ನವದೆಹಲಿ: ಮಥುರಾದಲ್ಲಿ ನಡೆಯುತ್ತಿರುವ ಬ್ರಜ್ ರಾಜ್ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
ಮೀರಾ ಬಾಯಿ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ಬ್ರಜ್ ರಾಜ್ ಉತ್ಸವ ನ.27ರಂದು ಮುಕ್ತಾಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಮಥುರಾ ಕ್ಷೇತ್ರದ ಸಂಸದೆ ಹೇಮ ಮಾಲಿನಿ ಅವರು ಮೀರಾ ಬಾಯಿ ಜೀವನಾಧಾರಿತ ನೃತ್ಯ ಪ್ರದರ್ಶನ ನಡೆಸಿ ಕೊಡುವರು. ಒಂದೂವರೆ ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮವನ್ನು ನರೇಂದ್ರ ಮೋದಿ ವೀಕ್ಷಿಸಲಿದ್ದಾರೆ.
ನ.23ರಂದು ಮೋದಿ ಭೇಟಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಮಥುರಾಕ್ಕೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿಎಂ, ವೃಂದಾವನದ ಬೆಂಕೆ ಬಿಹಾರಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೃಷ್ಣನಿಗಾಗಿ ತನ್ನ ಜೀವನವನ್ನೇ ಸಮರ್ಪಿಸಿದ ಮೀರಾ ಬಾಯಿ 525ನೇ ಜನ್ಮೋತ್ಸವ ವರ್ಷದ ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗಿದೆ. ಶರದ್ ಪೂರ್ಣಿಮೆಯಂದು (ಅಕ್ಟೋಬರ್ 28) ಸಂತ ಮೀರಾಬಾಯಿ ಜನ್ಮದಿನ ಎಂದು ಘೋಷಿಸಲಾಗಿದೆ. ಪ್ರಧಾನಿ ಮೋದಿ ಮೀರಾ ಬಾಯಿ ಸ್ಟಾಂಪ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಹೇಮ ಮಾಲಿನಿ ನೃತ್ಯ ಪ್ರದರ್ಶನದ ಜೊತೆಗೆ ಹೇಮ ಮಾಲಿನಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಮೀರಾ’ ಚಿತ್ರದ ಪ್ರದರ್ಶನ ಕೂಡ ಪ್ರಸಾರವಾಗ ಲಿದೆ.
1498ರ ವೈಷ್ಣವ ಭಕ್ತಿ ಚಳವಳಿಯ ಸಂದರ್ಭದ ಮಹಾನ್ ಸಂತರಲ್ಲಿ ಮೀರಾ ಬಾಯಿ ಕೂಡ ಒಬ್ಬರು. ರಾಜಪೂತ ಸಮುದಾಯದ ರಾಣಿಯಾಗಿದ್ದ ಈಕೆ ತಮ್ಮ ಜೀವನವನ್ನು ಕೃಷ್ಣನಿಗೆ ಮುಡಿಪಾಗಿರಿಸಿದರು