ಮನಮಂಥನ
ಗಣೇಶ್ ಭಟ್, ವಾರಣಾಸಿ
ಹಿಂದಿಯ ಮನರಂಜನಾ ವಾಹಿನಿಯೊಂದರ ಗಾಯನದ ‘ರಿಯಾಲಿಟಿ ಶೋ’ ಸ್ಪರ್ಧೆಯ ಆಯ್ಕೆ ಸುತ್ತಿನಲ್ಲಿ ಸುರದ್ರೂಪಿ ಹುಡುಗನೊಬ್ಬ ಬಂದು ಬಹಳ ಚೆನ್ನಾಗಿ ಹಾಡಿದ; ಆದರೆ ಸ್ಪರ್ಧೆಯ ತೀರ್ಪುಗಾರರು ಕೇಳಿದ ಪ್ರಶ್ನೆಗಳಿಗೆ ಆತನಿಗೆ ಉತ್ತರಿಸಲಾಗಲಿಲ್ಲ. ಅವರು ಕೇಳಿದ ಪ್ರಶ್ನೆಗಳನ್ನೇ ಆತ ಪುನರುಚ್ಚರಿಸು ತ್ತಿದ್ದ.
ಕೊನೆಗೆ ಆತನ ಅಮ್ಮ, ಆ ಹುಡುಗ ‘ಆಟಿಸಂ’ ಸಮಸ್ಯೆಯಿಂದ ಬಳಲುತ್ತಿರುವ ಸಂಗತಿಯನ್ನು ಹೇಳಬೇಕಾಗಿ ಬಂತು. ಆ ಹಾಡುಗಾರನ ಹೆಸರು ಕಾರ್ತಿಕ್ ಕೃಷ್ಣಮೂರ್ತಿ. ಆಯ್ಕೆಗಾರರ ಮೆಚ್ಚುಗೆಗೆ ಪಾತ್ರನಾದ ಆತ, ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾದ. ಜತೆಗೆ, ಈತನ ಪ್ರತಿಭೆಗೆ ಮೆಚ್ಚಿದ ಹಾಡುಗಾರ, ಸಂಗೀತ ನಿರ್ದೇಶಕ ಮತ್ತು ಆ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಹಿಮೇಶ್ ರೇಶಮಿಯಾ ಈತನಿಗೆ ತನ್ನ ಮ್ಯೂಸಿಕ್ ಆಲ್ಬಂನಲ್ಲಿ ಹಾಡಲು ಒಂದು ಅವಕಾಶ ನೀಡುವುದಾಗಿ ಭರವಸೆ ನೀಡಿದರು.
೨೦೧೧ರಲ್ಲಿ ಮಲಯಾಳಂ ಟಿವಿ ವಾಹಿನಿಯೊಂದರ ಇಂಥದೇ ಶೋನಲ್ಲಿ ಸುಖೇಶ್ ಕುಟ್ಟನ್ ಎಂಬ ‘ಆಟಿಸಂ ಬಾಧಿತ’ ಹಾಡುಗಾರ ಬೆಳಕಿಗೆ ಬಂದಿದ್ದ. ಅತ್ಯುತ್ತಮವಾಗಿ ಹಾಡುತ್ತಿದ್ದ ಈತ ಸ್ಪರ್ಧೆಯ ಅಂತಿಮ ಸುತ್ತಿನವರೆಗೂ ತಲುಪಿದ್ದ, ಆ ಸುತ್ತಿನಲ್ಲಿ ಹಾಡಿದ್ದಿದ್ದರೆ ಗ್ರ್ಯಾಂಡ್ ಫಿನಾಲೆಯಲ್ಲೂ ಗೆಲ್ಲುತ್ತಿದ್ದನೋ ಏನೋ! ಗೆದ್ದಿದ್ದರೆ ಆತನಿಗೆ ಒಂದು ಕೋಟಿ ರುಪಾಯಿ ಸಿಗುತ್ತಿತ್ತು. ಆದರೆ ನೇರ ಪ್ರಸಾರದ ಕೊನೆಯ ಸುತ್ತಿನ ದಿನದಂದು ಆತ ಹಾಡುವ
ಮೂಡ್ನಲ್ಲಿ ಇರಲಿಲ್ಲವೆನಿಸುತ್ತದೆ. ಒಂದು ಕೋಟಿ ರುಪಾಯಿ ಎಂದರೆ ಏನೆಂಬುದು ಪ್ರಾಯಶಃ ಅವನಿಗೆ ಗೊತ್ತಿಲ್ಲದಿರಬಹುದು.
