Friday, 22nd November 2024

ಮದ್ಯ ತಯಾರಿಕಾ ಕಂಪನಿ ಮೇಲೆ ಐಟಿ ದಾಳಿ: ಕೋಟ್ಯಂತರ ರೂ. ನಗದು ಪತ್ತೆ

ಭುವನೇಶ್ವರ: ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತೆರಿಗೆ ವಂಚಿಸಿದ ಆರೋಪದ ಮೇಲೆ ಎರಡು ಮದ್ಯ ತಯಾರಿಕೆ ಮತ್ತು ಮಾರಾಟ ಕಂಪನಿಗಳ ಮೇಲೆ ದಾಳಿ ಮಾಡಿ 300 ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿದೆ.

ಮದ್ಯ ತಯಾರಿಕಾ ಕಂಪನಿಗೆ ಸಂಬಂಧಿಸಿದ ಬೌಧ್, ಬಲಂಗೀರ್, ರಾಯಗಡ ಮತ್ತು ಸಂಬಲ್​ಪುರದಲ್ಲಿನ ತಾಣಗಳ ಮೇಲೆ ದಾಳಿಗಳನ್ನು ನಡೆಸ ಲಾಯಿತು. ಕೋಲ್ಕತ್ತಾ ಮತ್ತು ರಾಂಚಿಯಲ್ಲಿರುವ ಸಂಸ್ಥೆಯ ನೋಂದಾಯಿತ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಪಾದಿತ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕಂಪನಿಗೆ ಸಂಬಂಧಿಸಿದ ಕನಿಷ್ಠ 5 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಂಪನಿಯ ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನಿವಾಸಗಳಲ್ಲೂ ಐಟಿ ತಂಡಗಳು ಶೋಧ ನಡೆಸಿವೆ.

ಐಟಿ ದಾಳಿಗಳು ಇನ್ನೂ ಮುಂದುವರೆದಿದ್ದು, ಸಂಪೂರ್ಣ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಫಲಿತಾಂಶ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಒಡಿಶಾದ ಅತಿದೊಡ್ಡ ಸ್ಥಳೀಯ ಮದ್ಯ ತಯಾರಿಕೆ ಮತ್ತು ಮಾರಾಟ ಕಂಪನಿಗಳಲ್ಲಿ ಒಂದಾದ ಬಲದೇವ್ ಸಾಹು ಮತ್ತು ಗ್ರೂಪ್ ಆಫ್ ಕಂಪನಿ ಗೆ ಸೇರಿದ ಕಚೇರಿ ಒಂದರಲ್ಲೇ 150 ಕೋಟಿಗೂ ಹೆಚ್ಚು ಹಣ ಪತ್ತೆ ಮಾಡಲಾಗಿದೆ. ನಗದನ್ನು ಸದ್ಯ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.