ಚಂಡೀಗಢ: ರಾಜ್ಯ ಸರ್ಕಾರವು 70 ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ ಯನ್ನು ಪ್ರಾರಂಭಿಸಲಿದೆ. ಬೀಳುವ ಹಂತದಲ್ಲಿರುವ ಮರಗಳನ್ನು ಸರ್ಕಾರ ಗುರುತಿಸಿದೆ. ಈ ಯೋಜನೆಯನ್ನು ಆರಂಭಿಸುವ ಮೂಲಕ ರಾಜ್ಯದಲ್ಲಿ ಪರಿಸರ ಉಳಿಸಲು ಸರ್ಕಾರ ಮುಂದಾಗಿದೆ.
ನವೆಂಬರ್ 1ರಿಂದ ಹರಿಯಾಣದಲ್ಲಿ ಮರ ಪಿಂಚಣಿ ಪ್ರಾರಂಭವಾಗಲಿದೆ. 70 ವರ್ಷಕ್ಕಿಂತ ಮೇಲ್ಪಟ್ಟ ಮರಗಳಿಗೆ ಸರ್ಕಾರವು ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 4 ಸಾವಿರ ಮರಗಳನ್ನು ಗುರುತಿಸಲಾಗಿದೆ. ಪಿಂಚಣಿ ಯೋಜನೆಯಡಿ ವಾರ್ಷಿಕ 2,750 ರೂ. ಟ್ರೀ ಪೆನ್ಷನ್ ನೀಡುವ ದೇಶದ ಮೊದಲ ರಾಜ್ಯ ಹರಿಯಾಣ ಆಗಿದೆ ಎಂದು ಹರ್ಯಾಣ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್ಪಾಲ್ ಗುರ್ಜರ್ ತಿಳಿಸಿದರು.
ಪರಿಸರ ಉಳಿಸುವ ದೃಷ್ಟಿಯಿಂದ ಪ್ರಮುಖ ಉಪಕ್ರಮ ಎಂದು ಪರಿಗಣಿಸಲಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿ ಯಿಂದ ಈ ಯೋಜನೆಯನ್ನು ಬಹುಮುಖ್ಯವಾಗಿದೆ.
ಯೋಜನೆಯ ಪ್ರಕಾರ, ಮನೆಯ ಆ ವ್ಯಾಪ್ತಿಯಲ್ಲಿ 70 ವರ್ಷಕ್ಕಿಂತ ಹಳೆಯ ಮರವಿದ್ದರೆ, ಮನೆಯ ಮಾಲೀಕರಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆ. ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಮರವಿದ್ದರೆ ಅದರ ಲಾಭ ಗ್ರಾಮ ಪಂಚಾಯಿತಿಗೆ ದೊರೆಯುತ್ತದೆ. ಜಮೀನಿನಲ್ಲಿ 70 ವರ್ಷಕ್ಕಿಂತ ಹಳೆಯ ಮರವಿದ್ದರೆ ಅದರ ಲಾಭ ರೈತನಿಗೆ ಸಿಗುತ್ತದೆ. ನಗರ ದಲ್ಲಿ ಹಳೆಯ ಮರವಿದ್ದರೆ ಅದರ ಲಾಭ ಸ್ಥಳೀಯ ಆಡಳಿತಕ್ಕೆ ಸಿಗುತ್ತದೆ.
ದೇಶದ 10 ಅತ್ಯಂತ ಕಲುಷಿತ ನಗರಗಳಲ್ಲಿ ಹರಿಯಾಣದ 4 ನಗರಗಳು ಸೇರ್ಪಡೆಯಾಗಿರುವುದು ಕಳವಳಕಾರಿ ಸಂಗತಿ. ಹರಿಯಾಣದ ಸೋನಿಪತ್‌ನ ಎಕ್ಯೂಐ ಮಟ್ಟ ರಾಜಧಾನಿ ದೆಹಲಿಗಿಂತ ಹೆಚ್ಚಿರುವುದು ಕಂಡು ಬಂದಿದೆ.