ಬಸ್ತಾರ್: ಛತ್ತೀಸ್ಗಢ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಮತದಾನದಲ್ಲಿ ಕಂಕೇರ್, ನಾರಾಯಣಪುರ ಮತ್ತು ದಾಂತೇವಾಡ, ಬಸ್ತಾರ್ನಲ್ಲಿ ನಕ್ಸಲೀಯರು ಹಿಂಸಾಚಾರ ನಡೆಸಿದ್ದಾರೆ.
ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ರೈತನಿಗೆ ಗುಂಡು ತಾಕಿದ್ದರೆ, ಹಲವಾರು ನಕ್ಸಲರು ಸಾವಿಗೀಡಾಗಿ ದ್ದಾರೆ ಎಂದು ಪೊಲೀಸರು ತಿಳಿಸಿದರು.
ಮಡಪಖಂಜೂರ್ ಮತ್ತು ಕಂಕೇರ್‌ನ ಬಳಿಯ ಅರಣ್ಯದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಅರ್ಧಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದೆ. ಬಳಿಕ ನಕ್ಸಲೀಯರು ಅಲ್ಲಿಂದ ಪರಾರಿಯಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ರೈತನ ಹೊಟ್ಟೆಗೆ ಗುಂಡು ತಗುಲಿದೆ. ರೈತ ರಾಸುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ. ಈ ವೇಳೆ ಗುಂಡು ಬಂದು ತಾಕಿದೆ. ಘಟನೆ ನಡೆದ ಸ್ಥಳದಿಂದ 47 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾರಾಯಣಪುರದ ಓರಕ್ಷಾದ ತಾದೂರಿನಲ್ಲಿ ಎಸ್‌ಟಿಎಫ್ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಂತೇವಾಡ ವಿಧಾನಸಭಾ ವ್ಯಾಪ್ತಿಯ ಅರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್ ಯೋಧರು ಎರಡು ಐಇಡಿಗಳನ್ನು ಪತ್ತೆ ಮಾಡಿದ್ದಾರೆ.
ಸುಕ್ಮಾದಲ್ಲಿ ಮತದಾನದ ವೇಳೆ ಮತ ಕೇಂದ್ರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿ ನಕ್ಸಲೀಯರ ದಾಳಿ ನಡೆದಿದೆ. ಭದ್ರತಾ ಪಡೆಗಳು ದಾಳಿಯನ್ನು ಹಿಮ್ಮೆಟ್ಟಿಸಿದ್ದಾರೆ.