Saturday, 23rd November 2024

ದೆಹಲಿಯ ಅಫ್ಘಾನಿಸ್ತಾನ ರಾಯಭಾರ ಕಚೇರಿ ಕ್ಲೋಸ್

ನವದೆಹಲಿ: ದೆಹಲಿಯಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿರುವುದಾಗಿ ಅಫ್ಘಾನಿಸ್ತಾನ ಪ್ರಕಟಣೆ ಹೊರಡಿಸಿದೆ.

ಭಾರತ ಸರ್ಕಾರದ ನಿರಂತರ ಸವಾಲುಗಳಿಂದಾಗಿ ನ.23, 2023ರಿಂದ ಜಾರಿಗೆ ಬರುವಂತೆ ಕಚೇರಿಯನ್ನು ಮುಚ್ಚಲು ನಿರ್ಧರಿಸ ಲಾಗಿದೆ. ಈ ನಿರ್ಧಾರವನ್ನು ಅಫ್ಘಾನಿಸ್ತಾನದ ರಾಯಭಾರ ಕಚೇರಿಯ ಕಡೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅಫ್ಘಾನ್ ರಾಯಭಾರ ಕಚೇರಿಯು ತನ್ನ ಹೇಳಿಕೆಯಲ್ಲಿ, ಭಾರತದಲ್ಲಿನ ಆಫ್ಘನ್ ಪ್ರಜೆಗಳಿಗೆ, ಆಫ್ಘನ್ ಮಿಷನ್‌ಗೆ ನೀಡಿರುವ ಬೆಂಬಲಕ್ಕಾಗಿ ಭಾರತ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಮತ್ತು ಕಾಬೂಲ್‌ ನಲ್ಲಿ ಕಾನೂನುಬದ್ಧ ಸರ್ಕಾರದ ಅನುಪಸ್ಥಿತಿಯಲ್ಲಿ ನಾವು ಆಫ್ಘನ್ ಜನರ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ್ದೇವೆ ಎಂದು ಹೇಳಿದೆ.

ಆಫ್ಘನ್ ರಾಯಭಾರ ಕಚೇರಿಯ ಪ್ರಕಾರ, ಆಗಸ್ಟ್ 2021ರಿಂದ ಭಾರತದಲ್ಲಿ ಆಫ್ಘನ್ನರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ಬಹಳ ಸೀಮಿತವಾದ ಹೊಸ ವೀಸಾಗಳನ್ನು ನೀಡಲಾಯಿತು. ಉಚ್ಛಾಟಿತ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರ ಹಿಂದಿನ ಸರ್ಕಾರವು ನೇಮಿಸಿದ ಸಿಬ್ಬಂದಿಯ ಸಹಾಯದಿಂದ ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯು ಭಾರತೀಯ ಅಧಿಕಾರಿಗಳ ಅನುಮತಿಯೊಂದಿಗೆ ನಡೆಯುತ್ತಿತ್ತು. ಇದರ ನಂತರ ಭಾರತ ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಸರ್ಕಾರವನ್ನು ಗುರುತಿಸಲಿಲ್ಲ.

ಭಾರತ ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಿಂದ ತನ್ನ ಉದ್ಯೋಗಿಗಳನ್ನು ವಾಪಸ್​ ಕರೆಸಿಕೊಂಡಿತ್ತು.