ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಲಿಂಗಯಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ೯೬ನೇ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರ ೧೫೧ ಕುಂಭ ಮೇಳದೊಂದಿಗೆ ಎತ್ತಿನ ಬಂಡಿಯಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾ ರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಬಂಥನಾಳದ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಇಲ್ಲಿನ ಕಮರಿಮಠದಿಂದ ಆರಂಭವಾದ ಈ ಭವ್ಯ ಮೆರವಣಿಗೆಗೆ ಹೂವಿನ ಹಿಪ್ಪರಗಿಯ ಪತ್ರಿವನ ಮಠದ ದ್ರಾಕ್ಷಾಯಣಿ ಅಮ್ಮನವರು ಚಾಲನೆ ನೀಡಿ ದರು.
ಬಳಿಕ ಈ ಮೆರವಣಿಗೆಯು ಭಕ್ತರ ಜಯಘೋಷಗಳ ನಡುವೆ ವಿಜ್ರಂಭಣೆಯಿ0ದ ಪುರ ಪ್ರವೇಶಗೊಂಡಿತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಮಹಿಳೆಯರು ಪೂರ್ಣಕುಂಭ ಹೊತ್ತು, ಓಂ ನಮ: ಶಿವಾಯ ನಮ: ಎಂಬ ಮಂತ್ರ ಠಣದೊಂದಿಗೆ ಹೆಜ್ಜೆ ಹಾಕಿದರು.
ನಂತರ ಈ ಮೆರವಣಿಗೆಯು ಮರಳಿ ಕಮರಿಮಠದತ್ತ ಆಗಮಿಸುತ್ತಿದ್ದಂತೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು. ಹಲವು ಯುವಕರು ಜೈಕಾರ ಹಾಕಿದರೆ, ಮತ್ತೆ ಕೆಲ ಯುವಕರು ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರು. ಕು0ಭ ಮೇಳ ಕಮರಿಮಠ ಪ್ರವೇಶಿಸಿ ಬಳಿಕ ಶ್ರೀ ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ ಕುಂಭಾಭಿಷೇಕ ನೆರವೇರಿತು.
ಈ ಕುಂಭೋತ್ಸವಕ್ಕೆ ಚಾಲನೆ ನೀಡಿದ ಹೂವಿನ ಹಿಪ್ಪರಗಿಯ ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿ, ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಮಹಿಮೆ ಅಪಾರ, ಅವರ ೯೬ನೇ ಪುಣ್ಯಾರಾಧನೆಯ ಅಂಗವಾಗಿ ಗ್ರಾಮದಲ್ಲಿ ಕುಂಭೋತ್ಸವ ಜರುಗುತ್ತಿರುವ ಹೆಮ್ಮೆಯ ಸಂಗತಿ ಎಂದರು.