Sunday, 15th December 2024

ಅಡಕೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಿ

ಭಾರತದಲ್ಲಿ ಅಡಕೆ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕ. ಕರ್ನಾಟಕದಲ್ಲಿ ?೪,೩೦೦ ಕೋಟಿ ಮೌಲ್ಯದ ೯.೫ ಲಕ್ಷ ಟನ್ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಯು ೫೦ ಲಕ್ಷ ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅಡಿಕೆಗೆ ಉತ್ತಮ ಬೆಲೆ ದೊರಕುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗಗಳಿಂದಾಗಿ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

೭ ಜಿಗಳಲ್ಲಿನ ೫೩,೯೭೭.೦೪ ಹೆಕ್ಟೇರ್‌ಗೂ ಹೆಚ್ಚಿನ ಅಡಕೆ ತೋಟಗಳು ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತ ತಲುಪಿವೆ. ತುಂಬಾ ಕೃಷಿಕರು ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದಾಗಿ ನಾಶವಾದ ತೋಟವನ್ನು ಕಡಿದುಹಾಕಿದ್ದಾರೆ. ಅಡಕೆ ದೀರ್ಘಾವಧಿ ಬೆಳೆಯಾದ್ದರಿಂದ ಅದನ್ನು ಕಡಿದುಹಾಕಿದರೆ ಮುಂದಿನ ಹಲವಾರು ವರ್ಷಗಳು ಯಾವ ಆದಾಯದಿಂದ ವಂಚಿತರಾಗಬೇಕಾಗುತ್ತದೆ. ಈ ರೋಗಗಳ ನಿಯಂತ್ರಣಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ರೋಗದ ನಿಯಂತ್ರಣಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ಶೃಂಗೇರಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾ ಲಯದ ಸಂಶೋಧನಾ ಕೇಂದ್ರಗಳನ್ನು ತೆರೆದು, ಸಂಶೋಧನೆಗೆ ಹಣಕಾಸಿನ ನೆರವನ್ನೂ ನೀಡಿದೆ.

ಆದರೆ ಪರಿಣಾಮಕಾರಿಯಾದ ಫಲಿತಾಂಶ ಬಂದಿಲ್ಲ. ಈ ನಡುವೆ ಕರ್ನಾಟಕದಲ್ಲಿ ಅಡಕೆ ತೋಟಗಳಲ್ಲಿ ಹಬ್ಬಿರುವ ಎಲೆ ಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ನಿಯಂತ್ರಣ ಮತ್ತು ಸಂಶೋಧನೆಗೆ ?೨೨೫.೭೩ ಕೋಟಿ ನೆರವು ನೀಡುವಂತೆ ಕರ್ನಾಟಕ ತೋಟಗಾರಿಕೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ
ಕೇಂದ್ರ ಕೃಷಿ ಸಚಿವಾಲಯ ಒಪ್ಪಿಗೆ ಸೂಚಿಸಿಲ್ಲ. ಈ ರೋಗಗಳ ಕಂಟಕದ ನಡುವೆ ಅಕ್ರಮ ಅಡಕೆಯೂ ರಾಜ್ಯವನ್ನು ಪ್ರವೇಶಿಸಿದ್ದು, ಅಡಕೆ ಬೆಳೆಗಾರರಿಗೆ ಮರಣ ಶಾಸನ ಬರೆದಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗಗಳ ಬಗ್ಗೆ ಹಾಗೂ ಅಕ್ರಮ ಅಡಕೆಯ ಆಮದನ್ನು ಸರಕಾರ ನಿಯಂತ್ರಿಸುವಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅಡಕೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕು.