರಿಸಿದ್ದನ್ನು ‘ಜನರಿಕ್  ಔಷಧ’ ಎನ್ನಲಾಗುತ್ತದೆ. ಮೂಲಕಂಪನಿಯ ಔಷಧವನ್ನು ‘ಒರಿಜಿನಲ್ ಮಾಲಿಕ್ಯೂಲ್’ ಎನ್ನುತ್ತಾರೆ (ಇದನ್ನು ಜನಸಾಮಾನ್ಯರು ‘ಬ್ರಾಂಡೆಡ್ ಔಷಧ’ ಎನ್ನುತ್ತಾರೆ). ಮೊದಲಿಗೆ, ಔಷಧವು ‘ಜನರಿಕ್’ ವರ್ಗದ್ದೋ, ‘ಒರಿಜಿನಲ್ ಮಾಲಿಕ್ಯೂಲ್’ ವರ್ಗದ್ದೋ ಎಂಬುದನ್ನು ಸುಲಭವಾಗಿ ಪತ್ತೆಹಚ್ಚುವ ವಿಧಾನಗಳಿಲ್ಲ. ಅದರ ಹೊರಮೈಯಲ್ಲಿ, ಇದು ಯಾವ ರೀತಿಯ ಮಾತ್ರೆಯೆಂದು ಸುಲಭಕ್ಕೆ ಗುರುತಿಸುವ ಚಿಹ್ನೆಗಳಿರುವುದಿಲ್ಲ.

ಅದನ್ನುಅರಿಯಲು ಅಂತರ್ಜಾಲದಲ್ಲೇ ತಡಕಾಡಬೇಕು. ಹೀಗೆ ಮಾಹಿತಿ ಕಲೆಹಾಕಲು ವೈದ್ಯಕೀಯ ಜ್ಞಾನ ಬೇಕು, ಸಾಮಾನ್ಯರಿಗೆ ಇದು ಅಸಾಧ್ಯ. ವಾಸ್ತವವೆಂದರೆ, ಔಷಧಗಳನ್ನು ನೋಡುತ್ತಿದ್ದಂತೆಯೇ ಅದು ಜನರಿಕ್ಕೋ ಅಲ್ಲವೋ ಎಂದು ಗುರುತಿಸುವುದು ವೈದ್ಯರಿಗೂ, ಔಷಧ ಮಳಿಗೆಯಲ್ಲಿನ ಸಿಬ್ಬಂದಿಗೂ ಕಷ್ಟ! ಔಷಧದ ಬೆಲೆ ಕಮ್ಮಿಯಿದ್ದರೆ ‘ಜನರಿಕ್’, ಹೆಚ್ಚಿದ್ದರೆ ‘ಬ್ರಾಂಡೆಡ್’ ಎಂಬ ನಂಬಿಕೆ ಕೆಲವರಲ್ಲಿದೆ. ಎಲ್ಲ ಔಷಧಗಳ ವಿಚಾರದಲ್ಲೂ ಇದು ಸರಿಯಲ್ಲ. ಕೆಲ ಜನರಿಕ್ ಔಷಧಗಳ ಬೆಲೆಯೂ ಹೆಚ್ಚಿರುತ್ತದೆ, ಕೆಲ ಜನರಿಕ್ ಔಷಧಗಳನ್ನು ‘ಬ್ರಾಂಡ್’ ಹೆಸರಿನಲ್ಲೂ ಮಾರಲಾಗುತ್ತದೆ. ಕೆಲ ‘ಮೂಲ ಔಷಧ’ಗಳ ಬೆಲೆ ಜನರಿಕ್‌ಗಳಿಗಿಂತ ಕಮ್ಮಿಯಿರುವುದೂ ಇದೆ. ವೈದ್ಯರು ಜನರಿಕ್ ಹೆಸರಿನಲ್ಲಿ ನಿರ್ದಿಷ್ಟ ಕಂಪನಿಗಳ ಹೆಸರನ್ನು ಬರೆದರೆ, ಒಂದೇ ಔಷಧ ತಯಾರಿಸುವ ಬಹಳಷ್ಟು ಕಂಪನಿಗಳಿರುವುದರಿಂದ ಯಾವ ಕಂಪನಿಯದ್ದು ಜನರಿಗೆ ಸಿಗಬೇಕೆಂಬುದನ್ನು ಔಷಧ ಮಳಿಗೆಯವರು ನಿರ್ಧರಿಸುತ್ತಾರೆ. ಮಳಿಗೆಯವರು ತಮಗೆ ಹೆಚ್ಚು ಲಾಭ ತರುವ ಔಷಧವನ್ನೇ ಮಾರುತ್ತಾರೆ, ಅದೇ ಅವರಿಗೆ ಮಾನದಂಡ. ಅವರಿಗೆ, ಕಂಪನಿಯಿಂದ ಕೊಳ್ಳುವ
ಬೆಲೆ ಕಮ್ಮಿಯಿರಬೇಕು, ಔಷಧದ ಮೇಲೆ ಮುದ್ರಿಸಿರುವ ಬೆಲೆ (ಎಂಆರ್‌ಪಿ) ಜಾಸ್ತಿಯಿರಬೇಕು.

