Sunday, 22nd December 2024

ತರಗಲೆ ನಡುವೆ ಸಂಚರಿಸಿದ ವಾಂಟರ್ಕ

ಶಶಾಂಕಣ

shashidhara.halady@gmail.com

ಪೇಟೆಯಿಂದ ೩ ಕಿ.ಮೀ. ದೂರದಲ್ಲಿ, ಅಷ್ಟೇನೂ ದಟ್ಟವಲ್ಲದ ಕಾಡಿನ ನಡುವೆ, ಗದ್ದೆ ಬಯಲಿನ ತುದಿಯಲ್ಲಿರುವ ನಮ್ಮ ಮನೆಯ ಸುತ್ತ ಹಲವು ವಿಸ್ಮಯಕಾರಿ ಪ್ರಾಕೃತಿಕ ವ್ಯಾಪಾರಗಳು ನಡೆಯುತ್ತಲೇ ಇರುತ್ತವೆ. ಅದೆಷ್ಟೋ ಇಂಥ ವಿಸ್ಮಯಗಳು ನಮ್ಮ ಅರಿವಿಗೆ ಬಾರದೇ ಇರುವುದೂ ಉಂಟು.

ನಮ್ಮ ಪಾಡಿಗೆ ಶಾಲೆಗೆ ಹೋಗುತ್ತಾ ನಾವು ಮಕ್ಕಳು ಇದ್ದರೆ, ದೊಡ್ಡವರು ಗದ್ದೆಯಲ್ಲಿ ನಾಟಿ ಮಾಡುತ್ತಾ, ಹಾಡಿಯಿಂದ ದರಲೆ ತರುತ್ತಾ, ಹಕ್ಕಲಿನಿಂದ ಸೌದೆ ತರುತ್ತಾ ತಮ್ಮ ದಿನಚರಿಯನ್ನು ದೂಡುತ್ತಿದ್ದರು. ಕಾಡು, ಹಾಡಿ, ಹಕ್ಕಲು, ಬ್ಯಾಣಗಳೊಂದಿಗೆ ದಟ್ಟ ಸಂಬಂಧ ಹೊಂದಿದ್ದ ನಮ್ಮೂರಿನ ಗದ್ದೆಗಳು ಅವೆಷ್ಟೋ ವಿಸ್ಮಯಗಳ ತವರು. ನಮ್ಮ ಹಳ್ಳಿಯ ಇಂಥ ವಿಸ್ಮಯಗಳಲ್ಲಿ ಒಂದು ಎಂದರೆ ‘ವಾಂಟರ್ಕ’ ನಡೆಸುವ ಉಳುಮೆ!

ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ನಗರವನ್ನು ಸೇರಿ ಹಲವು ವರ್ಷಗಳಾಗಿದ್ದರೂ, ಇಂದಿಗೂ ನಮ್ಮೂರಿನ ಇಂಥ ಪರಿಸರ ವ್ಯಾಪಾರಗಳು ನನ್ನನ್ನು ಆಗಾಗ ಕಾಡುವುದುಂಟು. ಜೂನ್ ೧ ಅಥವಾ ೨ರ ಸಮಯಕ್ಕೆ ತಪ್ಪದೇ ಮಳೆ ಬರುವ ಊರು ನಮ್ಮದು. ಈಚೆಗೆ ಪ್ರಕೃತಿಯ ಈ ಕ್ಯಾಲೆಂಡರ್ ತುಸು ಬದಲಾಗಿ ದ್ದರೂ, ಬಹುಮಟ್ಟಿಗೆ ಕರಾವಳಿಯ ನಮ್ಮ ಹಳ್ಳಿಗೆ ಜೂನ್ ಮೊದಲ ವಾರ ಗುಡುಗು, ಮಿಂಚು ಗಳೊಡಗೂಡಿದ ಮಳೆ ಬಂದೇ ಬರುತ್ತದೆ. ಕೃಷಿಕರಿಗೆ ಈ ರೀತಿ ಸಮಯಕ್ಕೆ ಸರಿಯಾಗಿ ಮಳೆ ಬಿದ್ದರೆ, ಅಪಾರ ಸಂತಸ. ಗದ್ದೆ, ಅಗೇಡಿಗಳನ್ನು ಹದಗೊಳಿಸಿ, ಬತ್ತದ ನಾಟಿಗೆ ತಯಾರು ಮಾಡತೊಡಗು ತ್ತಾರೆ.

ಒಮ್ಮೆ ಮಳೆ ಬಂತೆಂದರೆ ಸಕಲೆಂಟು ಜೀವಿಗಳಿಗೂ ಎಲ್ಲಿಲ್ಲದ ಉತ್ಸಾಹ, ಸ್ಪೂರ್ತಿ, ಜೀವನಾಸಕ್ತಿ. ರಾತ್ರಿಯಿಡೀ ವಟಗುಟ್ಟುವ ಕಪ್ಪೆಗಳು ತಮ್ಮ ಉತ್ಸಾಹವನ್ನು ಶಬ್ದಮಾಡಿ ತೋರಿಸಿದರೆ, ಮರದ ತುಂಬಾ ಮುತ್ತಿ ಕುಳಿತು, ಸೀರಿಯಲ್ ಸೆಟ್‌ನಂತೆ ಬೆಳಕು ಬೀರುವ ಮೂಲಕ ಮರವನ್ನೇ ಬೆಳಗುವ ಮಿಣುಕುಹುಳುಗಳ ಝಗಮಗ ಇನ್ನೊಂದೆಡೆ. ವಿದ್ಯುತ್ ಸಂಪರ್ಕವೇ ಇಲ್ಲದ ಅಂದಿನ ದಿನಗಳಲ್ಲಿ, ಕಗ್ಗತ್ತಲ ರಾತ್ರಿ, ಮನೆಯಿಂದ ಸ್ವಲ್ಪ ದೂರದಲ್ಲಿನ ಮರವೊಂದರಲ್ಲಿ ಕುಳಿತು ಒಮ್ಮೆಗೇ ಬೆಳಕು ಬೀರುವ ಮಿಣುಕುಹುಳುಗಳ ಸಾಮೂಹಿಕ ಬೆಳಕಿನ ಹಬ್ಬವು ನಮ್ಮಲ್ಲಿ ಹುಟ್ಟಿಸುತ್ತಿದ್ದ ಬೆರಗನ್ನು ವರ್ಣಿಸಲು ಪದಗಳಿಲ್ಲ.

ಮಳೆ ಬಂದು, ಎಲ್ಲೆಡೆ ನೀರು ಹರಿಯತೊಡಗಿದಾಗ ಹಾವು ಗಳಿಗಂತೂ ಎಲ್ಲಿಲ್ಲದ ಉಮೇದು. ಗದ್ದೆ, ತೋಟ, ಬಾವಿ, ತೋಡು, ಗದ್ದೆಯಂಚಿನ ನಮ್ಮ ದಾರಿ, ಬೇಲಿ ಎಂದು ಓಡಾಡುತ್ತಿರುತ್ತವೆ! ನಗರದಲ್ಲೇ ಹುಟ್ಟಿ ಬೆಳೆದವರಿಗೆ ನಂಬಲು ಕಷ್ಟ ಎನಿಸಬಹುದು, ಹತ್ತಾರು ದಿನ ಚೆನ್ನಾಗಿ ಮಳೆ ಬಿದ್ದು, ಗದ್ದೆಯಲ್ಲಿ ನೀರು ನಿಂತು, ಗದ್ದೆ ಬಯಲಿನ ಉದ್ದಕ್ಕೂ ಒಂದು ಭಾಗದಲ್ಲಿ ಹರಿಯುವ ತೋಡಿನಲ್ಲಿ ಉಜರು (ಝರಿ) ನೀರು ಹರಿಯತೊಡಗಿದ ತಕ್ಷಣ ನಮ್ಮೂರಲ್ಲಿ ಹಾವುಗಳ ಮೆರವಣಿಗೆ! ಗದ್ದೆಯಿಂದ ಬಾವಿಗೆ, ಬಾವಿಯಿಂದ ಅಂಗಳಕ್ಕೆ, ಅಂಗಳದಿಂದ ತೋಟಕ್ಕೆ ಓಡಾಡುತ್ತಿರುತ್ತವೆ! ಹೆಚ್ಚಿನವು ‘ಒಳ್ಳೆ ಹಾವು’!

ಅವು ಒಳ್ಳೆಯವೂ ಹೌದು, ಅವುಗಳ ಹೆಸರು ಸಹ ಒಳ್ಳೆ! ದುರ್ಗಸಿಂಹನ ಪಂಚತಂತ್ರದಲ್ಲಿ, ಪಂಪನ ಕಾವ್ಯದಲ್ಲೂ ಇಂಥ ಹಾವುಗಳನ್ನು ‘ಒಳ್ಳೆ’ ಎಂದೇ ಕರೆದಿದ್ದಾರೆ. ಹತ್ತಾರು ದಿನ ಮಳೆ ಬಂದು, ಗದ್ದೆ ತುಂಬಾ ನೀರು ತುಂಬಿದಾಗ, ಅಲ್ಲಿ ಓಡಾಡುವ ಮನುಷ್ಯರ ಕಾಲಿಗೂ ಒಳ್ಳೆ ಹಾವು ತಾಗುವುದುಂಟು! ಅದು ಕಚ್ಚಿದರೂ ಭಯವಿಲ್ಲ ಎಂಬ ಮಾಹಿತಿ ಇರುವ ನಮ್ಮ ಹಳ್ಳಿಯ ಜನರು, ಅವುಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ಮಳೆ ಬರಲಿ, ಬಾರದಿರಲಿ, ಕೃಷಿ ಕೆಲಸದ ನಿಮಿತ್ತ ಸದಾ ಗದ್ದೆಬೈಲಿನಲ್ಲಿ ಓಡಾಡುತ್ತಿದ್ದ ನಮ್ಮ ಅಮ್ಮಮ್ಮ ನಿಗೆ ಎರಡು ಬಾರಿ ಒಳ್ಳೆ ಹಾವು ಕಚ್ಚಿತ್ತಂತೆ. ಅದು ತನ್ನ ಹಲ್ಲುಗಳನ್ನು ಊರಿ, ಕಚ್ಚಿದ ಜಾಗದಲ್ಲಿ ನಂಜಿನ ತುರಿಕೆ ಬಿಟ್ಟರೆ ಬೇರೇನೂ ತೊಂದರೆ ಇಲ್ಲ ಎಂದು ಅವರು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರು!

ಚೆನ್ನಾಗಿ ಮಳೆ ಹುಯ್ದ ನಂತರ, ಕಾಡು ಗುಡ್ಡ ಗಳಿಂದ, ಮರಗಳ ಬೇರಿನ ಸಂದಿಯಿಂದ ಸೃಜಿಸಿ ಕೆಳಗೆ ಹರಿಯುವ ಉಜರು ನೀರು, ನಾಲ್ಕೆಂಟು ವಾರಗಳ ತನಕ ತೋಡುಗಳಲ್ಲಿ ಹರಿಯುತ್ತಲೇ ಇರುತ್ತದೆ. ಮಳೆ ಕಡಿಮೆಯಾದರೂ ಹರಿಯುತ್ತಲೇ ಇರುವ ಈ ನೀರು ಸಟಿಕ ಶುದ್ಧ. ನಮ್ಮ ಮನೆ ಎದುರಿನ ಗದ್ದೆಯಿಂದಾಚೆ ಇದ್ದ ದೊಡ್ಡ ತೋಡಿನಲ್ಲಿ ಈ ರೀತಿ ಹರಿಯುವ ನೀರಿನ ಆಳ ಅರ್ಧ ಅಡಿ ಯಿಂದ ಒಂದು ಅಡಿ. ಆದ್ದರಿಂದ, ನಾವೆಲ್ಲ ಮಕ್ಕಳು ಅಲ್ಲಿ ಆಟ ಆಡುವುದು, ಒಮ್ಮೊಮ್ಮೆ ಸ್ನಾನ ಮಾಡುವುದು ಸಾಮಾನ್ಯ. ಜತೆಗೆ, ಶೌಚಾಲಯವಿಲ್ಲದ ಆ ಕಾಲದಲ್ಲಿ, ಬೆಳಗಿನ ಮೊದಲ ಕೆಲಸಕ್ಕೂ ತೋಡಿನ ಹರಿಯುವ ನೀರೇ ನಮಗೆ ಆಸರೆ. ಆ ರೀತಿ ತೋಡಿನಲ್ಲಿ ಕುಳಿತು, ಧ್ಯಾನಸ್ಥನಾಗಿದ್ದಾಗ, ನೀರಿನಲ್ಲಿ ಒಮ್ಮೊಮ್ಮೆ ಪಾಚಿ ತೇಲಿಬರುತ್ತಿತ್ತು.

ಅದನ್ನು ಕೈಯಲ್ಲಿ ಹಿಡಿದು, ಅದರ ಸ್ವರೂಪವು ನಮ್ಮ ಪಠ್ಯಪುಸ್ತಕದಲ್ಲಿ (ಎರಡನೆಯ ಪಿಯುಸಿ) ಇದ್ದ ಬಾಟ್ರಗೋಸ್ಪರ್ಮಮ್ ಅನ್ನು ಹೋಲುತ್ತದೆ ಎಂದು ಗುರುತಿಸಿ, ಅದನ್ನು ಸಂಗ್ರಹಿಸಿ ಬಾಟಲಿಯಲ್ಲಿ ಹಾಕಿಕೊಂಡು ನಮ್ಮ ಲೆಕ್ಚರರ್‌ಗೆ ತೋರಿಸಿದಾಗ, ನನ್ನ ಊಹೆ ಸರಿ ಎಂದು ಮೆಚ್ಚಿದರು. ನಮ್ಮ ಮನೆ ಎದುರಿನ ತೋಡಿನ ಬಾಟ್ರಗೋಸ್ಪರ್ಮಮ್ ಪಾಚಿಯು, ನಮ್ಮ ಕಾಲೇಜಿನ ಪ್ರಯೋಗಾಲಯದಲ್ಲಿ ಸ್ಪೆಸಿಮನ್ ಆಗಿ ಸೇರಿದ ಹೆಮ್ಮೆಯ ಕ್ಷಣ ಅದು. ಅದಕ್ಕೆ ಕಾರಣ ನಮ್ಮೂರಿನ ತೋಡು, ಉಜರು ನೀರು!

ಮಳೆಗಾಲ ಮುಗಿದರೂ, ಉಜರು ನೀರಿನಿಂದ ಎರಡನೆಯ ಬೆಳೆ ತೆಗೆಯುವ ಅಂದಿನ ಚಳಿಗಾಲದಲ್ಲಿ, ವಾಂಟರ್ಕಗಳು ಗದ್ದೆ ಮತ್ತು ಅಗೇಡಿಯನ್ನು ಉಳುಮೆ ಮಾಡುವುದುಂಟು! ಹೊಳವಾದ ದಿನ ಮುಂಜಾನೆ ಎದ್ದು, ಮನೆ ಮುಂದಿನ ಅಗೇಡಿಯನ್ನು ಕಂಡರೆ, ಅಲ್ಲಿ ಬೆಳೆದಿದ್ದ ಬತ್ತದ ಸಸಿಯ ನಡುವೆ, ಸುಮಾರು ಒಂದಡಿ ಅಗಲದ ದಾರಿ ಕಾಣಿಸುತ್ತದೆ. ಅದಕ್ಕೂ ಒಂದು ವಾರ ಮುಂಚೆ ಮನುಷ್ಯರು ಉಳುಮೆ ಮಾಡಿ, ಕೆಸರು ಗದ್ದೆಯಲ್ಲಿ ಬತ್ತ ಬಿತ್ತಿ, ಸಸಿಯಾಗಿ ನಾಲ್ಕಾರು ದಿನಗಳ ನಂತರ, ಈ ರೀತಿ ರಾತ್ರಿಯ ಹೊತ್ತಿನಲ್ಲಿ ಆ ಬತ್ತದ ಸಸಿಗಳ ನಡುವೆ ಚಲಿಸಿ, ಉಳುಮೆಯಂಥ ಕೆಲಸವನ್ನು ಮಾಡಿ, ಅಲ್ಲಿನ ಬತ್ತದ ಸಸಿಗಳನ್ನು ಮಡಿಸಿ ದಾರಿ ಮಾಡಿದಂತೆ ಮಾಡಿದ ಭೂಪನಾದರೂ ಯಾರು? ‘ಅದಾ.

ಅದು ವಾಂಟರ್ಕನ ಕೆಲಸ. ಅಗೇಡಿಯ ಮಧ್ಯ ಹೂಟಿ ಮಾಡಿದಂತಿದೆ’ ಎನ್ನುತ್ತಿದ್ದರು ನಮ್ಮೂರಿನ ರೈತರು. ನಮ್ಮ ಹಾಲಾಡಿ ಸುತ್ತಲಿನ ಕನ್ನಡದಲ್ಲಿ ‘ವಾಂಟರ್ಕ’ ಎಂದರೆ ಪುಟ್ಟ ಆಮೆ! (ತೇಜಸ್ವಿಯವರು ಮೂಡಿಗೆರೆ ಸನಿಹ ಕಂಡ ಇಂಥ ಆಮೆಯನ್ನು ವಾಟರ್ಕ ಎಂದು ತಮ್ಮ ಒಂದು ಲೇಖನದಲ್ಲಿ ಕರೆದಿದ್ದಾರೆ). ಸಿಹಿನೀರಿನಲ್ಲಿ ವಾಸಿಸುವ ಈ ಆಮೆಗಳು, ರಾತ್ರಿ ಹೊತ್ತಿನಲ್ಲಿ ಅಗೇಡಿಯಲ್ಲಿ ಅತ್ತಿಂದಿತ್ತ ಓಡಾಡಿ ಮಾಡಿದ ಆ ದಾರಿಯನ್ನು ಬೆಳಗಿನ ಹೊತ್ತಿನಲ್ಲಿ ನೋಡುವ ಅನುಭವ ವಿಶಿಷ್ಟ. ಬತ್ತದ ಸಸಿ ತುಂಬಿ ರುವ ಅಗೇಡಿಯ ಹಸಿರು ಕ್ಯಾನ್‌ವಾಸಿನ ಮೇಲೆ ಅದಾರೋ ಪ್ರಕೃತಿಪ್ರೇಮಿ, ನೀರವ ರಾತ್ರಿಯಲ್ಲಿ ಸಂಚರಿಸುತ್ತಾ, ಅಮೂರ್ತ ಅರ್ಥ ನೀಡುವ ಒಂದು ರೇಖಾಚಿತ್ರ ಬರೆದಂತಿರುತ್ತದೆ. ಈ ವಾಂಟರ್ಕ ಎಂಬ ಆಮೆಗಳು ಸಾಮಾನ್ಯವಾಗಿ ನಿಶಾಚರಿಗಳು. ಅರ್ಧ ಅಡಿಯಿಂದ ಒಂದಡಿ ಉದ್ದದ, ಹಸಿರು ದೇಹದ ಆ ಆಮೆಗಳು, ತಮ್ಮ ಚಿಪ್ಪಿನಿಂದ ತಲೆಯನ್ನು ಹೊರಗೆ ಹಾಕಿ ನೋಡುವ ರೀತಿಯೇ ವಿಭಿನ್ನ, ಕಾವ್ಯಾತ್ಮಕ. ನಮ್ಮೂರಿನ ಕೆಲವು ರೈತರು ಅವುಗಳನ್ನು ಆಗಾಗ ಹಿಡಿಯುವುದುಂಟು, ಪದಾರ್ಥ ಮಾಡಲು. ಈ ಪುಟ್ಟ ಆಮೆಗಳು ನಿಶಾಚರಿಗಳು ಎಂದೆನಲ್ಲ, ಅದಕ್ಕೆ ನಮಗೆ ಒಮ್ಮೊಮ್ಮೆ ಪುರಾವೆ ದೊರೆಯುತ್ತಿತ್ತು!

