ಮಹಾ ಬಯಲು- ೧೬
ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ
ಅದು ಜೂನ್ ೨೦೧೬. ಮಠದಿಂದ ನನಗೆ ಕರೆ
ಬರುತ್ತದೆ. ಶ್ರೀಗಳ ಆರೋಗ್ಯದಲ್ಲಿ ಸಣ್ಣ ಏರುಪೇರಾಗಿದೆ ಎಂದು ಮಠದ ಶ್ರೀಗಳ ಶಿಷ್ಯರು ಕರೆಮಾಡಿದ್ದರು. ತಕ್ಷಣವೇ ಮಠಕ್ಕೆ ಹೊರಟೆ.
ದಾರಿಯುದ್ದಕ್ಕೂ ಆತಂಕ ಮನೆ ಮಾಡಿತ್ತು. ಶ್ರೀಗಳು ಊಟದಲ್ಲಿ ವ್ಯತ್ಯಾಸ ಮಾಡಿಕೊಂಡರಾ? ಅಥವಾ ಅವರಿಗೆ ಇಷ್ಟವಿಲ್ಲದ್ದು ಮಠದಲ್ಲಿ ಏನಾದ್ರು
ನಡೀತಾ? ಶ್ರೀಗಳನ್ನ ಎಷ್ಟುಹೊತ್ತಿಗೆ ನೋಡುತ್ತೇನೋ ಎಂದು ಓಡಿ ಹೋದೆ. ಹಳೆಯ ಮಠದಲ್ಲಿ ಶ್ರೀಗಳು ತಮ್ಮ ಕೊಠಡಿಯಲ್ಲಿ ನಿದ್ರಿಸುತ್ತಿದ್ದರು.
‘ಶ್ರೀಗಳು ಕೊಂಚ ಬಳಲಿದಂತೆ ಕಾಣುತ್ತಿದ್ದಾರೆ, ಸ್ವಲ್ಪ ಜ್ವರ ಬಂದ ಹಾಗಿದೆ’ ಎಂದು ಅವರ ಆಪ್ತರು ಹೇಳಿದರು. ಮಠಕ್ಕೆ ಹೋದ ತಕ್ಷಣ ಶ್ರೀಗಳನ್ನ
ಪರೀಕ್ಷಿಸಿದೆ ಹೌದು. ಕೊಂಚ ಜ್ವರ ಬಂದಿತ್ತು. ಸುಸ್ತಾಗಿದ್ದರು. ಪ್ರಸಾದದ ಬಗ್ಗೆ ಹಿಂದಿನ ದಿನದ ದಿನಚರಿ ಬಗ್ಗೆಯಲ್ಲಾ ವಿಚಾರಿಸಿದೆ. ಸಾಮಾನ್ಯವಾಗಿ ಶ್ರೀಗಳಿಗೆ ಅವರ ನಿರಂತರ ದಿನಚರಿಯಿಂದ ಹೀಗಾಗಿರಬಹುದು ಎನ್ನುವುದಾಗಿ ಶಿಷ್ಯರು ಹೇಳುತ್ತಿದ್ದರು. ಜೊತೆಗೆ ಇನ್ನೊಂದು ಆತಂಕದ ಸಂಗತಿ ಏನಾಗಿತ್ತೆಂದರೆ ಶ್ರೀಗಳು ಹಿಂದಿನ ದಿನ ಪ್ರಸಾದದಲ್ಲಿ ಕೇವಲ ಅರ್ಧದಷ್ಟನ್ನು ಮಾತ್ರ ಸ್ವೀಕರಿಸಿದ್ದರು. ಶ್ರೀಗಳನ್ನ ಸ್ಕಾನಿಂಗ್‌ಗೆ ಒಳಪಡಿಸಬೇಕಿತ್ತು. ಅತ್ಯಂತ ತುರ್ತಾಗಿ ಮಾಡಿಸೋಣ ಎಂದು ತೀರ್ಮಾನಿಸಿದೆವು.
ಆದರೆ ಅಷ್ಟು ಸುಲಭವಾಗಿ ಶ್ರೀಗಳು ಹಳೆಯ ಮಠದಿಂದ ಹೊರಗೆ ಬರಲಿಕ್ಕೆ ಒಪ್ಪುವುದಿಲ್ಲವೆಂದೂ ನನಗೆ ಗೊತ್ತಿತ್ತು. ಶ್ರೀಗಳ ಮುಂದೆ ಅತ್ಯಂತ ದಯನೀಯ ಸ್ಥಿತಿಯಲ್ಲಿ ಕುಳಿತುಕೊಂಡು ವಾಸ್ತವ ಅರ್ಥಮಾಡಿಸಿದೆ. ‘ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ ಬುದ್ದಿ. ಆದ್ರೆ ನಮಗಿದೆ. ನಿಮಗೆ ಚಿಕಿತ್ಸೆ ಅವಶ್ಯಕತೆ ಇದೆ. ಒಂದು ಸ್ಕಾನಿಂಗ್ ಮಾಡಿಸೋಣ’ ಎಂದು ಹೇಳಿ ಅವರ ಒಪ್ಪಿಗೆಗಾಗಿ ಕಾದೆವು. ಶ್ರೀಗಳ ಒಪ್ಪಿಗೆ ಸಮ್ಮತನಾಗಿರಲಿಲ್ಲ. ಈಗ ಶ್ರೀಗಳ
ಹಠವನ್ನು ಅಷ್ಟು ಸುಲಭವಾಗಿ ಸರಿ ಮಾಡಿ ಅವರನ್ನ ಒಪ್ಪಿಸಿ ಆಸ್ಪತ್ರೆಗೆ ಕರೆದುಕೊಂಡು ಒಯ್ಯುವುದಕ್ಕಿಂತ ಒಮ್ಮೆ ಇಲ್ಲಿಯೇ ಪರೀಕ್ಷೆ ಮಾಡಿದರೆ ಹೇಗೆ
ಎನ್ನುವುದು ನಮ್ಮ ಆಲೋಚನೆಗೆ ಬಂದ ತಕ್ಷಣವೇ ಸ್ಕ್ಯಾನಿಂಗ್ ಮೆಷಿನ್‌ನನ್ನು ಹಳೆಯ ಮಠಕ್ಕೆ ಸಾಗಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿದೆವು.
ಶ್ರೀಗಳ ಬಳಿ ಹೋಗಿ ಪರೀಕ್ಷೆ ಮಾಡಿಸಬೇಕು ಬುದ್ದೀ ಎಂದೆವು. ಶ್ರೀಗಳು ಅದೊಂದು ರೀತಿಯಲ್ಲಿ ನನ್ನ ನೋಡಿದರು. ಅವರ ಕಣ್ಣಿನಲ್ಲಿದ್ದ ಆ ಭಾವ ಇನ್ನೂ ನನ್ನನ್ನು ಸಾಕಷ್ಟು ಕಾಡುತ್ತಿದೆ. ಶ್ರೀಗಳು ಹೇಳಲಿಕ್ಕೆ ಹೋಗಿದ್ದೇನು ಎಂಬುದು ನನಗಿನ್ನು ತಿಳಿದಿಲ್ಲ. ಅವರು ಜ್ವರದಿಂದ ಒಂದಷ್ಟು ಸಂಕಟ ಪಟ್ಟರು ಅಂದು ಬೆಳಗ್ಗೆ ಶಿವಪೂಜೆಯನ್ನ ಮಾಡಲೇಬೇಕೆಂದರು. ಶ್ರೀಗಳು ಯಾವತ್ತಿಗೂ ತಮಗೆ ಅದೇನೇ ಸಮಸ್ಯೆ ಇದ್ದರೂ ಶಿವಪೂಜೆ ನಿಲ್ಲಿಸುತ್ತಿರಲಿಲ್ಲ. ಶಿವನ ಧ್ಯಾನ ಬಿಟ್ಟರೆ ಬೇರೆ ಯಾವ ಚಿಕಿತ್ಸೆಗಳು ಶ್ರೀಗಳಿಗೆ ಪರಿಣಾಮ ಬೀರುವುದಿಲ್ಲ ಎಂಬುದು ನಮಗೆ ಗೊತ್ತಿತ್ತು.
ತಪೋನಿಷ್ಟರಾಗಿ ಕೈಯಲ್ಲಿ ಇಷ್ಟಲಿಂಗವಿಡಿದು ಕುಳಿತುಕೊಂಡರೆ ಶಿವನಾಮಕ್ಕೆ ಶಿವಮಂತ್ರಕ್ಕೆ ದಿವ್ಯಪ್ರಭೆಯನ್ನ ಬೆಳಗಿಸುತ್ತಾ ಶ್ರೀಗಳು ತಮ್ಮನ್ನ ಮೀರಿ ಶಿವ ಧ್ಯಾನದಲ್ಲಿ ಮುಳುಗಿಬಿಡುತ್ತಿದ್ದರು. ಬಹುಶಃ ಶ್ರೀಗಳು ತಮಗಾಗಿ ಶಿವಪೂಜೆ ಮಾಡುತ್ತಿರಲಿಲ್ಲ ಎಂದು ಈಗಲೇ ಎನ್ನಿಸುತ್ತಿದೆ. ಶ್ರೀಗಳು ಶಿವನಿಗಾಗಿ ಪೂಜೆ ಮಾಡುತ್ತಿದ್ದರು. ಶಿವ ಶ್ರೀಗಳ ಪೂಜೆಗಾಗಿಯೇ ಕಾಯುತ್ತಿದ್ದರು ಎನ್ನುವ ಮಟ್ಟಿಗೆ ಅವರು ಅವಸರಿಸುತ್ತಿದ್ದರು. ಚುಟುಕಾಗಿ ಶಿವಪೂಜೆ ಮುಗಿಸಿ ಎಂದಾಗ ಶ್ರೀಗಳ ಮೊಗದಲ್ಲಿ ಬಂದ ಆ ಕಠಿಣ ಕೋಪ ನನಗೀಗಲೂ ಭಯ ತರಿಸುತ್ತದೆ. ಆದರೆ ಅವರೇನು ಹೇಳಲಿಲ್ಲಾ. ಸೀದಾ ಪೂಜಾ ಕೊಠಡಿಗೆ ಹೋಗಿ ತಮ್ಮ ಎಂದಿನಂತೆ ತೆಗೆದುಕೊಳ್ಳುವ ಸಮಯವನ್ನೇ ತೆಗೆದುಕೊಂಡು ಇಷ್ಟಲಿಂಗ ಪೂಜೆ ನೆರವೇರಿಸಿದರು. ಶ್ರೀಗಳ ಆ ನೋಟದ ಹಿಂದಿರುವ ಸತ್ಯ ಇದೀಗ ಅರ್ಥವಾಗುತ್ತಿದೆ. ಶಿವ ಎನ್ನುವುದು ಆತ್ಮಲಿಂಗ ಶ್ರೀಗಳು ಅದನ್ನ ಧರಿಸಿರುವ ಕಾಯ.
ಆತ್ಮಲಿಂಗಕ್ಕೆ ಪೂಜೆ ಸಲ್ಲಿಸದಿದ್ದರೆ ಕಾಯಕ್ಕೆ ಶಕ್ತಿ ಸಿಗುವುದಾದರೂ ಹೇಗೆ? ಶ್ರೀಗಳ ಶಿವಪೂಜೆ ಮುಗಿಯಿತು. ಶ್ರೀಗಳಿಗೆ ಸಿದ್ಧಗಂಗಾ ಮಠದಲ್ಲಿಯೇ ಸ್ಕಾನಿಂಗ್ ಮಾಡಲಾಯಿತು. ಸ್ಕಾನಿಂಗ್ ಮಾಡುವ ಅಷ್ಟೂ ವೇಳೆ ನನಗೇಕೋ ಒಂಥರಾ ಸಂಕಟ. ಮನದಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಅತೀವ ಆತಂಕ.
