Thursday, 12th December 2024

ತಂತ್ರಜ್ಞಾನದ ಪೆಡಂಭೂತ!

ತಂತ್ರಜ್ಞಾನಗಳು ಬೆಳೆದಂತೆಲ್ಲ, ಅದರಿಂದಾಗುವ ಉಪದ್ವ್ಯಾಪಿತನವೂ ಹೆಚ್ಚುತ್ತಲಿದೆ. ಮಾನವಾಭಿವೃದ್ಧಿಗೆ ಬಳಕೆಯಾಗಬಲ್ಲ ಅಣ್ವಸ್ತ್ರಗಳು ವಿನಾಶ ವನ್ನೂ ಸೃಷ್ಟಿಸಬಲ್ಲವು. ಯಾವುದೇ ಸಂಶೋಧನೆಗಳು ಎರಡು ಮುಖಗಳನ್ನು ಹೊತ್ತುಕೊಂಡೇ ಆವಿಷ್ಕಾರಗೊಳ್ಳುತ್ತವೆ. ಹಾಗೆಂದು ಎಲ್ಲ ತಂತ್ರಜ್ಞಾನ ಗಳನ್ನೂ ವೈಜ್ಞಾನಿಕ ಆವಿಷ್ಕಾರಗಳನ್ನೂ ತಿರಸ್ಕರಿಸಲಾಗದು.

ಮನುಕುಲದ ಹಿತಕ್ಕೆ ಬಳಸಿಕೊಳ್ಳುವುದರಲ್ಲಿ ನಾಗರಿಕ ಪ್ರಜ್ಞಾವಂತಿಕೆ ಅಡಗಿದೆ. ಅದಿಲ್ಲದಿದ್ದರೆ, ವಿಘಟಿತ ವ್ಯವಸ್ಥೆಗೆ ಇಂಥವೇ ಮುನ್ನುಡಿ ಹಾಡುತ್ತವೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಸದ್ದು-ಸುದ್ದಿ ಮಾಡಿದ್ದ ಡೀಪ್ ಫೇಕ್ ತಂತ್ರಜ್ಞಾನ. ಮನುಷ್ಯನ ವಿಕೃತಿ ಸರ್ವಕಾಲಕ್ಕೂ ಮದ್ದಿಲ್ಲದ ರೋಗವೇ. ಹಾಗೆಂದು ಸಾಮಾಜಿಕ ಮನಃಸ್ಥಿತಿ ಅತ್ತಲೇ ಹೆಚ್ಚು ವಾಲಿದರೆ, ಅಭಿವೃದ್ಧಿ ಅರ್ಥಹೀನವೆನಿಸುತ್ತದೆ. ನ್ಯೂಡಿಫ್ ಸಹ ಇದೇ ಸಾಲಿಗೆ ಸೇರುವಂಥದ್ದು. ನೆಟ್‌ವರ್ಕ್ ವಿಶ್ಲೇಷಣಾ ಸಂಸ್ಥೆ ‘ಗ್ರಾಫಿಕಾ’ ಇತ್ತೀಚೆಗಷ್ಟೇ ನೀಡಿದ ವರದಿ ನಿಜಕ್ಕೂ ಆಘಾತಕಾರಿ. ‘ನ್ಯೂಡಿಫ್’ ಎಂಬ ತಂತ್ರಜ್ಞಾನ ಬಳಸಿ ವ್ಯಕ್ತಿಗಳ ಫೋಟೋಗಳನ್ನು ವಿವಸಗೊಳಿಸುವ ವೆಬ್‌ಸೈಟ್‌ಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿವೆ ಎನ್ನುತ್ತದೆ ವರದಿ.