ಹೀಗಾಗಿ ಸುಖೇಶ್ ಕುಟ್ಟನ್ ಸ್ಪರ್ಧೆಯ ನಿರ್ಣಾಯಕ ಹಂತವನ್ನು ತಪ್ಪಿಸಿಕೊಂಡ. ಆದರೆ ಈ ಕಾರ್ಯಕ್ರಮದ ನಂತರ ಆತ ಕೇರಳದ ಸಂಗೀತಪ್ರಿಯರ ಮನೆಮಾತಾಗಿ ಹೋದ, ಪ್ರಸಿದ್ಧ ಗಾಯಕಿ ಕೆ.ಎಸ್. ಚಿತ್ರಾ ಅವರ ಜತೆಯಲ್ಲಿ ಕೆಲವು ಆಲ್ಬಂ ಗೀತೆಗಳನ್ನೂ ಹಾಡಿದ. ‘ಆಟಿಸಂ’ ಅಥವಾ ‘ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್’ ಅನ್ನು ಕನ್ನಡದಲ್ಲಿ ‘ಸ್ವಲೀನತೆ’ ಎಂದು ಕರೆಯಲಾಗುತ್ತದೆ. ಮಾತು ಬಲ್ಲವರಾಗಿದ್ದರೂ ಸಂವಹನ ಮಾಡಲಾಗದ, ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಲು ಸಾಧ್ಯವಾಗದ, ಸಾಮಾಜಿಕ ಕೌಶಲದ ಸಮಸ್ಯೆಯನ್ನೆದುರಿಸುವ ಹಾಗೂ ಸೃಜನಶೀಲ ಕಲ್ಪನಾಶಕ್ತಿಯನ್ನು ಹೊಂದಿರದ ಸಮಸ್ಯೆಯನ್ನು ಆಟಿಸಂ ಎಂದು ಕರೆಯುತ್ತಾರೆ. ಈ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ದೃಷ್ಟಿ ಸಂವಹನ ಅಥವಾ ಕಣ್ಣಿಗೆ ಕಣ್ಣು ಬೆಸೆಯುವುದು ಸಾಧ್ಯವಾಗುವುದಿಲ್ಲ.
ಇತರರು ಇವರನ್ನುದ್ದೇಶಿಸಿ ಮಾತನಾಡುತ್ತಿದ್ದರೂ, ಇವರು ಅವರೆಡೆಗೆ ತಿರುಗಿಯೂ ನೋಡುವುದಿಲ್ಲ. ಮಾತುಬಂದರೂ ಆಡಲಾಗದ, ಕಿವಿ ಸರಿಯಿ ದ್ದರೂ ಆಲಿಸುವ ಕೌಶಲವಿಲ್ಲದ ಸ್ಥಿತಿ ಇವರದ್ದು. ಹೊರಗಿನ ಸದ್ದು ಇವರಿಗೆ ತೀರಾ ಕಿರಿಕಿರಿ ಉಂಟುಮಾಡುತ್ತದೆ. ಇತರರೊಂದಿಗೆ ಬೆರೆಯಲು ಇವರಿಗೆ ಸಾಧ್ಯವಾಗುವುದಿಲ್ಲ. ಮಾತು ಕಡಿಮೆ. ತಮಗೇನು ಬೇಕು ಎಂಬುದನ್ನು ಮಾತಿನಲ್ಲಿ ಹೇಳದ ಇವರು ಸನ್ನೆ ಮಾಡಿ ತೋರಿಸುವುದೇ ಹೆಚ್ಚು. ಮಾತು ಕಲಿತರೂ ಇವರಲ್ಲಿ ಶಬ್ದಸಂಪತ್ತಿನ ಕೊರತೆ ಇರುತ್ತದೆ. ಹಾಗಾಗಿ ಇವರ ಮಾತುಗಳಲ್ಲಿ ಯಾವುದೇ ಏರುಪೇರಿಲ್ಲದೆ ರೋಬಾಟ್ಗಳು ಮಾತಾಡಿದಂತೆ ಕೇಳಿಸುತ್ತದೆ.
