Friday, 22nd November 2024

ಸಿದ್ಧಾಂತ ಮೀರಿದ ಅನಿವಾರ್ಯ ಸಖ್ಯ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ರಾಜಕೀಯ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಬಿಜೆಪಿಯೊಂದಿಗೆ ನಿಲ್ಲುವವರು ಯಾರು? ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ಆರಂಭಿಸಿರುವ ‘ಇಂಡಿಯ’ದ ರೈಲು ಹತ್ತುವವರ‍್ಯಾರು? ಈ ಇಬ್ಬರ ಸಹವಾಸವಿಲ್ಲದೇ ‘ಸ್ವತಂತ್ರ’ವಾಗಿ ಚುನಾವಣಾ ಅಖಾಡಕ್ಕೆ ಧುಮುಕುವ ಕಲಿಗಳ್ಯಾರು ಎನ್ನುವ ಚರ್ಚೆಗಳು ಜೋರಾಗಿದೆ. ಈ ನಡುವೆ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿಯ ಸಖ್ಯಕ್ಕೆ ‘ಜೈ’ ಎನ್ನುವ ಮೂಲಕ ರಾಜ್ಯ ರಾಜಕೀಯದ ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡ  ಆರಂಭದಲ್ಲಿ ಜೆಡಿಎಸ್ ನಾಯಕರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷವನ್ನು ಬೈದಾಡಿಕೊಂಡು ಓಡಾಡುತ್ತಿದ್ದರು. ಆದರೆ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷವಿದೆ ಎನ್ನುವ ಸಮಯದಲ್ಲಿ ಬಿಜೆಪಿಯ ಮೇಲೆ ‘ಸಾಫ್ಟ್ ಕಾರ್ನರ್’ ಅನ್ನು ಕುಮಾರಸ್ವಾಮಿ ಅವರು ತೋರಿಸಲು ಆರಂಭಿಸಿ, ನಿರಂತರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಎನ್ನುವ ಗುಸುಗುಸು ಮಾತುಗಳು ಕೇಳಿಬಂದಿದ್ದರೂ, ‘ಅಸ್ತಿತ್ವ’ದ ಕಾರಣಕ್ಕಾಗಿ ಜೆಡಿಎಸ್ ನಿರಾಕರಿಸಿತ್ತು. ಆದರೆ, ಚುನಾವಣೆಯಲ್ಲಿ ೧೯ ಸೀಟಿಗೆ ಕುಸಿಯುತ್ತಿದ್ದಂತೆ ತಮಗೊಂದು ‘ರಾಷ್ಟ್ರೀಯ ಪಕ್ಷದ’ ಆಸರೆಯ ಅಗತ್ಯತೆಯನ್ನು ಮನಗಂಡು ಬಿಜೆಪಿಯೊಂದಿಗೆ ಹೆಚ್ಚು ಸ್ನೇಹವನ್ನು ಬೆಳೆಸಲು ಜೆಡಿಎಸ್ ಆರಂಭಿಸಿತ್ತು.

ಇದರ ಭಾಗವಾಗಿ, ಜೆಡಿಎಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ, ಬಿಜೆಪಿ ಪ್ರತಿಭಟನೆಗೆ ಕುಮಾರಸ್ವಾಮಿ ಅವರ ಸಾಥ್, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸೇರಿದಂತೆ ಹಲವು ಘಟನೆಗಳು ನಡೆಯಿತು. ಈ ಎಲ್ಲವೂ ನಡೆಯುತ್ತಿದ್ದರೂ ಲೋಕಸಭಾ ಚುನಾವಣೆಗೆ ಇಂಡಿಯವೂ ಬೇಡ, ಎನ್‌ಡಿಎಯೂ ಬೇಡ. ಪ್ರಾದೇಶಿಕ ಪಕ್ಷವಾಗಿ ಪ್ರತ್ಯೇಕವಾಗಿ ಹೋರಾಡುವ ಮಾತುಗಳನ್ನು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಡಿದ್ದರು. ಈ ರಾಜಕೀಯ ಮೇಲಾಟದ ನಡುವೆಯೂ ಬಿಜೆಪಿ ಯೊಂದಿಗೆ ಜೆಡಿಎಸ್ ಹೋಗುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತುಗಳು ಆಗ್ಗಾಗೆ ಕೇಳಿಬರುತ್ತಿತ್ತು. ಈ ಎಲ್ಲ ಕುತೂಹಲ, ನಿರೀಕ್ಷೆಗಳಿಗೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಜತೆ ದೇವೇಗೌಡರ ದೂರವಾಣಿ ಮಾತುಕತೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಭೆಯ ಬಳಿಕ ಮೈತ್ರಿ ಖಚಿತವಾಗಿತ್ತು. ದೇವೇಗೌಡರನ್ನು ಭೇಟಿಯಾದ ದಿನವೇ ಬಿಜೆಪಿ ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿತ್ತು. ಆದರೆ ಜೆಡಿಎಸ್ ಮಾತ್ರ ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ, ನಾಯಕರು, ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಧಿಕೃತವಾಗಿ ಮೈತ್ರಿಗೆ ಒಪ್ಪಿರುವುದಾಗಿ ಪ್ರಕಟಿಸಿದೆ.

