Sunday, 5th January 2025

ರಾಜ್ಯದಲ್ಲಿ ಮತ್ತೆ ಜೋಡೆತ್ತು ಗೊರಸಿನ ಸದ್ದು

ಭಾಸ್ಕರಾಯಣ

ಎಂ.ಕೆ.ಭಾಸ್ಕರರಾವ್

ರಾಜಕೀಯದಲ್ಲಿ ‘ಜೋಡೆತ್ತು’ ಎಂಬ ಪರಿಕಲ್ಪನೆ ಮೊದಲಿಗೆ ಕರ್ನಾಟಕದಲ್ಲಿ ಪ್ರಚಲಿತವಾಗಿದ್ದು ೧೯೬೯-೭೦ರ ಆಜೂಬಾಜಿನಲ್ಲಿ. ನಿಜಲಿಂಗಪ್ಪನವರು ಎಐಸಿಸಿ ಅಧ್ಯಕ್ಷರಾದ ನಂತರದಲ್ಲಿ ರಾಜ್ಯಭಾರದ ಹೊಣೆಯನ್ನು ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆ ಹೆಗಲಿಗೆ ವರ್ಗಾಯಿಸಿ ‘ಲವ-ಕುಶರಂತೆ ಕಾರ್ಯ ನಿರ್ವಹಿಸಿಕೊಂಡು ಹೋಗಿ’ ಎಂದು ಆಶೀರ್ವದಿಸಿದ್ದು ಆಗಲೇ.

ಕರ್ನಾಟಕದ ರಾಜಕಾರಣದಲ್ಲಿ ಮತ್ತೊಂದು ಬಾರಿ ಜೋಡೆತ್ತಿನ ಗೊರಸುಗಳು ಸದ್ದು ಮಾಡುತ್ತಿವೆ. ಜೋಡೆತ್ತುಗಳನ್ನು ರಾಜಕೀಯದಲ್ಲಿ ಬೆರೆಸಿ ಮಾಡುತ್ತಿರುವ ರಾಜಕಾರಣ ಈ ರಾಜ್ಯಕ್ಕೆ ಹೊಸದೂ ಅಲ್ಲ, ಅಪರೂಪದ್ದೂ ಅಲ್ಲ. ಇತಿಹಾಸ ಮರುಕಳಿಸುತ್ತದೆ ಎಂದು ಹೇಳುತ್ತಾರಲ್ಲ ಹಾಗೆಯೇ ಜೋಡೆತ್ತು ರಾಜಕಾರಣದ ಇತಿಹಾಸವೂ ಮರುಕಳಿಸಿದೆ. ಆರೂವರೆ ತಿಂಗಳಿಂದ ತೆರವಾಗಿಯೇ ಇದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಆರನೇ ಬಾರಿಗೆ ಶಾಸಕರಾಗಿರುವ
ಆರ್.ಅಶೋಕರನ್ನು ಬಿಜೆಪಿ ಕುಳ್ಳಿರಿಸಿದೆ. ಹದಿನೈದು ತಿಂಗಳ ಹಿಂದೆಯೇ ನೇಮಕವಾಗಬೇಕಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಈವರೆಗೆ ಉಪಾಧ್ಯಕ್ಷ ರಾಗಿದ್ದ, ಚೊಚ್ಚಲ ಬಾರಿಗೆ ಶಾಸಕರೂ ಆಗಿರುವ ಬಿ.ವೈ.ವಿಜಯೇಂದ್ರರನ್ನು ನೇಮಿಸಿದೆ.

ಭಾರತೀಯ ಜನತಾ ಪಕ್ಷದ ದೆಹಲಿ ವರಿಷ್ಠರು ಬಿ.ಎಸ್.ಯಡಿಯೂರಪ್ಪನವರ ಸಲಹೆ ಮೇರೆಗೆ ಅಳೆದಳೆದು ತೂಗಿ ತೂಗಿ ತೆಗೆದುಕೊಂಡ ತೀರ್ಮಾನ ಇದು. ಹೊಸ ಹುರುಪಿನಲ್ಲಿ ಈ ಇಬ್ಬರೂ ಮೈಕೊಡವಿಕೊಂಡು ಜೋಡೆತ್ತಿನ ರೀತಿಯಲ್ಲಿ ಕ್ರಿಯಾಶೀಲರಾದಾರೆಂಬ ಭರವಸೆ ಬಿಜೆಪಿಯ ಒಂದು ವಲಯದಲ್ಲಿದೆ. ವರಿಷ್ಠ ಮಂಡಳಿಯ ತೀರ್ಮಾನದ ಫಲಾಫಲ ಮುಂದೆ ಗೊತ್ತಾಗಲಿದೆ.

ಆರೂವರೆ ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಜೋಡೆತ್ತಿನ ಮಹತ್ವವನ್ನು ಮತ್ತು ಅದು ಸಂದರ್ಭದ ಅಗತ್ಯ ಎಂಬುದನ್ನು ಆಡಳಿತ
ಪಕ್ಷವಾಗಿದ್ದ ಬಿಜೆಪಿ ತಿಳಿಯಲಿಲ್ಲ. ಶಾಸಕ ಸ್ಥಾನದ ಅಭ್ಯರ್ಥಿಗಳನ್ನಾಗಿ ಅನೇಕ ಮಂದಿ ಹಳಬರ ಮತ್ತು ಹಳಸಿದ ಮುಖಗಳಿಗೆ ಬದಲಿಯಾಗಿ ಸ್ನೋ ಪೌಡರ್ ಹಚ್ಚಿದ ಹೊಸ ಮುಖಗಳನ್ನು ಮುಂದಿಟ್ಟರೆ ಮತದಾರರು ಮರುಳಾಗಿ ಬೆಂಬಲ ನೀಡುತ್ತಾರೆಂದು ಭಾವಿಸಿದ್ದ ಬಿಜೆಪಿ ವರಿಷ್ಠ ಮಂಡಳಿ ತೆಗೆದುಕೊಂಡ ನಿರ್ಧಾರ ವಿಫಲ ಗೊಂಡು ಮುಗ್ಗರಿಸಿತು. ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿದ್ದುದು ಅನಿರ್ದಿಷ್ಟ ಅವಧಿಗೆ ಮುಂದುವರಿದಿದ್ದ ನಳಿನ್ ಕುಮಾರ್ ಕಟೀಲ್.

ಚುನಾವಣೆ ಪ್ರಚಾರ ಸಮಯದಲ್ಲಿ ಈ ನಾಯಕದ್ವಯರನ್ನು ‘ಜೋಡೆತ್ತು’ ಎಂದು ಪಕ್ಷ ಹೇಳಲಿಲ್ಲ. ಜೋಡೆತ್ತಿನ ಮಾತನ್ನು ರಾಜ್ಯದಲ್ಲಿ ಹೆಚ್ಚು ಪ್ರಚುರಪಡಿಸಿದ
ಯಡಿಯೂರಪ್ಪ ಕೂಡಾ ಪ್ರಸ್ತಾಪಿಸಲಿಲ್ಲ. ಆದರೆ ಅಽಕಾರಕ್ಕೆ ಬರಲೇಬೇಕೆಂಬ ತುಡಿತದಲ್ಲಿದ್ದ ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವ ಹೊಣೆಯನ್ನು ವಿರೋಧ ಪಕ್ಷದ
ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಗಲಿಗೆ ಹೊರಿಸಿತು. ಮತ್ತೊಮ್ಮೆ ಸಿಎಂ ಆಗುವ ಆಸೆಯಲ್ಲಿದ್ದ ಸಿದ್ದರಾಮಯ್ಯ, ತಾವು ಮುಖ್ಯಮಂತ್ರಿ ಆಗಿಯೇ ಸಿದ್ಧ ಎಂಬ ಭಾವದಲ್ಲಿದ್ದ ಶಿವಕುಮಾರ್ ಅನ್ನ-ನಿದ್ರೆ -ನೀರಡಿಕೆ ಮರೆತವರಂತೆ ರಾಜ್ಯ ಸುತ್ತಿದರು. ಜೋಡೆತ್ತಿನ ಶ್ರಮ ಹುಸಿ ಹೋಗಲಿಲ್ಲ. ಬರೋಬ್ಬರಿ ೧೩೫ ಕಾಂಗ್ರೆಸ್ ಶಾಸಕರನ್ನು ವಿಧಾನಸಭೆಗೆ ಕಳಿಸಿಕೊಟ್ಟ ಮತದಾರರು ತಮ್ಮೆಲ್ಲ ಕಷ್ಟ ದೂರವಾದ ಭಾವದಲ್ಲಿ ಬೀಗಿದರು.

ಕಾಂಗ್ರೆಸ್ ಹೈಕಮಾಂಡ್‌ನ ನಿರೀಕ್ಷೆಯಂತೆ ಸಿದ್ದರಾಮಯ್ಯ-ಡಿಕೆಶಿ ಜೋಡೆತ್ತಿನ ರೀತಿಯಲ್ಲಿ ತಮ್ಮ ಕಸುವನ್ನೆಲ್ಲ ಬಳಸಿ, ಅಧಿಕಾರವಿಲ್ಲದೆ ಬಳಲಿ ಸುಸ್ತಾಗಿದ್ದ
ಸಂಘಟನೆಗೆ ನೀರು ಗೊಬ್ಬರ ಎರೆದರು. ಎಲ್ಲ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಜನರನ್ನು ಸಂಪರ್ಕಿಸಿ ಬಿಜೆಪಿ ಯಾಕೆ ಬೇಡ, ಕಾಂಗ್ರೆಸ್ಸೇ ಯಾಕೆ ಬೇಕೆಂಬ ವಿಚಾರದಲ್ಲಿ ಮನವೊಲಿಸಿದರು. ಒಂದಿಷ್ಟು ಭರವಸೆ, ಮತ್ತೊಂದಿಷ್ಟು ಆರೋಪಗಳ ಸುರಿಮಳೆಗರೆದು ಚುನಾವಣೆ ಗೆದ್ದರು. ಆದರೆ ಅಧಿಕಾರಕ್ಕೆ ಬಂದ ಮರು ಗಳಿಗೆಯಿಂದಲೇ ಪಕ್ಷ ಒಂದಲ್ಲಾ ಒಂದು ಬಗೆಯ ಸಂಕಷ್ಟದಲ್ಲಿ ಏದುಸಿರು ಬಿಡುವಂತಾಗಿದ್ದು ಮತದಾರರು ಇಟ್ಟ ವಿಶ್ವಾಸಕ್ಕೆ ಕೊಳ್ಳಿಯಾದ ಬೆಳವಣಿಗೆ.

ಚುನಾವಣೆ ಪೂರ್ವದಲ್ಲಿ ಜೋಡೆತ್ತಿನ ರೀತಿ ಒಂದೇ ಲಯದಲ್ಲಿ ಒಂದೇ ವೇಗದಲ್ಲಿ ಹೆಜ್ಜೆ ಹಾಕಿ ತಾವು ಕೆರಳಿಸಿದ ವಿಶ್ವಾಸದ ಬಂಡಿಯತ್ತ ಜನಮನ ಸೆಳೆದ
ಸಿದ್ದರಾಮಯ್ಯ, ಶಿವಕುಮಾರ್ ಈಗ ‘ಎತ್ತು ಏರಿಗೆ ಕೋಣ ನೀರಿಗೆ’ ಎಂಬ ಗಾದೆ ನೆನಪಿಸುವಂತೆ ನಡೆದುಕೊಳ್ಳುತ್ತಿರುವುದು ಜನಮೆಚ್ಚುವ ಬೆಳವಣಿಗೆಯಲ್ಲ. ಆದರೆ ಅಧಿಕಾರದ ಅಮಲು ರಾಜಕಾರಣದಲ್ಲಿರುವ ಬಹುತೇಕ ಎಲ್ಲರನ್ನೂ ಆವರಿಸಿರುತ್ತದೆ. ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ನಡುವಣ ಶೀತಲ ಸಮರ ಎಲ್ಲಿಯವರೆಗೆ ಹೀಗೇ ಸಾಗುತ್ತದೋ ಹೇಳುವುದು ಕಷ್ಟ.

