Monday, 6th January 2025

ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ 

ತುಮಕೂರು: ಅಕ್ರಮವಾಗಿ ತಮ್ಮ ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್  ಮನೆ ಸೇರಿದಂತೆ ಐದು ಕಡೆ ಬೆಳ್ಳಂಬೆಳಗ್ಗೆ ತುಮಕೂರು, ಮೈಸೂರು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಶಿರಾ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆಯ ಸಹಾಯ ಇಂಜಿನಿಯರ್ ನಾಗೇಂದ್ರಪ್ಪ,  ಆದಾಯಕ್ಕಿಂತ ಮೀರಿ ಅಕ್ರಮವಾಗಿ ಅಸ್ತಿಪಾಸ್ತಿ ಸಂಪಾದಿಸಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅವರಿಗೆ ಸಂಬಂಧಿಸಿದ ಕಚೇರಿ, ಮನೆ, ಫಾರಂಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಬಟವಾಡಿ ಸಮೀಪದ ಮಹಾಲಕ್ಷ್ಮಿ ನಗರದ 3ನೇ ಕ್ರಾಸ್‌ನಲ್ಲಿರುವ ಎಂಜಿನಿಯರ್ ನಾಗೇಂದ್ರಪ್ಪ ನಿವಾಸ, ಸಿರಾ ಕಚೇರಿ ಹಾಗೂ ಸಿರಾ ತಾಲೂಕಿನ ಮದ್ದೇನಹಳ್ಳಿಯ ಮನೆ, ರಾಗಲಹಳ್ಳಿ ಮನೆ, ಫಾರಂಹೌಸ್ ಮೇಲೆ ಲೋಕಾ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲಿಸಿದ್ದಾರೆ.
ತುಮಕೂರಿನ ಮನೆಯಲ್ಲಿ ಲಕ್ಷಾಂತರ ರು ಬೆಲೆ ಬಾಳುವ ಎರಡು ಬೈಕ್, ಎರಡು ಕಾರು ಇತರೆ ದಾಖಲೆಗಳು ದೊರೆತಿವೆ ಎನ್ನಲಾಗಿದೆ.
ಲೋಕಾಯುಕ್ತ ಎಸ್ಪಿ ವಲಿಬಾಷಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್, ಇನ್ಸ್ಪೆಕ್ಟರ್‌ಗಳಾದ ಶಿವರುದ್ರಪ್ಪ ಮೇಟಿ, ಸಲೀಂ, ರಾಮರೆಡ್ಡಿ, ಅನಿಲ್‌ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *