‘ಶಕ್ತಿ ಯೋಜನೆ’ ನೂರು ದಿನ ಪೂರೈಸಿದ್ದು, ಯೋಜನೆ ಜಾರಿಯಾದಾಗಿನಿಂದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ನಿತ್ಯ ಸರಾಸರಿ ೬೦ ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಪ್ರಯಾಣಿಸಿ ದ್ದಾರೆ. ಅಂದರೆ ಈವರೆಗೂ ಬರೋಬ್ಬರಿ ೬೨ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಆ ಮೂಲಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ಯಶಸ್ವಿಯಾಗಿದೆ. ಉದ್ಯೊಗ, ಶಿಕ್ಷಣ ಮತ್ತು ವೈದ್ಯಕೀಯ ಅವಶ್ಯಕತೆಗಳು ಸೇರಿದಂತೆ ಜೀವನ ನೀರ್ವಹಣೆ ಯ ಉದ್ದೇಶಗಳಿಗಾಗಿ ನಾಡಿನ ಕೋಟ್ಯಂತರ ಮಹಿಳೆಯರು ಸಂಚರಿಸುತ್ತಿದ್ದಾರೆ. ಹೀಗೆ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸರಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ, ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಲು ಈ ಯೋಜನೆಯ ಕೊಡುಗೆ ಬಹಳಷ್ಟಿದೆ. ದುಡಿಮೆಗಾಗಿ ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಕಾರ್ಮಿಕ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗಂತೂ ಉಚಿತ ಪ್ರಯಾಣದ ಸೌಲಭ್ಯ ದಿಂದ ಬಹಳ ಅನುಕೂಲವಾಗಿದೆ. ಒಟ್ಟಾರೆ ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಶಕ್ತಿ ತುಂಬಿದೆ.
ಈ ಯೋಜನೆ ಆರಂಭಿಸುವ ಸಂದರ್ಭದಲ್ಲಿ ಸಾರಿಗೆ ನಿಗಮಗಳಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಮುಖ್ಯವಾಗಿ ಚಾಲಕರು ಮತ್ತು ನಿರ್ವಾಹಕರ ಕೊರತೆ ಇತ್ತು. ಬಸ್ಸುಗಳ ಸಂಖ್ಯೆಯೂ ಕಡಿಮೆ ಇತ್ತು. ಸರಕಾರವು ಈ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ ಕೊಳ್ಳುವ ಮೂಲಕ ಯೋಜನೆಯನ್ನೂ ಯಶಸ್ವಿಗೊಳಿಸಿದೆ. ಇವೆಲ್ಲದರ ಮಧ್ಯೆಯೂ ಸಾರಿಗೆ ಸಂಸ್ಥೆಗಳಿಗೆ ೨೫ ಪ್ರಶಸ್ತಿಗಳು ಬಂದಿರುವುದು ಗಮನಾರ್ಹ. ಶಕ್ತಿ ಯೋಜನೆಗೆ ಚಾಲನೆ ನೀಡುವ ಮೊದಲು, ಪ್ರತಿಪಕ್ಷಗಳ ನಾಯಕರು ಮತ್ತು ಇತರರು ‘ಈ ಯೋಜನೆ ಯಶಸ್ವಿಯಾಗುವುದಿಲ್ಲ, ನೌಕರರಿಗೆ ವೇತನ ನೀಡಲು ಹೆಣಗಾಡುತ್ತಿರುವ ಸಾರಿಗೆ ನಿಗಮಗಳು ಮುಳುಗಲಿವೆ’ ಎಂದೆ ಟೀಕೆ ಮಾಡಲಾಗುತ್ತಿತ್ತು.
ಆದರೆ, ಎಲ್ಲ ಅಪಪ್ರಚಾರ ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದೆ. ಒಟ್ಟಾರೆ ಈ ಯೋಜನೆಯ ಯಶಸ್ಸಿಗೆ ಕಾರಣವಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಎಲ್ಲ ಸಾರಿಗೆ ಸಿಬ್ಬಂದಿ ಅಭಿನಂದನೆಗೆ ಅರ್ಹರು.