Sunday, 5th January 2025

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ಕನ್ನಡ ಡಿಂಡಿಮ

ರಾಘವೇಂದ್ರ ಈ.ಹೊರಬೈಲು

‘ಕರ್ನಾಟಕ ಎಂಬುದೇನು, ಹೆಸರೆ ಬರಿಯ ಮಣ್ಣಿಗೆ? ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ! ಕಾವ ಕೊಲುವ ಒಲವ ಬಲವ ಪಡೆದ ಛಲದ ಚಂಡಿ ಕಣಾ!’ ರಾಷ್ಟ್ರಕವಿ ಕುವೆಂಪುರವರು ಹೇಳುವಂತೆ ಕರ್ನಾಟಕ ಎಂಬುದು ಕೇವಲ ಒಂದಿಷ್ಟು ಪ್ರದೇಶವನ್ನು ಹೊಂದಿರುವ, ಕೆಲವು ಕೋಟಿ ಜನಸಂಖ್ಯೆಯಿರುವ ನಿರ್ದಿಷ್ಟ ಭೂಭಾಗವಲ್ಲ.

ಆ ಇಡೀ ಪ್ರದೇಶದ ಆಚಾರ, ವಿಚಾರ, ಕಲೆ, ಸಂಸ್ಕೃತಿ,  ನಡೆ-ನುಡಿ, ಭಾವ ಇದೆಲ್ಲದರ ಶಕ್ತಿಸ್ವರೂಪ. ‘ಕಾವೇರಿಯಿಂದ ಮಾಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬ ‘ಕವಿರಾಜಮಾರ್ಗ’ದ ಸಾಲಿನಂತೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ್ದ ನಮ್ಮ ಕರುನಾಡು ಭಾಷೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ರಂಗಭೂಮಿ, ಸಿನಿಮಾ, ಶಿಲ್ಪಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧಿಸಿದ ಪರಿ ಅಮೋಘ, ಅದ್ಭುತ, ಅದ್ವಿತೀಯ.

ರಾಷ್ಟ್ರದ ಬಹುತೇಕರು ಆಡುವ ಭಾಷೆಯಾದ ಹಿಂದಿಯು ತೊಟ್ಟಿಲ ಕೂಸಾಗಿದ್ದಾಗ, ವಿಶ್ವಭಾಷೆಯೆಂದು ಬೀಗುತ್ತಿರುವ ಇಂಗ್ಲಿಷ್ ಹುಟ್ಟುವುದಕ್ಕಿಂತ ಮುಂಚೆಯೇ ನಮ್ಮ ಕನ್ನಡ ಭಾಷೆಯಲ್ಲಿ ‘ಕವಿರಾಜಮಾರ್ಗ’ವೆಂಬ ಶ್ರೇಷ್ಠ ಕೃತಿ ರಚಿತವಾಗಿತ್ತೆಂದರೆ ಅದು ನಮ್ಮ ಹೆಮ್ಮೆಯ ಭಾಷೆಯಾದ ಕನ್ನಡದ ತಾಕತ್ತು. ೨,೦೦೦ ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ, ಸಂಪೂರ್ಣ ವೈಜ್ಞಾನಿಕವಾಗಿರುವ, ಬರೆದಂತೆಯೇ ಓದಬಹುದಾದ, ಓದಿದಂತೆಯೇ ಮಾತನಾಡಬಹುದಾದ ಶುದ್ಧ ಭಾಷೆಯಾಗಿರುವುದು ನಮ್ಮ ಕರುನಾಡಿನ ಕುಡಿಯಾದ ಕನ್ನಡದ ಶಕ್ತಿ.

ಭಾರತದ ಸಾಹಿತ್ಯ ಕ್ಷೇತ್ರದಲ್ಲಿಯೇ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠವನ್ನು ಪಡೆದ ಸಾಹಿತಿಗಳಲ್ಲಿ ಕನ್ನಡಿಗರೇ ಅತಿಹೆಚ್ಚು ಎಂಬುದಕ್ಕೆ ೮ ಶ್ರೇಷ್ಠ ಸಾಹಿತಿಗಳು ಅದನ್ನು ಪಡೆದಿದ್ದೇ ಸಾಕ್ಷಿ. ಆ ಮೂಲಕ ಸಾಹಿತ್ಯ ಲೋಕದಲ್ಲಿ ಕರುನಾಡಿನ ಹಿರಿಮೆಯೇನು ಎಂಬುದನ್ನು ಅವರು ವಿಶ್ವಕ್ಕೇ ಸಾರಿದ್ದಾರೆ. ಪಂಪ, ರನ್ನ, ಪೊನ್ನ, ಕುಮಾರವ್ಯಾಸ, ಹರಿಹರ, ರಾಘವಾಂಕನಿಂದ ಹಿಡಿದು ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ತೇಜಸ್ವಿ, ಭೈರಪ್ಪ, ಲಂಕೇಶ ಇನ್ನೂ ಅನೇಕ ಮಹಾನ್ ಸಾಹಿತಿಗಳನ್ನೂ, ಗದಾಯುದ್ಧ, ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಶ್ರೀ ರಾಮಾಯಣ ದರ್ಶನಂ, ನಾಕುತಂತಿ, ಮಂಕುತಿಮ್ಮನ ಕಗ್ಗ, ಚೋಮನದುಡಿ, ಪರ್ವ, ಕರ್ವಾಲೋದಂಥ ಮೇರು ಕೃತಿಗಳನ್ನೂ ಹಾಗೂ ಸರ್ವಜ್ಞ, ಬಸವಣ್ಣ ಮುಂತಾದ ವಚನಕಾರರ
ಶ್ರೇಷ್ಠ ವಚನಗಳನ್ನೂ ವಿಶ್ವಕ್ಕೆ ಕೊಟ್ಟ ಕೀರ್ತಿ ನಮ್ಮ ಕರುನಾಡಿನದ್ದು.

ಗಂಗ, ಕದಂಬ, ರಾಷ್ಟ್ರಕೂಟ, ಹೊಯ್ಸಳ, ಚಾಲುಕ್ಯ, ಬಲ್ಲಾಳ, ಒಡೆಯರು ಮುಂತಾದ ರಾಜಮನೆತನಗಳು, ಮಯೂರ ವರ್ಮ, ಅಮೋಘವರ್ಷ ನೃಪತುಂಗ, ಇಮ್ಮಡಿ ಪುಲಿಕೇಶಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಅದ್ವಿತೀಯ ರಾಜಾಧಿರಾಜರು ಆಳ್ವಿಕೆ ನಡೆಸಿ ಕರುನಾಡಿನ ಕೀರ್ತಿ ಪತಾಕೆ ಯನ್ನು ವಿಶ್ವದೆಲ್ಲೆಡೆ ಹಾರಿಸಿದ್ದಾರೆ. ಬೀದಿ ಬೀದಿಗಳಲ್ಲಿ ಮುತ್ತು-ರತ್ನ, ವಜ್ರ-ವೈಡೂರ್ಯಗಳನ್ನು ಸೇರುಗಳಲ್ಲಿ ಮಾರುವಷ್ಟು ಶ್ರೀಮಂತಿಕೆಯನ್ನು ಹೊಂದಿದ್ದ ಕೃಷ್ಣದೇವರಾಯನ ಕಾಲದ ವಿಜಯನಗರ ಸಾಮ್ರಾಜ್ಯ ನಮ್ಮ ಕರುನಾಡಿನ ಸಂಪದ್ಭರಿತವಾದ ಚರಿತ್ರೆಯನ್ನು ಸಾರಿಸಾರಿ ಹೇಳುತ್ತದೆ.

ಗುಬ್ಬಿ ವೀರಣ್ಣ ಎಂಬ ಮಹಾನ್ ಕಲಾವಿದರ ಮೂಲಕ ಇಡೀ ಭಾರತವೇ ನಮ್ಮ ಕರುನಾಡಿನತ್ತ ತಿರುಗಿ ನೋಡುವಂಥ ಸಾಧನೆಯನ್ನು ರಂಗಭೂಮಿ ಯಲ್ಲಿ ಮಾಡಿ ತೋರಿಸಿದ್ದು ಕೂಡಾ ಕರುನಾಡಿನ ಗರಿಮೆಯೇ ಸರಿ. ರಂಗಭೂಮಿಯ ಹಿನ್ನೆಲೆಯಿಂದಲೇ ಸಿನಿಮಾ ಜಗತ್ತಿಗೆ ಕಾಲಿಟ್ಟು, ಇಡೀ ಜಗತ್ತೇ ಕರುನಾಡನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದು ನಮ್ಮ ಕನ್ನಡಿಗರ ಕಣ್ಮಣಿ ಡಾ.ರಾಜ್ ಕುಮಾರ್‌ರವರು. ಕರುನಾಡು ಶಿಲ್ಪಕಲೆಗಳ ತವರೂರು ಎನಿಸಿಕೊಂಡದ್ದು ಸುಖಾಸುಮ್ಮನೆ ಅಲ್ಲ.

