Monday, 25th November 2024

ನಾಶವಾಗಬೇಕಿದ್ದ ಐಫೋನ್ ಮಾರುಕಟ್ಟೆಯಲ್ಲಿ!

-ಅಜಯ್ ಅಂಚೆಪಾಳ್ಯ

ಸ್ಮಾರ್ಟ್‌ಫೋನ್ ಮತ್ತು ಇತರ ಗೆಜೆಟ್‌ಗಳನ್ನು ತಯಾರಿಸುವ ದೈತ್ಯ ಸಂಸ್ಥೆ ಆ್ಯಪಲ್ ತನ್ನ ಕೆಲವು ಉತ್ಪನ್ನಗಳನ್ನು ಕೆನಡಾದ ಜೀಪ್ ಸಂಸ್ಥೆಗೆ ನೀಡಿತ್ತು. ಉದ್ದೇಶ ಅವುಗಳನ್ನು ಬಿಚ್ಚಿ, ರಿಸೈಕಲ್ ಮಾಡುವುದು. ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಸಾಧ್ಯ ಎನಿಸಿದ್ದರಿಂದ, ಕಳಪೆ ಮತ್ತು ದೋಷಪೂರಿತ ಎಂದು ವರ್ಗಿಕರಿಸಿ, ಕಳುಹಿಸಲಾಗಿತ್ತು. ಈ ಉದ್ದೇಶಕ್ಕೆಂದು

ಐಪ್ಯಾಡ್, ಐಪೋನ್, ವಾಚ್ ಮೊದಲಾದ ಸುಮಾರು 1,00,000 ವಸ್ತುಗಳನ್ನು ಜೀಪ್ ಸಂಸ್ಥೆ ಸ್ವೀಕರಿಸಿತ್ತು. ಆದರೆ, ವಾಸ್ತವವಾಗಿ ಆಗಿದ್ದು ಬೇರೇನೆ. ಆ ವಸ್ತುಗಳನ್ನು ರಿಸೈಕಲ್ ಮಾಡುವುದಕ್ಕೆಂದು ಸ್ವೀಕರಿಸಿದ ಜೀಪ್ ಉದ್ಯೋಗಿಗಳು ಅದನ್ನು ಪುನಃ ಮಾರಾಟ ಮಾಡಿದ್ದರು!

2015ರಿಂದ 2017ರ ಅವಧಿಯಲ್ಲಿ ಇಂತಹ ಸುಮಾರು ಒಂದು ಲಕ್ಷ ಗೆಜೆಟ್ ಗಳು ಸಕ್ರಿಯವಾಗಿರುವುದನ್ನು ಆ್ಯಪಲ್ ಪತ್ತೆಹಚ್ಚಿತು. ನಾಶಗೊಳ್ಳಬೇಕಿದ್ದ ಉಪಕರಣಗಳು ಸಕ್ರಿಯವಾಗಿದ್ದಾದರೂ ಹೇಗೆ! ಆಡಿಟ್ ಮೂಲಕ ಪರಿಶೋಧಿಸಿದಾಗ, ನಾಶಮಾಡಲು ಕಳುಹಿಸಿದ್ದ 1,03,845 ಉಪಕರಣಗಳು ಅಂತರ್ಜಾಲವನ್ನು ಬಳಸುತ್ತಿದ್ದವು!

ಇದನ್ನು ಜೀಪ್ ಸಂಸ್ಥೆಯ ಗಮನಕ್ಕೆ ತಂದಾಗ, ಅಲ್ಲಿ ಮತ್ತೊಂದು ಪತ್ತೇದಾರಿ ಆರಂಭವಾಯಿತು. ಕೊನೆಗೆ, ಈ ಆರೋಪವನ್ನು ಜೀಪ್ ಸಂಸ್ಥೆ ನಿರಾಕರಿಸಲಿಲ್ಲ, ಬದಲಿಗೆ ತನ್ನ ಮೂವರು ಹಿರಿಯ ಅಧಿಕಾರಿಗಳು ಈ ವಸ್ತುಗಳನ್ನು ಕದ್ದು, ತಾವು ಬೇರೆ ಕಡೆ ಉಪಯೋಗಿಸಿದ್ದಾರೆ ಎಂದು ಹೇಳಿತು. ಆದ್ದರಿಂದ, ತನ್ನ ಸಂಸ್ಥೆ ಇದಕ್ಕೆ ಹೊಣೆಗಾರನಲ್ಲ ಎಂದೂ ವಾದಿಸಿತು. ಈಗ ಆ್ಯಪಲ್ ಸಂಸ್ಥೆಯು ಸುಮಾರು 22.7 ಮಿಲಿಯ ಡಾಲರ್ ಮೊತ್ತದ ಪರಿಹಾರವನ್ನು ಜೀಪ್ ಸಂಸ್ಥೆಯಿಂದ ಕೇಳುತ್ತಿದೆ.

ಜೀಪ್ ಸಂಸ್ಥೆಯೇ ಒಪ್ಪಿಕೊಂಡಂತೆ, ಉನ್ನತ ಹುದ್ದೆಯಲ್ಲಿರುವ ಅದರ ಉದ್ಯೋಗಿಗಳು ಈ ಕೆಲಸ ಮಾಡಿರುವುದರಿಂದ, ಈ ಕೃತ್ಯಕ್ಕೆ ಜೀಪ್ ಹೊಣೆ ಎಂದು ಆ್ಯಪಲ್ ವಾದಮಾಡುತ್ತಿದೆ. ಪರಸ್ಪರ ಒಡಂಬಡಿಕೆಯೊಂದಿಗೆ ಕೆಲಸ ಮಾಡುತ್ತಿದ್ದ ಆ ಎರಡೂ ಸಂಸ್ಥೆಗಳ ನಡುವೆ ಈಗ ವಾದವಿವಾದ ಆರಂಭವಾಗಿದೆ. ಇಲ್ಲಿ ಇನ್ನೊಂದು ಆಯಾಮದ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ಇಂತಹ ವಸ್ತುಗಳನ್ನು ನಾಶ ಮಾಡುವಬದಲು, ಅದನ್ನು ಮರು ಬಳಕೆಗೆ ರಿಪೇರಿ ಮಾಡಿ ಮಾರುಕಟ್ಟೆಗೆ ಬಿಡುವುದೇ ಸೂಕ್ತ, ಇದರಿಂದಾಗಿ ಇ-ತ್ಯಾಜ್ಯವನ್ನು ಕಡಿಮೆ ಮಾಡಬಹುದು ಎಂದು ಪರಿಸರ ಪ್ರೇಮಿಗಳು ವಾದಿಸುತ್ತಿದ್ದಾರೆ!