Thursday, 26th December 2024

ಲೋಕಸಭೆಯಲ್ಲಿ ಕನ್ನಡ ಡಿಂಡಿಮ

ಭಾಸ್ಕರಾಯಣ

ಎಂ.ಕೆ.ಭಾಸ್ಕರರಾವ್

ಶಿವಮೊಗ್ಗ ಕ್ಷೇತ್ರದಿಂದ ಸಂಯುಕ್ತ ಸಮಾಜವಾದಿ ಪಕ್ಷದ ಸದಸ್ಯರಾಗಿ ಆಯ್ಕೆಯಾದ ಪಟೇಲರು, ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತಾಡ ಬಲ್ಲ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದರು. ಆದರೆ ಲೋಕಸಭೆಯಲ್ಲಿ ಕನ್ನಡದಲ್ಲೇ ಅಭಿಪ್ರಾಯ ಮಂಡಿಸಲು ಅವರು ತೀರ್ಮಾನಿಸಿದಾಗ ಕೋಲಾಹಲವಾಯಿತು.

ಒಬ್ಬರ ಕೊಡುಗೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಹತ್ತು ಹಲವು ನಿದರ್ಶನ ಬೇಕೆಂದೇನೂ ಇಲ್ಲ. ಒಂದೆರಡು ಹೆಜ್ಜೆ ಗುರುತು ಕೂಡಾ ಅದನ್ನು ಮೂಡಿಸಿದವರನ್ನು ಖ್ಯಾತಿಯ ಉತ್ತುಂಗದಲ್ಲಿ ಕೂರಿಸುತ್ತದೆ. ಜೆ.ಎಚ್.ಪಟೇಲರೆಂದೇ ನಾಡು ಗುರುತಿಸಿದ ಜಯದೇವಪ್ಪ ಹಾಲಪ್ಪ ಪಟೇಲರು ಇಂಥ ಹೆಜ್ಜೆ ಗುರುತು ಮೂಡಿ ಸಿರುವ ವಿರಳಾತಿ ಗಣ್ಯರಲ್ಲಿ ಬಹಳ ಮುಖ್ಯರಾದವರು. ಹೀಗೆ ಹೇಳಲು ಕಾರಣ ಅವರು ಲೋಕಸಭೆಯಲ್ಲಿ ಇಂಗ್ಲಿಷ್, ಹಿಂದಿಯೇತರ ತಿರಸ್ಕೃತ ಭಾಷೆಗಳಿಗೆ ಅದರಲ್ಲೂ ಮುಖ್ಯವಾಗಿ ಕನ್ನಡಕ್ಕೆ ಮಾನ್ಯತೆ ದೊರಕಿಸಿಕೊಟ್ಟ ವಿದ್ಯಮಾನ.

ಐವತ್ತಾರು ವರ್ಷದ ಹಿಂದೆ ೧೯೬೭ರಲ್ಲಿ ಅವರು ಲೋಕಸಭೆಯಲ್ಲಿ ಕನ್ನಡ ಕಹಳೆಯನ್ನು ಮೊಳಗಿಸಿದರು. ಕನ್ನಡಕ್ಕೆ ಲೋಕಸಭೆ ಕಿವಿಯಾಗುವಂತೆ ಮಾಡಿದರು. ಸ್ವತಂತ್ರ ಭಾರತದ ಲೋಕಸಭೆ ಅಸ್ತಿತ್ವಕ್ಕೆ ಬಂದು ಒಂದೂವರೆ ದಶಕವಾಗಿದ್ದರೂ ಆ ಸದನದಲ್ಲಿ ಅನಾಥ ಪ್ರಜ್ಞೆಯಲ್ಲಿ ನರಳುತ್ತಿದ್ದ ಭಾಷೆಗಳಲ್ಲಿ ಕನ್ನಡವೂ ಒಂದಾಗಿತ್ತು. ಈ ನೀತಿ ವಿರುದ್ಧ ಸಿಡಿದೆದ್ದ ಪಟೇಲರು ಇಂಗ್ಲಿಷ್ ಮಾತಾಡಲು ಬಾರದ, ಹಿಂದಿ ಗೊತ್ತಿಲ್ಲದ ಇತರ ಪ್ರಾದೇಶಿಕ ಭಾಷೆಯ ಸಂಸದರಲ್ಲಿದ್ದ ಕೀಳರಿಮೆ ತೊಲಗಿಸಿ ಆತ್ಮವಿಶ್ವಾಸವನ್ನು ಉದ್ದೀಪಿಸಿದರು.

ಶಿವಮೊಗ್ಗ ಕ್ಷೇತ್ರದಿಂದ ಸಂಯುಕ್ತ ಸಮಾಜವಾದಿ ಪಕ್ಷದ ಸದಸ್ಯರಾಗಿ ಆಯ್ಕೆಯಾದ ಪಟೇಲರು, ಕರ್ನಾಟಕದ ರಾಜಕಾರಣಿಗಳಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತಾಡುವ ಭಾಷಾ ಜ್ಞಾನಿಗಳಲ್ಲಿ ಒಬ್ಬರೆನಿಸಿದ್ದರು. ಲೋಕಸಭೆಯಲ್ಲಿ ಇಂಗ್ಲಿಷನ್ನು ಪಕ್ಕಕ್ಕೆ ತಳ್ಳಿ ಕನ್ನಡ ಭಾಷೆಯ ಮೂಲಕವೇ ತಮ್ಮ ಅಭಿಪ್ರಾಯ ಮಂಡಿಸಲು ಅವರು ತೀರ್ಮಾನಿಸಿದಾಗ ದೊಡ್ಡ ಕೋಲಾಹಲವೇ ನಡೆದುಹೋಯಿತು. ಅದುವರೆಗೆ, ಸದಸ್ಯ ರಾದವರು ಹಿಂದಿ ಇಲ್ಲವೇ ಇಂಗ್ಲಿಷ್ ನಲ್ಲಿ ಮಾತಾಡಬಹುದಾಗಿತ್ತು. ಈ ಎರಡೂ ಭಾಷೆ ಬಾರದವರು ತಾವು ತಮ್ಮ ರಾಜ್ಯಭಾಷೆ/ ಮಾತೃಭಾಷೆ ಯಲ್ಲಿ ಮಾಡಲಿರುವ ಭಾಷಣದ ಇಂಗ್ಲಿಷ್ ಅಥವಾ ಹಿಂದಿ ಅನುವಾದವನ್ನು ಸಭಾಧ್ಯಕ್ಷರ ಕಚೇರಿಗೆ ಸಾಕಷ್ಟು ಮೊದಲೇ ಒಪ್ಪಿಸಿ ಅನುಮತಿ ಪಡೆಯ ಬೇಕಿತ್ತು.

ಸಂವಿಧಾನದ ೯ನೇ ಅನುಚ್ಛೇದದಲ್ಲಿ ನಮೂದಾಗಿರುವ ಭಾಷೆಗಳಿಗೆಲ್ಲ ಸಮಾನ ಮರ್ಯಾದೆ ಇರುವಾಗ ಹಿಂದಿ ಇಲ್ಲವೇ ಇಂಗ್ಲಿಷೇತರ ಭಾಷೆಗಳನ್ನು ಎರಡನೇ ದರ್ಜೆಯವು ಎಂದು ಪರಿಗಣಿಸುವ ಧೋರಣೆ ಸರಿಯಲ್ಲ ಎನ್ನುವುದು ಪಟೇಲರು ಪ್ರತಿನಿಧಿಸಿದ್ದ ಸಂಯುಕ್ತ ಸಮಾಜವಾದಿ ಪಕ್ಷದ ನಿಲುವೂ ಆಗಿತ್ತು. ಸಂವಿಧಾನವನ್ನು ಭಾರತ ಒಪ್ಪಿಕೊಂಡಿದ್ದು ೧೯೫೦ರಲ್ಲಿ. ಭಾರತದ ಪ್ರಜೆಯಾದವರ ಹಕ್ಕು ಹೊಣೆಗಾರಿಕೆಯನ್ನು ಅದು ಸ್ಪಷ್ಟವಾಗಿ ಹೇಳಿತ್ತು. ಅದರ ಪ್ರಕಾರ ಯಾವುದೇ ಭಾಷೆ ಇನ್ನೊಂದಕ್ಕಿಂತ ಮೇಲೂ ಅಲ್ಲ ಕೀಳೂ ಅಲ್ಲ.

ಸಮಾನತೆ, ಪರಸ್ಪರ ಗೌರವ ವಿವಿಧ ಭಾಷಿಕರನ್ನು ಬೆಸೆಯುವ ಕೊಂಡಿ ಎನ್ನುವುದು ಅನುಮಾನಕ್ಕೆ ಎಳ್ಳುಕಾಳಿನಷ್ಟೂ ಎಡೆಯೇ ಇಲ್ಲದಂತೆ ಸಂವಿಧಾನ ದಲ್ಲಿ ಉಲ್ಲೇಖವಾಗಿರುವಾಗ ಸಂಸತ್ತು ಅದನ್ನು ಯಾಕೆ ಮಾನ್ಯ ಮಾಡುತ್ತಿಲ್ಲ ಎಂಬ ಅದುವರೆಗೆ ಯಾರೂ ಕೇಳಿರದ ಪ್ರಶ್ನೆಯನ್ನು ಪಟೇಲರು ಎತ್ತಿದ್ದು ಕೋಲಾಹಲಕ್ಕೆ ಕಾರಣ ಕಲ್ಪಿಸಿದ ಬೆಳವಣಿಗೆಯಾಗಿತ್ತು. ತಾವು ಮಾಡಲಿರುವ ಭಾಷಣದ ಇಂಗ್ಲಿಷ್ ಅಥವಾ ಹಿಂದಿ ಅನುವಾದವನ್ನು ಸಭಾಧ್ಯಕ್ಷರಿಗೆ ಸಲ್ಲಿಸಿ ಅವರಿಂದ ಸಮ್ಮತಿ ಪಡೆದು ತಮ್ಮ ಭಾಷೆಯಲ್ಲಿ ಮಾತಾಡಬಹುದೆಂಬ ಷರತ್ತು ಸದಸ್ಯರ ಭಾಷಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಲ್ಲದೆ ಮತ್ತೇನೂ ಅಲ್ಲ ಎನ್ನುವುದು ಪಟೇಲರ ಖಚಿತ ನಂಬಿಕೆಯಾಗಿತ್ತು.

ಪಟೇಲರು ಕನ್ನಡದಲ್ಲಿ ಮಾತಾಡಲು ಶುರು ಹಚ್ಚಿ ‘ಮಾನ್ಯ ಸಭಾಧ್ಯಕ್ಷರೇ..’ ಎನ್ನುತ್ತಿದ್ದಂತೆಯೇ ಹಿಂದಿ ಪ್ರತಿಪಾದಕಿ ಕಾಂಗ್ರೆಸ್ ಸಂಸದೆ ತಾರಕೇಶ್ವರಿ ಸಿನ್ಹಾ ಸಿಡಿದೆದ್ದರು. ಕನ್ನಡದಲ್ಲಿ ಮಾತಾಡಲು ಅವಕಾಶ ಕೊಡಕೂಡದು ಎಂದು ಕ್ರಿಯಾಲೋಪವೆತ್ತಿ ಪ್ರತಿಭಟಿಸಿದರು. ಪಟೇಲರು ಅಂಜಲಿಲ್ಲ, ಅಳುಕಲಿಲ್ಲ. ಸಭಾಧ್ಯಕ್ಷರು ಕೊಡುವ ರೂಲಿಂಗ್‌ಗೆ ಕಾಯುತ್ತ ನಿಂತರು. ಆಡಳಿತ ಪಕ್ಷದ ಅನೇಕ ಸಂಸದರು ತಾರಕೇಶ್ವರಿ ನೇತೃತ್ವದಲ್ಲಿ ಸಭಾತ್ಯಾಗ ಮಾಡುವ ಮೂಲಕ ತೀವ್ರಪ್ರತಿಭಟನೆಯನ್ನು ದಾಖಲಿಸಿದರು.

ಊಹೂಂ, ಪಟೇಲರು ಜಗ್ಗಲಿಲ್ಲ, ಮಣಿಯಲೂ ಇಲ್ಲ. ಲೋಕಸಭೆಯಲ್ಲಿ ಗದ್ದಲ ಶುರುವಾದಾಗ ಪ್ರಧಾನಿ ಇಂದಿರಾ ಗಾಂಧಿಯವರು ಸದನದಲ್ಲಿರಲಿಲ್ಲ. ಹಿಂದಿ ಭಾಷೆ ಬದಲಿಗೆ ಯಕಃಶ್ಚಿತ್ ಕನ್ನಡ ಭಾಷೆಯಲ್ಲಿ ಮಾತಾಡುವ ಹಟ ಹಿಡಿದು ನಿಂತಿದ್ದ ಪಟೇಲರ ನಿಲುವಿನ ವಿರುದ್ಧ ಕೊತಕೊತ ಕುದಿಯುತ್ತಿದ್ದ ತಮ್ಮ ಪಕ್ಷದ ಸದಸ್ಯರು ಮಾಡುತ್ತಿದ್ದ ಗಲಾಟೆಯ ಸುದ್ದಿ ಕಿವಿಗೆ ಬಿದ್ದಾಕ್ಷಣದಲ್ಲೇ ಸದನಕ್ಕೆ ಧಾವಿಸಿದ ಅವರು ತಮ್ಮ ಸಂಸದರನ್ನು ಶಾಂತಗೊಳಿಸುವ
ಕೆಲಸವನ್ನು ಮೊದಲಿಗೆ ಮಾಡಿದರು. ತಮ್ಮ ಮಾತೃಭಾಷೆಯಲ್ಲಿ ಭಾಷಣ ಮಾಡುವ ಪಟೇಲರ ನಿಲುವನ್ನು ತಾವು ಗೌರವಿಸುವುದಾಗಿ ಇಂದಿರಾ ಹೇಳಿ ದಾಗ ಆಡಳಿತ ಪಕ್ಷದ ಹಲವು ಸದಸ್ಯರ ಬಣ್ಣ ನೀರಾಗಿತ್ತು.

ಹಿಂದಿ ಅಥವಾ ಇಂಗ್ಲಿಷ್ ಅಲ್ಲದ ಭಾಷೆಯಲ್ಲಿ ಮಾತಾಡಿದರೆ ಅದರ ಅನುವಾದಕ್ಕೆ ಅಗತ್ಯರುವ ತಾಂತ್ರಿಕ ಬೆಂಬಲ ಸಂಸತ್‌ನಲ್ಲಿನ್ನೂ ಅಳವಡಿಕೆ ಆಗಿಲ್ಲ, ಹಾಗಾಗಿ ಸದಸ್ಯರು ಸಹಕರಿಸಬೇಕು ಎಂಬ ಅವರ ಮನವಿಗೆ ಕೂಡಾ ಕವಡೆ ಕಾಸಿನ ಕಿಮ್ಮತ್ತನ್ನು ಪಟೇಲರು ನೀಡಲಿಲ್ಲ. ಆ ಹಂತದಲ್ಲಿ ನೆರವಿಗೆ ಬಂದುದು ಸಭಾಧ್ಯಕ್ಷ ನೀಲಂ ಸಂಜೀವರೆಡ್ಡಿ ಅವರ ರೂಲಿಂಗ್. ಲೋಕಸಭೆಯಲ್ಲಿ ಸದಸ್ಯರು ಸಂವಿಧಾನದ ೯ನೇ ಅನುಚ್ಛೇದದಲ್ಲಿ ನಮೂದಾಗಿರುವ
ಭಾಷೆಗಳಲ್ಲಿ ಮಾತಾಡಬಹುದು ಎಂಬ ಅವರ ರೂಲಿಂಗ್ ಪಟೇಲರ ನಿಲುವಿನಷ್ಟೇ ಐತಿಹಾಸಿಕವಾದುದು.

ನೀಲಂ ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಸಂಸದ. ಪಟೇಲರದೋ ಕಾಂಗ್ರೆಸ್ ನೀತಿಯನ್ನು ವಿರೋಧಿಸುವುದೇ ಮುಖ್ಯ ಅಜೆಂಡಾವಾಗಿರುವ ಸಂಯುಕ್ತ ಸೋಷಲಿಸ್ಟ್ ಪಾರ್ಟಿ. ಆದರೆ ರೆಡ್ಡಿಯವರು ಹಂಸಕ್ಷೀರ ನ್ಯಾಯ ನೀಡುವಾಗ ಪಕ್ಷಪಾತ ಮಾಡಲಿಲ್ಲ. ಪಟೇಲರು ಆ ನಂತರ ಅಸ್ಖಲಿತ ಕನ್ನಡ ದಲ್ಲಿ ಭಾಷಣ ಮಾಡಿ ಇಂಗ್ಲಿಷ್ ಬಾರದ ಹಿಂದಿ ಗೊತ್ತಿಲ್ಲದ ಅನೇಕ ಸಹ ಸದಸ್ಯರ ಪ್ರಶಂಸೆ, ಅಭಿನಂದನೆಗೆ ಪಾತ್ರರಾದರು. ಪಟೇಲರ ಕಾರಣವಾಗಿ
ಲೋಕಸಭೆಯಲ್ಲಿ ಕನ್ನಡದಲ್ಲಿಯೂ ಮಾತಾಡುವ ಗೌರವಾನ್ವಿತ ಹಕ್ಕು ಬಂತೇನೋ ಖರೆ.

ಆದರೆ ಈ ಸವಲತ್ತನ್ನು ಬಳಸಿಕೊಂಡ ಕನ್ನಡ/ ಕರ್ನಾಟಕದ ಸಂಸದರು ಎಷ್ಟು…? ಈ ಐದೂವರೆ ದಶಕದಲ್ಲಿ ಈ ಸವಲತ್ತನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡವರು ತಮಿಳುನಾಡಿನ ಸಂಸದರು. ಅವರಲ್ಲಿ ಬಹುತೇಕರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತದೆ. ಆದರೆ ಅವರ ಆದ್ಯತೆ ತಮಿಳಿಗೆ. ಅಲ್ಲೊಬ್ಬ
ಇಲ್ಲೊಬ್ಬ ತಮಿಳು ಸಂಸದರು ಲೋಕಸಭೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತಾಡುತ್ತಾರೆ. ಆದರೆ ಬಹುತೇಕರು ಹೇಳಬೇಕಾದುದನ್ನು ತಮಿಳಿನಲ್ಲೇ ದಾಖಲಿಸು ತ್ತಾರೆ. ಕನ್ನಡದ ಸಂಸದರು ಹಾಗಲ್ಲ. ಆಗೊಮ್ಮೆ ಈಗೊಮ್ಮೆ ಕನ್ನಡದಲ್ಲಿ ಒಂದೆರಡು ಮಾತಾಡುತ್ತಾರೆ. ಉಳಿದಂತೆ ಮೌನದಲ್ಲಿ ಇರುತ್ತಾರೆ. ೨೦೧೯ರಲ್ಲಿ ಕರ್ನಾಟಕದಿಂದ ೨೫ ಬಿಜೆಪಿ ಸಂಸದರು ಆಯ್ಕೆಯಾದರು.

ಅವರೆಲ್ಲರೂ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅದು ನಮ್ಮವರು ಕನ್ನಡದ ವಿಚಾರದಲ್ಲಿ ತೋರಿಸಿದ ಬಹಳ ದೊಡ್ಡ ಅಭಿಮಾನ. ಅದರ ನಂತರದಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಸಂಸದರು ಕನ್ನಡದಲ್ಲಿ ಮಾತಾಡಿದ್ದು ಹೌದಾದರೂ ಕನ್ನಡ ಕಹಳೆಯನ್ನು ಮೊಳಗಿಸಬೇಕೆಂಬ ಪಟೇಲರ ಛಲದ ನಿಲುವು ಈ ಯಾರಲ್ಲೂ ಕಂಡುಬರಲಿಲ್ಲ. ಈ ಮಾತಿಗೆ ಕರ್ನಾಟಕದಿಂದ ಆಯ್ಕೆಯಾಗುವ ಯಾವ ಸಂಸದರೂ ಅಪವಾದವಾಗಿಲ್ಲ.

ಕೇಂದ್ರ ಸರಕಾರ ದೇಶದ ಮೇಲೆ ಹಿಂದಿಯನ್ನು ಹೇರಲೆಂದೇ ರೂಪಿಸಿದ ತ್ರಿಭಾಷಾ ಸೂತ್ರದ ವಿರುದ್ಧ ಮೊದಲಿಗೆ ಸಿಡಿದೆದ್ದ ತಮಿಳುನಾಡು, ಹಿಂದಿ ವಿರೋಧದ ರಾಜಕೀಯದಲ್ಲಿ ಗಳಿಸಿದ ಯಶಸ್ಸು ಅಷ್ಟಿಷ್ಟಲ್ಲ. ಆ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಡಿಎಂಕೆಯ ಅಣ್ಣಾದೊರೈ, ನಂತರ
ದಲ್ಲಿ ಕರುಣಾನಿಧಿ, ಅವರ ಬಳಿಕ ಎಂ.ಜಿ. ರಾಮಚಂದ್ರನ್ ತಮ್ಮ ಆಡಳಿತಾವಧಿಯಲ್ಲಿ ತಮಿಳು ಪಾರಮ್ಯ ಮೆರೆಯುವಂತೆ ಮಾಡಿದರು. ಜಯಲಲಿತಾ ಕಾಲದಲ್ಲಿ ಇಂಗ್ಲಿಷ್ ಅಲ್ಲಿ ವಿಜೃಂಭಿಸಿತು. ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತೆ ತಮಿಳಿಗೆ ಆದ್ಯತೆಯನ್ನಿತ್ತಿದ್ದಾರೆ.