ಬಿಜೆಪಿ-ಜೆಡಿಎಸ್ ಮೈತ್ರಿಯ ಸುದ್ದಿ ಹೊರಬೀಳುತ್ತಿದ್ದಂತೆ, ಸೈದ್ಧಾಂತಿಕವಾಗಿ ಭಿನ್ನವಿರುವ ಎರಡು ಪಕ್ಷಗಳು ಅಧಿಕಾರಕ್ಕಾಗಿ ಒಂದಾಗುತ್ತಿವೆ ಎನ್ನುವ ಮಾತುಗಳನ್ನು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಒಂದು ಹಂತದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಸಿದ್ಧಾಂತದಲ್ಲಿ ಭಿನ್ನಾಭಿಪ್ರಾಯವಿದೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡೂ ಪಕ್ಷಗಳಿಗೂ ಒಬ್ಬರಿಗೆ ಒಬ್ಬರ ಆಸರೆ ಅನಿವಾರ್ಯ ಎನ್ನುವ ಪರಿಸ್ಥಿತಿ ಎದುರಾಗಿದೆ. ಅದರಲ್ಲಿಯೂ ಚುನಾವಣೆಯಿಂದ ಚುನಾವಣೆಗೆ ಸಂಖ್ಯಾಬಲದಲ್ಲಿ ಕುಸಿಯುತ್ತಿರುವ ಜೆಡಿಎಸ್ ಈ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ‘ಶೂನ್ಯ’ ಸಾಧನೆಯ ಆತಂಕವೂ ಶುರುವಾಗಿತ್ತು. ಆದ್ದರಿಂದ ಅಸ್ತಿತ್ವಕ್ಕಾಗಿ ಬಿಜೆಪಿಯೊಂದಿಗೆ ಹೋಗುವುದೇ ಸೂಕ್ತ ಎನ್ನುವ ತೀರ್ಮಾನಕ್ಕೆ ದೇವೇಗೌಡರು ಬಂದಿದ್ದಾರೆ ಎನ್ನುವುದು ಸ್ಪಷ್ಟ. ದೇಶದ ರಾಜಕೀಯವನ್ನು ಗಮನಿಸಿದರೆ ಬಿಜೆಪಿಗೆ ಜೆಡಿಎಸ್‌ನ ಬಲವಿಲ್ಲದೆಯೂ ಮತ್ತೊಂದು ಲೋಕಸಭಾ ಚುನಾವಣೆ ಗೆಲ್ಲುವಷ್ಟು ಬಲಿಷ್ಠವಾಗಿದೆ. ಆದರೆ ಕರ್ನಾಟಕ ರಾಜಕೀಯವನ್ನು ಗಮನಿಸಿದಾಗ, ರಾಜ್ಯ ಬಿಜೆಪಿ ಜೆಡಿಎಸ್ ಬೆಂಬಲವಿಲ್ಲದೇ ಲೋಕಸಭಾ ಚುನಾವಣೆಗೆ ಹೋದರೆ ಭಾರಿ ಹಿನ್ನಡೆ ಅನುಭವಿಸುವುದು ಸ್ಪಷ್ಟ ಎನ್ನುವ ವಾತಾವರಣವಿದೆ.

ಆ ಕಾರಣಕ್ಕಾಗಿಯೇ, ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಹೆಚ್ಚು ಸೀಟುಗಳನ್ನು ‘ಎನ್‌ಡಿಎ’ ಆಗಿ ಗೆಲ್ಲುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ. ಹಾಗೇ ನೋಡಿದರೆ ಜೆಡಿಎಸ್ ೨೦೧೯ರ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಹೋಗಿತ್ತು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ, ಸ್ವತಃ ದೇವೇಗೌಡರು ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಲಬೇಕಾಗಿತು. ಹಾಸನ ಹೊರತುಪಡಿಸಿ, ಸ್ಪರ್ಧಿಸಿದ್ದ ಏಳೆಂಟು ಕ್ಷೇತ್ರದಲ್ಲಿ ಸೋಲುವ ಮೂಲಕ ಬಿಜೆಪಿಗೆ ೨೫ ಸೀಟುಗಳ ಕೊಡುಗೆಯನ್ನು ನೀಡಿತ್ತು. ಆದ್ದರಿಂದ ಕಾಂಗ್ರೆಸ್‌ನೊಂದಿಗೆ ಈ ಬಾರಿ ಹೋದರೆ ಪುನಃ ಅದೇ ರೀತಿಯಾಗುತ್ತದೆ ಎನ್ನುವ ಆತಂಕವಿದೆ. ಹಾಗೆಂದು ಸ್ವಾತಂತ್ರ್ಯವಾಗಿ ಸ್ಪರ್ಧಿಸಿದರೆ ಈ ಬಾರಿ ಹಾಸನದಲ್ಲಿಯೂ ಗೆಲ್ಲುವ ಅವಕಾಶ ಕಡಿಮೆಯಿದೆ. ಈ ಚುನಾವಣೆಯಲ್ಲಿ ಸೋತರೆ, ಇನ್ನೆಂದು ‘ಎದ್ದೇಳಲು’ ಆಗದಷ್ಟು ಕೆಟ್ಟ ಪರಿಸ್ಥಿತಿಗೆ ಪಕ್ಷ ಹೋಗಲಿದೆ ಎನ್ನುವ ಸ್ಪಷ್ಟ ಆಲೋಚನೆ ಇದಿದ್ದರಿಂದಲೇ, ಜೆಡಿಎಸ್ ವರಿಷ್ಠರ ದೇವೇಗೌಡರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಬಿಜೆಪಿಯೊಂದಿಗೆ ಹೋಗಲು ಒಪ್ಪಿದ್ದಾರೆ. ಈಗಾಗಲೇ ಮೈತ್ರಿಯನ್ನು ಅಧಿಕೃತಗೊಳಿಸಿರುವ ಎರಡೂ ಪಕ್ಷಗಳು, ಇನ್ನೀಗ ಸೀಟು ಹಂಚಿಕೆಯ ಬಗ್ಗೆ ಚರ್ಚೆಯನ್ನು ಆರಂಭಿಸಿವೆ. ಬಿಜೆಪಿ ವರಿಷ್ಠರು ಈಗಾಗಲೇ ನಾಲ್ಕು ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಹೇಳಿದೆ.

ಇದರೊಂದಿಗೆ ಪಟ್ಟು ಹಿಡಿದರೆ ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಮಂಡ್ಯ ಲೋಕಸಭಾ ಕ್ಷೇತ್ರ ಬೇಕೆಂದು ಜೆಡಿಎಸ್ ಹಠ ಹಿಡಿದರೆ, ಈಗಿರುವ ಸುಮಲತಾ ಅವರಿಗೆ ಬೆಂಗಳೂರು ಉತ್ತರದಲ್ಲಿ ಟಿಕೆಟ್ ನೀಡಿ, ಮಂಡ್ಯವನ್ನು ಬಿಟ್ಟುಕೊಡುವ ಮಾತುಗಳು ಕೇಳಿಬರುತ್ತಿದೆ. ಇನ್ನುಳಿದಂತೆ ಜೆಡಿಎಸ್‌ಗೆ ಹಾಸನ, ತುಮಕೂರು, ಕೋಲಾರ/ಚಿಕ್ಕಬಳ್ಳಾಪುರ ಹಾಗೂ
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದ್ದು, ಇದಕ್ಕೆ ಜೆಡಿಎಸ್ ಸಹ ಒಪ್ಪಿಗೆ ನೀಡಿದೆ. ಆದ್ದರಿಂದ ಸೀಟು ಹಂಚಿಕೆಯೇನು ಬಹುದೊಡ್ಡ ತಲೆಬಿಸಿಯಾಗುವುದಿಲ್ಲ ಎನ್ನುವುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ. ಏಕೆಂದರೆ, ಜೆಡಿಎಸ್ ಹೋರಾಡುತ್ತಿರುವುದು ಹಳೇ ಮೈಸೂರು ಭಾಗದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ. ಬಿಜೆಪಿಗೆ ಹೇಗಿದ್ದರೂ, ಈ ಭಾಗದಲ್ಲಿ ಹೇಳಿಕೊಳ್ಳುವ
ಅಥವಾ ಲೋಕಸಭಾ ಚುನಾವಣೆ ಗೆಲ್ಲುವಷ್ಟು ಸಂಘಟನೆಯಿಲ್ಲ. ಆದ್ದರಿಂದ ಸಂಘಟನೆ ವೀಕ್‌ಯಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕದ ಸೀಟುಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ.

ಈ ಮೈತ್ರಿಯ ಮತ್ತೊಂದು ಲಾಭವೆಂದರೆ, ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಹಾಗೂ ಸ್ಥಳೀಯ ಮಟ್ಟದಲ್ಲಿ ವೈರತ್ಯವಿದೆಯೇ ಹೊರತು ಬಿಜೆಪಿಯೊಂದಿಗಲ್ಲ. ಆದ್ದರಿಂದ ಸ್ಥಳೀಯವಾಗಿ ಈ ಮೈತ್ರಿ ದೊಡ್ಡ ಸಮಸ್ಯೆಯನ್ನು ತರುವುದಿಲ್ಲ. ಆದರೆ ಜೆಡಿಎಸ್ ಅನ್ನು ತನ್ನೊಂದಿಗೆ ಕರೆದುಕೊಂಡು ಹೋಗುವುದರಿಂದ, ಬಿಜೆಪಿಗೆ ಬಹುದೊಡ್ಡ ಲಾಭವಿದೆ. ಅದೇನೆಂದರೆ, ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ನಾಲ್ಕೈದು ಸಾವಿರ ಮತಗಳು ಜೆಡಿಎಸ್‌ಗಿದೆ. ಅದೇ ಲೋಕಸಭಾ ಕ್ಷೇತ್ರಕ್ಕೆ ಬಂದರೆ ಕನಿಷ್ಠ ೩೫ರಿಂದ ೫೦ ಸಾವಿರ ಮತಗಳಿವೆ. ಈ ಮತಗಳು ಸಾಲಿಡ್ ಆಗಿ ಬಿಜೆಪಿಗೆ ಬಂದರೆ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದೆ. ಅದೇ ರೀತಿ ಜೆಡಿಎಸ್ ಪಡೆಯುವ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು, ಹಾಸನ ಜೆಡಿಎಸ್ ಗೆಲುವಾಗಿದೆ. ಇನ್ನುಳಿದ ಎರಡೂ ಕ್ಷೇತ್ರಗಳು ಬಿಜೆಪಿಯೇ ಗೆದ್ದಿದೆ. ಆದ್ದರಿಂದ ಇದೀಗ, ಹಾಸನದಲ್ಲಿ ಮತ್ತೊಮ್ಮೆ ಸುಲಭದ ಗೆಲುವಿನೊಂದಿಗೆ, ಇತರೆ ಎರಡು ಕ್ಷೇತ್ರದಲ್ಲಿ ಬಿಜೆಪಿಯ ನೆರವಿನೊಂದಿಗೆ ಗೆಲ್ಲಬಹುದು.

ಇನ್ನುಳಿದ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಪ್ರತಿಸ್ಪರ್ಧಿಯಾಗುವುದರಿಂದ ‘ಟೈಟ್ ಫೈಟ್’ ಇರಲಿದೆ. ಅದನ್ನು ಬಿಜೆಪಿ-ಜೆಡಿಎಸ್ ಸಾಂಪ್ರದಾಯಿಕ ವೋಟುಗಳಿಂದ ಗೆಲ್ಲಬಹುದು ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಒಕ್ಕಲಿಗ, ಲಿಂಗಾಯತ ಮತಗಳು ಒಂದಾಗುವುದರಿಂದ ಕಾಂಗ್ರೆಸ್ ನಷ್ಟವಾಗಲಿದೆ ಎನ್ನುವ ಲೆಕ್ಕಾಚಾರಗಳು ಕೇಳಿಬರುತ್ತಿದೆ. ಆದರೆ ಕಾಂಗ್ರೆಸ್ ನಾಯಕರ ಪ್ರಕಾರ, ನಷ್ಟವಾದಷ್ಟೆ ಲಾಭವೂ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವಂತೆ. ಕಾಂಗ್ರೆಸ್ ರಣತಂತ್ರದ ತಂಡ ಪ್ರಕಾರ, ಬಿಜೆಪಿ-ಜೆಡಿಎಸ್ ಒಂದಾದರೆ, ಕೆಲ ಕ್ಷೇತ್ರದಲ್ಲಿ ಅದರಲ್ಲಿಯೂ ಹಳೇ
ಮೈಸೂರು ಭಾಗದಲ್ಲಿ ಬಹುದೊಡ್ಡ ಹಿನ್ನಡೆಯಾಗುವುದು ನಿಶ್ಚಿತ. ಆದರೆ ಈ ಮೈತ್ರಿ ‘ಜಾತ್ಯತೀತ’ ಮನಃಸ್ಥಿತಿಗಳಿಗೆ ಒಪ್ಪಿತವಾಗುವುದು ಕಷ್ಟ. ಅದರಲ್ಲಿಯೂ ಜೆಡಿಎಸ್ ನೊಂದಿರುವ ಅಲ್ಪಸಂಖ್ಯಾತ ಸಮುದಾಯದ ಮತಗಳು ‘ಕಮಲ’ಕ್ಕೆ ಮತಹಾಕುವ ಬದಲು ಕಾಂಗ್ರೆಸ್‌ಗೆ ಹಾಕೋಣ ಎನ್ನುವ ಮನಸ್ಥಿತಿಗೆ ಬರುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆಯಿದೆ. ಆದರೆ ಈ ಲಾಭ ಎಸ್‌ಡಿಪಿಐ, ಓವೈಸಿಯಂತಹ ಪಕ್ಷಗಳು ಕಾಣಿಸಿಕೊಳ್ಳದಿದ್ದರೆ ಮಾತ್ರ ಎನ್ನುವುದನ್ನು ಮರೆಯುಂತಿಲ್ಲ. ಒಂದು ವೇಳೆ ಈ ಪಕ್ಷಗಳು ಐದರಿಂದ ೧೦ ಸಾವಿರ ಮತಗಳನ್ನು ಕಿತ್ತರೂ ಅದು ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿದೆ. ಈ ಸಣ್ಣ ಪಕ್ಷಗಳು ಕಾಂಗ್ರೆಸ್ ಯಾವ ರೀತಿ ಹ್ಯಾಂಡಲ್ ಮಾಡಲಿದೆ ಎನ್ನುವುದೇ ಈಗಿರುವ ಕುತೂಹಲ. ಈ ಎಲ್ಲವನ್ನು ಮೀರಿ ಮೈತ್ರಿಗಿರುವ ಬಹುದೊಡ್ಡ ಕೊಂಡಿ ಎಂದರೆ, ಎರಡೂ ಕಡೆಯವರಿಗೂ ಒಬ್ಬರನ್ನು ಬಿಟ್ಟರೆ ಇನ್ನೊಬ್ಬರ ಆಟ ನಡೆಯುವುದಿಲ್ಲ ಎನ್ನುವ ಸ್ಥಿತಿಯಿದೆ. ಈಗಿರುವ ರಾಜ್ಯ ಬಿಜೆಪಿ ಪರಿಸ್ಥಿತಿಯಲ್ಲಿ ಸ್ವಂತವಾಗಿ ಸ್ಪರ್ಧಿಸಲು ಹೋದರೆ, ೧೫ರ ಆಸುಪಾಸಿನಲ್ಲಿ ಗೆಲುವಿನ ಸಂಖ್ಯೆ ಬಂದು ನಿಲ್ಲುವುದು ನಿಶ್ಚಿತ. ಜೆಡಿಎಸ್ದಂತೂ ಈ ಮೊದಲೇ ಹೇಳಿದಂತೆ ಶೂನ್ಯಕ್ಕೆ ಇಳಿದರೂ ಅಚ್ಚರಿಯಿಲ್ಲ. ಆದ್ದರಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆ ಕಾಣಲು ಹಾಗೂ ಜೆಡಿಎಸ್ ತನ್ನ ಅಸ್ತಿತ್ವವನ್ನು
ಉಳಿಸಿಕೊಳ್ಳಲು ಈ ಬಂಧನಕ್ಕೆ ಒಪ್ಪಿದೆ. ಶತ್ರುವಿನ ಶತ್ರು ಮಿತ್ರ ಎನ್ನುವ ರಾಜಕೀಯ ಮಾತನ್ನು ರಾಜ್ಯ ರಾಜಕಾರಣದಲ್ಲಿ ಈ ಮೈತ್ರಿ ಸಾಬೀತುಪಡಿಸಿದೆ. ಈ ಎಲ್ಲವನ್ನು ಮೀರಿ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲುವ
ಮೂಲಕ ಸೀಟಿನ ಸಂಖ್ಯೆ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್‌ಗಂತೂ ಮೈತ್ರಿ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗುವುದಿಲ್ಲ.