ರಾಯಪುರ: ಛತ್ತೀಸಗಢದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್, ಗೋವು ಕಳ್ಳಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಛತ್ತೀಸಗಢದ ಕವರ್ಧಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ, ದೇಶ ಮತ್ತು ಸಮಾಜಕ್ಕೆ ಕಾಂಗ್ರೆಸ್ ಪಿಡುಗಾಗಿದೆ ಎಂದರು.
‘ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಮನವಮಿ ಮೆರವಣಿಗೆ ನಿಲ್ಲಿಸಲಾಯಿತು. ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಿದ ಕಾರ್ಯಕರ್ತರನ್ನು ಸದೆಬಡಿಯಲಾಯಿತು. ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮತಾಂತರ ವಿರುದ್ಧ ಕಠಿಣ ಕಾನೂನನ್ನು ತರಲಾಗಿದೆ’ ಎಂದು ಹೇಳಿದರು.
‘ಲವ್ ಜಿಹಾದ್, ಗೋವು ಕಳ್ಳಸಾಗಣೆ, ಗಣಿ ಮಾಫಿಯಾ ಹೆಸರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಇಂತಹ ಕೃತ್ಯಗಳಿಗೆ ಜಾಗವಿಲ್ಲ’ ಎಂದರು.
90 ಸದಸ್ಯಬಲದ ಛತ್ತೀಸಗಢ ವಿಧಾನಸಭಾ ಚುನಾವಣೆಗೆ ನ.7 ಮತ್ತು 17ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.