Sunday, 5th January 2025

ದೇವರ ಭಗ್ನಮೂರ್ತಿಗಳನ್ನು ಎಲ್ಲೂ ಯಾರೂ ಪೂಜಿಸುವುದಿಲ್ಲ !

ಸಂಗತ

ಡಾ.ವಿಜಯ್ ದರಡಾ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಿಂದ ಗೆದ್ದಿದ್ದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಉಚ್ಚಾಟಿಸಿರುವ ಬಗ್ಗೆ ರೋದಿಸುತ್ತಿರುವವರು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಸಂಸತ್ತು ನಮ್ಮ ಪ್ರಜಾಪ್ರಭುತ್ವದ ದೇಗುಲ. ಅದು ಪವಿತ್ರವಾದ ಜಾಗ. ಅದರ ಘನತೆ ಕಾಪಾಡುವುದು ಎಲ್ಲರ ಹೊಣೆ.

‘ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿರುವವರು ಹಾಗೂ ಮಹುವಾಗೆ ಅನ್ಯಾಯವಾಗಿದೆ ಎಂದು ಒಂದೇ ಸಮನೆ ರೋದಿಸುತ್ತಿರುವವರು ಒಂದು ವಿಷಯ ತಿಳಿದುಕೊಳ್ಳಬೇಕು. ಆಕೆ ತಾನು ಮಾಡಿದ ತಪ್ಪಿಗೆ ಶಿಕ್ಷೆಗೊಳಗಾಗಿದ್ದಾರೆಯೇ ಹೊರತು ಬೇರೇನೂ ಇಲ್ಲ. ಈ ವಿಷಯ ವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವ ಯಾವ ಅಗತ್ಯವೂ ಇಲ್ಲ. ಸಂಪೂರ್ಣ ಬೆಳವಣಿಗೆ ಯನ್ನು ಸಂಸತ್ತಿನ ಗೌರವ ಮತ್ತು ಘನತೆಯ ಕನ್ನಡಕ ದಿಂದಲೇ ನೋಡಬೇಕು. ಸಂಸತ್ತಿನ ನೈತಿಕ ಸಮಿತಿ ಕೂಡ ಇದನ್ನೇ ಮಾಡಿದೆ.

ಮಹುವಾ ಮೊಯಿತ್ರಾ ಅವರ ಬೆಂಬಲಕ್ಕೆ ನಿಂತವರು, ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ನಡೆದಿಲ್ಲ, ಹಾಗಾಗಿ ಪ್ರಕರಣಕ್ಕೆ ನ್ಯಾಯ ಒದಗಿಸಿದಂತಾಗಿಲ್ಲ ಎಂದು ವಾದಿಸುತ್ತಿದ್ದಾರೆ. ಇದರ ಬಗ್ಗೆ ಚರ್ಚಿಸಲು ಮೂರರಿಂದ ನಾಲ್ಕು ದಿನಗಳ ಕಾಲಾವಕಾಶ ನೀಡಬೇಕಿತ್ತು ಎಂಬುದು ಅವರ ಅಂಬೋಣ. ವಿಷಯ ಏನೆಂದರೆ, ಇಲ್ಲಿ ಚರ್ಚೆ ಮಾಡಲು ಅನುಮಾನವೇ ಉಳಿದಿಲ್ಲವಲ್ಲ! ತಮ್ಮ ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್ ವರ್ಡ್‌ಗಳನ್ನು ರಿಯಲ್ ಎಸ್ಟೇಟ್ ಉದ್ಯಮಿ ದರ್ಶನ್ ಹೀರಾನಂದಾನಿಗೆ ನೀಡಿದ್ದು ನಿಜ ಎಂದು ಸ್ವತಃ ಮಹುವಾ ಮೊಯಿತ್ರಾ ಅವರೇ ಒಪ್ಪಿಕೊಂಡಿದ್ದಾರೆ.

ಸಂಸತ್ತಿನ ವೆಬ್‌ಸೈಟಿನಲ್ಲಿ ತಮ್ಮ ಪರವಾಗಿ ನೇರ ವಾಗಿ ಪ್ರಶ್ನೆ ಕೇಳಲು ಅವರಿಗೆ ಅವಕಾಶ ನೀಡಿದ್ದನ್ನೂ, ಅವರಿಂದ ಉಡುಗೊರೆಗಳನ್ನು ಪಡೆದಿದ್ದನ್ನೂ ಆಕೆ ಒಪ್ಪಿಕೊಂಡಿದ್ದಾರೆ. ಹಾಗಿರುವಾಗ ಇದರಲ್ಲಿ ಚರ್ಚೆಯ ಮಾತು ಎಲ್ಲಿಂದ ಬಂತು? ಮಹುವಾ ವಿರುದ್ಧ ಇದ್ದ ಪ್ರಮುಖ ಆರೋಪವೇ ಇದಾಗಿತ್ತು. ಅವರು ಹೀರಾ
ನಂದಾನಿ ಗ್ರೂಪ್‌ನಿಂದ ಹಣ ಹಾಗೂ ಉಡುಗೊರೆ ಪಡೆದು, ಅದಕ್ಕೆ ಪ್ರತಿಯಾಗಿ ಅದಾನಿ ಸಮೂಹದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಅವರ ವಿರುದ್ಧ ಆರೋಪಿಸ ಲಾಗಿತ್ತು. ನೈತಿಕ ಸಮಿತಿಯ ವಿಚಾರಣಾ ಸಭೆಯಲ್ಲಿ ಈ ಆರೋಪ ಸ್ಪಷ್ಟವಾಗಿ ಸಾಬೀತಾಗಿದೆ.

ವಿಚಿತ್ರವೆಂದರೆ, ಮಹುವಾ ಅವರ ಸಂಸತ್ ವೆಬ್‌ಸೈಟಿನ ಖಾತೆಯನ್ನು ದುಬೈನಿಂದ ೪೭ ಬಾರಿ ಬಳಕೆ ಮಾಡಲಾಗಿದೆ. ಆಕೆ ಈವರೆಗೆ ಸಂಸತ್ತಿನಲ್ಲಿ ಕೇಳಿದ ೬೧ ಪ್ರಶ್ನೆಗಳ ಪೈಕಿ ೫೦ ಪ್ರಶ್ನೆಗಳು ಅದಾನಿ ಸಮೂಹಕ್ಕೆ ಸಂಬಂಧಪಟ್ಟಿದ್ದಾಗಿವೆ! ಒಮ್ಮೆ ಯೋಚಿಸಿ ನೋಡಿ, ಭಾರತದ ಸಂಸತ್ ವೆಬ್‌ಸೈಟಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡನ್ನು ಅಕ್ರಮವಾಗಿ ಪಡೆದುಕೊಂಡು ಯಾರೋ ಒಬ್ಬ ವ್ಯಕ್ತಿ ದುಬೈನಲ್ಲಿ ಕುಳಿತುಕೊಂಡು ಕಾರ್ಯಾಚರಣೆ ನಡೆಸುತ್ತಾ ನೆಂಬುದು ಎಂಥಾ ಗಂಭೀರ ವಿಚಾರವಲ್ಲವೇ? ಇದು ದೇಶದ ಭದ್ರತೆಗೆ ಸಂಬಂಧಿಸಿದ ಸಂಗತಿಯಲ್ಲವೇ? ಲಾಗಿನ್ ಐಡಿ ಮತ್ತು ಪಾಸ್‌ವರ್ಡನ್ನು ಬೇರೆಯವರ ಜತೆ ಹಂಚಿಕೊಳ್ಳ ಬಾರದು ಎಂದು ಸಂಸದೀಯ ನಿಯಮಾವಳಿಯಲ್ಲಿ ಎಲ್ಲೂ ಹೇಳಿಲ್ಲ ಎಂಬ ನೆಪ ಹೇಳಿ ಈ ಹೊಣೆಗಾರಿಕೆಯಿಂದ ಮಹುವಾ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಇ-ಮೇಲ್‌ನ ಲಾಗಿನ್ ಐಡಿ ಮತ್ತು ಪಾಸ್‌ವರ್ಡನ್ನು ಕೂಡ ಬೇರೆಯವರ ಜತೆಗೆ ಹಂಚಿಕೊಳ್ಳಬಾರದು ಎಂಬುದು ಈ ದೇಶದ ಪುಟ್ಟ ಮಕ್ಕಳಿಗೆಲ್ಲ ಗೊತ್ತಿದೆ. ನಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬೇರೆಯವರಿಗೆ ಸಿಕ್ಕಿದರೆ ಯಾವ ಕ್ಷಣದಲ್ಲಿ ಬೇಕಾದರೂ ನಮಗೆ ಮೋಸ ವಾಗಬಹುದು. ಆದರೆ ಮಹುವಾ ಪ್ರಕರಣ ದಲ್ಲಿ ಮೋಸ ಕೂಡ ಆಗಿಲ್ಲ ಬಿಡಿ.