ಇವರು ಕೆಲವೊಮ್ಮೆ ನಿಷ್ಕಾರಣವಾಗಿ ಭಾವಾವೇಶಕ್ಕೆ ತುತ್ತಾಗುತ್ತಾರೆ. ಪುನರಾವರ್ತಿತ ವರ್ತನೆ ಇವರಲ್ಲಿ ಸಾಮಾನ್ಯ. ಬದಲಾವಣೆಗೆ ಹೊಂದಿ ಕೊಳ್ಳುವುದು ಇವರಿಗೆ ಕಷ್ಟವಾಗುತ್ತದೆ. ಪ್ರತಿ ‘ಆಟಿಸಂ’ ಮಗು ವಿಭಿನ್ನವಾಗಿದ್ದು,ಸಮಸ್ಯೆಯ ತೀವ್ರತೆ ಬೇರೆ ಬೇರೆ ಶ್ರೇಣಿಯಲ್ಲಿರುತ್ತದೆ. ಹೀಗಾಗಿ ಆಟಿಸಂ ಅನ್ನು ‘ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್’ ಎಂದು ಕರೆಯಲಾಗಿದೆ. ಒಟ್ಟಾರೆಯಾಗಿ ನೋಡುವಾಗ ಈ ಮಕ್ಕಳು ತಮ್ಮಲ್ಲೇ ತಾವು ಹುದುಗಿಹೋಗಿರುವಂತೆ ನಮಗೆ ಭಾಸವಾಗುತ್ತಾರೆ. ಆಟಿಸಂ ಅನ್ನು ಒಂದು ಅಂಗವಿಕಲತೆಯೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿವಸಗಳಲ್ಲಿ ಮಕ್ಕಳಲ್ಲಿ ಆಟಿಸಂ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಮೆರಿಕದಲ್ಲಿ ಪ್ರತಿ ೩೬ ಮಕ್ಕಳಲ್ಲಿ ಒಂದು ಮಗು ಆಟಿಸಂ ಸಮಸ್ಯೆಯಿಂದ ಬಳಲುತ್ತಿದೆ ಎಂದು ‘ಆಟಿಸಂ ಸ್ಪೀಕ್ಸ್’ ಸಂಸ್ಥೆಯು ಹೇಳಿದೆ.
ಭಾರತದಲ್ಲಿ ಸುಮಾರು ೧.೮ ಕೋಟಿ ಮಂದಿ ಆಟಿಸಂ ಬಾಧಿತರಿದ್ದಾರೆ ಎಂದು ಇಕನಾಮಿಕ್ ಟೈಮ್ಸ್ ಹೆಲ್ತ್ವರ್ಲ್ಡ್ ಅಂದಾಜಿಸಿದೆ. ಇಂದು ಭಾರತದ ಪ್ರತಿ ಸಾವಿರ ಮಕ್ಕಳಲ್ಲಿ ೧೫ ಮಕ್ಕಳು ಆಟಿಸಂ ಗುಣಲಕ್ಷಣಗಳೊಂದಿಗೆ ಜನಿಸುತ್ತಿದ್ದಾರೆ. ಸ್ವಲೀನತೆಯ ಮಕ್ಕಳು ಒಂದು ರೀತಿಯ ಬಿಡಿಸಲಾಗದ ಒಗಟಿನಂತೆ ಕಾಣುತ್ತಾರೆ. ಇವರನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯವೇ ಬೇಕು. ಆಟಿಸಂ ಮಕ್ಕಳಿಗೆ ಮಾತು, ವರ್ತನೆ, ಸಾರ್ವಜನಿಕ ನಡವಳಿಕೆ ಮೊದಲಾದವು ಗಳನ್ನು ತಾವಾಗಿಯೇ ಕಲಿಯಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಬಹುತೇಕ ಆಟಿಸಂ ಮಕ್ಕಳು ಏಕಾಗ್ರತೆಯ ಕೊರತೆ ಮತ್ತು ಅತಿಚಟುವಟಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಹೆಚ್ಚಿನ ಆಟಿಸಂ ಮಕ್ಕಳ ಐಕ್ಯು(ಬುದ್ಧಿಮತ್ತೆ) ಸಾಮಾನ್ಯ ಮಕ್ಕಳಷ್ಟೇ ಇರುತ್ತದೆ ಹಾಗೂ ಕೆಲವು ಅಟಿಸಂ ಮಕ್ಕಳ ಬುದ್ಧಿಮತ್ತೆ ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚಿರುತ್ತದೆ.
ಕೆಲವರಿಗೆ ಗಣಿತದಲ್ಲಿ ವಿಪರೀತ ಜಾಣ್ಮೆಯಿದ್ದರೆ, ಮತ್ತೆ ಕೆಲವರಿಗೆ ಅಗಾಧವಾದ ನೆನಪಿನ ಶಕ್ತಿಯಿರುತ್ತದೆ. ನಾನು ಆಟಿಸಂ ಮಕ್ಕಳ ಜತೆಗಿನ ೧೫ ವರ್ಷಗಳ ಒಡನಾಟದಲ್ಲಿ ಅವರಲ್ಲಿರುವ ವಿಶಿಷ್ಟ ಪ್ರತಿಭೆಗಳನ್ನು ಗಮನಿಸಿದ್ದೇನೆ. ಇಂಥ ಒಬ್ಬಾತ ಯಾವುದೇ ಒಂದು ದಿನಾಂಕವನ್ನು ಹೇಳಿದರೂ ಕ್ಷಣಾರ್ಧದಲ್ಲಿ ಅದು ಯಾವ ವಾರ ಎಂದು ಗುರುತಿಸುವ ಸಾಮರ್ಥ್ಯ ಹೊಂದಿದ್ದ. ಇನ್ನೋರ್ವ ಹುಡುಗಿ ತನ್ನ ತರಗತಿಯ ಗಣಿತದ ಪ್ರಶ್ನೆಗಳಿಗೆ ಪೆನ್ನು-ಪೇಪರ್ ಬಳಸದೆ ಮನಸ್ಸಿನಲ್ಲೇ ಲೆಕ್ಕಹಾಕಿ ಉತ್ತರಿಸುತ್ತಿದ್ದಳು. ಆದರೆ ಈ ಮಕ್ಕಳಿಗೆ ತಮ್ಮಲ್ಲಿರುವ ವಿಶಿಷ್ಟ ಕೌಶಲಗಳನ್ನು ಸಾಮಾಜಿಕ ಜೀವನ ಕೌಶಲವಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆಟಿಸಂ ಮಕ್ಕಳ ಈ ಸಮಸ್ಯೆಯಿಂದಾಗಿ ಹೆತ್ತವರು ವಿಪರೀತ ಒತ್ತಡಕ್ಕೆ ಒಳಗಾಗುತ್ತಾರೆ; ಹೆತ್ತವರ ನಡುವೆ ಭಿನ್ನಾಭಿಪ್ರಾಯ ಬರುವುದೂ ಇದೆ. ಪ್ರಸಿದ್ಧ ಕ್ಲೌಡ್ ಸಾಫ್ಟ್ ವೇರ್ ಕಂಪನಿ ‘ಝೋಹೋ’ದ ಸಂಸ್ಥಾಪಕರಾದ ಶ್ರೀಧರ್ ವೆಂಬು ದಂಪತಿಯ ದಾಂಪತ್ಯ ಮುರಿಯಲು ಮಗನ ಆಟಿಸಂ ಕೂಡಾ ಒಂದು ಪ್ರಮುಖ ಕಾರಣವಾಗಿದೆ. ಪತ್ನಿ ಪ್ರಮೀಳಾ ಶ್ರೀನಿವಾಸನ್ ಜತೆಗೆ ಶ್ರೀಧರ್ ವೆಂಬು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ೨೫ ವರ್ಷ ವಾಸವಾಗಿದ್ದರು. ಶ್ರೀಧರ್ ಅಲ್ಲಿ ಝೋಹೋ ಸಂಸ್ಥೆಯನ್ನು ಸ್ಥಾಪಿಸಿದರು. ಈ ದಂಪತಿಗೆ ಜನಿಸಿದ ಮಗುವಿಗೆ ಆಟಿಸಂ ಲಕ್ಷಣಗಳಿದ್ದವು. ಈತನ ಚಿಕಿತ್ಸೆಗಾಗಿ ದಂಪತಿ ಹಲವು ವರ್ಷ ಶ್ರಮಿಸಿದರು. ಈಗ ಮಗನಿಗೆ ೨೪ರ ಪ್ರಾಯ. ಯಾವುದೇ ಚಿಕಿತ್ಸೆ ಫಲಕಾರಿಯಾಗದಿದ್ದಾಗ, ‘ಮಗನನ್ನು ಭಾರತಕ್ಕೆ ಕರೆತಂದು ಬಂಧು ಬಾಂಧವರ ಜತೆಗೆ ಬೆಳೆಸಿದರೆ ಆತನ ಪರಿಸ್ಥಿತಿ ಸುಧಾರಿಸಬಹುದು; ಭಾರತಕ್ಕೆ ಸ್ಥಳಾಂತರಗೊಳ್ಳೋಣವೇ?’ ಎಂಬ ಪ್ರಸ್ತಾವವನ್ನು ಪತ್ನಿಯ ಮುಂದಿರಿಸಿದರು ಶ್ರೀಧರ್.
ಆದರೆ ಅಮೆರಿಕದಲ್ಲೇ ಇದ್ದು ಮಗನ ಚಿಕಿತ್ಸೆ ಮುಂದುವರಿಸುವ ಇಚ್ಛೆಯನ್ನು ಪತ್ನಿ ವ್ಯಕ್ತಪಡಿಸುತ್ತಾರೆ. ಈ ನಡುವೆ ಝೊಹೋ ಸಂಸ್ಥೆಯ ಕೇಂದ್ರ ಕಚೇರಿಯನ್ನು ಭಾರತಕ್ಕೆ ಸ್ಥಳಾಂತರಿಸಿದ ಶ್ರೀಧರ್ ಇಲ್ಲೇ ನೆಲೆಗೊಂಡರು. ಹೀಗಾಗಿ ದಂಪತಿ ನಡುವಿನ ಭಿನ್ನಾಭಿಪ್ರಾಯ ಮುಂದುವರಿದು ಇವರ ವಿವಾಹ ವಿಚ್ಛೇದನದ ಇದೀಗ ಅಮೆರಿಕದ ಕೋರ್ಟ್ನಲ್ಲಿದೆ. ಮಗನ ವೈಕಲ್ಯ ತಮ್ಮ ವೈವಾಹಿಕ ಬದುಕನ್ನು ನಾಶ ಮಾಡಿತು ಎಂದು ಶ್ರೀಧರ್ ಭಾವುಕ ವಾಗಿ ಹೇಳುತ್ತಾರೆ. ಆಧುನಿಕ ಬದುಕಿನ ಒತ್ತಡಗಳು, ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ, ಗರ್ಭಿಣಿಯರು ಸೇವಿಸುವ ಔಷಧಿ ಮತ್ತು ಅನುಭವಿಸುವ ಮಾನಸಿಕ ಒತ್ತಡಗಳಂಥ ವಿಷಯಗಳು ಆಟಿಸಂಗೆ ಕಾರಣವಾಗುತ್ತವೆ.
ಮಕ್ಕಳು ಮೊದಲ ಒಂದು ವರ್ಷದವರೆಗೆ ಸಾಮಾನ್ಯವಾಗಿಯೇ ಕಾಣುತ್ತಾರೆ. ಆದರೆ ಇವರು ೨ ವರ್ಷವನ್ನು ತಲುಪುವಾಗ ಮಾತು, ಏಕಾಗ್ರತೆ ಹಾಗೂ
ಇತರರೊಂದಿಗೆ ಬೆರೆಯುವಿಕೆಯ ವಿಷಯಗಳಲ್ಲಿ ಸಮಸ್ಯೆ ಎದುರಿಸುತ್ತಾರೆ. ಪುನರಾವರ್ತಿತ ವರ್ತನೆ, ಗಲಿಬಿಲಿ, ಸಿಟ್ಟು, ಅತಿಯಾದ ಆತಂಕ, ಹಠ ಮೊದಲಾದ ವರ್ತನೆಗಳು ಅವರಿಂದ ಹೊಮ್ಮುತ್ತವೆ. ವಿವಿಧ ರೀತಿಯ ತರಬೇತಿ ಹಾಗೂ ಥೆರಪಿಗಳ ಸಹಾಯದಿಂದ ಆಟಿಸಂ ಮಕ್ಕಳ ವರ್ತನೆಯಲ್ಲಿ
ಬದಲಾವಣೆಯನ್ನು ತರಬಹುದು. ಸಮಸ್ಯೆಯನ್ನು ಆದಷ್ಟು ಬೇಗ ಪತ್ತೆಹಚ್ಚಲು ಸಾಧ್ಯವಾದರೆ ತರಬೇತಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಸಿಟ್ಟಿನ ನಿರ್ವಹಣೆ, ಮಾತುಗಾರಿಕೆಯ ಮತ್ತು ಆಲಿಸುವಿಕೆಯ ತರಬೇತಿ, ಕೌಟುಂಬಿಕ ಸಮಾಲೋಚನೆ, ವರ್ತನಾ ಥೆರಪಿ, ಅನ್ವಯಿಕ ವರ್ತನಾ ವಿಶ್ಲೇಷಣೆ (ಅಪ್ಲೈಡ್ ಬಿಹೇವಿಯರ್ ಅನಾಲಿಸಿಸ್), ಸಂವೇದನಾ ಪ್ರಕ್ರಿಯೆ ಮೊದಲಾದವುಗಳಿಂದ ಆಟಿಸಂ ಸಮಸ್ಯೆಯನ್ನು ನಿಭಾಯಿಸಬಹುದು.
ಆದರೆ ಜನಸಾಮಾನ್ಯರಲ್ಲಿ ಆಟಿಸಂ/ಸ್ವಲೀನತೆಯ ಬಗ್ಗೆ ಮಾಹಿತಿಯ ಕೊರತೆ ಇದೆ. ಈ ಸಮಸ್ಯೆಯನ್ನು ಪತ್ತೆಹಚ್ಚುವುದು ಹೇಗೆಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಪತ್ತೆಹಚ್ಚುವಿಕೆ ನಿಧಾನವಾದಷ್ಟೂ ಸಮಸ್ಯೆಯ ಪರಿಹಾರ ಪ್ರಕ್ರಿಯೆಯೂ ನಿಧಾನವಾಗುತ್ತದೆ. ಕೆಲವು ಹೆತ್ತವರು ತಮ್ಮ ಮಕ್ಕಳಲ್ಲಿರುವ ಈ ವೈಕಲ್ಯವನ್ನು ಒಪ್ಪಿಕೊಳ್ಳಲೂ ಹಿಂಜರಿಯುತ್ತಾರೆ. ಇಂಥ ವರ್ತನೆಯಿಂದಲೂ ಮಕ್ಕಳಿಗೆ ಸಿಗಬೇಕಾದ ತರಬೇತಿ ಹಾಗೂ ಥೆರಪಿಗಳು ತಪ್ಪಿಹೋಗುತ್ತದೆ.
