Thursday, 26th December 2024

ಆತ್ಮವಿಶ್ವಾಸವನ್ನು ಮೂಡಿಸುವುದೇ ಶಿಕ್ಷಣ: ಡಾ.ಗುರುರಾಜ ಕರ್ಜಗಿ

ತುಮಕೂರು: ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟೀವ್ ಟೀಚಿಂಗ್ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮಪಾಲನ ಘಟಕ ಮತ್ತು ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ಘಟಕಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ‘ಅನಿಕೇತನ’ ಮತ್ತು ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ಸಮಸ್ಯೆ, ಕಷ್ಟದ ಪರಿಸ್ಥಿತಿ ಬಂದರೂ ಕೂಡ ನಮ್ಮೊಳಗೆ ಬೆಳಗುತ್ತಿರುವ ಆತ್ಮವಿಶ್ವಾಸ ಎಂದಿಗೂ ಕುಂದಬಾರದು. ಕಷ್ಟಗಳನ್ನು ಎದುರಿ ಸುವ, ಸಕಾರಾತ್ಮಕವಾಗಿ ಬದುಕನ್ನು ಸ್ವೀಕರಿಸುವ ಆಶಾವಾದಿಗಳಾಗಬೇಕು. ಅಂತಹ ಶಿಕ್ಷಣದ ಅವಶ್ಯಕತೆ ಇದೆ. ತಲೆಗೆ ತುಂಬುವ ಬದಲು ಹೃದಯದ ಆಳಕ್ಕೆ ಮುಟ್ಟುವ ಶಿಕ್ಷಣ, ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಜ್ಞಾನಪ್ರಧಾನವಾದ ಸಮಾಜವನ್ನು ಶಿಕ್ಷಕರು ಕಟ್ಟಬೇಕು. ಆಗ ನಕಾರಾತ್ಮಕತೆಗೆ ಅವಕಾಶವಿರುವುದಿಲ್ಲ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ, ದೇಶವನ್ನು ಮುಂದುವರೆಸಿಕೊ0ಡು ಹೋಗುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಭವಿಷ್ಯ ಭಾರತವೇ ನೀವುಗಳು. ಮಹಾನ್ ಚೇತನರ ಭವಿಷ್ಯಗಳನ್ನು ಸುಂದರವಾಗಿ ರೂಪಿ ಸಿದ ಉಪಾಧ್ಯಾಯರು ಎಂದಿಗೂ ಜೀವಂತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ವಿದ್ಯಾರ್ಥಿಗಳ ಸಲುವಾಗಿ ‘ಅನಿಕೇತನ’ ಆಯೋಜಿಸಿದ್ದೇವೆ. ಹೊಸದಾಗಿ ನಮ್ಮ ವಿವಿಗೆ ಹೆಜ್ಜೆ ಇಟ್ಟಿರುವ ಭವಿಷ್ಯಗಳನ್ನು ಉಜ್ವಲವಾಗಿಸಲು ಇಂತಹ ಮಹನೀಯರ ಮಾತುಗಳ ಅವಶ್ಯಕತೆ ಇದೆ. ಶಿಕ್ಷಕರು ಪ್ರತಿ ಪಾದಿಸುವ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುತ್ತಾರೆ. ಶಿಕ್ಷಕರÀ ಬದುಕು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ರತ್ನಕಲಾ ಮಾತನಾಡಿ, ಕೀರ್ತಿಗಾಗಿ ಬದುಕುವ ಬದಲು ಸಮಾಜಕ್ಕೆ ಸೇವೆ ಸಲ್ಲಿಸಿ. ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಮೌಲ್ಯ ಬರುವುದು ಎಂದರು.
ವಿವಿಯ ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಡಾ. ಪ್ರಸನ್ನ ಕುಮಾರ್ ಕೆ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇ ಶಕ ಪ್ರೊ. ಬಸವರಾಜ ಜಿ., ಐ.ಕ್ಯೂ.ಎ.ಸಿ. ಘಟಕದ ನಿರ್ದೇಶಕ ಪ್ರೊ. ರಮೇಶ್ ಬಿ., ಪಿ.ಎಂ.ಇ.ಬಿ. ಘಟಕದ ನಿರ್ದೇಶಕ ಪ್ರೊ. ಬಿ. ಟಿ. ಸಂಪತ್ ಕುಮಾರ್, ವಿವಿ ಉದ್ಯೋಗಾಧಿಕಾರಿ ಡಾ. ಪರಶುರಾಮ ಕೆ. ಜಿ. ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು.