ಪ್ರಸ್ತುತ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಕ್ಷೇತ್ರದ ದಿಕ್ಕೇ ಬದಲಾಗಿದೆ. ಹಿಂಗಾರು ಕೈ ಹಿಡಿಯುವ ಲಕ್ಷಣಗಳೂ ಕಾಣುತ್ತಿಲ್ಲ. ರೈತರು ಬೆಳೆಗೆ ಹಾಕಿದ ಬಂಡವಾಳವೂ ವ್ಯರ್ಥವಾಗಿದೆ. ಕೃಷಿ ಜತೆಗೆ ಮೇವಿನ ಕೊರತೆಯಿಂದ ಹೈನುಗಾರಿಕೆ ಕೂಡ ನೆಲಕಚ್ಚಿದೆ. ಕೃಷಿಯ ಜೀವನಾಡಿಯಾದ ಜಾನುವಾರುಗಳು ರೈತರಿಗೆ ಹೊರೆಯಾಗಿ ಪರಿಣಮಿಸಿವೆ.
ಸಮರ್ಪಕವಾಗಿ ಸಾಕಲಾಗದೇ ಮತ್ತು ಮೇವಿನ ಸಮಸ್ಯೆ ನಿರ್ವಹಿಸಲಾಗದೇ ಬಹುತೇಕ ರೈತರು ಕಡಿಮೆ ದರಕ್ಕೆ ಜಾನುವಾರುಗಳನ್ನು ಮಾರುವ ಅಸಹಾಯಕ ಸ್ಥಿತಿಗೆ ತಲುಪಿzರೆ. ಕಡಿಮೆ ಬೆಲೆಗೆ ಮಾರಲು ಇಚ್ಛಿಸಿದರೂ ಜಾನುವಾರುಗಳನ್ನು ಖರೀದಿಸುವವರೇ ಇಲ್ಲದಂತಾಗಿದೆ. ಮಳೆ ಇಲ್ಲದ್ದರಿಂದ ಹಸಿ ಮೇವಿನ ಲಭ್ಯತೆಯೂ ಕಡಿಮೆ ಇದ್ದು, ಕೇವಲ ಒಣ ಮೇವನ್ನು ಮಾತ್ರ ಜಾನುವಾರುಗಳಿಗೆ ತಿನ್ನಿಸುವಂತಾಗಿದೆ. ಹಸಿ ಮೇವಿನ ಕೊರತೆ ಹೈನೋ ದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಂಭವ ಇದೆ.
ಕೇವಲ ಒಣ ಮೇವು ಸೇವಿಸಿದರೆ ನಿಗದಿತ ಪ್ರಮಾಣದಲ್ಲಿ ಜಾನುವಾರುಗಳು ಹಾಲು ಕೊಡುವುದಿಲ್ಲ. ಹಸಿ ಮೇವು ಇಲ್ಲದಿದ್ದರೆ ಆಕಳು, ಎಮ್ಮೆ ಹಾಲು ಕೊಡುವುದನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ರೈತರಿಗೆ ನಷ್ಟ ಆಗುತ್ತದೆ. ಇನ್ನು ಜಾನುವಾರು ಮತ್ತು ಕುರಿ, ಮೇಕೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಮುನ್ಸೂಚನೆಗಳು ಗೋಚರಿಸುತ್ತಿವೆ. ಮಳೆ ಆಗಿದ್ದರೆ ಹಳ್ಳಕೊಳ್ಳ, ಚೆಕ್ ಡ್ಯಾಂ, ಕೆರೆಕಟ್ಟೆಗಳು ತುಂಬಿಕೊಳ್ಳುತ್ತಿದ್ದವು. ಆದರೆ ಈ ವರ್ಷ ಜಲಮೂಲಗಳೆಲ್ಲ ನೀರಿಲ್ಲದೆ ಬಣಗುಡುತ್ತಿವೆ.
ಇನ್ನೂ ಬೇಸಿಗೆ ಬಂದಿಲ್ಲ. ಈಗಾಗಲೇ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು, ಇದು ರೈತರಿಗೆ ಮತ್ತೊಂದು ಸಮಸ್ಯೆ ತಂದಿದೆ. ಮುಂದಿನ ಮಳೆಗಾಲದವರೆಗೂ ಜಾನುವಾರುಗಳನ್ನು ಸಾಕುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ರಾಜ್ಯ ಸರಕಾರ ಈಗಾಗಲೇ ೧೯೫ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿವೆ. ಬರ ಪರಿಹಾರ ನಿಧಿಯಿಂದ ಜಾನುವಾರುಗಳಿಗೆ ಪೂರಕ ಪೌಷ್ಟಿಕಾಂಶ ಗಳನ್ನು ಪೂರೈಸುವ ಯೋಜನೆಯನ್ನೂ ಹಮ್ಮಿಕೊಳ್ಳಬೇಕಿದೆ. ರೈತರಿಗೆ ಮೇವಿನ ಬೀಜ ವಿತರಿಸಿ ಹೊಲದ ಬದು ಖಾಲಿ ಜಮೀನಿನಲ್ಲಿ ಬಿತ್ತಿ ಮೇವು ಬೆಳೆಯಲು ಪ್ರೋತ್ಸಾಹಿ ಸುವ ಮೂಲಕ ಸಂಭವನೀಯ ಮೇವಿನ ಕೊರತೆ ನೀಗಿಸಲು ಪ್ರಯತ್ನಿಸಬೇಕಿದೆ.