Sunday, 5th January 2025

ನಕಾರಾತ್ಮಕ ಮನಸ್ಸನ್ನು ನಿಭಾಯಿಸುವ ತಂತ್ರಗಾರಿಕೆ

ಶ್ವೇತ ಪತ್ರ

shwethabc@gmail.com

ಕಳೆದ ವಾರದ ಅಂಕಣದಲ್ಲಿ, ಬರಿಯೇ ಋಣಾತ್ಮಕ ಕಥೆಯನ್ನು ಹೇಳುವ ಮನಸ್ಸು, ಅದರಿಂದ ವಿಚಲಿತಗೊಳ್ಳುವ ನಾವುಗಳು ಈ ಕುರಿತಾಗಿ ಬರೆದಿದ್ದೆ. ಅದರ ಮುಂದುವರಿದ ಭಾಗವಾಗಿ ಇವತ್ತಿನ ಲೇಖನ. ಮನಸ್ಸು ಕಥೆ ಹೇಳಲಿ, ಕಥೆ ಹೆಣೆಯಲಿ ತಲೆಕೆಡಿಸಿಕೊಳ್ಳುವುದು ಬೇಡ. ಮನಸ್ಸು ಹೆಣೆಯುವ ಕಥೆಗಳೇನೇ ಇರಲಿ ಅವನ್ನು ನಿಭಾಯಿಸುವ ಕಲೆಗಾರಿಕೆ, ತಂತ್ರಗಾರಿಕೆಗಳನ್ನು ನಾವೆಲ್ಲ ರೂಢಿಸಿಕೊಳ್ಳಬೇಕಿದೆ.

ನಾನು ಸದಾ ಪ್ರತಿಪಾದಿಸುವ ಒಂದು ಅಂಶವೇನೆಂದರೆ ನಿರಂತರ ಅಭ್ಯಾಸ. ನಿರಂತರ ಅಭ್ಯಾಸದಿಂದ ಮಾತ್ರವೇ ಏನನ್ನಾದರೂ ಸಾಧಿಸಲು ಸಾಧ್ಯ. ಇದು ನಾವೆಲ್ಲರೂ ಸದಾ ನೆನಪಿಡಬೇಕಾದ ವಿಷಯ. ಸಣ್ಣ ಪುಟ್ಟ ಯೋಚನೆಗಳಿಗೆ ಮನಸ್ಸು ಅನುವು ಮಾಡಿಕೊಡುತ್ತದೆ, ಆದರೆ ಇವೇ ಆಲೋಚನೆಗಳೇ ಅಗಾಧವಾಗಿ ಬೆಳೆದುಬಿಡುತ್ತವೆ, ಆಗೇನು ಮಾಡಬೇಕು? ಎಂದು ನೀವು ಕೇಳಬಹುದು. ಬಹುಶಃ ಇಂಥ ಸಂದರ್ಭದಲ್ಲಿ ಮನಸ್ಸು ಅನೇಕ ವಿಷಯಗಳನ್ನು ಒಮ್ಮೆಗೇ ಮಾಡಲು ಯತ್ನಿಸುತ್ತಿರುತ್ತದೆ, ಅದು ಸರಿಯಲ್ಲ.

ಒಂದು ಸಮಸ್ಯೆಯನ್ನು ಒಮ್ಮೆಗೆ ತೆಗೆದುಕೊಳ್ಳಿ ಹಾಗೂ ಗಮನವನ್ನು ಕೇವಲ ಆ ಸಮಸ್ಯೆಗಷ್ಟೇ ಸೀಮಿತ ಗೊಳಿಸಿ. ಒಮ್ಮೆಗೆ ಒಂದು ಸಂವೇದನೆಯನ್ನು ಮಾತ್ರ ಒಪ್ಪಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಿ. ಇದು ನಿಮ್ಮ ಸಮಯವನ್ನು ಹೆಚ್ಚು ಬೇಡಬಹುದು, ಆದರೂ ಅಭ್ಯಾಸ ಮಾಡಿ. ಒಂದು ಋಣಾತ್ಮಕ ಆಲೋಚನೆಯ ಸಮಸ್ಯೆ ಬಗೆಹರಿಯಿತಾ, ಮತ್ತೊಂದು ಸಮಸ್ಯೆಯನ್ನು ಎತ್ತಿಕೊಳ್ಳಿ. ಒಮ್ಮೆಗೆ ಒಂದೇ ಸಂವೇದನೆಯ ಮೇಲೆ ಗಮನ ನೀಡುವುದು ಕಷ್ಟಕರ ಹೌದು. ಮೊದಮೊದಲಿಗೆ ಎಲ್ಲವೂ ಕಷ್ಟಕರವೇ. ಬೇರೆ ಯಾವುದೇ ಕೌಶಲದಂತೆ ಅಭ್ಯಾಸದಿಂದ ಇದನ್ನು ರೂಢಿಸಿಕೊಳ್ಳಬೇಕೇ ಹೊರತು, ಇದಕ್ಕೆ ಬೇರೆ ಯಾವುದೇ ಮ್ಯಾಜಿಕ್ ಇಲ್ಲ. ಹಾಗಾಗಿ ನಿಮ್ಮ ಗಮನ ಬೇರೆಡೆಗೆ ಹೊರಳಿದರೂ ಅದನ್ನು ಅರಿತು ಮತ್ತೆ ಹಳೆಯ ಸಂವೇದನೆಯೆಡೆಗೆ ತಿರುಗಿಸಿ.

ನನ್ನ ಆಲೋಚನೆಗಳು ಸದಾ ನನ್ನನ್ನು ತೊಂದರೆಗೀಡು ಮಾಡುತ್ತಲೇ ಇರುತ್ತದೆ. ಹೌದು ಇದು ಸ್ವಯಂ ಆಲೋಚನೆಯ ಮೂಲಗುಣ. ಈ ಗುಣವೇ ನಮ್ಮನ್ನು
ಮತ್ತೆ ಮತ್ತೆ ವಿಕರ್ಷಿಸುತ್ತಲೇ ಇರುತ್ತದೆ. ನಮ್ಮನ್ನು ನಮ್ಮ ಅನುಭವಗಳಿಂದ ದೂರಸರಿಸುತ್ತದೆ. ಮನಸ್ಸು ಯಾವಾಗಲೂ ಋಣಾತ್ಮಕ ವಿಷಯಗಳೊಂದಿಗೆ ಮರಳಿ ಬಂದರೂ ಆ ಆಲೋಚನೆಯನ್ನು ಅನುಭವಿಸಿ, ನಿಧಾನವಾಗಿ ಗಮನವನ್ನು ಮತ್ತೆ ಧನಾತ್ಮಕ ಆಲೋಚನೆಯೆಡೆಗೆ ತಿರುಗಿಸಿ. ಯಾವಾಗಲೇ ಆಗಲಿ ಮನಸ್ಸು ಋಣಾತ್ಮಕ ಆಲೋಚನೆಯತ್ತ ಹೊರಳಿದಾಗ ಒಂದು ಕ್ಷಣ ಹಾಗೆ ಗಮನಿಸಿ ಯಾವ ವಿಚಾರ ನಿಮ್ಮನ್ನು ವಿಕರ್ಷಿಸಿತು ಎಂದು ಕಂಡುಕೊಳ್ಳಿ-
ಯಾವುದಾದರೂ ನೆನಪೇ? ಚಿತ್ರಣವೇ? ಆಲೋಚನೆಯೇ? ಹೀಗೆ ಗಮನಿಸುತ್ತಲೇ ಮರಳಿ ಮನಸ್ಸನ್ನು ಹಿಡಿತಕ್ಕೆ ತನ್ನಿ.

ಪ್ರತಿಬಾರಿ ನೀವು ಹೀಗೆ ಮಾಡುವಾಗ ೨ ಕೌಶಲಗಳನ್ನು ಕಲಿಯುವಿರಿ. ಒಂದು, ನೀವು ನಿಮ್ಮದೇ ಆಲೋಚನೆಯ ಬಲೆಯೊಳಗೆ ಸಿಲುಕಿದ್ದೀರಿ ಎಂಬ ಅಂಶ ಹಾಗೂ ಎರಡನೆಯದು, ಹೀಗೆ ಸಿಲುಕಿದ್ದರೂ ಮತ್ತೆ ನಿಮ್ಮ ಮನಸ್ಸನ್ನು ಅದರಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿಸಿತು ಎಂಬ ಅಂಶ. ಪ್ರಯತ್ನಿಸಿ ನೋಡಿ.
ಈಗ ನೀವು ಕೇಳಬಹುದು- ‘ಮನಸ್ಸಿನೊಳಗೆ ಅಹಿತಕರ ಸಂವೇದನೆಗಳಿಗೆ ದಾರಿ ಮಾಡಿಕೊಟ್ಟರೆ, ಹಾಗೆ ಮಾಡಿದ ಕ್ಷಣ ಅವು ಮಾಯವಾಗಿ ಹೋದವು; ಪ್ರತಿ ಬಾರಿಯೂ ಅಹಿತಕರ ಸಂವೇದನೆಗಳು ಕಾಡಿದಾಗ ಹೀಗೆಯೇ ಆಗುತ್ತದೆಯೇ?’ ಅಂತ. ಇದಕ್ಕೆ ನನ್ನ ಉತ್ತರ- ಖಂಡಿತವಾಗಿಯೂ ಇಲ್ಲ.

ಋಣಾತ್ಮಕ ಸಂವೇದನೆಗಳನ್ನು ನಿಯಂತ್ರಿಸುವಾಗ ಮೊದಮೊದಲಿಗೆ ಅವು ಕ್ಷಣಮಾತ್ರದಲ್ಲೇ ಮಾಯವಾಗಿ ಬಿಡುತ್ತವೆ ಎಂದೆನಿಸುತ್ತದೆ, ಆದರೆ ಸಂಪೂರ್ಣ ವಾಗಲ್ಲ. ಅವು ಮತ್ತೆ ಮತ್ತೆ ಸ್ವಲ್ಪ ಸಮಯದಲ್ಲೇ ನಿಮ್ಮನ್ನು ಮುತ್ತಬಹುದು. ಇಂಥ ಸಂದರ್ಭದಲ್ಲೇ ನೀವು ಮತ್ತೆ ನಿರಾಶರಾಗುವುದು. ಋಣಾತ್ಮಕ ಆಲೋಚನೆ ಯೊಂದಿಗೆ ಹೋರಾಡುವುದು ಮತ್ತೆ ಮುಂದುವರಿಯುತ್ತಲೇ ಇರುತ್ತದೆ.

ಋಣಾತ್ಮಕ ಸಂವೇದನೆಗಳು ಮಾಯವಾದ ಬೆನ್ನಿಗೇ ಮರಳಿ ಅಂಟಿಕೊಂಡು ಬಿಡುತ್ತವಲ್ಲ ಹೀಗೇಕೆ? ಎಂದು ನೀವು ಕೇಳಬಹುದು. ಅನೇಕ ಅಹಿತಕರ ಸಂವೇದನೆ ಗಳು ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ. ನೀವು ಪ್ರೀತಿಸುವ ಯಾರನ್ನೋ ಕಳೆದುಕೊಂಡ ಯೋಚನೆಗಳಿರಬಹುದು. ಆ ಆಲೋಚನೆ ನಿಮ್ಮನ್ನು ಪುನಃ ದುಃಖದಲ್ಲಿ ಅನೇಕ ದಿನಗಳು, ತಿಂಗಳ ಕಾಲ ಮುಳುಗಿಸುತ್ತಲೇ ಇರುತ್ತದೆ. ಅಥವಾ ನೀವೇನಾದರೂ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಆ ಕಾಯಿಲೆಯ ಭಯ, ಏನಾಗುವುದೋ ಎಂಬ ಅಭದ್ರತೆಯಿಂದ ಮನಸ್ಸು ಬಳಲುತ್ತಲೇ ಇರುತ್ತದೆ.