ನ್ಯುಮೋನಿಯಾ ರೀತಿಯ ಸಮಸ್ಯೆ ನಂತರ ಶ್ರೀಗಳು ತಮ್ಮ ದಿನಚರಿಯನ್ನ ಕೊಂಚ ಬದಲಿಸಿಕೊಂಡಿದ್ದರು. ಆದರೆ ಭಕ್ತರ ಭೇಟಿ ಜೊತೆಗೆ ಪಾದಪೂಜೆಯ
ಕೆಲ ಕಾರ್ಯಕ್ರಮಗಳಿಗೆ ಹೋಗಿದ್ದರು. ಶ್ರೀಗಳು ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಬಳಲಿದ್ದಾರೆ ಎಂಬುದು ದಿಗಿಲಾಗುತ್ತಿತ್ತು.
ರಿಪೋರ್ಟ್ ಕೈಗೆ ಬಂತು – ಗರಬಡಿಯುವಂತಹ ಸುದ್ದಿಯದು. ಒಂದು ಕ್ಷಣ ನಿಂತಲ್ಲೇ ನಾನು ನಿಲ್ಲಲಾರದೆ ಕುಸಿದೆ. ಶ್ರೀಗಳ ಪಿತ್ತಕೋಶ ಬ್ಲಾಕ್ ಆಗಿತ್ತು.
ಪಿತ್ತ ರಸ ಹೊರಗೆ ಹೋಗದೆ ಸಮಸ್ಯೆಯಾಗುತ್ತಿತ್ತು. ಒಂದೊಂದು ಕ್ಷಣವೂ ಅಮೂಲ್ಯ ಪ್ರತಿಕ್ಷಣವೂ ಹೋರಾಟವೆನ್ನುವಂತಾಗಿತ್ತು. ಕೂಡಲೇ ಹೆಚ್ಚಿನ
ಸಲಹೆಗೆ ಮಣಿಪಾಲ್ ಆಸ್ಪತ್ರೆಯ ಪಲ್ಮನಾಲಜಿಸ್ಟ್ ಡಾ.ಸತೀಶ್‌ರವರನ್ನು ಕರೆಸಲಾಯಿತು. ಡಾ.ಸತೀಶ್ ಬಂದು ಒಂದಷ್ಟು ಸಲಹೆ ನೀಡಿದರು. ನಮಗೆ
ಇನ್ನೂ ಹೆಚ್ಚಿನ ಸಲಹೆ ಬೇಕಿತ್ತು. ಒಂದು ವೈದ್ಯರ ತಂಡವನ್ನೇ ನಿರ್ಮಾಣ ಮಾಡಿ ಎಲ್ಲರ ಜೊತೆಗೆ ಮಾತನಾಡಿ ಒಮ್ಮತದ ನಿರ್ಧಾರ ಮಾಡಬೇಕಿತ್ತು. ಇನ್ನೊಂದೆಡೆ ಕಿರಿಯ ಶ್ರೀಗಳಾಗಿದ್ದ ಸಿದ್ಧಲಿಂಗ ಸ್ವಾಮೀಜಿಯವರ ಆತಂಕ ಮುಗಿಲು ಮುಟ್ಟಿತ್ತು. ತಾಯಿಯ ಅನಾರೋಗ್ಯ ಕಂಡು ಸಂಕಟ ಪಡುವ
ಮಗುವಂತಾಗಿದ್ದರು ಶ್ರೀಗಳು.
ಅವರ ಮೊಗದಲ್ಲಿ ನೋವು ಕಾಣಿಸುತ್ತಿತ್ತು. ಶ್ರೀಗಳನ್ನೇ ತಾಯಿಯಂತೆ ಪೋಷಿಸುತ್ತಿದ್ದ ಕಿರಿಯ ಶ್ರೀಗಳು ಇನ್ನಷ್ಟು ಹೆಚ್ಚಿನ ಸಲಹೆಗಳನ್ನ ಪಡೆದುಕೊಳ್ಳ ಬೇಕು ಎಂದರು. ಆಗ ನಮ್ಮ ಆಲೋಚನೆಗೆ ಬಂದಿದ್ದೆ ಬಾಲಗಂಗಾಧರನಾಥ ಗ್ಲೋಬಲ್ ಹಾಸ್ಪಿಟಲ್‌ನ ಹೆಸರಾಂತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ರವೀಂದ್ರ.