ವಿಧಾನಸಭಾ ಚುನಾವಣೆ ಸೋಲಿನ ನಂತರ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವುದಂತಾಗಿದೆ. ಈಗಾಗಲೇ ಅನೇಕರು ಪಕ್ಷ ಬಿಟ್ಟು ಅನ್ಯ ಪಕ್ಷಗಳ ಕಡೆ ಮುಖ ಮಾಡಿzರೆ, ಉಳಿದವರು ಕೂಡ ಕಮಲಕ್ಕೆ ಗುಡ್ ಬೈ ಹೇಳುವ ಲೆಕ್ಕಾಚಾರದಲ್ಲಿ ಇರುವಾಗಲೇ ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷದ ಹೊಣೆ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರ ಅವರಿಗೆ ಬೆಟ್ಟದಷ್ಟು ಸವಾಲುಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವುದು ಅಷ್ಟು ಸರಳ ವಾಗಿಲ್ಲ. ಬಿಜೆಪಿಯಲ್ಲಿ ಬಹಿರಂಗವಾಗಿ ಎಲ್ಲವೂ ಚೆನ್ನಾಗಿದ್ದಂತೆ ಕಾಣಿಸಿದರೂ ಎಲ್ಲ ಪಕ್ಷಗಳಲ್ಲಿ
ಇರುವಂತೆ ಇಲ್ಲಿಯೂ ಆಂತರಿಕ ಸಂಘರ್ಷ, ಗುಂಪುಗಾರಿಕೆ ಸಾಕಷ್ಟಿದೆ. ಜಾತಿ, ಸಂಘ ಪರಿವಾರ, ವಲಸೆ ಬಂದವರು, ಹಿರಿಯರ ಕಡೆಗಣನೆ.. ಹೀಗೆ ನಾನಾ ಸಂಗತಿಗಳನ್ನು ಅವಲಂಬಿಸಿ ಇರುವ ಈ ಗುಂಪುಗಾರಿಕೆ ನಿಯಂತ್ರಣ ಕೂಡ ವೈಯಕ್ತಿಕ ಸಾಮಥ್ರ್ಯಕ್ಕೆ ಒಂದು ಅಳತೆಗೋಲಿನಂತೆ ಇರುವುದರಿಂದ ಇದು ಕೂಡ ಅವರಿಗೆ ಸವಾಲಾಗಿ ಪರಿಣಮಿಸಲಿದೆ. ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ ಎಂದೇ ಹೆಸರುವಾಸಿ. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ, ಪಕ್ಷಕ್ಕಾಗಿ ಏನೇ ಮಾಡಬೇಕಾಗಿ ಬಂದರೂ ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ಪಾತ್ರ, ಅವರ ಸಂಘಟಿತ ಪ್ರಯತ್ನ ಮಹತ್ವದ್ದು.
ಅಪಾರ ಸಂಖ್ಯೆಯಲ್ಲಿರುವ ಈ ಕಾರ್ಯಕರ್ತರನ್ನು ಒಗ್ಗೂಡಿಸಿ, ಉತ್ಸಾಹ ತುಂಬಿ, ಪಕ್ಷಕ್ಕಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಶ್ರಮಿಸುವಂತೆ ಮಾಡುವ ಸವಾಲನ್ನೂ ವಿಜಯೇಂದ್ರ ನಿಭಾಯಿಸಬೇಕಾಗಿದೆ. ಪಕ್ಷದಲ್ಲಿ ಅನೇಕ ಹಿರಿತಲೆಗಳಿದ್ದು, ಪ್ರಭಾವಿಗಳಾಗಿರುವ ಅವರ ಮಾತನ್ನು ಅಷ್ಟು ಸುಲಭದಲ್ಲಿ ತೆಗೆದುಹಾಕಲು ಸಾಧ್ಯವಿಲ್ಲ. ಅಲ್ಲದೆ, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗಲೇ ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದವರನ್ನು ಇದೀಗ ಮತ್ತಷ್ಟು ಅಸಮಾಧಾನಗೊಂಡಿದ್ದು, ಅಂಥವರನ್ನು ವಿಜಯೇಂದ್ರ ನಿಭಾಯಿಸುವುದು ಸುಲಭವಲ್ಲ. ಹಿರಿ-ಕಿರಿಯರಿಬ್ಬರನ್ನೂ ಒಟ್ಟಿಗೇ ಸಾಮರಸ್ಯ ದಲ್ಲಿ ಇರಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಕೂಡ ದೊಡ್ಡ ಸವಾಲೇ. ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ಈ ಲೋಕಸಭಾ ಚುನಾವಣೆಯ ಗೆಲುವು ಮಹತ್ವದ್ದಾಗಿದ್ದು, ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ರಾಜ್ಯದಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿಕೊಡುವ ದೊಡ್ಡ ಸವಾಲು ಇದೆ. ಒಟ್ಟಾರೆ ವಿಜಯೇಂದ್ರ ಅವರಿಗೆ ದೊರೆತ ರಾಜ್ಯಾಧ್ಯಕ್ಷ ಸ್ಥಾನ ಹೂವಿನ ಹಾಸಿಕೆಯಂತೂ ಅಲ್ಲ.