ಅಂದು ವಿದ್ಯುತ್ ಇಲ್ಲದ ಕಾಲ. ಅಂಥ ರಾತ್ರಿಯಲ್ಲಿ, ಅವು ಕಣ್ಣಿಗೆ ಕಾಣದೇ ಇದ್ದರೂ, ವಾಂಟರ್ಕಗಳ ಓಡಾಟ ನಮಗೆ ಸಶಬ್ದವಾಗಿ ಕೇಳುವುದುಂಟು!
ಅದು ಹೇಗೆಂದರೆ- ನಮ್ಮ ಹಳ್ಳಿ ಮನೆಯ ಮುಂದೆ ಒಂದು ಬಗ್ಗುಬಾವಿ ಇದೆ. ಬಗ್ಗು ಬಾವಿ ಅಂದರೆ, ಬಾವಿಗೆ ಆವರಣ ಇಲ್ಲ, ನೆಲ ಮಟ್ಟದಲ್ಲೇ ಒಂದಡಿ ಎತ್ತರದ ಕಲ್ಲುಗಳ ರಕ್ಷಣಾಗೋಡೆ ಅಷ್ಟೆ. ರಾತ್ರಿ ಒಮ್ಮೊಮ್ಮೆ ಆ ಬಾವಿಗೆ ದುಡುಂ ಎಂದು ಯಾರೋ ನೆಗೆದ ಸದ್ದು. ಆ ಸದ್ದು ಕೇಳಿದ ತಕ್ಷಣ, ‘ಹಾಂ, ಕಾಣಿ, ವಾಂಟರ್ಕ ಬಾಮಿಗೆ ಹಾರಿತು’ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ. ಮನೆ ಮುಂದಿನ ಅಗೇಡಿ ಗದ್ದೆಯಿಂದಲೋ, ಬೇರೆಲ್ಲಿಂದಲೋ ನಡೆದು ಬರುವ ಆ
ವಾಂಟರ್ಕಗಳು, ಅಂಗಳ ದಾಟಿ, ಬಗ್ಗುಬಾವಿಯ ಹತ್ತಿರ ಹೋಗಿ, ಮೇಲಿನಿಂದ ಬಾವಿಗೆ ನೆಗೆದಾಗ ಆಗುವ ‘ದುಡುಂ’ ಸದ್ದು ಅದು. ಗದ್ದೆಯಿಂದ
ಬಾವಿಗೆ, ಬಾವಿಯಿಂದ ಗದ್ದೆಗೆ ರಾತ್ರಿ ಹೊತ್ತಿನಲ್ಲಿ ನಡೆಯುವ ಅವುಗಳ ಸರ್ಕೀಟಿನ ಉದ್ದೇಶವಾದರೂ ಏನು? ಅಗೇಡಿಯಲ್ಲಿ ಬೆಳೆಸಿದ್ದ ಬತ್ತದ ಸಸಿಯ
ನಡುವೆ ಸಂಚರಿಸಿ, ತಮ್ಮದೇ ರೀತಿಯ ದಾರಿ ಮಾಡಿದ ನಂತರ, ಅಲ್ಲಿಂದ ಸುಮಾರು ನೂರು ಅಡಿ ದೂರದ ಬಾವಿಗೆ ಬರುವ ಅವುಗಳ ನಡೆಯ
ಮರ್ಮವೇನು? ಅಗೇಡಿ ಮತ್ತು ಬಾವಿಯ ನಡುವೆ ಇರುವ ನುಣುಪಾದ, ಮಣ್ಣು ಹಾಕಿ ಸಾರಿಸಿದ ಅಂಗಳದ ಮೇಲೆ ನಿಧಾನವಾಗಿ ನಡೆಯುತ್ತಾ,
ಬಾವಿಯ ದಿಕ್ಕಿಗೆ ಚಲಿಸಲು ಅವುಗಳಿಗೆ ದೊರೆಯುವ ಪ್ರೇರಣೆ ಅದಾವುದು? ಸರಳವಾಗಿ ಹೇಳಬೇಕೆಂದರೆ ಅದೇ ಅವುಗಳ ದಿನಚರಿ!

ಇದು ಅಗೇಡಿಯ ವಾಂಟರ್ಕಗಳ ವಿಚಾರವಾಯಿತು. ಇನ್ನು, ನಮ್ಮ ಮನೆಯ ಹಿಂದಿನ ಹಾಡಿ ಹಕ್ಕಲುಗಳಲ್ಲೂ ಒಂದು ಪ್ರಭೇದದ ಪುಟ್ಟ ಆಮೆ
ಗಳಿವೆ. ನಾನು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಒಂದು ವರ್ಷ ಮನೆಯಲ್ಲೇ ಇದ್ದೆ- ನಿರುದ್ಯೋಗಿಯಾಗಿ. ಆಗೆಲ್ಲಾ ಈಗಿನಂತೆ ತಕ್ಷಣ ಕೆಲಸ ಸಿಗುವ
ಸಂಭವವೇ ಇದ್ದಿಲ್ಲವಲ್ಲ; ಅರ್ಜಿ ಹಾಕಿ ಕಾಯುವುದು, ಅಂಚೆಯಣ್ಣ ತರುವ ಪತ್ರಗಳನ್ನು ನಿರೀಕ್ಷಿಸುತ್ತಾ ಕೂರುವುದು ಅಂದಿನ ದಿನಚರಿ. ಆ
ಏಕತಾನತೆಯನ್ನು ತೊಡೆಯಲು, ಹಗಲು ಹೊತ್ತಿ ನಲ್ಲಿ, ಹಾಡಿ, ಹಕ್ಕಲು, ಗುಡ್ಡಗಳನ್ನು ಸುತ್ತುವುದು, ಅಲ್ಲಿನ ಹಕ್ಕಿಗಳನ್ನು ನೋಡುವುದು, ಅವುಗಳನ್ನು ಗುರುತಿಸಿ ಪುಸ್ತಕವೊಂದರಲ್ಲಿ ನೋಟ್ಸ್ ಮಾಡಿ ಕೊಳ್ಳುವುದು, ನಂತರ ಸಲೀಂ ಅಲಿಯವರ ‘ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕದಲ್ಲಿ ಅವು
ಗಳನ್ನು ಗುರುತಿಸುವುದು- ಇದೇ ನನ್ನ ಅಂದಿನ ಪ್ರಮುಖ ಹವ್ಯಾಸ ಎನಿಸಿತ್ತು!

ಅಂಥ ಒಂದು ದಿನ, ಮನೆ ಹಿಂದಿನ ದರೆ ಹತ್ತಿ, ಗಾಣದಡಿಯ ಬೈಲಿನ ಮೇಲ್ಭಾಗದಲ್ಲಿದ್ದ ಹಕ್ಕಲಿನಲ್ಲಿ ಕುಳಿತಿದ್ದೆ. ಅಂದು ಅದು ದಟ್ಟ ಕುರುಚಲು
ಕಾಡಿನಿಂದ ತುಂಬಿತ್ತು. ಜತೆಗೆ ಅಲ್ಲೆಲ್ಲಾ ಅಂದು ಜನಸಂಚಾರ ಬಹಳ ಕಡಿಮೆ; ಒಂದರಿಂದ ಎರಡು ಕಿ.ಮೀ. ದೂರದ -ಸಲೆಯಲ್ಲಿ ಯಾವುದೇ ಮನೆ
ಗಳಿರಲಿಲ್ಲ, ಹಾಡಿ, ಹಕ್ಕಲು, ಗುಡ್ಡ, ಕಣಿ, ತೋಡು ಇವೇ ಅಲ್ಲಿ ಹರಡಿದ್ದವು. ಈಚೆಗೆ ಅಲ್ಲೆಲ್ಲಾ ಮನೆಗಳಾಗಿವೆ. ಆ ಹಕ್ಕಲಿನ ನಡುವೆ ಒಂದು ಕಣಿ
(ಕಣಿವೆ). ಎರಡೂ ಕಡೆ ದಟ್ಟವಾಗಿ ಬೆಳೆದಿದ್ದ ನಾನಾ ರೀತಿಯ ಗಿಡ, ಬಳ್ಳಿಗಳು. ಯಾವುದಾದರೊಂದು ಹಕ್ಕಿ ಹಾರಿ ಬಂದು ಅಲ್ಲಿನ ಗಿಡದ ಮೇಲೆ ಕುಳಿತು
ಕೊಳ್ಳಬಹುದು, ಅದನ್ನು ನಾನು ಗುರುತಿಸಿಯೇನು ಎಂಬ ನಿರೀಕ್ಷೆಯಲ್ಲಿ, ಮೌನವಾಗಿ ಒಂದು ಕಲ್ಲಿನ ಮೇಲೆ ಕುಳಿತಿದ್ದೆ.

ನಿಧಾನವಾಗಿ ನೆಲದ ಮೇಲಿನ ದರಲೆಯ (ತರಗಲೆ) ನಡುವೆ ಪರಪರ ಸದ್ದಾಯಿತು. ಅತ್ತ ನೋಡಿದರೆ, ಮೊದಲಿಗೆ ಏನೂ ಕಾಣಲಿಲ್ಲ. ನಂತರ ಕಂಡಿತು, ಮಸುಕು ಕಲ್ಲಿನ ಬಣ್ಣದ, ಅರ್ಧ ಅಡಿ ಅಗಲದ ಸಣ್ಣ ಆಮೆ, ತೆವಳಿಕೊಂಡು ಸಾಗುತ್ತಿದೆ! ಅದರ ಮೇಲೆ ಮಬ್ಬಾಗಿ ನಕ್ಷತ್ರಾಕಾರದ ಗುರುತುಗಳು. ನಾನು ಮೌನವಾಗಿಯೇ ಕುಳಿತಿದ್ದೆ. ಅದು ‘ಆಮೆ ವೇಗ’ದಿಂದ ನಡೆಯುತ್ತಾ, ತರಗಲೆಗಳ ಸಂದಿಯಲ್ಲಿ ಬಹುದೂರ ಸಾಗಿ, ಹಕ್ಕಲಿನ ದಟ್ಟ ನೆರಳಿನಲ್ಲಿ ಮಾಯವಾಯಿತು. ಗದ್ದೆಯ ನೀರಿನಲ್ಲಿ, ಬಾವಿಯ ಕಲ್ಲಿನ ಸಂದಿಯಲ್ಲಿ ಮಾತ್ರ ಆಮೆಗಳನ್ನು ಕಂಡಿದ್ದ ನನಗೆ, ನಮ್ಮೂರಿನ ಕಾಡುಪ್ರದೇಶದಲ್ಲೂ
ಆಮೆಗಳಿವೆ ಎಂದು ತಿಳಿದಾಗ ವಿಸ್ಮಯ ಎನಿಸಿತ್ತು.

ನೀರಿನಿಂದ ಬಹುದೂರ ಎನಿಸುವ ಆ ಜಾಗದಲ್ಲಿದ್ದ ಆ ಪುಟಾಣಿ ಆಮೆಯು, ಕಣಿಯತ್ತ ಸಾಗಿತ್ತು; ಬಹುಶಃ ಅಲ್ಲೆಲ್ಲೋ ನೀರಿನ ಪಸೆ ಇದ್ದಿರಬಹುದು
ಅಥವಾ ಅದರ ಬಿಲ ಇರಬಹುದು ಎಂದುಕೊಂಡೆ. ಬೆಟ್ಟ ಗುಡ್ಡಗಳಲ್ಲೂ, ನೀರಿನಿಂದ ಬಹುದೂರ ಇಂಥ ಆಮೆಗಳಿರುತ್ತವೆ ಎಂಬ ಹೊಸ ವಿಚಾರವನ್ನು
ಕಂಡುಕೊಂಡ ಬೆರಗು ನನ್ನಲ್ಲಿ. ಕೆಲವು ದಿನಗಳ ನಂತರ ಗಾಣದಡಿಯ ದ್ಯಾವಣ್ಣನು ಮಾತಿಗೆ ಸಿಕ್ಕಿದಾಗ, ಈ ರೀತಿ ನೀರಿನಿಂದ ಬಹುದೂರದಲ್ಲಿ, ಅವನ ಮನೆಯ ಹಿಂಭಾಗದ ಹಕ್ಕಲಿನಲ್ಲೂ ಪುಟ್ಟ ಆಮೆಗಳಿವೆ, ಗೊತ್ತಾ ಎಂದು ಅಚ್ಚರಿಯಿಂದ ಕೇಳಿದೆ. ಸದಾ ಕಾಡು, ಹಾಡಿ, ಹಕ್ಕಲು, ಗುಡ್ಡಗಳಲ್ಲಿ ಓಡಾಡುವ ಅವನಿಗೆ ಅದೊಂದು ಹೊಸ ವಿಚಾರವೇ ಆಗಿರಲಿಲ್ಲ.

‘ಓ ಅದಾ, ಅದೂ ಒಂದು ನಮೂನಿ ವಾಂಟರ್ಕ ಮಾರಾಯ್ರೆ. ಸುಟ್ಟು ತಿಂದರೆ ಬಹಳ ರುಚಿ’ ಎಂದು ನಕ್ಕ!