ಇಂಗ್ಲಿಷ್‌ನಲ್ಲಿ ಹೇಳಿಕೆ ನೀಡಲು ಇಂಗ್ಲಿಷ್ ಟಿವಿಯೊಂದರ ವರದಿಗಾರ್ತಿ ಕರುಣಾನಿಧಿಯವರನ್ನು ಕೇಳಿದಾಗ, ‘ನೀವು ನನ್ನ ತಮಿಳು ಹೇಳಿಕೆಯನ್ನು ಭಾಷಾಂತರಿಸಿ ಪ್ರಸಾರ ಮಾಡಿಕೊಳ್ಳಿ’ ಎಂದು ಉತ್ತರಿಸಿದ್ದರು. ಮಾತ್ರವಲ್ಲ, ‘ನೀವು ಚೆನ್ನೈಯಲ್ಲಿ ಕೆಲಸ ಮಾಡುತ್ತಿದ್ದೀರಿ, ತಮಿಳು ಕಲಿಯಿರಿ’ ಎಂದೂ ಉಪದೇಶ ಮಾಡಿದ್ದರು. ತಮ್ಮ ಕೋರಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕಾಗಿ ಇಂಗ್ಲಿಷ್ ಅಥವಾ ಹಿಂದಿ ಚಾನೆಲ್‌ಗಳು ಕರುಣಾನಿಧಿಯವರನ್ನು ಕಡೆಗಣಿ ಸುವುದು ಸಾಧ್ಯವಾಗಲಿಲ್ಲ.

ಪಟೇಲರು ಲೋಕಸಭೆಯಲ್ಲಿ ದಾಖಲೆ ಸೃಷ್ಟಿಸಿದರೇನೋ ಖರೆ. ಆದರೆ ಅವರು ಇಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕನ್ನಡ ಮರೆತವರಂತೆ ಅನೇಕ ಬಾರಿ ವರ್ತಿಸಿದ್ದುಂಟು. ತಮಿಳು ಬಾರದ ವರದಿಗಾರರು ಚೆನ್ನೈಯಲ್ಲಿದ್ದಂತೆ ಬೆಂಗಳೂರಿನಲ್ಲಿ ಕನ್ನಡ ಬಾರದ ವರದಿಗಾರರು ಇದ್ದರು, ಇದ್ದಾರೆ. ಅವರಿಗಾಗಿ ಇಂಗ್ಲಿಷ್‌ನಲ್ಲಿ ಹೇಳಿಕೆ ನೀಡುವ ಪ್ರವೃತ್ತಿ ಕನ್ನಡ ರಾಜಕಾರಣಿಗಳದು. ಈ ವ್ಯಾಧಿ ಜೋರಾಗಿದ್ದು ರಾಮಕೃಷ್ಣ ಹೆಗಡೆ ಯವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ. ಪಟೇಲರು ಹೆಗಡೆಯವರನ್ನು ಅನುಸರಿಸಿ ತಾವೇ ಹಾಕಿಕೊಟ್ಟ ಮಾರ್ಗವನ್ನು ಮರೆತರು. ಸಿಎಂ
ಕನ್ನಡದಲ್ಲಿಯೇ ಮಾತಾಡುತ್ತಾರೆಂಬ ಸಂದೇಶ ರವಾನೆಯಾದರೆ ಅದು ಕನ್ನಡಕ್ಕೆ ಕೊಡುವ ಬಹಳ ದೊಡ್ಡ ಮರ್ಯಾದೆಯಾಗುತ್ತದೆ ಎನ್ನುವುದು ತಮಿಳುನಾಡು ರಾಜಕಾರಣಿಗಳಿಗೆ ಗೊತ್ತಿದೆ. ನಮ್ಮವರಿಗೆ ಗೊತ್ತಿಲ್ಲ.