ಒಂದು ಮಾತಿದೆಯಲ್ಲ- ‘ಅಲೆಗಳನ್ನು ತಡೆಯಲು ಸಾಧ್ಯವಿಲ್ಲ, ಅದರೊಳಗೆ ಈಜುವುದನ್ನು ಕಲಿಯಬೇಕಿದೆ’ ಇದನ್ನು ನಾವು ಸಾಧ್ಯವಾಗಿಸಿಕೊಳ್ಳಬೇಕು.
ಮನದೊಳಗೆ ಬದಲಾವಣೆಗೆ ಅವಕಾಶ ಕೊಟ್ಟರೂ ನನ್ನ ಸಂವೇದನೆಗಳು ಬದಲಾವಣೆಗೊಳ್ಳಲಿಲ್ಲ ಎಂಬ ಪ್ರಶ್ನೆಯು ನಿಮ್ಮನ್ನು ಕಾಡಬಹುದು. ಕೆಲವೊಮ್ಮೆ ಭಾವನೆ, ಸಂವೇದನೆ ಗಳು ಅತ್ಯಂತ ವೇಗವಾಗಿ ಬದಲಾವಣೆಗೊಳ್ಳಬಹುದು, ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಇಲ್ಲಿ ನಾವೆಲ್ಲ ಒಪ್ಪಿಕೊಳ್ಳಬೇಕಾದ ಒಂದು ಸಂಗತಿ ಎಂದರೆ, ಅಹಿತಕರ ಸಂವೇದನೆಗಳು ಸಾವಯವವಾಗಿ ಮಾಗಬೇಕೇ ಹೊರತು ನಮ್ಮ ಅನುಕೂಲತೆಗಳಿಗೆ ತಕ್ಕಂತಲ್ಲ. ಆಯಿತು ಈಗ ನೀವು
ನಿಮ್ಮ ಸಂವೇದನೆಗಳನ್ನು ಒಪ್ಪಿಕೊಂಡಿದ್ದೀರಿ ಎಂದುಕೊಳ್ಳೋಣ.

ಹಾಗಿದ್ದರೆ ಮುಂದೇನು? ನಿಮ್ಮ ಭಾವನೆಗಳನ್ನು ಒಪ್ಪಿಕೊಂಡಾದ ಮೇಲೆ ನಿಮ್ಮದೇ ಬದುಕಿನ ಮುಖ್ಯ ಸಂಗತಿಯನ್ನು ಆಯ್ದುಕೊಂಡು ಅವುಗಳೆಡೆಗೆ ನಿಮ್ಮ ಬದುಕನ್ನು ತಿರುಗಿಸಿ, ಮರು ಬದುಕಲು ಪ್ರಯತ್ನಿಸಿ. ಬದುಕಿಗೆ ಭಾವನೆಗಳಷ್ಟೇ ಕ್ರಿಯೆ ಹಾಗೂ ಮೌಲ್ಯಗಳು ಮುಖ್ಯವಾಗಬೇಕೆ? ಆಲೋಚನೆ ಹಾಗೂ ಭಾವನೆ ಗಳಷ್ಟೇ ಕ್ರಿಯೆಯೂ ನಮಗೆ ಬಹು ಮುಖ್ಯವಾಗುತ್ತದೆ. ಏಕೆಂದರೆ ಕ್ರಿಯೆಯ ಮೇಲೆ ನಮಗೆ ನೇರವಾದ ಹಿಡಿತವಿರುತ್ತದೆ. ದಿಕ್ಕು ತಪ್ಪಿಸುವ ಸಂವೇದನೆ, ಭಾವನೆಗಳಿಂದ ಮೌಲ್ಯಗಳು ನಮ್ಮ ವರ್ತನೆಯನ್ನು ಮಾರ್ಗದರ್ಶಿಸುತ್ತಾ, ಪ್ರೇರೇಪಿಸುತ್ತವೆ. ಮೌಲ್ಯಾಧಾರಿತವಾಗಿ ನಮ್ಮ ಕೆಲಸಗಳನ್ನು ನಿರ್ವಹಿಸಿದಾಗ ಒಂದು ಸಂಪೂರ್ಣತೆ ಹಾಗೂ ಆಳವಾದ ಆತ್ಮತೃಪ್ತಿ ನಮ್ಮದಾಗುತ್ತದೆ. ಹಿತಕರವಾದ ಸಂವೇಗಗಳಾದ ಸಂತೃಪ್ತಿ, ಖುಷಿ, ಪ್ರೀತಿ, ಮೌಲ್ಯದ ಉತ್ಪನ್ನಗಳೇ ಆಗಿವೆ
ಹೌದಲ್ಲವೇ? ನಮ್ಮೆಲ್ಲರ ಅನೇಕ ವ್ಯಕ್ತಿತ್ವ-ವಿಕಸನ, ಸ್ವಯಂ-ಸಹಾಯ ಮಾದರಿಗಳು, ‘ನಾವೆಲ್ಲ ಕೆಟ್ಟ ಮನಸ್ಥಿತಿಯಲ್ಲಿದ್ದಾಗ ಬಿಸಿನೀರಿನ ಸ್ನಾನ ಮಾಡಬೇಕು, ಸಂಗೀತ ಕೇಳಬೇಕು, ಒಳ್ಳೆಯ ಪುಸ್ತಕ ಓದಬೇಕು, ಬಿಸಿ ಚಾಕಲೇಟ್ ತಿನ್ನಬೇಕು, ಮಸಾಜ್ ಮಾಡಿಸಿಕೊಳ್ಳಬೇಕು, ವಾಕ್ ಮಾಡಬೇಕು, ಆಟವಾಡಬೇಕು, ಸ್ನೇಹಿತರ ಜತೆ ಸಮಯ ಕಳೆಯಬೇಕು’ ಹೀಗೆಲ್ಲಾ ಸೂಚಿಸುತ್ತವೆ.

ಹಾಗಿದ್ದರೆ ನಮ್ಮ ಏರುಪೇರಾದ ಮನಸ್ಥಿತಿಯಲ್ಲಿ ನಾವು ಮೇಲಿನ ಚಟುವಟಿಕೆಗಳನ್ನು ಪಾಲಿಸಬೇಕೇ ಎಂದು ನೀವು ಕೇಳಬಹುದು. ನನ್ನ ಆಪ್ತಸಲಹೆ
ಅನುಭವದಲ್ಲಿ ಮೇಲಿನ ಎಲ್ಲಾ ಚಟುವಟಿಕೆಗಳು ಮನಸ್ಸಿಗೆ ಆಳವಾದ ಸಂತೃಪ್ತಿಯನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಮೇಲೆ ಹೇಳಿದ ಚಟುವಟಿಕೆಗಳು ನಿಮ್ಮ ಬದುಕಿಗೆ ಅರ್ಥ ತುಂಬುತ್ತವೆ ಎನಿಸಿದರೆ ನೀವು ಅವುಗಳಲ್ಲಿ ತೊಡಗಿಸಿಕೊಳ್ಳಿ. ಅವು ನಿಸ್ಸಂದೇಹವಾಗಿ ನಿಮ್ಮ ಅಹಿತಕರ ಭಾವನೆಗಳನ್ನು ದೂರಮಾಡುತ್ತವೆ ಎಂದಾದರೆ, ಅದು ಬಹಳ ದೊಡ್ಡ ಚಿಕಿತ್ಸೆ ಅಲ್ಲದೆ ಮತ್ತಿನ್ನೇನು? ಮನಸ್ಸಿನ ಆತಂಕ, ಉದ್ವಿಗ್ನತೆ, ಖಿನ್ನತೆಗಳಿಗೆ ನನ್ನ ಆಪ್ತಸಲಹೆಯಲ್ಲಿ ರೂಢಿಸಿಕೊಂಡಿರುವ ಚಿಕಿತ್ಸೆ ಎಂದರೆ ಅದು ಒಪ್ಪಿತ-ಬದ್ಧತಾ ಚಿಕಿತ್ಸೆ. ಈ ಚಿಕಿತ್ಸಾ ವಿಧಾನವು ೬ ಮುಖ್ಯ ತತ್ವಗಳ ಮೇಲೆ ನಿಂತಿದೆ ಹಾಗೂ ಈ ತತ್ವಗಳು ಎರಡು ಬಹಳ ಮುಖ್ಯ ಮಾನಸಿಕ ಸಮತೋಲನತೆಗೆ ಕಾರಣವಾಗುತ್ತವೆ.

ಮೊದಲನೆಯದು ನೋವಿನ ಆಲೋಚನೆ ಹಾಗೂ ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸಂಪೂರ್ಣ ಅರ್ಥಪೂರ್ಣ ಬದುಕನ್ನು ಕಟ್ಟಲು. ಈ ತತ್ವಗಳು ನಿಮಗೂ ಸ್ವಸಹಾಯಕ್ಕೆ ನಿಲುಕಬಹುದು. ಒಂದೊಂದನ್ನೇ ವಿವರವಾಗಿ ನೋಡೋಣ.

ಪ್ರಸರಣ: ಹೀಗೆಂದರೆ ನಿಮ್ಮ ಆಲೋಚನೆಗಳನ್ನು ಬೇರೆಯದೇ ರೀತಿಯಲ್ಲಿ ಸಂಯೋಜಿಸುವುದು. ಆಗ ಆಲೋಚನೆಯ ಪ್ರಭಾವ ನಮ್ಮ ಮೇಲೆ ಕಡಿಮೆ ರೀತಿಯ ವ್ಯತ್ಯಾಸವನ್ನು ಮೂಡಿಸುತ್ತದೆ. ದಿನಗಳೆದಂತೆ ನಾವು ಪ್ರಸರಣ ವಿಧಾನವನ್ನು ಅಭ್ಯಾಸ ಮಾಡಿಕೊಂಡರೆ ನೋವಿನ, ಅಹಿತಕರ ಆಲೋಚನೆಗಳು ಸದ್ದಿಲ್ಲದೆ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.

ವಿಸ್ತರಣೆ: ಹೀಗೆಂದರೆ ನಮ್ಮವೇ ಆದ ಅಹಿತಕರ ಸಂವೇಗಗಳನ್ನು, ಸಂವೇದನೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಅದು ಮಿಟ್ಟುಕೊಳ್ಳುವ ಬದಲು ಅವುಗಳನ್ನು ಅನುಭವಿಸಿ ಹೊರ ಚೆಲ್ಲುವುದು. ಹೀಗೆ ಮಾಡಿದಾಗ, ಮಳೆ ಚೆಲ್ಲಿ ಮಾಯವಾಗುವ ಮೋಡದಂತೆ ಋಣಾತ್ಮಕತೆಯ ಭಾವನೆ ಗಳು ಸರಿದುಹೋಗುತ್ತವೆ.

ಸಂಯೋಜನೆ: ಹೀಗೆಂದರೆ ಈ ಕ್ಷಣದಲ್ಲಿ ಬದುಕುವುದು. ನಮ್ಮ ಗಮನವನ್ನು ಈ ಕ್ಷಣಕ್ಕೆ ಕೇಂದ್ರೀಕರಿಸುವುದು ಹಾಗೂ ಈ ಕ್ಷಣವನ್ನು ಸಂಪೂರ್ಣವಾಗಿ ಆವರಿಸಿಕೊಂಡು, ನಾವೇನು ಮಾಡುತ್ತಿರುವೆವೋ ಅದರಲ್ಲಿ ಕಳೆದುಹೋಗಿ ಬಿಡುವುದು. ಸಂಯೋಜನೆಯ ಬಹಳ ಮುಖ್ಯ ಅಂಶವೆಂದರೆ ಹಳೆಯ ನೆನಪು/ಆಲೋಚನೆಗಳಲ್ಲಿ ಕಳೆದು ಹೋಗದೆ, ಭವಿಷ್ಯದ ಬಗೆಗೆ ಆತಂಕ ಮಾಡಿಕೊಂಡು ಚಿಂತಿಸದೆ ಈ ಕ್ಷಣದಲ್ಲಿ ಸಂಪೂರ್ಣವಾಗಿ ಬದುಕುವುದು.

ನಮ್ಮನ್ನು ನಾವೇ ಅವಲೋಕಿಸಿಕೊಳ್ಳುವುದು: ಇದು ನಮ್ಮ ಚೇತನಾನುಭವಕ್ಕೆ ನಿಲುಕುವ ಅತ್ಯಂತ ಶಕ್ತಿಯುತವಾದ ಸಾಧನ. ನಮ್ಮೊಳಗೆ ನಾವು ದೃಷ್ಟಿಯನ್ನು ನೆಟ್ಟಾಗ ಬದುಕಲ್ಲಿ ಅನೇಕ ಬದಲಾವಣೆಗಳನ್ನು ಸಾಧ್ಯವಾಗಿಸಬಹುದು. ಜತೆಗೆ ಅಹಿತಕರ ಆಲೋಚನೆ, ಸಂವೇದನೆ, ಸಂವೇಗಗಳನ್ನು ಬದಲಾಯಿಸಬಹುದು.

ಮೌಲ್ಯ: ಬದುಕನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿ ಕೊಳ್ಳಬೇಕಾದರೆ ಬದುಕಿಗೆ ಮೌಲ್ಯಗಳು ಅತ್ಯವಶ್ಯಕ. ನಮ್ಮ ಮೌಲ್ಯಗಳು ನಮ್ಮನ್ನು ಪ್ರತಿಬಿಂಬಿಸುತ್ತವೆ. ವ್ಯಕ್ತಿಯಾಗಿ ವ್ಯಕ್ತಿತ್ವವಾಗಿ ನಮ್ಮನ್ನು ಅವು ಜಗತ್ತಿನೆದುರು ತೆರೆದು ನಿಲ್ಲಿಸುತ್ತವೆ. ಮೌಲ್ಯಗಳು ನಮ್ಮ ಬದುಕಿಗೆ ಒಂದು ದಿಕ್ಕನ್ನು ಕಾಣಿಸುತ್ತವೆ. ಸದಾ ನಮ್ಮನ್ನು ಪ್ರೇರೇಪಿಸುತ್ತ, ನಮ್ಮೊಳಗೆ ಸ್ಪೂರ್ತಿ ತುಂಬುತ್ತಾ ನಮ್ಮ ಬದುಕಿನ ಪ್ರಮುಖ ಕೆಲಸಗಳನ್ನು ಸಾಧ್ಯವಾಗಿಸಿಕೊಳ್ಳಲು ಯಾವಾಗಲೂ ಬೆನ್ನೆಲುಬಾಗಿರುತ್ತವೆ.

ಒಪ್ಪಿತ-ಬದ್ಧತಾ ಚಿಕಿತ್ಸೆ: ಬದುಕಲ್ಲಿ ನಾವೇನಾದರೂ ಮಾಡಲೇಬೇಕು, ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಲೇಬೇಕು. ಆಗಲೇ ನಮ್ಮ ಬದುಕಿಗೆ
ಸಾರ್ಥಕತೆ. ಮೌಲ್ಯದಂತೆ ಕ್ರಿಯೆಯು ನಮ್ಮನ್ನು ಪ್ರೇರೇಪಿಸುತ್ತ, ಸ್ಪೂರ್ತಿ ತುಂಬುತ್ತಾ ಸರಿಯಾದ ದಾರಿಯಲ್ಲಿ ನಡೆಯುವಂತೆ ಉತ್ತೇಜಿಸುತ್ತದೆ. ನಾನು ಹೇಳಿರುವ ಈ ಮೇಲಿನ ಆರು ತತ್ವಗಳನ್ನು ನೀವು ಫಾಲೋ ಮಾಡುವ ಅವಶ್ಯಕತೆ ಇಲ್ಲ, ಅವನ್ನು ಬದುಕಿಗೆ ಅನ್ವಯಿಸಿಕೊಳ್ಳುತ್ತಾ ಸಾಗಬೇಕು. ಆಗ ಗೊತ್ತಿಲ್ಲದೆ ಅನೇಕ ಪವಾಡಗಳೇ ನಡೆದುಬಿಡುತ್ತವೆ. ಬೇಕಾದರೆ ಪ್ರಯೋಗಿಸಿ ನೋಡಿ!

Leave a Reply

Your email address will not be published. Required fields are marked *