Friday, 20th September 2024

ತಮಿಳುನಾಡು ಸಚಿವ ಇ.ವಿ.ವೇಲುಗೆ ಐಟಿ ಶಾಕ್

ಚೆನ್ನೈ: ತಮಿಳುನಾಡು ಲೋಕೋಪಯೋಗಿ ಇಲಾಖೆ ಸಚಿವ ಇ.ವಿ.ವೇಲು ಅವರ ಚೆನ್ನೈ ಮತ್ತು ತಿರುವಣ್ಣಾಮಲೈನಲ್ಲಿರುವ ಮನೆಗಳು ಸೇರಿದಂತೆ 80 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರು.

ವೇಲು ಒಡೆತನದ ವಿವಿಧ ಪ್ರದೇಶಗಳ ಮೇಲೆ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಸಚಿವ ವೇಲು ಅವರಿಗೆ ಸಂಬಂಧಿಸಿದ ಕಂಪನಿಗಳು ತೆರಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸ ಲಾಗುತ್ತಿದೆ. ತಿರುವಣ್ಣಾಮಲೈನಲ್ಲಿರುವ ಮನೆ, ಶಿಕ್ಷಣ ಸಂಸ್ಥೆಗಳು, ನಿರ್ಮಾಣ ಸಂಸ್ಥೆಗಳು, ಆಸ್ಪತ್ರೆ ಸೇರಿದಂತೆ ಎಲ್ಲೆಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚೆನ್ನೈನ ತ್ಯಾಗರಾಯ ನಗರ, ಕಿಲ್ಪಾಕ್ಕಂ, ಮೌಂಟ್ ರೋಡ್, ವೆಪ್ಪೇರಿ, ಅಣ್ಣಾನಗರ ಮತ್ತಿತರ ಸ್ಥಳಗಳು ಹಾಗೂ ತಿರುವಣ್ಣಾಮಲೈನಲ್ಲಿರುವ ಮನೆ, ಅರುಣೈ ಕಾಲೇಜ್ ಆಫ್ ಇಂಜಿನಿಯರಿಂಗ್, ಅರುಣೈ ವೈದ್ಯಕೀಯ ಕಾಲೇಜು, ಟ್ರಸ್ಟ್‌, ಕಚೇರಿಯಲ್ಲಿ 30ಕ್ಕೂ ಹೆಚ್ಚು ತೆರಿಗೆ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

2021ರಲ್ಲಿ ಸಚಿವ ವೇಲು ಅವರ ನಿವಾಸದಿಂದ ಹಲವು ಮಹತ್ವದ ದಾಖಲೆಗಳನ್ನು ಐಟಿ ವಶಪಡಿಸಿಕೊಂಡಿತ್ತು. ಆ ದಾಖಲೆಗಳ ಆಧಾರದ ಮೇಲೆ ಮತ್ತೊಮ್ಮೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು, ಕಟ್ಟಡಗಳು ಹಾಗೂ ಹೆದ್ದಾರಿ ಇಲಾಖೆ ಗುತ್ತಿಗೆದಾರರಿಗೆ ಸೇರಿದ 40 ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ಪ್ರಗತಿಯಲ್ಲಿದೆ. ಜನಪ್ರಿಯ ನಿರ್ಮಾಣ ಕಂಪನಿಯಾದ ಕಾಸಾ ಗ್ರ್ಯಾಂಡ್ ಸೇರಿದಂತೆ ಕಂಪನಿಗಳ ಮೇಲೂ ದಾಳಿ ನಡೆದಿದೆ.

ಐಟಿ ಕಾರ್ಯಾಚರಣೆಗೆಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆ ಒದಗಿಸುತ್ತಿದೆ. ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳಿರುವ ಐಟಿ ಅಧಿಕಾರಿಗಳು, ಸಚಿವರಿಗೆ ಸಂಬಂಧಿಸಿದ ಎಲ್ಲ ಸ್ಥಳಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.