ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗಳು ಅನುದಾನ ಸಿಗದೆ ಸೊರಗಿವೆ.
ಇದೀಗ ಒಟ್ಟು ಸುಮಾರು 200 ಕ್ಯಾಂಟಿನ್ ಗಳನ್ನು ಮುಂದಿನ ಜನವರಿ 26ರ ಗಣರಾಜ್ಯೋತ್ಸವದ ಒಳಗಾಗಿ ದುರಸ್ತಿಗೊಳಿಸಿ ಹೊಸ ರೂಪದಲ್ಲಿ ಮತ್ತು ಮೆನುವಿನಲ್ಲಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಗರದಲ್ಲಿ 175 ಇಂದಿರಾ ಕ್ಯಾಂಟೀನ್ ಮತ್ತು 24 ಮೊಬೈಲ್ ಕ್ಯಾಂಟೀನ್ ಗಳನ್ನು ಸರ್ಕಾರದಿಂದ ದುರಸ್ತಿ ಕಾಣುತ್ತಿವೆ. ಈಗಿರುವ ಸಣ್ಣ ಪುಟ್ಟ ಲೋಪ ದೋಷಗಳನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಮುಂದಿನ ಸಂಕ್ರಾಂತಿಯಿಂದ (ಜನವರಿ 14) ಕ್ಯಾಂಟೀನ್ ನಲ್ಲಿ ಮುದ್ದೆ ನೀಡುವು ದಾಗಿ ಈ ಹಿಂದೆ ಪಾಲಿಕೆ ತಿಳಿಸಿತ್ತು.
ಗಣರಾಜ್ಯೋತ್ಸವದಿಂದ ಹೊಸ ರೂಪದಲ್ಲಿ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್‌ನ ಮೆನುವಿನಲ್ಲಿ ತುಸು ಬದಲಾವಣೆ ಆಗಲಿದೆ. ಮುದ್ದೆ, ಚಪಾತಿ ಸೇರಿದಂತೆ ಸಾಮಾನ್ಯ ಹೋಟೆಲ್‌ಗಳಲ್ಲಿ ಸಿಗುವ ಆಹಾರ ಪದಾರ್ಥಗಳಂತೆ ವಿವಿಧ ಆಹಾರಗಳನ್ನು ನೀಡುವಂತೆ ತಿಳಿಸಲಾಗಿದೆ.
ಮುಂದಿನ ಜನವರಿ 26ರೊಳಗೆ ಎಲ್ಲವು ಸಿದ್ಧವಾಗುವಂತೆ ಬಿಬಿಎಂಪಿ ನೋಡಿಕೊಳ್ಳುತ್ತಿದೆ. ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರರ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಗುತ್ತಿಗೆದಾರರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಎಂಟು ವಲಯಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಸಮರ್ಪಕವಾಗಿ ಹೊಸ ಮೆನುವಿನಂತೆ ಆಹಾರ ಪೂರೈಕೆಗೆ ಒಟ್ಟು ನಾಲ್ಕು ಪ್ಯಾಕೇಜ್ ರೀತಿಯಲ್ಲಿ ಟೆಂಡರ್ ಕರೆಯಲಾಗಿದೆ. ಒಬ್ಬರು ಗುತ್ತಿಗೆದಾರನಿಗೆ ತಲಾ ಎರಡು ವಲಯಗಳ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆಯ ಜವಾಬ್ದಾರಿ ವಹಿಸಲಾಗುತ್ತದೆ.
ರಾಜ್ಯ ಸರ್ಕಾರ ಹೊಸ 50 ಇಂದಿರಾ ಕ್ಯಾಂಟೀನ್ ನಿರ್ಮಿಸಲು ಯೋಜನೆ ರೂಪಿಸಿದೆ. ಈಗಾಗಲೇ ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೂರು ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದೆ.