ಚೆನ್ನೈ: ತಮಿಳುನಾಡಿನ ಯೂಟ್ಯೂಬರ್ ಟಿಟಿಎಫ್ ವಾಸನ್ ಅವರಿಗೆ ತಮಿಳುನಾಡು ಸರ್ಕಾರ ಶಾಕ್ ನೀಡಿದೆ.
ವಾಸನ್ ಚಾಲನಾ ಪರವಾನಗಿ ಮುಂದಿನ ಹತ್ತು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ವಾಸನ್ ಸದ್ಯ ಜೈಲಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಹತ್ತು ವರ್ಷ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಾರಿಗೆ ಇಲಾಖೆ ಕೈಗೊಂಡಿದೆ.
ಸೆಪ್ಟೆಂಬರ್ 19ರಂದು ಯೂಟ್ಯೂಬರ್ ಟಿಟಿಎಫ್ ವಾಸನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಚಿಪುರಂ ಬಳಿಯ ಚೆನ್ನೈ-ವೆಲ್ಲೂರು ಹೆದ್ದಾರಿಯಲ್ಲಿ ಅತಿವೇಗ, ಅಜಾಗರೂಕತೆ ಹಾಗೂ ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸಿದ್ದ ಆರೋಪದ ಮೇಲೆ ಬಾಲುಚೆಟ್ಟಿ ಛತ್ರಂ ಠಾಣೆ ಪೊಲೀಸರು ಕೇಸ್ ದಾಖಲಿಸಿ ದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಾಸನ್ ಸದ್ಯ ಪುಝಲ್ ಜೈಲಿನಲ್ಲಿದ್ದಾರೆ.
ಇತ್ತೀಚೆಗೆ ಟಿಟಿಎಫ್ ವಾಸನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಾಂಚೀಪುರಂ ನ್ಯಾಯಾಲಯ ತಿರಸ್ಕರಿಸಿತು. ಹೀಗಾಗಿ ವಾಸನ್ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ಗೂ ಮೊರೆ ಹೋಗಿದ್ದರು. ಆದರೆ, ಅಲ್ಲಿ ಕೂಡ ಹಿನ್ನಡೆಯಾಗಿದೆ.
ತಮಿಳುನಾಡಿನ ಸಾರಿಗೆ ಇಲಾಖೆಯು ವಾಸನ್ ಚಾಲನಾ ಪರವಾನಗಿಯನ್ನು ಹತ್ತು ವರ್ಷಗಳ ಕಾಲ ಎಂದರೆ 2033ರ ಅಕ್ಟೋಬರ್ 5ರವರೆಗೆ ಅಮಾನತುಗೊಳಿಸಿದೆ.