ತಿಪಟೂರು: ತಾಲೂಕು ಆಡಳಿತ ಕಚೇರಿಯ ಮುಂದೆ ತಿಪಟೂರು ತಾಲೂಕು ಕಾಡುಗೊಲ್ಲರ ಸಂಘದ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಎಚ್ ರಸ್ತೆಯಲ್ಲಿ ಕಾಲ್ನಡಿಗೆ ಜಾತದ ಮೂಲಕ ಆಗಮಿಸಿ ತಾಲೂಕು ಕಾಡುಗೊಲ್ಲ ಸಮುದಾಯವು ತಾಲೂಕು ಆಡಳಿತ ಕಚೇರಿಯ ಮುಂಭಾಗ ಕಾಡುಗೊಲ್ಲರನ್ನು ಎಸ್ ಟಿ ಗೆ ಸೇರಿಸುವಂತೆ ಒತ್ತಾಯಿಸಿ ಒಂದು ದಿನಗಳ ಕಾಲ ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ಇತ್ತೀಚಿನ ದಿನಗಳಲ್ಲಿ ವಿನಾಕಾರಣ ಇಲ್ಲದ ಸಲ್ಲದ ಸಬೂಬುಗಳನ್ನು ಹೇಳಿಕೊಂಡು ತಾಲೂಕು ದಂಡಾಧಿಕಾರಿಯು ಕಾಡುಗೊಲ್ಲರನ್ನು ಕಡೆಗಣಿಸು ತ್ತಿದ್ದು,ಕಾಡುಗೊಲ್ಲರು ದನ ಕುರಿಗಳನ್ನು ಮೇಯಿಸಿಕೊಂಡು ಪ್ರತಿದಿನ ಜೀವನ ನಡೆಸಬೇಕು ಅವರ ಸ್ಥಿತಿ ಬಹಳಷ್ಟು ಶೋಚನೀಯ ಸ್ಥಿತಿಯಲ್ಲಿದೆ.ಪಶು ಸಂಗೋಪನೆಯೇ ಕಾಡುಗೊಲ್ಲರ ಪ್ರಮುಖ ಉದ್ಯೋಗವಾಗಿದ್ದು,ಇತ್ತೀಚಿನ ದಿನಗಳಲ್ಲಿ ಸರಕಾರದ ಅಧಿಕಾರಿಗಳು ಸರಕಾರದ ಹುಲ್ಲುಗಾವಲುಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಮನಸೋ ಇಚ್ಛೆ ಪರಬಾರೆ ಮಾಡುತ್ತಿದ್ದಾರೆ.
ಪಶು ಸಂಗೋಪನೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಕಾಡುಗೊಲ್ಲರ ಸಾಕುಪ್ರಾಣಿಗಳಿಗೆ ಮೇವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಕಾಡುಗೊಲ್ಲ ಸಮುದಾಯವು ಸಮಾಜಕ್ಕೆ ತನ್ನದೇ ಆದಂತಹ ಬಹಳಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದೆ,ಇಂತಹ ಸಮುದಾಯವನ್ನು ವಿನಾಕಾರಣ ಅಧಿಕಾರಿಗಳು ಕಚೇರಿಗೆ ಅಲೆಸಿ ನಮ್ಮ ಯಾವುದೇ ಕಷ್ಟ ಹಾಗೂ ಸಮಸ್ಯೆಗೆ ಸ್ಪಂದಿಸದೆ ನಮ್ಮ ಮನಸ್ಸಿಗೆ ಬಹಳಷ್ಟು ನೋವನ್ನು ಉಂಟುಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ,ಜಿಲ್ಲಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ತಾಲೂಕು ಆಡಳಿತ ವ್ಯವಸ್ಥೆಯ ವಿರುದ್ಧ ಹರಿಹಾಯ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಿವೃತ್ತ ಎಸಿಪಿ ಲೋಕೇಶ್ವರ್ ಎಲ್ಲಾ ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು ಎಲ್ಲಾ ವರ್ಗದವರಿಗೆ ಸಿಗುವಂತಹ ಮೂಲಭೂತ ಸೌಕರ್ಯಗಳು ಈ ಶೋಷಿತ ಸಮುದಾಯವಾದ ಕಾಡುಗೊಲ್ಲರಿಗೆ ದೊರಕುವಂತಾಗಬೇಕು, ಎಂತಹ ಸಂದರ್ಭದಲ್ಲಿ ಕೂಡ ಈ ಕಾಡುಗೊಲ್ಲರ ಸಮುದಾಯದ ಏಳಿಗೆಗಾಗಿ ನಾನು ಸ್ಪಂದಿಸಲು ಸಿದ್ಧ ಎಂದು ಮಾತನಾಡಿದರು. ಪ್ರತಿಭಟನೆಯಲ್ಲಿ ಶಂಕರಪ್ಪ ಕೊಟ್ಟಿಗೆಹಳ್ಳಿ,ಬಾಲರಾಜು, ಸುಧೀಂದ್ರ,ಮಂಜುನಾಥ್ ಹಾಗೂ ತಾಲೂಕಿನ ಕಾಡುಗೊಲ್ಲ ಸಮುದಾಯದ ಮುಖಂಡರುಗಳು ಭಾಗಿಯಾಗಿದ್ದರು