-ಡಾ.ಪರಮೇಶ್
(ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ)
ಶ್ರೀಗಳ ಆರೋಗ್ಯ ಕ್ರಮ ಬಹಳ ಕಟ್ಟುನಿಟ್ಟಿನದು. ಮಿತಾಹಾರ ಶ್ರೀಗಳ ಆರೋಗ್ಯದ ಗುಟ್ಟು. ಶರೀರಕ್ಕೆ ಎಷ್ಟು ಆಹಾರ ಬೇಕು ಅದನ್ನ ಮಾತ್ರ ಸ್ವೀಕರಿಸುತ್ತಿದ್ದರು. ಶರೀರವನ್ನ ಕಾಪಾಡಿಕೊಳ್ಳುವುದಕ್ಕೆ ಮಾತ್ರ ಆಹಾರ
ಸ್ವೀಕರಿಸಬೇಕು ಎನ್ನುವುದು ಶ್ರೀಗಳ ಗುರಿಯಾಗಿತ್ತು. ಶ್ರೀಗಳಿಗೆ ದಕ್ಷಿಣ ಭಾರತದ ಆಹಾರವೆಂದರೆ ಬಹಳಷ್ಟು ಪ್ರಿಯವಾಗಿತ್ತು. ಶ್ರೀಗಳಿಗೆ ಕಾಲಕಾಲಕ್ಕೆ ದೊರೆಯುವ ಹಣ್ಣುಗಳನ್ನ ಸ್ವೀಕರಿಸುವುದು ಬಹಳ ಪ್ರಿಯ. ಮಠಕ್ಕೆ ಬರುವ ಭಕ್ತರು ಯಥೇಚ್ಛವಾಗಿ ಕಾಳುಗಳನ್ನ ನೀಡುತ್ತಿದ್ದರು. ಅದರಲ್ಲೇ ಕಾಳುಗಳ ಸಲಾಡ್‌ನ್ನು ಶ್ರೀಗಳು ಬಹಳಷ್ಟು ಇಷ್ಟವಾಗಿ ಸ್ವೀಕರಿಸುತ್ತಿದ್ದರು. ಶ್ರೀಗಳು ಸದಾ ಹುರುಳಿಕಾಳಿನ ಸಾರೆಂದರೆ ಬಹಳಷ್ಟು ಪ್ರಿಯ. ಆ ಸಾರು ಇದ್ದರೆ ಮೂರು ಹೊತ್ತು ಅದನ್ನ ನೀಡಿದರೂ ಸ್ವೀಕರಿಸುತ್ತಿದ್ದರು. ಅವರಿಗೆ ಬೇಯಿಸಿದ ಕಡಲೆಬೀಜ ಹಲಸಿನತೊಳೆ ಮಾವಿನ ಹಣ್ಣು ಶ್ರೀಗಳ ಪ್ರಿಯವಾದ ಹಣ್ಣುಗಳಾಗಿತ್ತು. ಶ್ರೀಗಳು ಯಾವತ್ತೂ ಸೇಬು, ದ್ರಾಕ್ಷಿ, ಕಿತ್ತಲೆ ಅಂತಹ ಹಣ್ಣುಗಳಿಗಿಂತ ರೈತರ ತೋಟದಲ್ಲಿ ಸಿಗುತ್ತಿದ್ದ ಹಲಸು, ಮಾವು ಹೆಚ್ಚಾಗಿ ಸ್ವೀಕರಿಸುತ್ತಿದ್ದರು.
ಅವರೆಕಾಳಿನ ಕಾಲ ಬಂತು ಎಂದರೆ ಶ್ರೀಗಳ ಅಡುಗೆ ಮನೆಯಿಂದ ಸದಾ ಅವರೆ ಕಾಳಿನ ಸಾಂಬಾರಿನ ವಾಸನೆ ಸದಾ ಬರುತ್ತಿತ್ತು. ಅವರೆಕಾಯಿಯ ಕಾಲ ಮುಗಿಯುವವರೆಗೂ ಶ್ರೀಗಳು ಅದನ್ನ ಬಿಟ್ಟರೆ ಬೇರೆ
ಯಾವ ಸಾರಿನ ಬಗ್ಗೆಯೂ ಹೆಚ್ಚಿನ ಅಪೇಕ್ಷೆ ಹೊಂದಿದವರಲ್ಲ. ಅವರೆ ಕಾಯಿಯ ಕಾಲ ಮುಗಿದರೆ ಶೇಖರಿಸಿಟ್ಟ ಹುರುಳಿಕಾಳಿನ ಸಾಂಬಾರ್ ಬಯಸುತ್ತಿದ್ದರು. ಇದಷ್ಟೇ ಅಲ್ಲದೆ ಶ್ರೀಗಳಿಗೆ ಆಯಾ ಹಬ್ಬಗಳಿಗೆ ಮಾಡುತ್ತಿದ್ದ ವಿಶೇಷ ಖಾದ್ಯಗಳ ಬಗ್ಗೆ ಆಸಕ್ತಿ ಇರುತ್ತಿತ್ತು. ಜೊತೆಗೆ ಸಿಹಿ ಖಾದ್ಯಗಳನ್ನ ಏನೇ ಮಾಡಲಿ ಅದನ್ನ ಸಿದ್ಧಗಂಗಾ ಮಠದ ಎಲ್ಲಾ ಮಕ್ಕಳಿಗೂ ಮಾಡಲೇಬೇಕಿತ್ತು. ಯುಗಾದಿ ಸಮಯದಲ್ಲಿ ಒಬ್ಬಟ್ಟು ತಯಾರಿಸಿದರೆ ಅದನ್ನೇ ಮಠದ ಎಲ್ಲಾ ಮಕ್ಕಳಿಗೂ ಮಾಡಬೇಕಿತ್ತು. ಅದಕ್ಕೆಂತಲೇ ಬೇರೆ ಊರುಗಳಿಂದ ಅಡುಗೆಯವರನ್ನ ಕರೆಸುತ್ತಿದ್ದರು. ಲಡ್ಡು ಮಾಡಿದರೂ, ಮೈಸೂರುಪಾಕ್ ಮಾಡಿದರೂ ಅದು ಮಕ್ಕಳಿಗೆ ಕೊಟ್ಟಿದ್ದಾರೆಯೇ? ಎಂದು ಖುದ್ದಾಗಿ ಮಕ್ಕಳ ಪಂಕ್ತಿಯಲ್ಲಿ ಗಮನಿಸುತ್ತಿದ್ದರು.
‘ಮಕ್ಕಳ ಪ್ರಸಾದವಾಗಿದೆ’ ಎಂದು ಅವರ ಶಿಷ್ಯಂದಿರು ಹೇಳಿಯೇ ಊಟಕ್ಕೆ ಶ್ರೀಗಳನ್ನ ಅಣಿ ಮಾಡುತ್ತಿದ್ದರು. ಶ್ರೀಗಳಿಗೆ ಶಾವಿಗೆ ಮತ್ತು ರವೆಯ ಉಂಡೆ ಎಂದರೆ ಎಲ್ಲಾ ಸಿಹಿ ಪದಾರ್ಥಗಳಿಗಿಂತ ಅಚ್ಚುಮೆಚ್ಚು. ಮಕ್ಕಳ ಯೋಗಕ್ಷೇಮ ಹೊರತು ಪಡಿಸಿ ಇನ್ಯಾವ ಆಸೆಯನ್ನೂ ಹೊಂದಿರದ ಶ್ರೀಗಳಿಗೆ ಇಂದು ಮಠದಲ್ಲಿ ಶಾವಿಗೆ, ರವೆ ಉಂಡೆ ಮಾಡಿದ್ದಾರೆ ಎಂದರೆ ಮಕ್ಕಳಿಗೆ ಸಂಬಂಧಿಸಿದ ವಿಶೇಷವೇನೋ ನಡೆದಿದೆ ಎಂತಲೇ ಅಂದುಕೊಳ್ಳುತ್ತಿದ್ದೆವು. ಸಪ್ಪೆ ಸಪ್ಪೆ ಊಟ ಶ್ರೀಗಳ ಅಡುಗೆಯಲ್ಲಿರಬೇಕಿದ್ದ ರುಚಿ. ಯಾವುದೂ ಕೂಡ ಹೆಚ್ಚಿರಬಾರದಿತ್ತು. ಮಸಾಲೆ ಪದಾರ್ಥಗಳು, ಕರಿದ ಪದಾರ್ಥಗಳಿಂದ ಶ್ರೀಗಳು ದೂರವಿರುತ್ತಿದ್ದರು. ಶ್ರೀಗಳ ಆಹಾರಕ್ರಮವೂ ಕೂಡ ಅಷ್ಟೇ ಕಟ್ಟುನಿಟ್ಟಾಗಿತ್ತು. ಬೆಳಗ್ಗೆ ಶ್ರೀಗಳು ಶಿವಪೂಜೆ ಮುಗಿಸಿದಾಗ ಶಿವಮಂದಿರದಲ್ಲಿಯೇ ಆಹಾರ ಸ್ವೀಕರಿಸುತ್ತಿದ್ದರು. ಇಡ್ಲಿ, ಕಾಯಿಚಟ್ನಿ, ಸಿಹಿ ಚಟ್ನಿ ಜೊತೆಗೆ ದಾಲ್ ಅನ್ನ ಮಾತ್ರ ಬೆಳಗಿನ
ಉಪಾಹಾರವಿರುತ್ತಿತ್ತು. ಅದನ್ನ ತಿಂದು ಬೇವಿನ ಕಷಾಯ ಕುಡಿದರೆಂದರೆ ಇನ್ನು ಮಧ್ಯಾಹ್ನ ಶಿವಪೂಜೆಯ ನಂತರವಷ್ಟೇ ಶ್ರೀಗಳು ಆಹಾರ ಸ್ವೀಕರಿಸುತ್ತಿದ್ದರು.
ಶ್ರೀಗಳ ಬೆಳಗಿನ ಆಹಾರಗಳಲ್ಲಿ ಬಹಳ ಮುಖ್ಯವಾದ್ದದ್ದು ಎಂದರೆ ಅದು ಬೇವಿನ ಚೆಕ್ಕೆಯಲ್ಲಿ ಮಾಡುತ್ತಿದ್ದ ಕಷಾಯ. ಮಠದ ಆವರಣದಲ್ಲಿಯೇ ಬೆಳೆದಿದ್ದ ಬೇವಿನ ಮರದ ತೊಗಟೆಯನ್ನ ತಂದು ಅದನ್ನ ಹಾಲಿನಲ್ಲಿ ಬೇಯಿಸಿ ಸ್ವಲ್ಪ ಬೆಲ್ಲವನ್ನ ಹಾಕಿ ತಯಾರು ಮಾಡಲಾಗುತ್ತಿತ್ತು. ಕಹಿ ಪದಾರ್ಥಗಳು ಶ್ರೀಗಳ ಇಮ್ಯುನಿಟಿ ಪವರ್ ಹೆಚ್ಚಾಗಲೂ ಸಹಕರಿಸುತ್ತೆ. ಅಷ್ಟೊಂದು ಕಹಿಯಾಗಿದ್ದ ಕಷಾಯ ಸ್ವೀಕರಿಸುತ್ತಿದ್ದ ನಾಲಿಗೆಗೆ ಕಹಿಯಾಗಿದ್ದು ಹೊಟ್ಟೆಗೆ ಸಿಹಿ ಕಣೋ ಎಂದು ಹೇಳುತ್ತಿದ್ದರು. ದಿನದ ಮೂರು ಅವಧಿಯಲ್ಲೂ ಶ್ರೀಗಳ ಆಹಾರದಲ್ಲಿ ಒಂದೇ ತೆರನಾದ ತೂಕವಿರುತ್ತಿತ್ತು. ಹೆಚ್ಚು ಹಸಿವಾದರೆ ಹೆಚ್ಚು ಆಹಾರ ಎನ್ನುವುದೇ ಇರಲಿಲ್ಲ.
ಒಂದು ಗ್ರಾಂ ಆಹಾರ ಹೆಚ್ಚಾದರೂ ಕೂಡ ಆ ಬಗ್ಗೆ ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಅನೇಕ ಬಾರಿ ಹೆಚ್ಚಾದ ಆಹಾರವನ್ನ ಹಾಗೆಯೇ ಬಿಟ್ಟು ಗೋವುಗಳಿಗೆ ನೀಡಿ ಎನ್ನುತ್ತಿದ್ದರು.