ಬೆಂಗಳೂರು: ನಮ್ಮ ಮೆಟ್ರೋ ರೈಲುಗಳು ಭಾನುವಾರ ಮಾತ್ರ ಬೆಳಗ್ಗೆ 7ಗಂಟೆಗೆ ಸಂಚಾರ ಆರಂಭಿಸುತ್ತಿವೆ. ಇದರಿಂದ ಕೆಲವು ಉದ್ಯೋಗಿಗಳಿಗೆ ಸೇರಿ ಊರಿನಿಂದ ಬರುವ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಬೇರೆ ಕಡೆಯಿಂದ ನಗರಕ್ಕೆ ಹಾಗೂ ಇಲ್ಲಿನ ತೆರಳುವವರು ಮೆಟ್ರೋಗಾಗಿ ಬೆಳಗ್ಗೆ 5.30 ರಿಂದಲೇ ಕಾಯುವ ದೃಶ್ಯ ಸಾಮಾನ್ಯವಾಗಿರುತ್ತದೆ.
ಸಾಮಾನ್ಯ ದಿನಗಳಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 5 ಗಂಟೆಗೆ ತೆರೆದಿರುತ್ತದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಇನ್ನುಳಿದ ರಜಾ ದಿನಗಳಲ್ಲಿ ನಮ್ಮ ಮೆಟ್ರೋ ಬೆಳಗ್ಗೆ 6 ಗಂಟೆಗೆ ತೆರೆದಿರುತ್ತದೆ. ಈ ಸಂಚಾರ ಸಮಯವನ್ನು ಭಾನುವಾರಕ್ಕೂ ವಿಸ್ತರಣೆ ಮಾಡಬೇಕು ಎಂದು ಭಾನುವಾರ ರಜೆ ಇರದ ಉದ್ಯೋಗಿಗಳು ಮನವಿ ಮಾಡಿದ್ದಾರೆ.
ನಾವು ಬೇರೆ ಬೇರೆ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತೇವೆ. ಕೆಲವು ದಿನಗಳು ಸಮಸ್ಯೆ ಇರದಿದ್ದರೂ ತಿಂಗಳಲ್ಲಿ ಒಂದು ವಾರ ಬೆಳಗ್ಗೆ 7 ಗಂಟೆಗೆ ಕಚೇರಿ ಯಲ್ಲಿರುವಂತೆ ಶೀಫ್ಟ್ ಇರುತ್ತದೆ. ಭಾನುವಾರವು ಕಚೇರಿ ತೆರಳಬೇಕಾಗುತ್ತದೆ. ಈ ವೇಳೆ ಮೆಟ್ರೋ ಸಿಗದ ಹಿನ್ನೆಲೆಯಲ್ಲಿ ಸಾಕಷ್ಟು ತೊಂದರೆ ಆಗುತ್ತಿದೆ.
ಆದ್ದರಿಂದ ಭಾನುವಾರ ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭಿಸಬೇಕು. ಒಂದು ಗಂಟೆ ಬೇಗ ರೈಲು ಆರಂಭಿಸಬೇಕು ಎಂದು ಉದ್ಯೋಗಿಗಳು ಬೆಂಗಳೂರು ಮೆಟ್ರೋ ರೈಲ್ ನಿಗಮ (BMRCL)ಕ್ಕೆ ಒತ್ತಾಯಿಸಿದ್ದಾರೆ.