ಆಕೆಯೇ ಉದ್ದೇಶಪೂರ್ವಕವಾಗಿ ತಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡನ್ನು ಹಂಚಿಕೊಂಡಿದ್ದಾರೆ. ಮಹುವಾ ವಿರುದ್ಧ ಮೊದಲಿಗೆ ಈ ಆರೋಪ ಮಾಡಿದ್ದವರು ಬಿಜೆಪಿ ಸಂಸದ ನಿಶಿಕಾಂತ್ ದುಬೆ. ಅವರಿಗೆ ಇದರ ಬಗ್ಗೆ ದಾಖಲೆಗಳನ್ನು ನೀಡಿದ್ದವರು ಜೈ ಅನಂತ ದೇಹಾದ್ರಾಯಿ. ಅವರಿಬ್ಬರನ್ನೂ, ಜತೆಗೆ ಸ್ವತಃ ಮಹುವಾ
ಮೊಯಿತ್ರಾ ಅವರನ್ನೂ ಸಂಸತ್ತಿನ ನೈತಿಕ ಸಮಿತಿ ವಿಚಾರಣೆಗೆ ಒಳಪಡಿಸಿದೆ. ಅವರಿಗೆ ಅವರ ವಾದ ಮಂಡಿಸಲು ಅವಕಾಶ ನೀಡಿದೆ. ಆದರೆ ವಿಚಾರಣೆಗೆ ಮಹುವಾ ಸಹಕಾರ ನೀಡಿಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಜೈ ಅನಂತ್ ದೇಹಾದ್ರಾಯಿ ಅವರು ಒಂದು ಕಾಲದಲ್ಲಿ ಮಹುವಾಗೆ ಆಪ್ತ ಸ್ನೇಹಿತನೇ ಆಗಿದ್ದರು. ಆತ ತನ್ನ ‘ಅತೃಪ್ತ ಮಾಜಿ ಪ್ರಿಯಕರ’ ಎಂದು ಸ್ವತಃ ಮಹುವಾ ಹೇಳಿದ್ದಾರೆ. ಈ ವಿಷಯವನ್ನು ಹೇಳಿದ ನಂತರವಷ್ಟೇ ಆಕೆ ನೈತಿಕ ಸಮಿತಿಯು ತನಗೆ ಮುಜುಗರ ವಾಗುವಂಥ ಖಾಸಗಿ ಪ್ರಶ್ನೆಗಳನ್ನೆಲ್ಲ ಕೇಳುತ್ತಿದೆ ಎಂದು ಆರೋಪ ಮಾಡಲಾರಂಭಿಸಿದರು. ನೈತಿಕ ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಂಸದರೂ ಇದ್ದಾರೆ.

ಅದು ರಾಜಕೀಯೇತರ ಸಮಿತಿ. ಆದರೂ ತಮ್ಮ ವಿರುದ್ಧದ ಆರೋಪ ಹಾಗೂ ನಿಜವಾದ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಆಕೆ ಆ ಸಮಿತಿಯ ವಿರುದ್ಧವೇ ಆರೋಪ ಗಳನ್ನು ಮಾಡತೊಡಗಿದ್ದರು. ನೈತಿಕ ಸಮಿತಿಯ ಚೇರ್ಮನ್ ಹಾಗೂ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನಕರ್ ಅವರು ಮಹುವಾ ಈ ಪ್ರಕರಣದ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ಸಭೆಯ ಟಿಪ್ಪಣಿಯಲ್ಲಿ ಅಧಿಕೃತವಾಗಿ ದಾಖಲಿಸಿದ್ದಾರೆ. ಇನ್ನು, ಮಹುವಾಗೆ ತನ್ನನ್ನು ಸಮರ್ಥಿಸಿಕೊಳ್ಳಲು ಸಂಸತ್ತಿನಲ್ಲಿ ಅವಕಾಶ ನೀಡಿಲ್ಲ ಮತ್ತು ಈ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಮುಕ್ತವಾದ ಚರ್ಚೆ ನಡೆಯಲಿಲ್ಲ ಎಂಬ ವಿಷಯಕ್ಕೆ ಬರೋಣ.
ಸ್ವತಃ ಸಂಸತ್ತಿನ ನೈತಿಕ ಸಮಿತಿಯೇ ಈ ಬಗ್ಗೆ ತನಿಖೆ ನಡೆಸಿದ ಮೇಲೆ ಮತ್ತೆ ಮಹುವಾಗೆ ಸಮರ್ಥಿಸಿಕೊಳ್ಳಲು ಹಾಗೂ ಸಂಸದರಿಗೆ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ತನ್ನ ವಾದ ಮಂಡಿಸಲು ಹಾಗೂ ಏನೇನು ಹೇಳಬೇಕೋ ಅದನ್ನೆಲ್ಲ ಹೇಳಲು ನೈತಿಕ ಸಮಿತಿಯ ವಿಚಾರಣೆಯಲ್ಲಿ ಮಹುವಾಗೆ ಎಲ್ಲ ಅವಕಾಶಗಳೂ ಇದ್ದವು. ಆದರೆ ಆಕೆ ಅಲ್ಲಿ ರಾಜಕೀಯದಾಟ ಆಡಿದರು. ತಾನೊಬ್ಬ ಮಹಿಳೆ ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂಬ ಆಕೆಯ ಆರೋಪ ಹಾಗೂ ಅದಕ್ಕೆ ಇನ್ನೊಂದಷ್ಟು ಸಂಸದರ ಸಮರ್ಥನೆ ನಿಜಕ್ಕೂ ಹಾಸ್ಯಾಸ್ಪದವಾಗಿವೆ. ಅಂಥ ನಿಲುವು ತಾಳುವುದು ಅಥವಾ ಅಂಥದ್ದೊಂದು ಅಭಿಪ್ರಾಯಕ್ಕೆ ಬರುವುದೇ ಸಂಪೂರ್ಣ ಅಸಂಬದ್ಧವಾಗಿದೆ. ಏಕೆಂದರೆ ಇದು ಮಹಿಳೆಯ ಕುರಿತಾದ ವಿಚಾರ ಅಲ್ಲವೇ ಅಲ್ಲ. ಇದು ಸಂಪೂರ್ಣವಾಗಿ ಸಂಸತ್ತಿನ ಘನತೆಗೆ ಸಂಬಂಧಪಟ್ಟ ವಿಚಾರ.

