Sunday, 22nd December 2024

ಅಂಕಣ ಬರಹದ ಹಿರಿಮೆ ಹೆಚ್ಚಿಸಿದ ಹಾಮಾನಾ

ಶಶಾಂಕಣ

shashidhara.halady@gmail.com

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಂಕಣ ಬರಹಗಳಿಗೆ ಅಽಕೃತ ಗೌರವವನ್ನು ತಂದುಕೊಟ್ಟವರು ಹಿರಿಯರಾದ ಹಾ.ಮಾ.ನಾಯಕರು (೧೯೩೧-೨೦೦೦). ಸದಭಿರುಚಿಯ, ಸುಲಭವಾಗಿ ಓದಿಸಿಕೊಳ್ಳುವ, ಶ್ರೇಷ್ಠವೆನಿಸುವ ಹಲವು ಅಂಕಣ ಬರಹಗಳನ್ನು ಬರೆದು, ಕನ್ನಡದ ಗದ್ಯಕ್ಕೆ
ಒಂದು ಹಿರಿಮೆಯನ್ನು ತಂದುಕೊಟ್ಟ ನಾಯಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು.

ಅಂಕಣ ಸಾಹಿತ್ಯ ಪ್ರಕಾರದಲ್ಲಿ ಅವರ ಸಾಧನೆಗೆ ಈ ಪ್ರಶಸ್ತಿ ಲಭಿಸಿದಾಗ ಕೆಲವರು ಹುಬ್ಬೇರಿಸಿದ್ದುಂಟು. ಅದೇ ಮೊದಲಬಾರಿಗೆ ಅಂಕಣ ಸಾಹಿತ್ಯಕ್ಕೆ
ಆ ಪ್ರಶಸ್ತಿ ಒಲಿದಿತ್ತು. ಅದುವರೆಗೆ ಕಾದಂಬರಿ, ಕಾವ್ಯ, ವಿಮರ್ಶೆಗೆ ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವ ಪದ್ಧತಿಯಿತ್ತು. ನಾಯಕರಿಗೆ ಈ ಪ್ರಶಸ್ತಿ ದೊರಕಿ, ಆ ಮೂಲಕ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಈ ಪ್ರಕಾರದ ಬರಹಗಳಿಗೂ ಹೆಚ್ಚಿನ ಸ್ಥಾನಮಾನ ದೊರಕಿದ್ದು ಸುಳ್ಳಲ್ಲ; ಆ ಮೂಲಕ ಕನ್ನಡದಲ್ಲಿ ಅಂಕಣ ಬರೆಯುವವರೆಲ್ಲಾ ನಾಯಕರ ಹೆಸರನ್ನು ಸ್ಮರಿಸಿಕೊಂಡು, ಹೇಳಿಕೊಂಡು ಅಭಿಮಾನಪಟ್ಟು ಕೊಳ್ಳುವಂತಾಯಿತು, ಬೀಗುವಂತೆಯೂ ಆಯಿತು!

ಹಾ.ಮಾ.ನಾಯಕರ ಅಂಕಣಗಳು ಹಲವು ಕಾರಣಗಳಿಂದಾಗಿ ವಿಶಿಷ್ಟ, ವಿಭಿನ್ನ ಮತ್ತು ಶ್ರೇಷ್ಠ. ಜನಸಾಮಾನ್ಯರು ಓದುವ ವಾರಪತ್ರಿಕೆ, ದಿನಪತ್ರಿಕೆ ಗಳಲ್ಲಿ ಹಲವು ವರುಷಗಳ ಕಾಲ ಅವರು ಅಂಕಣ ಬರೆದಿದ್ದು, ಅವು ಜನಪ್ರಿಯವಾಗಿದ್ದುದು ಗಮನಾರ್ಹ ಅಂಶ. ಸಾಹಿತ್ಯ, ಸಂಸ್ಕೃತಿ, ಕಲೆ, ಸಜ್ಜನಿಕೆ,
ಭಾಷೆ, ಕನ್ನಡದ ಅಸ್ಮಿತೆ ಇವೇ ಮೊದಲಾದ ವಿಷಯಗಳು ಅವರ ಅಂಕಣಗಳಲ್ಲಿ ಪ್ರಧಾನವಾಗಿ ಬರುತ್ತಿದ್ದವು. ಸಾಹಿತಿಗಳ ಒಡನಾಟ, ಸಾಹಿತ್ಯ ಕೃತಿಗಳ ರಚನೆಯ ಹಿಂದಿನ ಹೊಳಹುಗಳು, ಕನ್ನಡ ಸಾಹಿತ್ಯ ಪ್ರಪಂಚದ ಸ್ವಾರಸ್ಯಕರ, ಪ್ರಮುಖ ವಿದ್ಯಮಾನಗಳನ್ನು ಅವರ ಅಂಕಣಗಳಲ್ಲಿ ಓದಿ ನಾನು ಮುದಗೊಂಡದ್ದುಂಟು.

ನಾಯಕರ ‘ಸಂಪ್ರತಿ’ ಅಂಕಣ ಬರಹಗಳ ಸಂಕಲನವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತು. ವಿಶೇಷವೆಂದರೆ ನಾಯಕರು
ಒಟ್ಟು ೬ ಅಂಕಣಬರಹ ಸಂಕಲನಗಳನ್ನು ಹೊರತಂದಿದ್ದಾರೆ- ಇವೆಲ್ಲವುಗಳ ಹೆಸರು ಆರಂಭವಾಗುವುದು ‘ಸ’ ಅಕ್ಷರದಿಂದ! ಸಂಪ್ರತಿ, ಸಾಹಿತ್ಯ ಸಲ್ಲಾಪ, ಸಂಚಯ, ಸಂಪದ, ಸೂಲಂಗಿ ಮತ್ತು ಸಂಪುಟ- ಇವು ನಾಯಕರ ಅಂಕಣ ಬರಹ ಸಂಕಲನಗಳ ಹೆಸರು. ಇವುಗಳ ಜತೆ, ಇತರ ಹಲವು ಕೃತಿಗಳನ್ನೂ ಅವರು ಹೊರತಂದಿದ್ದಾರೆ. ಅವರ ಗದ್ಯಶೈಲಿಯು ಸುಂದರ, ಸರಾಗವಾಗಿ ಓದಿಸಿಕೊಳ್ಳುವಂಥದ್ದು.

ಸಂತೋಷ ಕುಮಾರ ಗುಲ್ವಾಡಿಯವರ ಸಂಪಾದಕತ್ವದ ‘ತರಂಗ’ ವಾರಪತ್ರಿಕೆಯಲ್ಲಿ ನಾಯಕರು ಪ್ರತಿವಾರ ಅಂಕಣ ಬರೆದು ಜನರಿಗೆ ಹತ್ತಿರವಾದ
ಪರಿ ಅನನ್ಯ. ಅವರ ಅಂಕಣಕ್ಕೆ ಆ ಪತ್ರಿಕೆಯು ವಿಶೇಷ ಪ್ರಚಾರವನ್ನು ನೀಡುತ್ತಿತ್ತು! ನಮ್ಮ ನಾಡಿನ ಇತರ ಪತ್ರಿಕೆಗಳಲ್ಲೂ ಅವರು ಬೇರೆ ಸಂದರ್ಭದಲ್ಲಿ ಅಂಕಣ ಬರೆಯುತ್ತಿದ್ದರು. ಅವರ ಅಂಕಣಗಳಲ್ಲಿ ಹಲವು ಒಳನೋಟಗಳಿರುತ್ತಿದ್ದವು, ಸಾಹಿತ್ಯ ಪ್ರಪಂಚದ ಹಲವು ಅಪರೂಪದ ಸಂಗತಿಗಳು ಅಡಕಗೊಂಡಿರುತ್ತಿದ್ದವು. ಸಾಮಾಜಿಕ ಜಾಲತಾಣಗಳಿಲ್ಲದ ಆ ಕಾಲದಲ್ಲಿ, ಇವರ ಅಂಕಣಗಳಲ್ಲಿರುತ್ತಿದ್ದ ಮಾಹಿತಿಗಳು ತೀರಾ ಅಪರೂಪದ್ದು ಎಂದು ಓದುಗರಿಗೆ ಅನಿಸಿದ್ದರೆ ಅಚ್ಚರಿಯಿಲ್ಲ!

