ಬಡೆಕ್ಕಿಲ ಪ್ರದೀಪ್
ಟೆಕ್ ಟಾಕ್
ಅಗತ್ಯಕ್ಕೆ ಅನುಗುಣವಾಗಿ ಹೊಸ ವಸ್ತುಗಳನ್ನು ತಯಾರಿಸುವಲ್ಲಿ ನಮ್ಮ ದೇಶದವರೂ ಹಿಂದೆ ಬಿದ್ದಿಲ್ಲ ಎಂಬುದಕ್ಕೆ ಈ
ಅಂಕಣದಲ್ಲಿ ಪರಿಚಯಗೊಳ್ಳುತ್ತಿರುವ ವಿಷಯಗಳೇ ಉದಾಹರಣೆ.
ಭಾರತೀಯರ ವೈಶಿಷ್ಟ್ಯತೆಗಳನ್ನು ಗಮನಿಸುತ್ತಾ ಹೋದರೆ, ಅದು ತುದಿಮೊದಲಿಲ್ಲದಿರುವಂತದ್ದು. ಇನ್ನು ತಂತ್ರಜ್ಞಾನದ ವಿಷಯಕ್ಕೆ ಬಂದಾಗಲೂ ನಮ್ಮವರು, ನಮ್ಮತನವನ್ನು ತೋರಿಸೊಳ್ಳುವುದು ನಡೆದೇ ಇದೆ. ಇತ್ತೀಚೆಗೆ ಕಂಡ ಕೆಲವು ವಿಶೇಷ ಬೆಳವಣಿಗೆಗಳು, ಹಾಗೂ ತಂತ್ರಜ್ಞಾನದ ಆವಿಷ್ಕಾರಗಳು ಭಾರತವನ್ನು ತಂತ್ರಜ್ಞಾನ ಲೋಕದ ದೈತ್ಯ ಎನ್ನುವುದಕ್ಕೆ ಉದಾಹರಣೆ ಯಾಗಿ ನಿಲ್ಲುತ್ತವೆ. ಒಬ್ಬ ತನ್ನ ಅಜ್ಜ-ಅಜ್ಜಿಯರ ಕಷ್ಟವನ್ನು ನೋಡಿ 75 ರೂಪಾಯಿಯ ಹಿಯರಿಂಗ್ ಏಡ್ಅನ್ನು ಕಂಡುಹಿಡಿ ದಿರುವ ವಿಷಯವಾದರೆ, ಇನ್ನೊಂದೆಡೆ ಏರ್‌ಪಾಡ್‌ಗಳ ಜೊತೆ ಸೇರಿರುವಂತೆ ಡಿಸೈನ್ ಮಾಡಲಾದ ಆಭರಣವನ್ನು ತಯಾರಿಸಿ ದವರ ಸುದ್ದಿ. ಭಾರತದ ಆ್ಯಪ್ ಗಳಿಗೆಂದೇ ಪ್ಲೇಸ್ಟೋರ್ ಹಾಗೂ ಆ್ಯಪ್ ಸ್ಟೋರ್‌ನಂತೆ ಒಂದು ‘ಆತ್ಮನಿರ್ಭರ್ ಆ್ಯಪ್ ಸ್ಟೋರ್’ ಬೇಗನೆ ರೂಪ ತಾಳಲಿರುವ ವಿಷಯವೂ ಹೊರಬಿದ್ದಿದೆ.
ಆತ್ಮನಿರ್ಭರ ಆ್ಯಪ್ ಸ್ಟೋರ್
ಭಾರತದ ಸ್ವಾಭಿಮಾನದ ಯಾತ್ರೆ ಇನ್ನಷ್ಟು ಬಲಗೊಳ್ಳಬೇಕಿದೆ, ಹಾಗೂ ಈ ನಿಟ್ಟಿನಲ್ಲಿ ಭಾರತೀಯ ಆ್ಯಪ್‌ಗಳನ್ನು ಇನ್ನಷ್ಟು ಭಾರತೀಯರ ಹತ್ತಿರ ತರುವುದೂ ಕೂಡ ಸರಕಾರದ ಉದ್ದೇಶದಂತೆ ಕಾಣುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಆ್ಯಪ್ ಚ್ಯಾಲೆಂಜ್ ಮಾಡಿ ಅದರ ಮೂಲಕ ಕೆಲವೇ ದಿನಗಳಲ್ಲಿ ಸಾವಿರಾರು ವೈವಿಧ್ಯಮಯ ಆ್ಯಪ್‌ಗಳ ಆಗಮನವನ್ನು ಕಂಡಿರುವ ಭಾರತ ಸರಕಾರ ಇದೀಗ ಭಾರತೀಯ ಆ್ಯಪ್‌ಗಳಿಗಾಗಿಯೇ ಒಂದು ಸ್ಟೋರ್‌ಅನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ.
ಇದೊಂದು ರೀತಿಯಲ್ಲಿ ಉತ್ತಮ ಬೆಳವಣಿಗೆಯೇ. ಈ ಮೂಲಕ ಪ್ಲೇಸ್ಟೋರ್ ಅಥವಾ ಆ್ಯಪಲ್‌ನ ಆ್ಯಪ್ ಸ್ಟೋರ್ನಲ್ಲಿರುವಂತೆ ಅವರಿಗೆ ನೀಡಬೇಕಾದ 30 ಶೇಕಡಾ ಶುಲ್ಕವನ್ನು ನೀಡಬೇಕಿಲ್ಲ ಅನ್ನುವ ಈ ಪ್ಲಾನ್‌ನ ಮೂಲಕ ಭಾರತೀಯ ಆ್ಯಪ್‌ಗಳು ಒಂದೇ ಸ್ಟೋರ್‌ನಲ್ಲಿ ಅಂದರೆ ಆಮೆಜಾನ್ ಅಥವಾ ಸ್ಯಾಮ್‌ಸಂಗ್, ಹುವಾವೇ ಸ್ಟೋರ್‌ಗಳ ರೀತಿಯಲ್ಲಿ ತನ್ನದೇ ಸ್ಟೋರ್ ಮಾಡುವ ಮೂಲಕ ಇಲ್ಲಿನ ಡೆವಲಪರ್ಗಳಿಗೆ ಸ್ವಾಭಿಮಾನದ ಹಾದಿಯಲ್ಲಿ ಹೋಗಲು ಅನುವು ಮಾಡಿಕೊಡಲಿದೆ ಸರಕಾರ.
ಇಲೆಕ್ಟ್ರ್ರೊನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಸಡ್ಯಾಕ್ ಜಂಟಿಯಾಗಿ ಈ ಆ್ಯಪ್ ಸ್ಟೋರ್ ಅನ್ನು
ಅಭಿವೃದ್ಧಿಪಡಿಸಲಿವೆ. ಭಾರತದಲ್ಲಿ 97 ಶೇಕಡಾ ಮಂದಿ ಉಪಯೋಗಿಸುತ್ತಿರುವ ಆಂಡ್ರಾಯ್ಡ್ ನಲ್ಲಿ ಈಗಾಗಲೇ ಇರುವ ಹಲವಾರು ಪ್ಲೇಸ್ಟೋರ್‌ನ ಬದಲಿ ಆ್ಯಪ್ ಸ್ಟೋರ್‌ಗಳ ಪೈಕಿ ಇದೂ ಒಂದು ಅನಿಸದೇ ಭಾರತೀಯ ಡೆವೆಲಪರ್‌ಗಳನ್ನು ಆಕರ್ಷಿಸಲಿ ಅನ್ನುವ ಆಶಯ ಎಲ್ಲರದೂ. ಯಾಕೆಂದರೆ ಈಗಾಗಲೇ ಇರುವ ಹುವಾವೇ ಅಥವಾ ಸ್ಯಾಮ್‌ಸಂಗ್‌ನ ಗ್ಯಾಲಕ್ಸೀ
ಸ್ಟೋರ್‌ಗಳು ಈಗ ಒಂದು ಹಂತದ ಬೆಳವಣಿಗೆಯನ್ನು ಕಂಡಿವೆ. ಆದರೆ ಈ ಮಟ್ಟಕ್ಕೆ ತಲುಪುವ ಮುನ್ನ ಈ ಸ್ಟೋರ್ಗಳು ಕೇವಲ ಡಮ್ಮಿ ಸ್ಟೋರ್‌ಗಳಾಗಿದ್ದವು, ಹಾಗೂ ದೊಡ್ಡ ದೊಡ್ಡ ಡೆವಲಪರ್‌ಗಳನ್ನು ತಮ್ಮ ತೆಕ್ಕೆಯೊಳಗೆ ತರಲು ಉತ್ತೇಜನಕಾರಿ ಪ್ರಯತ್ನಗಳನ್ನು ಮಾಡುತ್ತಿದ್ದರು ಹಾಗೂ ಈಗಲೂ ಮಾಡುತ್ತಿದ್ದಾರೆ.
ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಭಾರತದ ಆತ್ಮನಿರ್ಭರ್ ಆ್ಯಪ್ ಸ್ಟೋರ್ (ಇನ್ನೂ ಇದಕ್ಕೆ ಯಾವ ಹೆಸರಿಡಲಿದ್ದಾರೆ ಎನ್ನುವುದು ತಿಳಿದಿಲ್ಲ) ಬೆಳೆಯಬೇಕಿದೆ, ಹಾಗೂ ಅ ಮೂಲಕ ನಿಜ ಅರ್ಥದಲ್ಲಿ ಸ್ವಾಭಿಮಾನಿ ಆ್ಯಪ್ ಸ್ಟೋರ್ ಅನಿಸಿಕೊಳ್ಳ ಬೇಕಿದೆ.
ಡಿಸೈನ್‌ನೊಂದಿಗೆ ಮ್ಯೂಸಿಕ್
ಆ್ಯಪಲ್‌ನ ಏರ್‌ಪಾಡ್‌ಗಳು ಮಾರುಕಟ್ಟೆಗೆ ಬಂದಾಗ ಇದೇನಪ್ಪಾ ಕಿವಿಯಲ್ಲಿ ನೇತುಕೊಂಡಿರುವುದು, ಕಿವಿಯೋಲೆಯೂ ಅಲ್ಲ, ಪೂರ್ತಿ ಇಯರ್ ಫೋನ್ ಕೂಡ ಅಲ್ಲ ಅಂತ ತಲೆ ಕೆರೆದುಕೊಳ್ಳುತ್ತಿದ್ದವರಿಗೆ, ಅದೀಗ ಹೊಸ ಟ್ರೆಂಡನ್ನು ಸೃಷ್ಟಿಸಿರುವುದು ಗೊತ್ತೇ ಇದೆ. ಈಗ ಡಿಸೈನರ್ ಒಬ್ರು ಇದೊಂದು ಡಿಫರೆಂಟ್ ಡಿಸೈನ್ ತಂದು ಗಮನ ಸೆಳೆದಿದ್ದಾರೆ.
ಇದು ಬರೀ ಡಿಸೈನರ್ ಕಿವಿಯೋಲೆಯಾಗಿರದೇ ಈ ಏರ್ ಪಾಡ್‌ಗಳನ್ನು ಸರಿಯಾಗಿ ಕಿವಿಯಲ್ಲಿ ಉಳಿಸಿಕೊಳ್ಳಲು ಆಗದೇ ಪರದಾಡುತ್ತಿದ್ದವರಿಗೆ ವರದಾನವೂ ಆಗಿ ಪರಿಣಮಿಸಿದೆ ಅನ್ನುತ್ತಾರೆ ಈ ಡಿಸೈನ್ ಅನ್ನು ನೋಡಿದವರು. ಸುಹಾನಿ ಪಾರೇಖ್ ಅನ್ನುವವರು ಎರಡು ವಿಭಿನ್ನ ಡಿಸೈನ್‌ನ ಈ ಕಿವಿಯೋಲೆಗಳನ್ನು ಡಿಸೈನ್ ಮಾಡಿದ್ದು, ಐದು ಸಾವಿರ ರುಪಾಯಿಗಳಿಂದ ಒಂಬತ್ತು ಸಾವಿರ ರುಪಾಯಿಗಳಷ್ಟು ಬೆಲೆಬಾಳುವ ಎರಡು ಡಿಸೈನ್‌ಗಳು 22 ಕ್ಯಾರೆಟ್ ಗೋಲ್ಡ್ ಹಾಗೂ ಬಿಳಿ ಬಣ್ಣದಲ್ಲಿ ಲಭ್ಯವಿದೆ. ಸ್ಟೈಲ್‌ಗೆ ಸ್ಕೆ್ಟೈಲ್ ಆಯ್ತು, ಇನ್ನೊಂದೆಡೆ ಏರ್‌ಪಾಡ್‌ಗಳನ್ನು ಹಿಡಿದಿಡುವ ಅವಶ್ಯಕ ವಸ್ತುವೂ ಆಯ್ತು ಅನ್ನೋದು ಇಲ್ಲಿರುವ ತಂತ್ರ. ಆದರೂ ರು.13,000 ದಿಂದ ಶುರುವಾಗುವ ಇದರ ಬೆಲೆಗೆ ಇದನ್ನು ಉಳಿಸಿಕೊಳ್ಳುವ ಉಪಾಯವಾಗಿ (ಅಂದರೆ ದೊಡ್ಡ ಕಿವಿಯವರಿಗೆ ಕಿವಿಯಿಂದ ಬೀಳದಂತೆ ನೋಡಿಕೊಳ್ಳಲು) ಇನ್ನೊಂದಷ್ಟು ಸಾವಿರ ಖರ್ಚು ಮಾಡುವುದೂ ದೊಡ್ಡ
ವಿಷಯವಲ್ಲ ಬಿಡಿ.
ಒಂದು ಡಾಲರ್‌ನ ಹಿಯರಿಂಗ್ ಏಡ್
ಇದೂ ಒಂದು ಕಿವಿ ಮಾತು! ಅಂದರೆ ಒಂದೆಡೆ ಏರ್‌ಪಾಡ್ ಗಳ ಕಿವಿಯೋಲೆ ಸುದ್ದಿಯಾದ್ರೆ, ಇದು ಅದಕ್ಕೂ ಮೀರಿದ ಉಪಯೋಗಕಾರಿ ಮಾಹಿತಿ. ಇಲ್ಲಿ ಒಬ್ಬ ಯುವ ವಿಜ್ಞಾನಿ ಕಂಡುಹಿಡಿದಿರುವ ಈ ಹಿಯರಿಂಗ್ ಏಡ್, ಅಥವಾ ಶ್ರವಣ ಸಾಧನ, ಕೇವಲ 75 ರೂಪಾಯಿಯಲ್ಲಿ ತಯಾರಾಗಬಲ್ಲದು.
ಇನ್ನೂ ಇದು ಮಾರುಕಟ್ಟೆಗೆ ಬರದಿದದ್ದರೂ, ತಾನು ತನ್ನ ಅಜ್ಜ ಅಜ್ಜಿಯ ಕಿವಿ ಕೇಳದಿರುವಿಕೆಯನ್ನು ಕಂಡು ಅವರಿಗೆ ಶ್ರವಣ ಸಾಧನವನ್ನು ಖರೀದಿಸಹೊರಟಾಗ ಅದರ ಬೆಲೆ ಕಂಡು ಚಕಿತನಾಗಿದ್ದ ಸಾದ್ ಭಾಮ್ಲಾ ಎನ್ನುವ ಮುಂಬಯಿಯ ಈ ಯುವ
ಸಂಶೋಧಕನ ಈ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್‌ಏಡ್ ಅಂದು ಕರೆಯುವ ಈ ಸಾಧನಕ್ಕೆ ಇನ್ನೂ ವೈದ್ಯಕೀಯ ಮಾನ್ಯತೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ಕನ್ನಡಕದ ರೀತಿಯಲ್ಲೇ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ, ಎಲ್ಲರೂ ಖರೀದಿ ಮಾಡುವಂತಾಗಬೇಕು ಅನ್ನುವುದು ಅವರ ಉದ್ದೇಶವಾಗಿದ್ದು, ಅದಕ್ಕಾಗಿ ಇದನ್ನು ಹೇಗೆ ಮಾಡಿದ್ದಾರೆ
ಅನ್ನುವುದರ ಮಾಹಿತಿಯನ್ನೂ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಭಾಮ್ಲಾ.
ಹೀಗೆ ಅನಿವಾರ್ಯತೆಯೊಂದು ಅವಕಾಶವಾಗಿ ಮಾರ್ಪಾಡಾಗುವ ಹಲವಾರು ಉದಾಹರಣೆಗಳಲ್ಲಿ ಇದೂ ಒಂದಾಗಿದ್ದು, ಸುಲಭವಾಗಿ ಸಿಗುವ ವಸ್ತುಗಳನ್ನೇ ಬಳಸಿ ತಯಾರಿಸಿದ್ದಾಗಿದೆ ಅನ್ನತ್ತಾರೆ ಸಾದ್. ಎಲ್ಲರಿಗೂ ಸಿಗುವುದಕ್ಕೂ ಮೊದಲು ನೀವು ಇದನ್ನು ಬಳಸಲು ಅಥವಾ ಯಾರಿಗಾದರೂ ಮಾಡಿ ನೀಡಲು ಬಯಸಿದರೆ ಇದಕ್ಕೆ ಅಗತ್ಯವಿರುವ ವಸ್ತುಗಳ ಕಿಟ್ ತರಿಸಿಕೊಂಡು 30 ನಿಮಿಷಗಳೊಳಗೆ ತಯಾರಿಸಿಕೊಳ್ಳಬಹುದಾಗಿದೆ ಅನ್ನುತ್ತಾರೆ ಅವರು. ಜನಸಾಮಾನ್ಯರ ಮತ್ತು ಕಡಿಮೆ ಆದಾಯದವರಿಗೆ ಇದರಿಂದ ಬಹಳಷ್ಟು ಅನುಕೂಲ ಆಗಬಲ್ಲದು.