ಒಂದೇ ಔಷಧವನ್ನು ೨ ಕಂಪನಿಗಳು (ಮೂಲ ಮತ್ತು ಜನರಿಕ್) ತಯಾರಿಸುತ್ತಿದ್ದು, ಅವೆರಡೂ ಮುದ್ರಿಸಿರುವ ಎಂಆರ್‌ಪಿ ೧೦೦ ರುಪಾಯಿ ಎಂದುಕೊಳ್ಳೋಣ. ಆದರೆ ಆ ಔಷಧವನ್ನು ಮೂಲ ಕಂಪನಿಯು ಅಂಗಡಿಗೆ ೯೦ ರು.ನಂತೆಯೂ, ಜನರಿಕ್ ಕಂಪನಿಯು ೫೦ ರು.ನಂತೆಯೂ ಮಾರುವುದಾದಲ್ಲಿ, ಔಷಧ ಮಳಿಗೆಯವನು ಯಾವುದನ್ನು ಪಡೆದು ಗ್ರಾಹಕರಿಗೆ ಮಾರುತ್ತಾನೆ? ಇಲ್ಲಿ ಎಂಆರ್‌ಪಿ ಒಂದೇ ಇದ್ದರೂ, ತನ್ನ ಲಾಭವೇ ಮುಖ್ಯವಾಗುವುದರಿಂದ ಅವನು ಮಾರುವುದು ಜನರಿಕ್ ಔಷಧವನ್ನೇ! ಜತೆಗೆ, ಆತನಿಗೆ ರೋಗಿಗಳಿಂದ ಹಿಮ್ಮಾಹಿತಿ ಸಿಗುವುದಿಲ್ಲವಾದ್ದರಿಂದ, ಯಾವುದು ಉತ್ತಮ ಔಷಧ ಎಂದು ಆತನಿಗೆ ಗೊತ್ತಾಗುವ ಸಂಭವ ಕಮ್ಮಿ. ಔಷಧ ಕಳಪೆಯೆಂದು ಗೊತ್ತಾದರೆ ಯಾವ ವೈದ್ಯರೂ ಅದನ್ನು ಮತ್ತೆ ರೋಗಿಗೆ ಬರೆಯಲಾರರು, ಏಕೆಂದರೆ ವೈದ್ಯರ ಪ್ರಮುಖ ಆದಾಯ ಬರುವುದು ರೋಗಿಗಳಿಂದಲೇ ವಿನಾ ಔಷಧ ಕಂಪನಿಯಿಂದಲ್ಲ. ಹೀಗಾಗಿ ರೋಗಿಯನ್ನು ವಾಸಿಮಾಡುವಲ್ಲಿ ವೈದ್ಯರು ರಾಜಿಮಾಡಿಕೊಳ್ಳಲಾರರು.

ಇದೇ ಮಾತನ್ನು ಔಷಧ ಮಳಿಗೆಯವರಿಗೆ ಹೇಳಲಾಗದು, ಅವರಿಗೆ ಔಷಧ ಮಾರಾಟವೇ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯ ೨೦೧೦ರ ಪ್ರಕಟಣೆಯಂತೆ, ಭಾರತದ ಔಷಧಗಳ ಪೈಕಿ ಶೇ.೨೦ರಷ್ಟು ನಕಲಿ, ಶೇ.೧೨ ರಷ್ಟು
ಗುಣಮಟ್ಟವಿಲ್ಲದವು (ಒಟ್ಟು ಶೇ.೩೨). ಜನರಿಕ್ ಹೆಸರು ಬರೆಯಲು ಒತ್ತಾಯಿಸುವ ಸರಕಾರ ಅವುಗಳ ಗುಣಮಟ್ಟದ ಖಾತ್ರಿ ನೀಡುವುದಿಲ್ಲ. ಏಕೆಂದರೆ ಗುಣ ಮಟ್ಟ ಪರೀಕ್ಷಿಸುವ ಸಿಬ್ಬಂದಿ ಸರಕಾರದ ಬಳಿಯಿಲ್ಲ. ಹೀಗಾಗಿ ಗಣನೀಯ ಪ್ರಮಾಣದ ಔಷಧಗಳು ಸರಕಾರ ದಿಂದ ಪರೀಕ್ಷೆಗೆ ಒಳಪಡುವುದಿಲ್ಲ. ಗಾತ್ರದಲ್ಲಿ ಯಾವುದೇ ಆಯುಧ ಮಾಫಿಯಾಗಳಿಗಿಂತ ಕಮ್ಮಿಯಿಲ್ಲದ ನಕಲಿ ಔಷಧ ಕಂಪನಿಗಳ ಜಾಲದ ಆಳ-ಅಗಲವನ್ನು ಪೂರ್ಣ ಅರಿವ ಸಾಹಸವನ್ನು ಯಾರೂ ಮಾಡಿಲ್ಲ. ಕೆಲ ಔಷಧಗಳು ಮನೆಯ ಹಿತ್ತಲಲ್ಲಿ ತಯಾರಾಗುತ್ತವೆ ಎಂದರೆ ನೀವು ನಂಬಲೇಬೇಕು! ಮೂಲಕಂಪನಿಯು ಔಷಧ ತಯಾರಿಯಿಂದ ಹಿಡಿದು, ಔಷಧ ರೋಗಿಯ ರಕ್ತದಲ್ಲಿ ಸೇರಿ ಪರಿಣಾಮ ಬೀರುವವರೆಗೆ ಸಂಪೂರ್ಣ ಅಧ್ಯಯನ ಮಾಡಿರುತ್ತದೆ. ಈ ಮಾಹಿತಿಯಿಲ್ಲದೆ ಅದು ಮಾರುಕಟ್ಟೆಗೆ ಹೊಸ ಔಷಧವನ್ನು ಬಿಡುಗಡೆ ಮಾಡಲಾಗದು. ಆದರೆ, ಜನರಿಕ್ ಕಂಪನಿಗೆ ಇಷ್ಟು ಮಾಹಿತಿ ಲಭ್ಯವಿರುವುದಿಲ್ಲ.

