ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ಹಾಗೂ ತೆಲಂಗಾಣ ಬಿಜೆಪಿ ನಾಯಕ ಇಂದ್ರ ಸೇನಾ ರೆಡ್ಡಿ ನಲ್ಲು ರನ್ನು ತ್ರಿಪುರಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ದಾಸ್ ಅವರು 2014ರಿಂದ 2019ರವರೆಗೆ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದರು. ಇಂದ್ರ ಸೇನಾ ರೆಡ್ಡಿ ನಲ್ಲು ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ.
‘ಒಡಿಶಾ ಮತ್ತು ತ್ರಿಪುರಾಕ್ಕೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ’ ಎಂದು ರಾಷ್ಟ್ರಪತಿ ಭವನ ಹೇಳಿಕೆಯಲ್ಲಿ ತಿಳಿಸಿದೆ.
ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಒಡಿಶಾ ಮತ್ತು ತ್ರಿಪುರಾದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ನಲ್ಲು ಮತ್ತು ರಘುಬರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ‘ತ್ರಿಪುರಾದ ರಾಜ್ಯಪಾಲರಾಗಿ ನೇಮಕಗೊಂಡ ಇಂದ್ರಸೇನಾ ರೆಡ್ಡಿ ನಲ್ಲು ಜಿ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ’ ಎಂದು ಸಹಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.