Friday, 20th September 2024

ಶಾಲೆ-ಕಾಲೇಜುಗಳನ್ನು ಈ ಕ್ರಮದಲ್ಲಿ ಆರಂಭಿಸಬಹುದು

ದಾಸ್ ಕ್ಯಾಪಿಟಲ್

ಟಿ.ದೇವದಾಸ್‌, ಬರಹಗಾರ, ಶಿಕ್ಷಕ

ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸುವ ಬಗ್ಗೆ ತಿಂಗಳುಗಳ ಹಿಂದೆಯೇ ಗಂಭೀರವಾದ ಚರ್ಚೆ ನಡೆಯುತ್ತಲೇ ಇದೆ. ಶಾಲೆ
ಯನ್ನು ಆರಂಭಿಸುವುದರ ಬಗ್ಗೆೆ ಪೋಷಕರ ಸಹಮತವಿಲ್ಲವೆಂಬುದು ಮಾಧ್ಯಮ ಮತ್ತು, ಸೋಷಿಯಲ್ ಮೀಡಿಯಾಗಳಲ್ಲಿ ಕಾಣುತ್ತಲೇ ಇದೆ. ಇದು ಮೂರು ಬಗೆಯಲ್ಲಿ ಕಾಣಿಸುತ್ತಿವೆ: ಶಾಲೆ ಕಾಲೇಜುಗಳನ್ನು ಆರಂಭಿಸಬೇಡಿ ಎನ್ನುವವರದು, ಫೀಸು ಉಳಿಯಿತೆಂಬ ಲೆಕ್ಕಾಚಾರ!

ಮಕ್ಕಳನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ, ಆರಂಭಿಸಿ ಬಿಡಿ ಎನ್ನುವವರದು ಮಕ್ಕಳನ್ನು ಮನೆಯಿಂದ ಸಾಗುಹಾಕುವ ಲೆಕ್ಕಾಚಾರ! ಒಂದು ವರ್ಷ ಶಾಲೆ-ಕಾಲೇಜುಗಳನ್ನು ಬಂದ್ ಮಾಡಿದರೆ ಆಕಾಶವೇನೂ ಹರಿದು ಬೀಳುವುದಿಲ್ಲ, ಈ ವರ್ಷವನ್ನು ಶೂನ್ಯ ವರ್ಷ ಘೋಷಿಸಿಬಿಡಿ ಎನ್ನುವವರದು ಮಕ್ಕಳ ಭವಿಷ್ಯ ಬದುಕಿನ ಲೆಕ್ಕಾಚಾರ! ಪೋಷಕರ ಅಭಿಪ್ರಾಯದ ಈ ಮೂರೂ ಲೆಕ್ಕಾಚಾರಗಳೂ ಸದ್ಯದ ಮಟ್ಟಿಗೆ ಸತ್ಯವೇ ಆಗಿದೆ. ಆದರೆ, ಶಾಲೆಗೆ ಹೋಗದೆ, ಮಕ್ಕಳು ಏನನ್ನೂ ಕಲಿಯದೆ ಮುಂದಿನ ತರಗತಿಗೆ ದೂಡಿ ಬಿಡಿ ಎನ್ನುವವರದು ಕೇವಲ ವಿತಂಡವಾದದ ಲೆಕ್ಕಾಚಾರ!

ನೀವು ಶಾಲೆ ತೆರೆದರೂ ನಾವು ಮಕ್ಕಳನ್ನು ಕಳಿಸುವುದಿಲ್ಲ ಎನ್ನುವವರದು ಅತಿರೇಕದ ಲೆಕ್ಕಾಚಾರ! ಈ ಲೆಕ್ಕಾಚಾರಕ್ಕೆ ಉತ್ತರ ವನ್ನು ಅವರವರೇ ಕಂಡುಕೊಳ್ಳಬೇಕು! ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಈ ಮಧ್ಯೆ ಶಾಲೆ ಕಾಲೇಜುಗಳನ್ನು ಪಾಳಿಯ ಪ್ರಕಾರದಲ್ಲಿ ಆರಂಭಿಸುವುದರ ಬಗ್ಗೆ ಸರ್ಕಾರ ಚಿಂತನೆಯನ್ನು ನಡೆಸುತ್ತಿದೆಯೆಂದು ಮಾಧ್ಯಮಗಳಲ್ಲಿ ಹಿಂದೆಯೂ ಪ್ರಕಟ ವಾಗಿತ್ತು, ಈಗಲೂ ಆಗಿದೆ. ಇದಕ್ಕೆ ಪೂರಕವಾಗಿ ಅಭಿಪ್ರಾಯವನ್ನು ಬಹಿರಂಗವಾಗಿ ಬಯಸಿದೆ. ಶಾಲೆ, ಸಮುದಾಯ ಹಾಗೂ ಸರ್ಕಾರ- ಈ ಮೂರೂ ಒಂದು ಸಹಮತದ ನಿರ್ಧಾರಕ್ಕೆ ಬಂದು ಶಾಲೆ ಕಾಲೇಜನ್ನು ಆರಂಭಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ. ಇಂಥ ನಿಲುವಿನಲ್ಲೇ ಭಾಗಿತ್ವದ ಪ್ರಜಾಪ್ರಭುತ್ವವು ಗಟ್ಟಿಯಾಗುವುದು. ಅಕ್ಟೋಬರ್ 15ರಿಂದ ಶಾಲೆ ಕಾಲೇಜಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳ ವಿವೇಚನೆಗೆ ಬಿಟ್ಟಿದೆಯೆಂದು ಎಲ್ಲರಿಗೂ ಗೊತ್ತಿರುವ ವಿಚಾರ.

ಮಾನ್ಯ ವಿದ್ಯಾಮಂತ್ರಿಗಳು ಸದ್ಯಕ್ಕೆ ಶಾಲೆಯನ್ನು ತೆರೆಯುವ ಚಿಂತನೆಯೇನೂ ಸರಕಾರದ ಮುಂದೆ ಇಲ್ಲವೆಂಬ ಹೇಳಿಕೆಯನ್ನು ನೀಡಿದ್ದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಅಭಿಪ್ರಾಯ ರೂಪದ ಸಲಹೆಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸು ತ್ತೇನೆ: 1) 9-12ನೆಯ ವರೆಗಿನ ತರಗತಿಗಳನ್ನು ನವೆಂಬರ್ 9 ರಿಂದ ಆರಂಭಿಸುವುದು.
2) ವಿದ್ಯಾರ್ಥಿಗಳ ಸಂಖ್ಯೆೆಯನ್ನು ಆಧರಿಸಿ 25 ವಿದ್ಯಾರ್ಥಿಗಳ ಬ್ಯಾಚ್ ಗಳನ್ನು ಮಾಡಿ ತರಗತಿಯ ಬೋಧನೆಯನ್ನು ಮಾಡು ವುದು.
3) ನಿರಂತರವಾಗಿ (ಭಾನುವಾರವನ್ನು ಹೊರತುಪಡಿಸಿ) ಶಾಲೆಗಳನ್ನು ಏಪ್ರಿಲ್ 10ರವರೆಗೆ ನಡೆಸುವುದು.
4) ಅಂದಾಗ 133 ದಿನಗಳು ಬೋಧನೆಗೆ ಲಭ್ಯವಾಗುತ್ತದೆ. 123 ದಿನಗಳಿಗೆ ಪ್ರತಿ ವಿಷಯಕ್ಕೆ ಸಿಗಬಹುದಾದ ಪಿರಿಯೆಡ್ಡುಗಳನ್ನು ಲೆಕ್ಕ ಹಾಕಿ ಸಿಲೆಬಸ್ಸನ್ನು ಹಂಚಿಕೆ ಮಾಡುವುದು. ಉಳಿದ 10 ದಿನಗಳನ್ನು ಪುನರಾವರ್ತನೆಗೆ ನೀಡುವುದು. ಆ ಸಂದರ್ಭದಲ್ಲಿ ಹತ್ತನೆಯ ಮತ್ತು ಸೆಕೆಂಡ್ ಪಿಯು ತರಗತಿಗಳನ್ನು ಮಾತ್ರ ನಡೆಸುವುದು.

5) ತರಗತಿ ಬೋಧನೆಯ ಜೊತೆಯಲ್ಲಿ ಸಾಧ್ಯವಾದರೆ ಆಫ್ ಲೈನ್ ಟೀಚಿಂಗ್ (ಆನ್ ಲೈನ್ ಬೇಡವೇ ಬೇಡ) ಅನ್ನು ಮುಂದು ವರೆಸುವುದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾತ್ರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ವಿಷಯಗಳಿಗೆ ಹೆಚ್ಚಿನ ತರಗತಿಯನ್ನು ಭಾನುವಾರವೂ ನಡೆಸುವುದು. ಅಗತ್ಯವಿದ್ದರೆ ಉಳಿದ ವಿಷಯಗಳಿಗೂ ಕೂಡ.

6) ಸಿಲೆಬಸ್ಸನ್ನು ತೀರ ಎಂಬಷ್ಟು ಕಡಿತ ಮಾಡದೇ (ವಿಷಯ ಜ್ಞಾನ ತಪ್ಪಬಾರದೆಂಬ ಕಾರಣಕ್ಕೆ) ಅಭ್ಯಾಸ ಪ್ರಶ್ನೆಗಳನ್ನು ಕಡಿಮೆ ಮಾಡಿ ನೇರ ಪ್ರಶ್ನೆಗಳನ್ನೇ ಪರೀಕ್ಷೆಯಲ್ಲಿ ಕೇಳುವುದು. ಇದಕ್ಕೆ ಪೂರಕವಾಗಿ ಪ್ರಶ್ನೆಪತ್ರಿಕೆಯ ಎರಡು ಬ್ಲೂ ಪ್ರಿಂಟ್ ಅನ್ನು ಬೋರ್ಡಿನವರೇ ನೀಡುವುದು. ಇದನ್ನಾಧರಿಸಿಯೇ ಪ್ರಶ್ನೆಪತ್ರಿಕೆಗಳನ್ನು ರಚಿಸುವುದು.

7) ಬ್ಲೂಪ್ರಿಂಟ್ ಅನುಸಾರ ಏಪ್ರಿಲ್ 25ಕ್ಕೆ ಒಂದು ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸುವುದು.

8) ಮೇ 10ಕ್ಕೆ ವಾರ್ಷಿಕ ಪರೀಕ್ಷೆಯನ್ನು ಮಾಡಿ ಜೂನ್ 10ಕ್ಕೆ ಫಲಿತಾಂಶವನ್ನು ಪ್ರಕಟಿಸುವುದು. ಹಾಗೂ ಮುಂದಿನ ಶೈಕ್ಷಣಿಕ ವರ್ಷವನ್ನು ಜೂನ್ ಒಂದರಿಂದಲೇ ಆರಂಭವಾಗುವಂತೆ ಪ್ರವೇಶಾತಿ ನಿಯಮವನ್ನು ರೂಪಿಸುವುದು.
9) ಭಾಷೆ ಮತ್ತು ಕೋರ್ ವಿಷಯಗಳನ್ನು ಮಾತ್ರ ಬೋಧಿಸುವುದು. ಅಂದರೆ ದಿನಕ್ಕೆ 40 ನಿಮಿಷಗಳ ಆರು ಪಿರಿಯೆಡ್ಡುಗಳನ್ನು ಮತ್ತು ಎರಡು ದಿನ ಮಾತ್ರ ನಾಲ್ಕೇ ವಿಷಯಗಳನ್ನು ಅಳವಡಿಸುವುದು.

10) ತೃತೀಯ ಮತ್ತು ದ್ವಿತೀಯ ಭಾಷೆಗಳನ್ನು ವಾರಕ್ಕೆ 4 ಪಿರಿಯೆಡ್ಡುಗಳು ಮಾತ್ರ ಬೋಧಿಸುವುದು. ಕಡಿಮೆ ಪಿರಿಯೆಡ್ಡುಗಳನ್ನು ಹೊಂದುವ ಈ ವಿಷಯ ಶಿಕ್ಷಕರು ಮುಖ್ಯಾಧ್ಯಾಪಕರ ಸಲಹೆಯಂತೆ ಉಳಿದ ಕರ್ತವ್ಯಗಳನ್ನು ನಿರ್ವಹಿಸುವುದು ಅನಿವಾರ್ಯ ವಾಗುತ್ತದೆ.
11) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ವಿಷಯಗಳಿಗೆ ಹೆಚ್ಚಿನ ಪಿರಿಯೆಡ್ಡುಗಳನ್ನು ನೀಡುವುದು.

12) ಲೈಬ್ರರಿ, ಲ್ಯಾಬ್, ಕಂಪ್ಯೂಟರ್, ದೈಹಿಕ ಶಿಕ್ಷಕರಿಗೆ ಮಕ್ಕಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ನೀಡುವುದು. ಮುಖ್ಯ ವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಸ್ಯಾನಿಟೈಸ್ ಬಳಕೆ, ನೈರ್ಮಲ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು. ಪಾಲಿಸುವಂತೆ ಮಾಡುವುದು.

ಪೋಷಕರೊಂದಿಗೆ ಸಂಪರ್ಕದಲ್ಲಿದ್ದು ಮಕ್ಕಳ ಆರೋಗ್ಯದ ಕಾಳಜಿ ವಹಿಸುವುದು. ಶಾಲೆಯಲ್ಲಿ ಮಕ್ಕಳ ದೇಖರಿಕೆಯನ್ನು
ಇವರುಗಳು ನೋಡಿಕೊಳ್ಳುವುದು.

13) ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳನ್ನು ಏಳು ದಿನಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ alternative ಆಗಿ ನಡೆಸುವುದು.
14) ಜನೆವರಿಯಲ್ಲಿ 6-8ನೆಯ ತರಗತಿಯನ್ನು ಆರಂಭಿಸುವುದು. 77 (ಮಾರ್ಚ್ 31ವರೆಗೆ) ದಿನಗಳಲ್ಲಿ ಸಿಗಬಹುದಾದ ಪಿರಿಯೆಡ್ಡು ಗಳಲ್ಲಿ ಬೋಧಿಸಲು ಹೊಂದಿಕೆಯಾಗುವಷ್ಟು ಸಿಲೆಬಸ್ಸನ್ನು ರಚಿಸಿ ತರಗತಿಯನ್ನು ನಡೆಸುವುದು.

15) ಸರ್ಕಾರಿ, ಅನುದಾನ ಮತ್ತು ಅನುದಾನರಹಿತ ಶಾಲೆಗಳಿಗೆ ಸ್ಥಳೀಯವಾಗಿ ದೊರಕುವ ಒಬ್ಬ ವೈದ್ಯರನ್ನು, ಇಬ್ಬರು ನರ್ಸ, ಮೂರು ಕಂಪೌಂಡರುಗಳ ಒಂದು ತಂಡವನ್ನು ಐದು ಶಾಲೆಗಳ ಉಸ್ತುವಾರಿಗೆ ನೇಮಿಸುವುದು.

16) ಪೋಷಕರೇ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಮತ್ತು ಹೋಗುವ ಜವಾಬ್ದಾರಿಯನ್ನು ವಹಿಸುವುದು. ಶಾಲಾ ಮತ್ತು ಖಾಸಗಿ ವಾಹನಗಳ ನೇಮಕದ ಬಗ್ಗೆೆ ಶಾಲೆ ಮತ್ತು ಪೋಷಕರು ಮುಂಜಾಗ್ರತೆಯ ಎಚ್ಚರಿಕೆಯನ್ನು ತೆಗೆದುಕೊಳ್ಳು ವುದು.

17) 6-9 ನೆಯ ತರಗತಿಯವರಿಗೆ ಮಾರ್ಚ್ 31 ರೊಳಗೆ ಪರೀಕ್ಷೆಗಳನ್ನು ಮುಗಿಸಿ ಏಪ್ರಿಲ್ 10ಕ್ಕೆ ಫಲಿತಾಂಶವನ್ನು ಪ್ರಕಟಿಸುವುದು.
18) ವಿದ್ಯಾರ್ಥಿಗಳಲ್ಲಿ ಸ್ವಲ್ಪ ಮಾತ್ರಕ್ಕೆ ಶೀತ, ಕೆಮ್ಮು, ಜ್ವರ. ಕಫ, ಉಸಿರಾಟದಲ್ಲಿ ಏರುಪೇರು ಮುಂತಾದ ದೈಹಿಕ ಅನಾರೋಗ್ಯ ಕಂಡುಬಂದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದಂತೆ ನೋಡಿಕೊಳ್ಳುವುದು. ಮಕ್ಕಳಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚುವಂತೆ ಮಾಡಲು ಬೇಕಾದ ಪೋಷಕಾಂಶಗಳನ್ನು ಉಚಿತವಾಗಿ ಸರಕಾರವೇ ನೀಡುವಂಥ ವ್ಯವಸ್ಥೆಯನ್ನು ಮಾಡುವುದು. ಮಕ್ಕಳು ಮನೆಯಿಂದಲೇ ಕುಡಿಯುವ ನೀರನ್ನು ತರುವುದೊಳಿತು.

19) 9-12ನೆಯ ವರೆಗಿನ ತರಗತಿಗಳಿಗೆ ಆಂತರಿಕ ಅಂಕಗಳಿಗೆ ಎರಡು ರೂಪಣಾತ್ಮಕ ಪರೀಕ್ಷೆ ಮತ್ತು ನಾಲ್ಕು ಚಟುವಟಿಕೆಗಳನ್ನು ನೀಡುವುದು.

20) 6-8ನೆಯ ತರಗತಿಗಳಿಗೆ ಆಂತರಿಕ ಅಂಕಗಳಿಗೆ ಒಂದು ರೂಪಣಾತ್ಮಕ ಪರೀಕ್ಷೆ ಮತ್ತು ಎರಡು ಚಟುವಟಿಕೆಗಳನ್ನು ನೀಡು ವುದು.

21) ಸಾಂದರ್ಭಿಕವಾಗಿ ಅನಿವಾರ್ಯವೆನಿಸುವ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಶಾಲಾ ಕಾಲೇಜುಗಳಿಗೆ ರವಾನಿಸುವುದು.

22) ವಿದ್ಯಾರ್ಥಿಗಳ ಬ್ಯಾಚ್ ಗಳನ್ನು ಮಾಡಿ ಬೋಧನೆ ಮಾಡಬೇಕಾದುದರಿಂದ ವಿಷಯ ಶಿಕ್ಷಕರ ಕೊರತೆಯಾಗುವುದು ಸಹಜ. ಅಂಥಲ್ಲಿ ಅರ್ಹತೆಯುಳ್ಳ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನೇಮಿಸಿಕೊಳ್ಳುವುದು.

23) ಶಾಲಾರಂಭಕ್ಕೂ ಮುನ್ನ ಪೋಷಕರ ಮೀಟಿಂಗನ್ನು ಪ್ರತಿಶಾಲೆಯೂ ನಡೆಸುವುದು. ಅವರ ಸಲಹೆ, ಸೂಚನೆ, ಮಾರ್ಗ ದರ್ಶನವನ್ನೂ ಪಡೆಯುವುದು ಅತ್ಯಗತ್ಯ.

24) ವಾರ್ಷಿಕೋತ್ಸವ ಸೇರಿದಂತೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸದಂತೆ ಆದೇಶ ಹೊರಡಿಸುವುದು.

25) ಶಾಲೆಗೆ ಬರುವ ಹಾಗೂ ಶಾಲಾವಧಿ ಮುಗಿಯುತ್ತಿದ್ದಂತೆ ಮಕ್ಕಳು ಸುರಕ್ಷಿತವಾಗಿ ಮನೆಯನ್ನು ತಲುಪುವ ಜವಾಬ್ದಾರಿಯನ್ನು ಶಾಲೆ ಮತ್ತು ಪೋಷಕರು ವಹಿಸುವುದು.

ಅಲ್ಪದಿನಗಳ ಈ ಶೈಕ್ಷಣಿಕ ವರ್ಷವನ್ನು ಸುಗಮವಾಗಿ ನಡೆಸಲು ಶಾಲೆ, ಸಮುದಾಯ ಹಾಗೂ ಸರ್ಕಾರ ಈ ಮೂರೂ ಘಟಕಗಳು ಒಂದಾಗಬೇಕಾದ ಅನಿವಾರ್ಯತೆ ಈಗ ಹೆಚ್ಚಿದೆ. ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಂಡು ಜವಾಬ್ದಾರಿಯಿಂದ ವ್ಯವ ಹರಿಸಬೇಕಿದೆ. ಯಾರೂ ಯಾರನ್ನೂ ದೂರುವುದರಲ್ಲಿ ಅರ್ಥವಿಲ್ಲ. ಪರಿಸ್ಥಿತಿ ಒಡ್ಡುವ ಸವಾಲುಗಳಿಗೆ ಎಲ್ಲರೂ ಬಾಧ್ಯಸ್ಥರು ಎಂಬ ಅರಿವಿನಲ್ಲಿ ಕೈಜೋಡಿಸಿ ಮುಂದೆ ಸಾಗಬೇಕಿದೆ. ಮಕ್ಕಳ ಆರೋಗ್ಯದ ಜೊತೆಜೊತೆಗೆ ಅವರ ವಿದ್ಯಾಭ್ಯಾಸವೂ ಮುಖ್ಯ. ಈ
ಪ್ರಜ್ಞೆಯಲ್ಲಿ ಎಲ್ಲರೂ ಮಹತ್ವದ ಪಾತ್ರವನ್ನು, ಕರ್ತವ್ಯವನ್ನು ಹೊಂದಿರುತ್ತಾರೆ.

ಕೊನೆಯ ಮಾತು: ಬದಲಾವಣೆ ಜಗದ ನಿಯಮ. ಇವೆಲ್ಲವನ್ನೂ ಹೊರತುಪಡಿಸಿದ ಮನ್ವಂತರಕ್ಕೆ ನಾವು ನಾಂದಿ ಹಾಡಬಹು ದಾದ ಅವಕಾಶವನ್ನು ಹೊಂದಿದ್ದೇವೆ. ವರ್ಷಾರಂಭ (Year start-ಜೂನ್) ಮತ್ತು ವರ್ಷಾಂತ್ಯ (Year end-ಏಪ್ರಿಲ್-10)ದ ಸಿಸ್ಟೆಮ್ ಅನ್ನು ಒಂದು ಮಹತ್ವದ ಬದಲಾವಣೆಗೆ ಒಗ್ಗುವಂತೆ ಮಾಡಿಕೊಳ್ಳಲು ಈ ಕಾಲಘಟ್ಟ ಸೂಕ್ತವಾಗಿದೆ. ಈ ಶೈಕ್ಷಣಿಕ ವರ್ಷವನ್ನು ಜನೆವರಿ (Year Start) ಯಿಂದಲೇ ಆರಂಭಿಸಿ ಡಿಸೆಂಬರಿ (Year End) ಗೆ ಮುಗಿಸುವುದು.ಅಂದರೆ ಜನೆವರಿಯಿಂದ ಡಿಸೆಂಬರ್ ವರೆಗೆ ಶೈಕ್ಷಣಿಕ ವರ್ಷವೆಂದು ಪರಿಗಣಿಸುವ ಮಹತ್ವದ ಬದಲಾವಣೆ. ಜನೆವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ 10ರವರೆಗೆ ಶಾಲೆಯನ್ನು ನಡೆಸುವುದು. ಮೇ 20ವರೆಗೆ ಬೇಸಗೆ ರಜೆಯನ್ನು ನೀಡುವುದು. ಮೇ 21ರಿಂದ ಶಾಲೆಯನ್ನು ಆರಂಭಿಸಿ ಸಪ್ಟೆೆಂಬರ್ ಮಧ್ಯದಲ್ಲಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಮಾಡಿ, ಅಕ್ಟೋಬರ್ ಕೊನೆಯಲ್ಲಿ ವಾರ್ಷಿಕ ಪರೀಕ್ಷೆಯನ್ನು ನಡೆಸಿ ನವೆಂಬರ 30ಕ್ಕೆ ಫಲಿತಾಂಶವನ್ನು ಪ್ರಕಟಿಸಿ, ಜೂನ್ ಮಧ್ಯದಲ್ಲಿ ಸಪ್ಲಿಮೆಂಟರಿ ಪರೀಕ್ಷೆ ನಡೆಸುವುದು. ಇಂಥ ಮಹತ್ವದ ಬದಲಾವಣೆಯನ್ನು ಎದುರಿಸುವಾಗ ಮೊದಲ ವರ್ಷ ಇರಿಸು-ಮುರಿಸಾಗಬಹುದು. ವ್ಯತ್ಯಯಗಳಾಗಬಹುದು. ಆದರೆ ದಿನಗಳೆ ದಂತೆ ಅಭ್ಯಾಸವಾಗುತ್ತದೆ.