ಮೇಲಿಂದ ಕೆಳಗಿನವರೆಗೆ ಪಕ್ಷವು ಸಿದ್ದರಾಮಯ್ಯ ಬಣ, ಶಿವಕುಮಾರ್ ಬಣವೆಂದು ಇಬ್ಭಾಗವಾಗಿದೆ. ಶಾಸಕಾಂಗ ಪಕ್ಷದಲ್ಲೂ ‘ಸರ್ವಾನುಮತದ ನಾಯಕರಾಗಿ’
ಸಿದ್ದರಾಮಯ್ಯ ಉಳಿದಿಲ್ಲ. ಚಕ್ರ ಕಳಚಿದ ಬಂಡಿ ಒಂದೆಡೆ, ನೊಗ ಕಳಚಿದ ಜೋಡೆತ್ತು ಮತ್ತೊಂದೆಡೆ ಕೆಲಸಕ್ಕೆ ಬರುವುದಾದರೂ ಹೇಗೆ? ಸರಕಾರಕ್ಕೆ ಬಡಿದಿರುವ ಬಾಲಗ್ರಹ ದೋಷದ ಪರಿಹಾರಕ್ಕೆ ಹೈಕಮಾಂಡ್ ಬಳಿ ಸಿದ್ಧಸೂತ್ರ ಇರುವುದು ಸುಳ್ಳು. ರಾಜಕೀಯದಲ್ಲಿ ‘ಜೋಡೆತ್ತು’ ಎಂಬ ಪರಿಕಲ್ಪನೆ ಮೊದಲಿಗೆ ಕರ್ನಾಟಕ ದಲ್ಲಿ ಪ್ರಚಲಿತವಾಗಿದ್ದು ೧೯೬೯-೭೦ರ ಆಜೂಬಾಜಿನಲ್ಲಿ. ನಿಜಲಿಂಗಪ್ಪನವರು ಎಐಸಿಸಿ ಅಧ್ಯಕ್ಷರಾದ ನಂತರದಲ್ಲಿ ರಾಜ್ಯಭಾರದ ಹೊಣೆಯನ್ನು ವೀರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆ ಹೆಗಲಿಗೆ ವರ್ಗಾಯಿಸಿ ‘ಲವ-ಕುಶರಂತೆ ಕಾರ್ಯ ನಿರ್ವಹಿಸಿಕೊಂಡು ಹೋಗಿ’ ಎಂದು ಆಶೀರ್ವದಿಸಿದರು.

ಆ ಹೊತ್ತಿಗೆ ಕಾಂಗ್ರೆಸ್ಸು ಎರಡಾಗಿ ಹೋಳಾಗಿತ್ತು. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಎಸ್) ಮತ್ತು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ (ಆರ್) ಪರಸ್ಪರ
ವಿರೋಧ ಪಕ್ಷಗಳಾದವು. ಆಗ ನಡೆದ ಚುನಾವಣೆಯಲ್ಲಿ ಲವ-ಕುಶ ಬಣ ಸೋತಿತು. ಕಾಂಗ್ರೆಸ್ (ಆರ್) ಅಧಿಕಾರ ಹಿಡಿದು ದೇವರಾಜ ಅರಸು ಮುಖ್ಯಮಂತ್ರಿ
ಯಾದರು. ಕಿತ್ತೆದ್ದು ಹೋದ ಲವ-ಕುಶ ಜೋಡಿಗೆ ಸಂಜೀವಿನಿ ಸಿಂಚನವಾಗಿದ್ದು ಬಹಳ ಬಹಳ ತಡವಾಗಿ. ಹೆಗಡೆ ೧೯೮೩ರಲ್ಲಿ ಸಿಎಂ ಆದರು. ಪಾಟೀಲರು ೧೯೮೯ರಲ್ಲಿ ಸಿಎಂ ಗಾದಿ ಮೇಲೆ ಮತ್ತೊಮ್ಮೆ ಆಸೀನರಾದರು.

ಲವ-ಕುಶ ಎಂಬ ಹೆಸರಿನ ಈ ಜೋಡೆತ್ತು ಒಂದಾಗಿ ಅಽಕಾರ ಹಿಡಿಯಲಿಲ್ಲ, ಆದರೆ ಅಧಿಕಾರ ಅವರ ಕೈ ತಪ್ಪಲಿಲ್ಲ. ೨೦೧೯ರ ಲೋಕಸಭಾ ಚುನಾವಣೆ
ಸಮಯದಲ್ಲಿ ಜೋಡೆತ್ತು ಸದ್ದು ಮಾಡಿದ್ದು ಮಂಡ್ಯ ಕ್ಷೇತ್ರದಲ್ಲಿ. ಸುಮಲತಾ ಅಂಬರೀಷ್ ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಾಗ ಅವರನ್ನು ಬೆಂಬಲಿಸಿ ಪ್ರಚಾರಕ್ಕೆ ಬಂದವರು ಸಿನಿಮಾ ನಟರಾದ ದರ್ಶನ್ ಮತ್ತು ಯಶ್. ಗುರು ಅಂಬರೀಷರ ಪತ್ನಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಯೇ ಸಿದ್ಧ ಎಂದು ಪರಸ್ಪರ ಕೈಕೈ ಮೇಲೆತ್ತಿ ಹಿಡಿದು ಘೋಷಿಸಿದಾಗ ಹುಚ್ಚೆದ್ದ ಜನರು ಈ ನಟದ್ವಯರನ್ನು ‘ಜೋಡೆತ್ತು’ ಎಂದು ಕರೆದು ಗೌರವಿಸಿದರು. ತುರುಸಿನ ಮಂಡ್ಯ ಚುನಾವಣೆಯನ್ನು ಸುಮಲತಾ ಗೆದ್ದಾಗ ಈ ಜೋಡೆತ್ತಿಗೆ ಬಹುದೊಡ್ಡ ಮನ್ನಣೆ, ಗೌರವ ದೊರೆಯಿತು. ಆ ಚುನಾವಣೆಯಾಗಿ ಐದು ವರ್ಷವಾಗುತ್ತ ಬಂದಿದೆ. ಮತ್ತೆ ಸುಮಲತಾ
ಸ್ಪಽಸುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಐದು ವರ್ಷದಲ್ಲಿ ದರ್ಶನ್-ಯಶ್ ಜೋಡೆತ್ತು ಎಲ್ಲೂ ಗೊರಸಿನ ಸದ್ದು ಮಾಡಿದ್ದು ಕೇಳಿಸಿಲ್ಲ.

ಬಹಳ ಹಿಂದೇನೂ ಹೋಗುವ ಅಗತ್ಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪಽಸಿದ್ದ ಬಿಜೆಪಿಯ ಸಿ.ಪಿ.ಯೋಗೇಶ್ವರ್
ಅವರನ್ನು ಸೋಲಿಸಲು ಜೋಡೆತ್ತಾಗಿ ಕೆಲಸ ಮಾಡಿದ್ದು ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್. ‘ಆಶ್ಚರ್ಯ, ಆದರೂ
ಸತ್ಯ’ ಎಂಬಂಥ ವಿಸ್ಮಯ. ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಜೋಡೆತ್ತು ಯಶಸ್ಸು ಕಂಡವು. ಆದರೆ ಮುಂದೆ ಆಗಿದ್ದಾದರೂ ಏನು? ಕಾಂಗ್ರೆಸ್‌ನ ಬೆಂಬಲ ನಂಬಿ ಸಿಎಂ ಆದ ಕುಮಾರಸ್ವಾಮಿಯವರನ್ನು ಡಿಕೆಶಿ ನಡೆಸಿಕೊಂಡ ರೀತಿ ಈಗ ನಿತ್ಯ ಪಾರಾಯಣಗಳಲ್ಲಿ ಒಂದು.

ಈಗ ಹೇಳಲಿರುವ ಘಟನೆಯನ್ನು ಜೋಡೆತ್ತು ಸಾಹಸ ಎಂದು ಕರೆಯಲಾಗದು. ಹಾಗಂತ ಏನೆಂದು ಕರೆಯಬೇಕೆಂದೂ ಅರ್ಥವಾಗದು. ೨೦೧೩ರ ವಿಧಾನಸಭಾ
ಚುನಾವಣೆಯ ಪೂರ್ವದಲ್ಲಿ ಬಿಜೆಪಿಯಿಂದ ಹೊರಬಿದ್ದ ಯಡಿಯೂರಪ್ಪ ಕೆಜೆಪಿ ಕಟ್ಟಿ ‘ಬಿಜೆಪಿ-ಮುಕ್ತ ಕರ್ನಾಟಕ’ ಮಾಡುವ ಛಲದಲ್ಲಿ ಅಖಾಡಕ್ಕೆ ಜಿಗಿದರು. ಆಗ ಅವರು ಆ ಪಕ್ಷಕ್ಕೆ ಅಧ್ಯಕ್ಷ. ಮತ್ತೊಂದು ಮಹತ್ವದ ಹುದ್ದೆ ಪ್ರಧಾನ ಕಾರ್ಯದರ್ಶಿಯದು. ಆ ಹೊಣೆ ಹೊತ್ತವರು ಶೋಭಾ ಕರಂದ್ಲಾಜೆ. ಇಬ್ಬರ ಯತ್ನದಲ್ಲಿ ಕೆಜೆಪಿ ಅಽಕಾರಕ್ಕೆ ಬರಲಿಲ್ಲ, ಆದರೆ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈ ಇಬ್ಬರೂ ಈಗ ಮತ್ತೆ ಬಿಜೆಪಿಗೆ ಮರಳಿ ಉನ್ನತ ಸ್ಥಾನಗಳಲ್ಲಿದ್ದಾರೆ. ಇವರನ್ನು ಜೋಡೆತ್ತು ಎಂದು ಕರೆಯಲಾಗದು. ಏನೆಂದು ಕರೆಯಬಹುದು…?

Leave a Reply

Your email address will not be published. Required fields are marked *