ಭಾರತದ ಆಧುನಿಕ ಶಿಕ್ಷಣವು ನಮ್ಮ ಸಂಪ್ರದಾಯ, ಪರಂಪರೆಗಳಿಂದ ಬಹು ದೂರ ಸರಿದಿದೆ ಎಂಬ ಆರೋಪಗಳ ನಡುವೆಯೇ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಇತಿಹಾಸದ ಪಠ್ಯಕ್ರಮ ಭಾಗವಾಗಿ ಶಾಲೆಗಳಲ್ಲಿ ಕಲಿಸಬೇಕು ಮತ್ತು ಸಂವಿಧಾನದ ಪೀಠಿಕೆಯನ್ನು ಎಲ್ಲ ತರಗತಿಗಳ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಬರೆಯುವಂತೆ ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಸಮಿತಿಯು ಶಿಫಾರಸು ಮಾಡಿದ್ದು ಸ್ವಾಗತಾರ್ಹ.
ಭಾರತದ ಪರಂಪರೆ, ಸಂಪ್ರದಾಯ, ಕಾವ್ಯ, ತತ್ವಶಾಸ್ತ್ರ, ಮೌಲ್ಯಗಳಿಂದ ನಮ್ಮ ಮಕ್ಕಳು ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಎನ್‌ಸಿಇಆರ್‌ಟಿಯ ನಿರ್ಧಾರ ಮಹತ್ವದ ಪಾತ್ರ ವಹಿಸುತ್ತದೆ. ಈವರೆಗೂ ನಾವು ಕಲಿತ ಇತಿಹಾಸದಲ್ಲಿ ಕೆಲವೇ ಕೆಲವು ರಾಜಮನೆತನಗಳ ಇತಿಹಾಸವನ್ನು ಓದಿದ್ದೇವೆ. ಆದರೆ ಅದಕ್ಕೂ ಮುನ್ನ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಇದ್ದ ಮಹಾಭಾರತ ಕಾಲದ ಸಂಸ್ಕೃತಿ, ನಮ್ಮ ಚಿಂತನೆ ಎಷ್ಟು ಸಮಗ್ರವಾಗಿ, ಮೌಲ್ಯಯುತವಾಗಿತ್ತು ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕಿದೆ. ಇನ್ನು ಸಂವಿಧಾನ ಜಾರಿಗೆ ಬಂದು ೭೩ ವರ್ಷಗಳಾದರೂ ಸಂವಿಧಾನದ ಓದು ಸರಿಯಾಗಿ ಆಗಿಲ್ಲ.
ಇವತ್ತು ಕೂಡ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಸಂವಿಧಾನದ ಜ್ಞಾನ ಕಡಿಮೆ ಇದೆ. ದೇಶದ ಧರ್ಮ, ಸಂಸ್ಕೃತಿ, ಜಾತಿ, ಅಸಮಾನತೆ, ಮೌಲ್ಯ, ಭಾಷೆ, ವರ್ತಮಾನ ಸಮಸ್ಯೆ ಇವೆಲ್ಲವನ್ನೂ ಇಂದಿನ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಸಂವಿಧಾನ ಓದು ಕೂಡ ಅಷ್ಟೇ ಮುಖ್ಯವಾಗುತ್ತದೆ. ವಿಶ್ವಮಾನ್ಯತೆ ಪಡೆದ ಭಾರತದ ಸಂವಿಧಾನವು ಸಮಾನತೆ ಸಾಕಾರಗೊಳಿಸುವ ಒಂದು ಅದ್ಭುತ ಕಲ್ಪನೆ.
ಡಾ.ಬಿ.ಆರ್.ಅಂಬೇಡ್ಕರ್ ಕನಸಿನ ಭಾರತವನ್ನು ನನಸು ಮಾಡುವ ನೆಲೆಯಲ್ಲಿ ಸಂವಿಧಾನ ಆಶಯಗಳು ಸಶಕ್ತವಾಗಿವೆ. ಈ ಆಶಯವನ್ನು ವಿದ್ಯಾರ್ಥಿ ಗಳಿಗೆ ತಲುಪಿಸುವ ನಿಟ್ಟಿನಲ್ಲಿ ತರಗತಿಗಳ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಬರೆಯಲು ಮುಂದಾಗಿರುವುದು ಅಭಿನಂದನಾರ್ಹ. ವೃತ್ತಿಪರತೆ, ಆಧುನಿಕತೆಗೇ ಹೆಚ್ಚು ಒತ್ತು ನೀಡುತ್ತಿರುವ ಇಂದಿನ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿತ್ತು. ಇಂತಹ ಹೊತ್ತಿನಲ್ಲಿ ಪಠ್ಯದಲ್ಲಿ ಬದಲಾವಣೆಗೆ ಮುಂದಾಗಿರುವುದು ಉತ್ತಮ ಕ್ರಮ.