‘ತರಂಗ’ದಂಥ ಪತ್ರಿಕೆಯಲ್ಲಿ ಅಂಥ ಅಪರೂಪದ ಮಾಹಿತಿಯುಳ್ಳ ಅಂಕಣ ಪ್ರಕಟಗೊಂಡಾಗ, ನಾಡಿನ ಮೂಲೆ ಮೂಲೆಗಳಿಗೂ ಅದು ತಲುಪುತ್ತಿತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿದ್ದವರೂ ಓದುತ್ತಿದ್ದರು. ಈ ರೀತಿ, ಸಾಮಾನ್ಯ ಓದುಗನ ತನಕ ತಲುಪುವುದೇ ಅಂಕಣ ಬರಹಗಳ ಒಂದು ಶಕ್ತಿ. ನಾಯಕರ ಅಂಕಣಗಳನ್ನು ನಾನಂತೂ ಬೆರಗಿನಿಂದ ಓದುತ್ತಿದ್ದೆ; ಪ್ರತಿವಾರ ಪ್ರಕಟವಾಗುತ್ತಿದ್ದ ಅವರ ಅಂಕಣಗಳಿಗಾಗಿ ಕಾತುರದಿಂದ ಕಾಯುತ್ತಿದ್ದೆ.
ಅಂಕಣ ಬರಹಗಳ ಕುರಿತು ನಾಯಕರು ವಿಶೇಷ ಮುತುವರ್ಜಿ ವಹಿಸುತ್ತಿದ್ದರೆಂದು ಅನಿಸುತ್ತದೆ. ಪ್ರತಿ ವಾರದ ತಮ್ಮ ಅಂಕಣದಲ್ಲೂ ತಾಜಾತನ ವನ್ನು ಕಾಯ್ದುಕೊಳ್ಳುವಲ್ಲಿ ಅವರು ಶ್ರದ್ಧೆ ವಹಿಸುತ್ತಿದ್ದರು.

ಡೆಡ್‌ಲೈನ್‌ಗೆ ಸರಿಯಾಗಿ ಬರೆಯುವ ಬದ್ಧತೆ, ಶಿಸ್ತು ಅವರಲ್ಲಿತ್ತು. ಜತೆಗೆ ಇನ್ನೊಂದು ವಿಶೇಷ ಕಾಳಜಿ- ಅದೇನೆಂದರೆ, ಸಾಮಾನ್ಯವಾಗಿ ಒಂದು ಪತ್ರಿಕೆಗೆ ಒಂದು ವರುಷದ ತನಕ ಅಂಕಣ ಬರೆದ ನಂತರ, ‘ಸಾಕು’ ಮಾಡುತ್ತಿದ್ದರು! ಒಂದು ಪತ್ರಿಕೆಯಲ್ಲಿ ನಿರಂತರವಾಗಿ ಪ್ರತಿವಾರ ತನ್ನ ಅಂಕಣ ಓದಿದ ಓದುಗನಿಗೆ ಏಕತಾನತೆ ಕಾಡಬಾರದು ಎಂಬ ಕಾಳಜಿ, ಬದ್ಧತೆ, ಶಿಸ್ತು ಎಲ್ಲವೂ ಅವರ ಈ ನಡೆಯಲ್ಲಿತ್ತು. ಒಂದು ವರ್ಷ ಒಂದು ಪತ್ರಿಕೆಗೆ ಅಂಕಣ ಬರೆದ ನಂತರ ಸಾಮಾನ್ಯವಾಗಿ ಆ ಪತ್ರಿಕೆಯ ಅಂಕಣವನ್ನು ನಿಲ್ಲಿಸುತ್ತಿದ್ದರು. ಆ ನಂತರ ಬೇರೆಯದೇ ಅಂಕಣದ ಹೆಸರಿನಿಂದ, ಬೇರೆ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು.

ಜನಪ್ರಿಯ ವಾರಪತ್ರಿಕೆಗಳಲ್ಲಿ ಅವರು ಪ್ರತಿವಾರ ಸದಭಿರುಚಿಯ, ಸಾಹಿತ್ಯದ ಹಿನ್ನೆಲೆಯ ಅಂಕಣ ಗಳನ್ನು ಬರೆಯುತ್ತಿದ್ದರು ಎಂಬುದನ್ನು ನಾನು ಒತ್ತಿ
ಹೇಳಲು ಒಂದು ನಿರ್ದಿಷ್ಟ ಕಾರಣವಿದೆ. ನಾಯಕರು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ವಿದ್ವಾಂಸರು- ೧೯೮೪ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ಅದಕ್ಕೂ ಮುಂಚೆ ೧೬ ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದವರು. ಹಲವು ದಶಕಗಳ ಕಾಲ ಬೋಧನಾ ಅನುಭವ ಇದ್ದವರು. ೧೯೮೫ರ
ಬೀದರ್ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ವರು.

ಇಂಥ ಹಿರಿಯ ಸಾಹಿತಿ, ಪ್ರತಿವಾರ ಜನಪ್ರಿಯ ವಾರಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದರು ಎಂಬುದೇ ನನಗೆ ಈಗಲೂ ಒಂದು ಬೆರಗು; ಅವರ ಆ ಅಂಕಣಗಳು ಅಪಾರ ಜನಪ್ರಿಯತೆ ಪಡೆದಿದ್ದವು ಎಂಬುದು ಸಹ ಅಚ್ಚರಿಯ ವಿಷಯ ಎಂದು ಈಗ ಅನಿಸುತ್ತಿದೆ. ಹಾಗೆ ನೋಡಿದರೆ ‘ಅಂಕಣ ಸಾಹಿತ್ಯ’ ಕನ್ನಡಕ್ಕೆ ಹೊಸತೇನಲ್ಲ. ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಬಹು ಹಿಂದಿನಿಂದಲೂ ನಿಗದಿತ ಕಾಲಾವಽಯಲ್ಲಿ ಬರಹಗಳನ್ನು, ಲೇಖನಗಳನ್ನು ಬರೆದ ಹಲವು ಸಾಹಿತಿಗಳು, ಅಂಕಣಕಾರರು ಇದ್ದಾರೆ. ಅವರಲ್ಲಿ ಪ್ರಸಿದ್ಧರೂ ಸೇರಿದ್ದಾರೆ. ಅಂಕಣ ಸಾಹಿತ್ಯ ಪ್ರಕಾರಕ್ಕೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಡುವ ಮೂಲಕ ನಾಯಕರು ಈ ಪ್ರಕಾರದ ಸಾಹಿತ್ಯಕ್ಕೆ ವಿಶೇಷ ಗೌರವ ತಂದುಕೊಟ್ಟರು, ಅಂಕಣ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದರು ಎಂಬುದಂತೂ ನಿಜ.

ಕನ್ನಡದ ಪ್ರಸಿದ್ಧ ಅಂಕಣಕಾರರನ್ನು ನೆನಪಿಸಿಕೊಳ್ಳುವಾಗ ಎಚ್ಚೆಸ್ಕೆಯವರು ಥಟ್ಟನೆ ನೆನಪಾಗುತ್ತಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ಹಲವು ದಶಕಗಳ
ಕಾಲ ಅಂಕಣ ಬರೆದು ದಾಖಲೆ ನಿರ್ಮಿಸಿದ ಸಾಹಿತಿ ಅವರು. ವಿಶೇಷವೆಂದರೆ, ಹಲವು ಹೆಸರುಗಳನ್ನು, ವಿಭಿನ್ನ ವಿಷಯಗಳನ್ನು ಎತ್ತಿಕೊಂಡು ಅವರು
ಅಂಕಣ ಬರೆಯುತ್ತಿದ್ದರು. ಅವರ ಅಧ್ಯಯನ ಕ್ಷೇತ್ರ ಹಣಕಾಸು ವಲಯ; ಆ ಕುರಿತು ಅಂದಿನ ದಿನಗಳಲ್ಲಿ ಪಾಂಡಿತ್ಯಪೂರ್ಣವಾಗಿ ಕನ್ನಡದಲ್ಲಿ ಅಂಕಣ ಬರೆದು ಅವರೊಂದು ದಾಖಲೆ ನಿರ್ಮಿಸಿದರೆಂದೇ ಹೇಳಬೇಕು. ಅವರ ಅತಿ ಪ್ರಸಿದ್ಧ ಅಂಕಣವೆಂದರೆ ‘ವಾರದ ವ್ಯಕ್ತಿ’. ಆಗಿನ್ನೂ ಅಂತರ್ಜಾಲ ಇರಲಿಲ್ಲ, ಸಾಮಾಜಿಕ ಜಾಲತಾಣಗಳೂ ಇರಲಿಲ್ಲ, ಅಂಗೈತುದಿಯಲ್ಲಿ ನಾನಾ ಮಾಹಿತಿ ನೀಡುವ ಮೊಬೈಲ್‌ಗಳೂ ಇರಲಿಲ್ಲ. ಎಚ್ಚೆಸ್ಕೆಯವರು ಪ್ರತಿವಾರ ಬರೆಯುತ್ತಿದ್ದ ಅಂಕಣ ಗಳನ್ನು ಓದಿ, ಸಂಗ್ರಹಿಸಿ, ಅದರಲ್ಲಿನ ಮಾಹಿತಿ ಯನ್ನು ಟಿಪ್ಪಣಿ ಮಾಡಿಕೊಂಡು, ಐಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಲವರು ಸಿದ್ಧತೆ ನಡೆಸುತ್ತಿದರು ಎಂಬ ವಿಚಾರ ತಿಳಿದಾಗ, ಎಚ್ಚೆಸ್ಕೆ ಅವರ ಅಂಕಣಗಳ ಮಹತ್ವ ಅರಿವಾಗುತ್ತದೆ.