ಇಷ್ಟಕ್ಕೂ ಹಣ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಸಂಸದರನ್ನು ಉಚ್ಚಾಟಿಸುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ೨೦೦೫ ರಲ್ಲಿ ಒಂದು ನ್ಯೂಸ್ ಚಾನಲ್ ಕುಟುಕು ಕಾರ್ಯಾಚರಣೆ ನಡೆಸಿ ಸಂಸದರು ಪ್ರಶ್ನೆ ಕೇಳಲು ಲಂಚದ ಹಣ ಪಡೆಯುತ್ತಿರುವ ವಿಡಿಯೋ ಗಳನ್ನು ಹಸಿಬಿಸಿಯಾಗಿ ಬಿತ್ತರಿಸಿತ್ತು. ಸುಮಾರು ೧೦ ಲೋಕಸಭಾ ಸಂಸದರು ಹಾಗೂ ಒಬ್ಬ ರಾಜ್ಯಸಭಾ ಸದಸ್ಯರು ಹಣ ಪಡೆದ ಆರೋಪದಲ್ಲಿ ಉಚ್ಚಾಟನೆ ಗೊಂಡಿದ್ದರು. ಹಾಗೆ ಉಚ್ಚಾಟನೆಗೊಂಡಿದ್ದವರು ಬಿಜೆಪಿಯ ಅಣ್ಣಾ ಪಾಟೀಲ್, ವೈ.ಜಿ.ಮಹಾಜನ್, ಸುರೇಶ್ ಚಾಂಡೇಲ, ಪ್ರದೀಪ್ ಗಾಂಧಿ, ಚಂದ್ರಪಾಲ್ ಹಾಗೂ ಛತ್ರಪಾಲ್ ಸಿಂಗ್ (ರಾಜ್ಯಸಭೆ), ಬಿಎಸ್‌ಪಿಯ ನರೇಂದ್ರ ಕುಶ್ವಾಹಾ, ಲಾಲ್ ಚಂದ್ರ, ರಾಜಾರಾಮ್ ಪಾಲ್, ಕಾಂಗ್ರೆಸ್‌ನ ರಾಮಸೇವಕ್ ಸಿಂಗ್ ಹಾಗೂ ಆರ್‌ಜೆಡಿಯ ಮನೋಜ್ ಕುಮಾರ್ ಝಾ. ಅದಕ್ಕೂ ಮುಂಚೆ ೧೯೫೧ರಲ್ಲಿ ಎಚ್.ಜಿ.ಮುದ್ಗಲ್ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.

೧೯೭೮ರಲ್ಲಿ ಇಂದಿರಾ ಗಾಂಧಿ ಕೂಡ ಜನತಾ ಪಾರ್ಟಿ ಸರಕಾರದ ಅವಧಿಯಲ್ಲಿ ಉಚ್ಚಾಟನೆಗೊಂಡಿದ್ದರು. ನಂತರದ ವರ್ಷಗಳಲ್ಲಿ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿ, ವಿಜಯ್ ಮಲ್ಯ ಸೇರಿದಂತೆ ಒಟ್ಟು ೪೨ ಸಂಸದರು ನಾನಾ ಕಾರಣಗಳಿಂದಾಗಿ ತಮ್ಮ ಸಂಸತ್ ಸದಸ್ಯತ್ವ ಕಳೆದು ಕೊಂಡಿದ್ದಾರೆ. ಆದರೆ ರಾಹುಲ್ ಗಾಂಽಗೆ ವಿಽಸಿದ್ದ ಶಿಕ್ಷೆಯನ್ನು ಕೋರ್ಟ್ ಅಮಾನತಿನಲ್ಲಿಟ್ಟ ನಂತರ ಅವರಿಗೆ ಪುನಃ ಸಂಸತ್ತಿನ ಸದಸ್ಯತ್ವ ನೀಡಲಾಗಿದೆ. ನಾನು ಕೂಡ ೧೮ ವರ್ಷಗಳ ಕಾಲ ಸಂಸತ್ತಿನ ಸದಸ್ಯನಾಗಿದ್ದೆ. ಅಲ್ಲಿ ಹೇಗೆ ನಡೆದುಕೊಳ್ಳಬೇಕು ಮತ್ತು ಸಂಸತ್ ಸದಸ್ಯರ ಜವಾಬ್ದಾರಿಗಳೇನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನೀವು
ಸಂಸತ್ತಿಗೆ ಹೋಗುತ್ತೀರಿ ಎಂದಾದರೆ ನಿಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿಗಳಿರುತ್ತವೆ. ನೀವು ಈ ದೇಶದ ಜನರನ್ನು ಪ್ರತಿನಿಧಿಸುತ್ತೀರಿ.

ಪಾರ್ಲಿಮೆಂಟ್ ಎಂಬುದು ಕೇವಲ ಇಟ್ಟಿಗೆ-ಸಿಮೆಂಟಿನಿಂದ ಕಟ್ಟಿದ ಕಟ್ಟಡವಲ್ಲ. ಅಥವಾ ಅದು ಬರೀ ವಾಗ್ವಾದ, ಚರ್ಚೆ ನಡೆಸುವ ಸ್ಥಳವೂ ಅಲ್ಲ. ಬದಲಿಗೆ
ಅದು ಈ ದೇಶದ ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿ ಗಣರಾಜ್ಯವನ್ನು ಪೂಜಿಸಲಾಗುತ್ತದೆ. ಅಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಪವಿತ್ರ ಕಾರ್ಯ ನಡೆಯು ತ್ತದೆ. ಸಂಸತ್ತು ನಿಂತಿರುವುದೇ ನಂಬಿಕೆ ಮತ್ತು ಆಶೋತ್ತರಗಳ ಮೇಲೆ. ಅಂಥ ಪವಿತ್ರ ತಾಣದಲ್ಲಿ ಮೋಸ ಹಾಗೂ ವಂಚನೆಗೆ ಆಸ್ಪದ ಇರಲೇಬಾರದು. ಜನತಾ ನ್ಯಾಯಾಲಯದಲ್ಲಿ ಮಹುವಾಗೆ ನ್ಯಾಯ ಸಿಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಹುವಾ ಮತ್ತೆ ಚುನಾವಣೆಯಲ್ಲಿ ಸ್ಪಽಸಿ ಗೆದ್ದು ಬರಬಹುದು. ನಂತರ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದು. ಆದರೆ ಅದರಿಂದ ಆಕೆ ಕಳಂಕಗಳಿಂದ ಮುಕ್ತರಾಗುವುದಿಲ್ಲ. ಅವರು
ಮಾಡಿದ ತಪ್ಪು ತಪ್ಪೇ. ನನ್ನ ಪ್ರಕಾರ ರಾಜಕಾರಣ ಮಾಡುವುದಕ್ಕಾಗಿ ಸಂಸತ್ತಿನ ನೈತಿಕ ಸಮಿತಿಯನ್ನು ಹಾಗೂ ಸರಕಾರವನ್ನು ಯಾರೂ ಪ್ರಶ್ನೆ ಮಾಡಬಾರದು. ಇಂದು ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ನಾಳೆ ಇನ್ನಾವುದೋ ರಾಜಕೀಯ ಪಕ್ಷ ಸರಕಾರ ರಚಿಸಬಹುದು. ಪ್ರಜಾಪ್ರಭುತ್ವದಲ್ಲಿ ಬೇರೆ ಬೇರೆ
ರಾಜಕೀಯ ಪಕ್ಷಗಳು ಅಽಕಾರಕ್ಕೇರುವುದು, ಸೋಲುವುದು ಸರ್ವೇಸಾಮಾನ್ಯ.

ಆದರೆ ಸಂಸತ್ತಿನ ಘನತೆ ಎಂಬುದು ಇದೆಯಲ್ಲ, ಅದು ಯಾವುದೇ ಸರಕಾರದ ಅಥವಾ ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ. ಅದನ್ನು ಕಾಪಾಡುವುದು ಎಲ್ಲಾ
ರಾಜಕೀಯ ಪಕ್ಷಗಳ ಜವಾಬ್ದಾರಿ. ಎಲ್ಲರೂ ಒಗ್ಗಟ್ಟಿನಿಂದ ಪಾರ್ಲಿಮೆಂಟ್‌ನ ಘನತೆಯನ್ನು ಎತ್ತಿಹಿಡಿಯಬೇಕು. ನಾವೆಲ್ಲರೂ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

(ಲೇಖಕರು ಹಿರಿಯ ಪತ್ರಕರ್ತರು ಮತ್ತು
ರಾಜ್ಯಸಭೆಯ ಮಾಜಿ ಸದಸ್ಯರು)

Leave a Reply

Your email address will not be published. Required fields are marked *