‘ಎಐ’ ಅಂದರೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿ ಈ ಆಪ್ ಅಥವಾ ವೆಬ್‌ಸೈಟ್‌ಗಳು ಸಾಮಾಜಿಕ ಜಾಲಾತಾಣದಿಂದ ಫೋಟೋಗಳನ್ನು ನಮಗರಿವಿಲ್ಲದಂತೆ ತೆಗೆದುಕೊಂಡು, ನಗ್ನರೂಪದಲ್ಲಿ ಪರಿವರ್ತಿಸಿ ದುರುಪಯೋಗ ಮಾಡಲಾಗುತ್ತಿದೆ. ಸಹಜವಾಗಿ ಹೆಣ್ಣುಮಕ್ಕಳು ಇದಕ್ಕೆ ಗುರಿ ಯಾಗುತ್ತಿದ್ದಾರೆ. ಅಲ್ಲದೇ ಇದರ ಜನಪ್ರಿಯತೆಗೆ ಇವರ ಮಾರ್ಕೆಟಿಂಗ್ ಚಾಕಚಕ್ಯತೆ ಮೆಚ್ಚಲೇಬೇಕು. ಸಾಮಾಜಿಕ ಜಾಲಾತಾಣಗಳಲ್ಲಿ ಈ ವಿವಸ್ತ್ರ ಗೊಳಿಸುವ ಅಪ್ಲಿಕೇಶನ್‌ಗಳ ಜಾಹೀರಾತು ಲಿಂಕ್‌ಗಳು ಪಾಪ್ ಅಪ್ ಆಗಿ ಯುವಕರನ್ನು ಆಕರ್ಷಿಸುತ್ತಿರುವುದು ಅಪಾಯಕಾರಿ.

ಈ ವರ್ಷದಲ್ಲಿ ಎಕ್ಸ್ ಮತ್ತು ರೆಡ್‌ಇಟ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿವಸಗೊಳಿಸುವ ಅಪ್ಲಿಕೇಶನ್‌ಗಳ ಜಾಹೀರಾತು ಲಿಂಕ್‌ಗಳ ಸಂಖ್ಯೆ ಶೇ.೨,೪೦೦ ಕ್ಕಿಂತ ಹೆಚ್ಚಾಗಿದೆ ಎಂಬುದು ಸಮೀಕ್ಷೆಯಿಂದ ಬಹಿರಂಗಗೊಂಡಿರುವ ಸಂಗತಿ. ವಿಪರ್ಯಾಸವೆಂದರೆ ಈ ಅಪ್ಲಿಕೇಶನ್‌ಗಳ ಬಳಕೆ ಸಂಪೂರ್ಣ ಉಚಿತ. ಗೂಗಲ್‌ನಂತಹ ಟೆಕ್ ದೈತ್ಯ ಈ ಜಾಲವನ್ನು ನಿಯಂತ್ರಿಸಲು ಮುಂಚಿನಿಂದಲೂ ಶ್ರಮಿಸುತ್ತಿದ್ದರೂ, ಅದನ್ನೂ ಮೀರಿ ಬೆಳೆಯು ತ್ತಿದೆ ಎಂದರೆ, ನಿಯಂತ್ರಣ ಕ್ರಮಗಳು ಇನ್ನಷ್ಟು ಬಿಗಿಗೊಳ್ಳಬೇಕಾದ ಅಗತ್ಯ ಹೆಚ್ಚಿದೆ. ಎಐ ತಂತ್ರಜ್ಞಾನದ ಯುಗದಲ್ಲಿ ರಂಗೋಲಿಯೊಳಗೆ ತೂರುವ ಈ ಜಾಲಗಳನ್ನೂ ಹದ್ದುಬಸ್ತಿಗೆ ತರಬೇಕಿದೆ.

ತಜ್ಞರು ಈ ಜಾಲವನ್ನು ಬೇಧಿಸಲು ಕಸರತ್ತು ನಡೆಸುತ್ತಿದ್ದು, ಸರಕಾರಗಳು ಸೂಕ್ತ ನೀತಿ ನಿರೂಪಣೆಯ ಬೆಂಬಲ ನೀಡಬೇಕಿದೆ. ಸಾಮಾಜಿಕ ಜಾಲಾತಾಣ ದಲ್ಲಿ ಆದಷ್ಟು ಗೌಪ್ಯತೆ ಕಾಪಾಡಿಕೊಳ್ಳುವುದು ಈಗ ಸದ್ಯಕ್ಕಿರುವ ತಾತ್ಕಾಲಿಕ ಸುರಕ್ಷಾ ಕ್ರಮ.