ಸದಭಿರುಚಿಯ ಸಾಹಿತ್ಯವನ್ನು ಸುಲಭವಾಗಿ ಜನರಿಗೆ ತಲುಪಿಸಲು ಅಂಕಣ ಬರಹಗಳು ಪ್ರಮುಖ ಮಾಧ್ಯಮ ಎಂಬ ವಿಚಾರವನ್ನು ಗುರುತಿಸಿ, ಅನುಸರಿಸಿದ ಹಲವು ಸಾಹಿತಿಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಪ್ರಮುಖರಾಗಿ ಕಾಣುತ್ತಾರೆ. ವಿಜ್ಞಾನ ಮತ್ತು ಇತರ ಗಂಭೀರ ವಿಷಯಗಳ
ಮಾಹಿತಿಯನ್ನು ಅಂಕಣ ಬರಹಗಳ ಮೂಲಕ ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಯಿತು ಎಂಬರ್ಥದ ಮಾತುಗಳನ್ನು ಅವರು ಹೇಳಿದ್ದಾರೆ. ಅಂಕಣ ಬರಹ ಬರೆಯುವಾಗಲೇ, ಹೆಚ್ಚು ಜನರು ಓದುವಂಥ ಸಾಹಿತ್ಯ ರಚನೆಯ ಮಾರ್ಗವು ತನಗೆ ರೂಢಿಯಾಯಿತು ಎಂದೂ ಹೇಳಿಕೊಂಡಿದ್ದಾರೆ. ‘ಈ ಅದ್ಭುತ ಜಗತ್ತು’ ಎಂಬ ಹೆಸರಿನ ಅಂಕಣದ ಮೂಲಕ, ಪ್ರತಿ ವಾರ ಅವರು ಬರೆಯುತ್ತಿದ್ದ ವಿಜ್ಞಾನ ಸಂಬಂಧಿ ಬರಹಗಳು, ಜ್ಞಾನದ ನಿಧಿ ಎನಿಸಿದ್ದವು; ಮಕ್ಕಳಿಗೂ, ದೊಡ್ಡವರಿಗೂ ಏಕಕಾಲದಲ್ಲಿ ಇಷ್ಟವಾಗುವ ಬರಹಗಳು ಅವು.

ವಿಜ್ಞಾನ, ಸಮಾಜಶಾಸ್ತ್ರ, ಪುರಾತತ್ವ ಮೊದಲಾದ ಹಲವು ಶಾಸಗಳ ಕುತೂಹಲಕಾರಿ ಮಾಹಿತಿಯನ್ನು ಆ ಅಂಕಣದ ಮೂಲಕ ಅವರು
ಪ್ರಸ್ತುತಪಡಿಸುತ್ತಿದ್ದ ರೀತಿಯೇ ಅನನ್ಯ, ವಿನೂತನ. ನಾಡಿನ ಹಳ್ಳಿ ಹಳ್ಳಿಗಳಲ್ಲಿದ್ದ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯಲು, ಅವರು ಹೊಸದೊಂದೇ ಶೈಲಿಯನ್ನು ಆ ಅಂಕಣದ ಮೂಲಕ ರೂಢಿಸಿಕೊಂಡರು. ಹಲವು ವರ್ಷಗಳ ಕಾಲ ಅವರು ಈ ರೀತಿಯ ಅಂಕಣ
ಬರಹಗಳನ್ನು ರಚಿಸಿ, ಆ ಮೂಲಕ ಜನರನ್ನು ತಲುಪಿದ ರೀತಿ ಒಂದು ಅದ್ಭುತ. ಅವರು ಅಂದು ರಚಿಸಿದ ಅಂಕಣಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಾಗ ಪಡೆದ ಜನಪ್ರಿಯತೆ ಅಪಾರ. ಅವರ ಅಂಥ ಅಂಕಣ ಬರಹಗಳು ಪುಸ್ತಕ ರೂಪದಲ್ಲಿ ಇಂದಿಗೂ ಜನರ ಗಮನ ಸೆಳೆಯುತ್ತಿದ್ದು, ಅವರು ರಚಿಸಿದ ವಿಜ್ಞಾನ ಸಂಬಂಧಿ ಪುಸ್ತಕಗಳು ಪದೇಪದೆ ಮರುಮುದ್ರಣಗೆಳ್ಳುತ್ತಿರುವುದು ವಿಶೇಷ. ಇದನ್ನು ಸಹ ಅಂಕಣ ಬರಹದ ಶಕ್ತಿ ಎಂದೇ ಗುರುತಿಸಬಹುದು.

ಪತ್ರಿಕೆಗಳ ಅಂಕಣಗಳ ಮೂಲಕ ಸುಲಭವಾಗಿ ಜನರನ್ನು ತಲುಪಲು ಸಾಧ್ಯ ಎಂಬುದು ಸ್ಪಷ್ಟ. ಇದನ್ನು ಗುರುತಿಸಿ, ಅಂಕಣ ಬರಹಗಳ ಮೂಲಕ
ಸಾಮಾಜಿಕ ಬದಲಾವಣೆ ಮಾಡಲು, ಶೋಷಣೆಯ ವಿರುದ್ಧ ಜನರನ್ನು ಬಡಿದೆಬ್ಬಿಸಲು ಪ್ರಯತ್ನಗಳು ನಡೆದಿವೆ. ರಾಜಕೀಯ ವಿಚಾರಗಳನ್ನು ಪ್ರಧಾನ ವಾಗಿಟ್ಟುಕೊಂಡು ಅಂಕಣ ಬರೆಯುವ ಮೂಲಕ, ಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನಗಳೂ ಕನ್ನಡದಲ್ಲಿ ನಡೆದಿವೆ. ಸಾಹಿತಿ ಲಂಕೇಶ್ ಅವರ ‘ಟೀಕೆ ಟಿಪ್ಪಣಿ’ ಅಂಕಣವು ಈ ನಿಟ್ಟಿನಲ್ಲಿ ಗಮನಾರ್ಹ.

ಗ್ರಾಮೀಣ ಸಮಾಜ, ರಾಜಕೀಯ, ಶುದ್ಧ ಸಾಹಿತ್ಯ, ಜನಪರ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮೊದಲಾದ ಹಲವು ವಿಷಯಗಳನ್ನು ಅವರು ತಮ್ಮ ಪ್ರತಿವಾರದ ‘ಟೀಕೆ ಟಿಪ್ಪಣಿ’ ಅಂಕಣ ದಲ್ಲಿ ಬರೆಯುತ್ತಿದ್ದರು; ಕೆಲವು ಬಾರಿ ತೀರಾ ವಿವಾದಾತ್ಮಕ ಎನಿಸುವ ವಿಚಾರಗಳನ್ನು ಬರೆದಿದ್ದೂ ಉಂಟು. ಆಗಿನ ದಿನಗಳಲ್ಲಿ ಅವರ ಅಂಕಣವು ನಮ್ಮ ರಾಜ್ಯದ ಹಲವು ಓದುಗರನ್ನು ತಲುಪಿದ್ದು, ಒಂದು ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ್ದು,
ಹಲವರ ಮೇಲೆ ಪ್ರಭಾವ ಬೀರಿದ್ದು ದಾಖಲಾಗಿದೆ.