ರೋಗಿಗೆ ಕೊಟ್ಟ ಗುಳಿಗೆಯು ಶೇಕಡಾ ಎಷ್ಟು ಪ್ರಮಾಣದಲ್ಲಿ ರಕ್ತವನ್ನು ಸೇರುತ್ತದೆ ಎಂಬ ಮಾಹಿತಿ ಜನರಿಕ್ ಕಂಪನಿಯ ಬಳಿ ಇರುವ ಸಾಧ್ಯತೆ ಕಮ್ಮಿಯಾದ್ದರಿಂದ ಮತ್ತು ವಿವಿಧ ಕಂಪನಿಗಳ ಒಂದೇ ಡೋಸ್‌ನ ಔಷಧ ಬೇರೆ ಬೇರೆ ಪ್ರಮಾಣದಲ್ಲಿ ರಕ್ತವನ್ನು ಸೇರುತ್ತವೆಯಾದ್ದರಿಂದ, ಅವು ಬೀರುವ ಪರಿಣಾಮಗಳೂ ವಿಭಿನ್ನವಾಗಿರುತ್ತವೆ. ಆದ್ದರಿಂದ, ವೈದ್ಯರನ್ನು ಗುರಿಯಾಗಿಸಿಕೊಂಡು ಆದೇಶ ಹೊರಡಿಸುವ ಬದಲು, ಸ್ಟಂಟ್‌ಗಳ ವಿಷಯದಲ್ಲಿ ಮಾಡಿದಂತೆ ಪೇಟೆಂಟ್ ಮುಗಿದ ಔಷಧಗಳ ಗರಿಷ್ಠ ಬೆಲೆಯ ಮೇಲೆ ಏಕೆ ನಿಯಂತ್ರಣ ಹೇರಬಾರದು ಎಂಬ ವಾದವೂ ಇದೆ. ಆದರೆ, ಬೆಲೆ ನಿಗದಿ ಮಾಡಿ ಔಷಧ ಕಂಪನಿಗಳನ್ನು ಎದುರುಹಾಕಿಕೊಳ್ಳುವ ಬದಲು, ವೈದ್ಯರ ಮೇಲೆ ಆದೇಶ ಹೊರಡಿಸಿ ಸರಕಾರ ಸುಲಭದ ದಾರಿಯನ್ನು ಕಂಡು ಕೊಂಡಿತಾ? ಎಂಬ ಅನುಮಾನವೂ ಇಲ್ಲಿ ಕಾಡುತ್ತದೆ. ಜನರಿಕ್ ಔಷಧವನ್ನು ಬರೆಯುವುದನ್ನು ಕಡ್ಡಾಯ ಮಾಡುವ ಮೊದಲು, ಅದರ ಗುಣಮಟ್ಟದ ಬಗ್ಗೆ ಸರಕಾರ ಖಾತ್ರಿ ನೀಡಬೇಕು. ಗುಣ ಮಟ್ಟ ನಿಯಂತ್ರಣದ ಕಾರ್ಯಕ್ಕೆ ಮೊದಲು ಒಡ್ಡಿಕೊಂಡು, ನಂತರ ಜನರಿಕ್ ಔಷಧ ಬರೆಯುವುದಕ್ಕೆ ವೈದ್ಯರಿಗೆ ಆದೇಶಿಸಿದರೆ ಅಥವಾ ಈ ನಿಟ್ಟಿನಲ್ಲಿ ಕಾನೂನು ತಂದರೆ ಅದಕ್ಕೊಂದು ಅರ್ಥವಿರುತ್ತದೆ. ಔಷಧ ಗುಣಮಟ್ಟದ ಮೇಲೆ ಸೂಕ್ತ ನಿಯಂತ್ರಣವಿಲ್ಲದೆ ಹೋದರೆ, ಸೋಂಕು ನಿಯಂತ್ರಣದ ವಿಷಯದಲ್ಲಿ ಭಾರತವಷ್ಟೇ ಅಲ್ಲ ಇಡೀ ಮನುಕುಲವೇ ಭಾರಿ ಬೆಲೆ ತೆರಬೇಕಾಗುವ ಕಾಲ ದೂರ ವಿಲ್ಲ. ಬೆಲೆ ಹೆಚ್ಚಾದರೂ ಪರವಾಗಿಲ್ಲ, ಖಾತ್ರಿಯಿರುವ ‘ಒರಿಜಿನಲ್’ ಔಷಧಗಳನ್ನೇ ಕೊಡಿ ಎಂದು ಕೋರುವ ರೋಗಿಗಳಿಗೂ ಈ ನಿಯಮಾವಳಿ ಪ್ರಕಾರ ವೈದ್ಯರು ಒರಿಜಿನಲ್ ಔಷಧಗಳನ್ನು ಬರೆಯುವಂತಿರುವುದಿಲ್ಲ. ಇದು ರೋಗಿ ಮತ್ತು ವೈದ್ಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಸಿದಂತೆ ಆಗುತ್ತದೆ ಎಂಬ ವಾದವೂ ಇದೆ.

ಕೊನೇಮಾತು: ಯಾವ ಪೂರ್ವಭಾವಿ ಮಾಹಿತಿಯಿಲ್ಲದ ನಟರಿಗೆ ಜಾಹೀರಾತಿನಲ್ಲಿ ಮೈಗೆ ಯಾವ ಸೋಪು, ಹಲ್ಲುಗಳಿಗೆ ಯಾವ ಪೇಸ್ಟು, ಮಂಡಿನೋವಿಗೆ ಯಾವ ಮುಲಾಮು, ಇಮ್ಯುನಿಟಿ ವರ್ಧನೆಗೆ ಯಾವ ಟಾನಿಕ್
ಬಳಸಬೇಕು ಎಂದು ಹೇಳುವ ಸ್ವಾತಂತ್ರ್ಯವಿದೆ. ಆದರೆ ಪ್ರತಿದಿನ ರೋಗಿಗಳ ನಡುವೆಯೇ ಕೆಲಸ ಮಾಡುವ ವೈದ್ಯರಿಗೆ, ತಮಗೆ ಉತ್ತಮವೆಂದು ತೋರುವ ಔಷಧವನ್ನು ಬರೆಯುವ ಸ್ವಾತಂತ್ರ್ಯವಿಲ್ಲ ಎಂದರೆ ಹೇಗೆ? ಇನ್ನು ವೈದ್ಯರಿಗೆ ಜಾಹೀರಾತು ನೀಡುವ ಮಾತು ದೂರವೇ ಬಿಡಿ!
(ಲೇಖಕರು ರೇಡಿಯಾಲಜಿ ತಜ್ಞರು)

Leave a Reply

Your email address will not be published. Required fields are marked *