ಕಲ್ಲಿನಲ್ಲಿಯೇ ಕಥೆ ಹೇಳುವ ಬೇಲೂರು ಮತ್ತು ಹಳೆಬೀಡು, ಬೆಟ್ಟವನ್ನೇ ಬಗೆದು ದೇಗುಲಗಳನ್ನು ಕೊರೆದಿರುವ ಬಾದಾಮಿ, ಬೆರಗುಗೊಳಿಸುವ ವಿನ್ಯಾಸದ
ಕಲ್ಲಿನ ಕೆತ್ತನೆಯನ್ನು ಹೊಂದಿರುವ ಐಹೊಳೆ, ಪಟ್ಟದಕಲ್ಲು, ಬಿಜಾಪುರದ ಗೋಲಗುಂಬಜ್, ವಿಶ್ವವಿಖ್ಯಾತ ಮೈಸೂರು ಅರಮನೆ, ಮರಳ ರಾಶಿ ಯಲ್ಲಿಯೇ ಮೇಲೆದ್ದು ನಿಂತ ತಲಕಾಡಿನ ದೇಗುಲಗಳು, ಸೋಮನಾಥಪುರ, ಶಿಲೆಗಳಲ್ಲಿ ಸಂಗೀತ ನುಡಿಸುವಂಥ ಅದ್ಭುತ ಕೆತ್ತನೆಯ ಹಂಪಿ ಇನ್ನೂ
ಲೆಕ್ಕವಿಲ್ಲದಷ್ಟು ದೇವಸ್ಥಾನ, ಸ್ಮಾರಕಗಳು, ಮೂಕವಿಸ್ಮಯಗೊಳಿಸುವ ಅವುಗಳ ಕೆತ್ತನೆ, ವಾಸ್ತುಶಿಲ್ಪ ನಮ್ಮ ಕರುನಾಡಿನ ಶಿಲ್ಪಕಲೆಯ ಬೆಲೆಯನ್ನು ತಲೆಯೆತ್ತಿ ಸಾರುತ್ತಿವೆ.

ವಿವಿಧ ಕ್ಷೇತ್ರಗಳಲ್ಲಿ ತನ್ನ ಅಮೂಲ್ಯ ಕೊಡುಗೆಯಿಂದ ಗುರುತಿಸಿಕೊಂಡಿರುವ, ನಾನೊಬ್ಬ ಕನ್ನಡಿಗ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವುದಕ್ಕೆ ತನ್ನ ನಿವಾಸಿಗಳಿಗೆ ಅನುವು ಮಾಡಿಕೊಟ್ಟಿರುವ ನಾಡು ಕನ್ನಡನಾಡು. ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಧ್ಯೇಯದೊಂದಿಗೆ ‘ಕರ್ನಾಟಕ’ ಎಂದು ಮರುನಾಮಕರಣ ಗೊಂಡ ನಮ್ಮ ರಾಜ್ಯದಲ್ಲಿ ಇಂದು ಮಾತೃಭಾಷೆ ಕನ್ನಡವು ಕನ್ನಡಿಗರ ಉಸಿರಾಗುವಲ್ಲಿ ಎಡವುತ್ತಿದೆ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿರುವ ಅನೇಕ ಕನ್ನಡಿಗರೇ ಕನ್ನಡವನ್ನು ಮರೆತಂತೆ ವರ್ತಿಸುವುದು ನಮ್ಮ ಭಾಷೆಯ ಬೆಳವಣಿಗೆಗೆ ಮಹಾನ್ ಕಂಟಕವಾಗಿದೆ.

ಪರಭಾಷೆಗಳ ಪ್ರಭಾವದಿಂದಾಗಿ ನಲುಗುವಂತಾಗಿರುವ ಕನ್ನಡಕ್ಕೆ ಗಟ್ಟಿ ಅಸ್ತಿತ್ವ ಸಿಗಬೇಕಾಗಿದೆ. ಇಂಗ್ಲಿಷ್ ಹಾಗೂ ಹಿಂದಿಯ ವ್ಯಾಮೋಹದಿಂದ ಹಾಗೂ ಗಡಿನಾಡ ಭಾಷೆಗಳ ಪ್ರಭಾವದ ಕನ್ನಡ ಕರ್ನಾಟಕದಲ್ಲಿಯೇ ಬಡವಾಗುವಂತಾಗಿರುವುದು ವಿಷಾದನೀಯ. ಅಲ್ಲದೇ ಕನ್ನಡಕ್ಕೆ ಬಹುದೊಡ್ಡ ಮಾರಕ ವಾಗುತ್ತಿರುವುದು ಶಿಕ್ಷಣದಲ್ಲಿ ಅತಿಯಾಗಿರುವ ಇಂಗ್ಲಿಷ್ ವ್ಯಾಮೋಹ. ಪೋಷಕರೆಲ್ಲ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸುವ ಪೈಪೋಟಿಗೆ ಬಿದ್ದಿರುವುದರಿಂದ, ಸರಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶವಿರುವುದರಿಂದ ಕನ್ನಡ ಮಾಧ್ಯಮದ ಅನೇಕ ಶಾಲೆಗಳಲ್ಲಿ ದಾಖಲಾತಿ ಶೂನ್ಯಕ್ಕಿಳಿದಿದೆ.

ಇದರಿಂದ ಮುಂದೊಮ್ಮೆ ಕನ್ನಡ ಮಾಧ್ಯಮದಲ್ಲಿ ಕಲಿಯುವವರೇ ಇಲ್ಲದೇ ಕನ್ನಡ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದರೂ ಅಚ್ಚರಿಯಿಲ್ಲ. ಹಾಗಾಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಜತೆಗೆ ಕನ್ನಡ ಮಾಧ್ಯಮಕ್ಕೂ ಕನಿಷ್ಠ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲೇಬೇಕೆಂಬ ನಿಯಮ
ವಿಧಿಸುವ ಅವಶ್ಯಕತೆ ಇದೆ. ಕನ್ನಡವೆಂಬುದು ಅನ್ನ ಕೊಡುವ ಭಾಷೆ ಎಂಬಂತಾಗಬೇಕು. ಅಂದರೆ ಕನ್ನಡ ಕಲಿತರೆ ಅಥವಾ ಕನ್ನಡ ಮಾತನಾಡಿದರೆ ಜೀವನ ಕಟ್ಟಿಕೊಳ್ಳಬಹುದು ಎಂಬ ಖಾತ್ರಿ ಹುಟ್ಟುವಂಥ ವ್ಯವಸ್ಥೆ ಆಗಬೇಕಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಬೆಳವಣಿಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅನೇಕ ಕನ್ನಡಪರ ಹೋರಾಟಗಳಿಂದ, ಕನ್ನಡದ ಬಗ್ಗೆ ಕಾಳಜಿ ಇರುವ ಮನಸ್ಸುಗಳಿಂದ, ಕನ್ನಡವನ್ನು ಉಳಿಸಿ, ಬೆಳೆಸಬೇಕೆಂಬ ಕೆಲವು ಅಧಿಕಾರಿಗಳ ಪ್ರಯತ್ನಗಳ ಫಲವಾಗಿ ಕನ್ನಡ ಪರವಾದ ಅನೇಕ ಬದಲಾವಣೆ ಗಳಾಗುತ್ತಿವೆ. ಐಎಎಸ್‌ನಂಥ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿರುವುದು ಕನ್ನಡ ಮಾಧ್ಯಮದವರಿಗೆ ವರದಾನ ವಾಗಿದೆ. ಹೀಗೆಯೇ ಈ ನಿಟ್ಟಿನಲ್ಲಿ ಇನ್ನೂ ಮಹತ್ತರವಾದ ಬದಲಾವಣೆ ಹಾಗೂ ಬೆಳವಣಿಗೆಯ ಅವಶ್ಯಕತೆಯಿದೆ. ಇದಕ್ಕೆ ಎಲ್ಲಾ ಕನ್ನಡಿಗರ ಶ್ರಮ ಮುಖ್ಯವಾಗುತ್ತದೆ. ‘ನರಕಕ್ಕಿಳ್ಸಿ, ನಾಲ್ಗೆ ಸೀಳ್ಸಿ, ಬಾಯ್ನ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ್ ಪದವಾಡ್ತೀನಿ’ ಅನ್ನೋ ಜಿ.ಪಿ. ರಾಜರತ್ನಂರಂತೆ ಪ್ರತಿ ಯೊಬ್ಬ ಕನ್ನಡಿಗ ಮನಸ್ಸು ಮಾಡಿದರೆ ಕನ್ನಡವನ್ನು ವಿಶ್ವಭಾಷೆಯನ್ನಾಗಿಸಬಹುದು. ಆ ದಿಕ್ಕಿನಲ್ಲಿ ಎಲ್ಲರೂ ಪ್ರಯತ್ನ ಮಾಡುವ ಜರೂರತ್ತಿದೆ.

(ಲೇಖಕರು ಪ್ರೌಢಶಾಲಾ ಶಿಕ್ಷಕರು)

Leave a Reply

Your email address will not be published. Required fields are marked *