ಲಂಕೇಶ್ ಅವರ ಬರಹವು ಸಹ ಸುಲಲಿತವಾಗಿ ಓದಿಸಿಕೊಂಡು ಹೋಗುವಂತಹದ್ದು; ರಾಜಕೀಯದ ಒಳಸುಳಿಗಳಂಥ ಗಂಭೀರ ವಿಷಯಗಳನ್ನು ಸಹ
ಜನರ ಮನಮುಟ್ಟಿಸುವಲ್ಲಿ ಅವರ ಅಂಕಣ ಯಶಸ್ವಿಯಾಗುತ್ತಿತ್ತು. ಕನ್ನಡದ ಇಂದಿನ ಪತ್ರಿಕೆಗಳನ್ನು ಗಮನಿಸಿದರೆ, ಅಂಕಣ ಬರಹವು ಸಾಕಷ್ಟು ಜನಪ್ರಿಯತೆ ಗಳಿಸಿದ್ದನ್ನು ಕಾಣಬಹುದು. ಸಂಪಾದಕೀಯ ಪುಟಗಳಲ್ಲಿ ಪ್ರತಿ ವಾರ ರಾಜಕೀಯ ಮತ್ತು ಇತರ ವಿದ್ಯಮಾನಗಳ ಕುರಿತು ಹಲವು ಅಂಕಣಗಳು ಪ್ರಕಟಗೊಳ್ಳುತ್ತಿವೆ.

ಕೆಲವು ಪತ್ರಿಕೆಗಳು ಅಂಕಣಗಳಿಗೆ ಸಾಕಷ್ಟು ಪ್ರಾಮುಖ್ಯ ನೀಡಿವೆ, ಆದರೆ ಇನ್ನು ಕೆಲವು ಪತ್ರಿಕೆಗಳು, ನಿರ್ದಿಷ್ಟ ಲೇಖಕರು ಬರೆದ, ವಿಚಾರಪೂರ್ಣ
ಲೇಖನಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದರೂ, ಅದಕ್ಕೆ ‘ಅಂಕಣ’ ಎಂಬ ಹೆಸರನ್ನು ನೀಡದೇ ಇರುವುದನ್ನೂ ಗಮನಿಸಬಹುದು. ಇಂದಿನ ಬಹುಪಾಲು ಪತ್ರಿಕೆಗಳಲ್ಲಿ, ಸುದ್ದಿ ವಿಶ್ಲೇಷಣೆಯ ನಂತರ, ಅಂಕಣ ಬರಹಗಳು ಪ್ರಮುಖ ಓದಿನ ಸರಕಾಗಿ ಗುರುತಿಸಿಕೊಂಡಿದ್ದನ್ನಂತೂ ಅಲ್ಲಗಳೆಯವಂತಿಲ್ಲ.

ಇದರ ಜತೆಗೆ ವಿವಿಧ ಬ್ಲಾಗ್‌ಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಹಲವು ಅಂಕಣಕಾರರು ನಿರಂತರವಾಗಿ ಬರೆಯುತ್ತಲೇ ಇದ್ದಾರೆ. ಕೆಂಡ ಸಂಪಿಗೆ, ಅವಧಿಯಂಥ ಪ್ರಮುಖ ಅಂತರ್ಜಾಲ ಪತ್ರಿಕೆಗಳಲ್ಲಿ ನಿಗದಿತ ಅವಧಿಯಲ್ಲಿ ಪ್ರಕಟಗೊಳ್ಳುವ ಅಂಕಣಗಳು ಪ್ರಮುಖವೂ ಎನಿಸುತ್ತಿವೆ, ಅವುಗಳಿಗೆ ಸಾಕಷ್ಟು ಓದುಗರೂ ಇದ್ದಾರೆ. ಸಾಹಿತ್ಯಕ್ಕೆ ಮಾತ್ರ ಮೀಸಲಾದ ಅಂಕಣಗಳು ಒಂದೆಡೆಯಾದರೆ, ವಿಜ್ಞಾನ, ಸಂಸ್ಕೃತಿ, ಆಹಾರ, ಲೈಫ್ ಸ್ಟೈಲ್ ಮೊದಲಾದ ವಿಷಯಗಳ ಕುರಿತು ಸಹ ಅಂಕಣಗಳು ಪ್ರಕಟವಾಗುತ್ತಿವೆ. ಕೆಲವು ಬರಹಗಾರರು ತಮ್ಮ ವೈಯಕ್ತಿಕ ಅನುಭವಗಳನ್ನೇ ಪ್ರತಿವಾರ ಅಂಕಣಗಳ ರೂಪದಲ್ಲಿ ಬರೆಯುವುದನ್ನು ನೋಡಿದಾಗ, ಈ ಸಾಹಿತ್ಯ ಪ್ರಕಾರವು ಹೊಸ ಹೊಸ ಸಾಹಿತಿಗಳನ್ನು ರೂಪಿಸುವಲ್ಲೂ ಪ್ರಮುಖ ಪಾತ್ರ
ವಹಿಸುತ್ತಿದೆ ಎನ್ನಬಹುದು.

ಅಂಕಣಗಳಿಗೆ ಓದುಗರೇ ಸ್ಪೂರ್ತಿ. ಓದುಗರ ಅಭಿರುಚಿ, ಇಷ್ಟಗಳಿಗನುಗುಣವಾಗಿ ಅಂಕಣ ಬರಹಗಳು ರೂಪುಗೊಳ್ಳುತ್ತವೆ ಎಂದೂ ಹೇಳುವುದುಂಟು. ಅಂಕಣ ಸಾಹಿತ್ಯದ ಕುರಿತು ಬರೆಯುವಾಗ, ಈ ಪ್ರಕಾರವು ನನಗಿಷ್ಟವಾದ ಬರಹ ಪ್ರಕಾರ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ನಿಯತವಾಗಿ ಅಂಕಣ ಬರೆಯಲು ಆರಂಭಿಸಿದ್ದು ೨೦೦೧ರಲ್ಲಿ. ಈಗ, ‘ಶಶಾಂಕಣ’ದ ಮೂಲಕ ನಿಮ್ಮೆಲ್ಲರನ್ನೂ ಹೆಚ್ಚು ಪರಿಣಾಮಕಾರಿಯಾಗಿ, ಸುಲಭವಾಗಿ ತಲುಪಲು ಸಾಧ್ಯವಾಗಿರುವುದು ನಿಜಕ್ಕೂ ಸಂತಸದ ವಿಷಯ. ಈ ಅಂಕಣಗಳನ್ನು ಓದಿದವರು ಮೆಚ್ಚುಗೆ ಸೂಚಿಸುವ ಮೂಲಕ, ಇನ್ನಷ್ಟು ಅಂಕಣಗಳನ್ನು ಬರೆಯಲು ಸ್ಪೂರ್ತಿ ತುಂಬಿದ್ದು ನಿಜ.

‘ಶಶಾಂಕಣ’ ದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿರುವ ‘ಉರುಳಿದ ಕಟ್ಟಡ ಮರಳಿದ ನೆನಪು’ ಪುಸ್ತಕವು (೨೦೨೨) ಶಿವಮೊಗ್ಗದ ಕರ್ನಾಟಕ ಸಂಘ ನೀಡುವ ‘ಹಾ.ಮಾ. ನಾಯಕ ಅಂಕಣ ಬರಹ ಪ್ರಶಸ್ತಿ’ಗೆ ಭಾಜನವಾಗಿರುವ ಹಿನ್ನೆಲೆಯಲ್ಲಿ, ಅಂಕಣ ಬರಹಗಳ ಕುರಿತು ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆನಿಸಿತು. ಈ ಪ್ರಶಸ್ತಿಯು ಈ ಅಂಕಣದ ಓದುಗರಿಗೆ ಪ್ರೀತಿಯಿಂದ ಅರ್ಪಿತ.