Friday, 22nd November 2024

ಕರೋನಾ ಬ್ರೇಕಿಂಗ್: 249 ಸಕ್ರಿಯ ಪ್ರಕರಣ

covid

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 31 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದ್ದು, ಸದ್ಯ ದೇಶದಲ್ಲಿ 249 ಸಕ್ರಿಯ ಪ್ರಕರಣ ಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶನಿವಾರ ದೇಶದಲ್ಲಿ 42 ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಯುಎಸ್​, ಯುಕೆ, ಫ್ರಾನ್ಸ್​, ಮಲೇಷಿಯಾ, ಆಸ್ಟ್ರೇಲಿಯಾ ಮತ್ತು ಫಿಲಿಪ್ಪೀನ್ಸ್‌ ಸೇರಿದಂತೆ ಹಲವೆಡೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.

ಸಾರ್ಸ್​​ ಕೋವ್​ 2 ವೈರಸ್​ ಹರಡುತ್ತಿದ್ದು, ವಿಕಸನಗೊಂಡು ಬದಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮರಿಯಾ ವನ್​ ಕೆರಕೊವ್​​ ತಿಳಿಸಿದ್ದಾರೆ. ಇವರು ಕೋವಿಡ್​ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಜಾಗತಿಕವಾಗಿ ಪ್ರಕರಣಗಳ ಏರಿಕೆ ಕುರಿತು ಮಾತನಾಡಿರುವ ಅವರು, ಕೋವಿಡ್​ ಬೆದರಿಕೆ ಮುಂದುವರೆದಿದ್ದು, ಎಲ್ಲಾ ದೇಶಗಳಲ್ಲೂ ಪ್ರಸರಣಗೊಳ್ಳುತ್ತಿದೆ ಎಂದಿದ್ದಾರೆ.

ಜಗತ್ತು ಕೋವಿಡ್​ನಿಂದ ಮುಂದೆ ಸಾಗಿದೆ. ಜನರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ವೈರಸ್​ ಎಲ್ಲೂ ಹೋಗಿಲ್ಲ. ಇದು ಪ್ರಸರಣಗೊಳ್ಳುತ್ತದೆ. ಇದು ಬದಲಾಗುತ್ತಿದ್ದು, ಸಾಕಷ್ಟು ಹಾನಿ ಮಾಡಬಲ್ಲದು. ನಾವು ಕಣ್ಗಾವಲಿನಲ್ಲಿರಿಸಬೇಕು ಎಂದು ಎಚ್ಚರಿಸಿ ದ್ದಾರೆ.

ಆಸ್ಟ್ರೇಲಿಯಾ ಉತ್ತರ ಭೂ ಪ್ರದೇಶದ ರೋಗ ನಿಯಂತ್ರಣ ಕೇಂದ್ರವು ಕಳೆದ ನಾಲ್ಕು ವಾರಗಳಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ಕೋವಿಡ್​ ಏರಿಕೆ ಕಂಡ ಹಿನ್ನೆಲೆಯಲ್ಲಿ ಜನರಿಗೆ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಮಲೇಷಿಯಾದಲ್ಲಿ 2,305 ಕೋವಿಡ್​ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದು, ಶೇ 21ರಷ್ಟು ಏರಿಕೆಯಾಗಿವೆ. 21 ಓಮ್ರಿಕಾನ್​ ಪ್ರಕರಣಗಳೂ ಇದರಲ್ಲಿ ಸೇರಿವೆ. ಫಿಲಿಪ್ಪೀನ್ಸ್​ನಲ್ಲಿ 175 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ.