ನವದೆಹಲಿ: ಸಾಫ್ಟ್ವೇರ್ ಕಂಪನಿ ವಿಪ್ರೋ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ನ.15ರಿಂದ ಜಾರಿಗೆ ಬರುವಂತೆ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.
“ವೈಯಕ್ತಿಕ ಸಹಯೋಗ ಮತ್ತು ನಾವೀನ್ಯತೆಯ ಅಪಾರ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ನಾವು ಈಗ ನಮ್ಮ ಕೆಲಸದ ಸ್ಥಳದ ನೀತಿಯ ಬಗ್ಗೆ ಮುಂದಿನ ಹೆಜ್ಜೆ ಇಡುತ್ತಿದ್ದೇವೆ ಮತ್ತು ಎಲ್ಲಾ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದು ಕಡ್ಡಾಯ ಮಾಡಲಾ ಗುತ್ತಿದೆ. ಇದು 15 ನವೆಂಬರ್ 2023 ರಿಂದ ಜಾರಿಗೆ ಬರಲಿದೆ” ಎಂದು ಕಂಪನಿ ಹೇಳಿದೆ.
ಸುಮಾರು 55% ಉದ್ಯೋಗಿಗಳು ಈಗಾಗಲೇ ವಾರಕ್ಕೆ ಮೂರು ಬಾರಿ ಕಚೇರಿಗೆ ಬರುತ್ತಿದ್ದಾರೆ ಎಂದು ಹೇಳಿದೆ.
“ನಮ್ಮ ಪ್ರತಿಭೆಗಳ ವೃತ್ತಿಪರ ಅಭಿವೃದ್ಧಿಗೆ ಮತ್ತು ಗ್ರಾಹಕರಿಗೆ ನಾವೀನ್ಯತೆ ನೀಡುವ ನಿಟ್ಟಿನಲ್ಲಿ ವೈಯಕ್ತಿಕ ಸಂವಹನಗಳು ಬಹಳ ಅಗತ್ಯವಾಗಿವೆ ಎಂಬುದು ನಮ್ಮ ಅಭಿಪ್ರಾಯವಾಗಿದೆ” ಎಂದು ವಿಪ್ರೊ ತಿಳಿಸಿದೆ.
ದೇಶದ ಮತ್ತೊಂದು ಸಾಫ್ಟ್ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ವಾರಕ್ಕೆ ಐದು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿತ್ತು.