ಆಟಿಸಂ ಮಕ್ಕಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಕೆಲವು ಸಂಸ್ಥೆಗಳು ಇಂಥ ಮಕ್ಕಳ ಸಮಸ್ಯೆ, ಹೆತ್ತವರ ಅಸಹಾಯಕತೆ ಮೊದಲಾದವನ್ನು ಹಣ ಮಾಡುವ ದಂಧೆಯನ್ನಾಗಿಸಿಕೊಂಡಿವೆ. ಆಟಿಸಂ ಮಕ್ಕಳಿಗೆ ನೀಡುವ ಬೇರೆ ಬೇರೆ ರೀತಿಯ ತರಬೇತಿ-ಥೆರಪಿಗಳ ಹೆಸರಿನಲ್ಲಿ ಗಂಟೆಗೆ ೫೦೦/೧೦೦೦ ರುಪಾಯಿಗಳನ್ನು ಹೆತ್ತವರಿಂದ ಪೀಕಿಸುವ ಕೆಲಸವನ್ನು ಕೆಲವು ಸಂಸ್ಥೆಗಳು ಮಾಡುತ್ತಿವೆ.
ಸರಕಾರವು ಪ್ರತಿ ತಾಲೂಕಿಗೆ ಒಂದರಂತೆ ಆಟಿಸಂ ಮಕ್ಕಳ ತರಬೇತಿ/ಥೆರಪಿ ಸಂಸ್ಥೆಗಳನ್ನು ತೆರೆಯಲು ಸಾಧ್ಯವಾದರೆ ಹಾಗೂ ಶಾಲಾ ಅಧ್ಯಾಪಕರಿಗೆ ಆಟಿಸಂ ಮಕ್ಕಳನ್ನು ನಿಭಾಯಿಸುವ, ಅವರಿಗೆ ಬೋಽಸುವ ನಿಟ್ಟಿನಲ್ಲಿ ತರಬೇತಿ ಕೊಟ್ಟರೆ, ಇಂಥ ಸಮಸ್ಯೆಯಲ್ಲೇ ದಿನದೂಡುತ್ತಿರುವ ಮಕ್ಕಳ ಹೆತ್ತವರು ಅನುಭವಿಸುತ್ತಿರುವ ಆರ್ಥಿಕ ಶೋಷಣೆಯು ಕಡಿಮೆಯಾಗಬಹುದು. ಭಾರತದಲ್ಲಿ ಆಟಿಸಂ ಮಕ್ಕಳಿಗೆ ಎಸ್ಎಸ್ಎಲ್ಸಿ ನಂತರದ ಉನ್ನತ ಶಿಕ್ಷಣ, ವೃತ್ತಿ ಆಧಾರಿತ ತರಬೇತಿ, ಸೂಕ್ತ ಉದ್ಯೋಗ, ಪುನರ್ವಸತೀಕರಣ ಮೊದಲಾದ ವಿಚಾರಗಳಲ್ಲಿ ಸಾಕಷ್ಟು ಸಿದ್ಧತೆ ಹಾಗೂ ಸೌಕರ್ಯವನ್ನು ಕಲ್ಪಿಸಲಾಗಿಲ್ಲ. ಹೀಗಾಗಿ ಆಟಿಸಂ ಮಕ್ಕಳ ಹೆತ್ತವರು ತಮ್ಮ ನಂತರ ಈ ಮಕ್ಕಳ ಭವಿಷ್ಯವೇನು ಎಂದು ಚಿಂತಿಸುವಂತಾಗಿದೆ.