Sunday, 15th December 2024

ಸಿಎಂ ಮನವಿಗೆ ಕೇಂದ್ರ ಸ್ಪಂದಿಸಲಿ

ರಾಜ್ಯದಲ್ಲಿ ೨೩೬ರಲ್ಲಿ ೨೨೩ ತಾಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ ೧೯೬ ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಈಗಾಗಲೇ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಕೆಲವೆಡೆ ಜಾನುವಾರನ್ನು ಸಾಕಲಾಗದೇ ಕಡಿಮೆ ಬೆಲೆಗೆ ರೈತರು ಮಾರಾಟ ಮಾಡುತ್ತಿ ದ್ದಾರೆ.

ರಾಜ್ಯಾದ್ಯಂತ ೪೮.೧೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಯಾಗಿ ಗಮನಕ್ಕೆ ತಂದಿದ್ದಾರೆ. ಶೀಘ್ರವೇ ೧೮,೧೭೭.೪೪ ಕೋಟಿ ರು. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದರಲ್ಲಿ ೪೬೬೩.೧೨ ಕೋಟಿ ರು. ಇನ್ಪುಟ್ ಸಬ್ಸಿಡಿ, ೧೨,೭೫೭೭.೮೬ ಕೋಟಿ ರು. ತುರ್ತು ಪರಿಹಾರ, ೫೬೬.೭೮ ಕೋಟಿ ರು.. ಕುಡಿಯುವ ನೀರಿಗಾಗಿ ಹಾಗೂ ೩೬೩.೬೮ ಕೋಟಿ ರು. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಿದ್ದಾರೆ. ಭಾರತವು ಒಕ್ಕೂಟ ವ್ಯವಸ್ಥೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಅತ್ಯುತ್ತಮ ಸಂವಹನ ಹಾಗೂ ಹೊಂದಾಣಿಕೆಯು ಉತ್ತಮ ಆಡಳಿತಕ್ಕೆ ಅತ್ಯಂತ ಮುಖ್ಯ. ಆದ್ದರಿಂದ ರಾಜ್ಯದ ಮನವಿಗೆ
ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ, ಅಗತ್ಯವಾದ ಅನುದಾನವನ್ನು ಒದಗಿಸಬೇಕಿದೆ.

ಸಮನ್ವಯದ ಮೂಲಕ ರಾಜ್ಯ ಸರಕಾರ ಕೇಂದ್ರ ಸರಕಾರದಿಂದ ಗರಿಷ್ಠ ಅನುದಾನ ಪಡೆಯುವ ಪ್ರಯತ್ನ ಮಾಡಬೇಕು. ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿ ದಾಗ ಕೇಂದ್ರದ ಮೇಲೆ ಹಕ್ಕೊತ್ತಾಯ ಮಾಡಲೇಬೇಕು. ಈ ವಿಚಾರದಲ್ಲಿ ಒಣ ಪ್ರತಿಷ್ಠೆ, ಪೂರ್ವಗ್ರಹ, ಸುಖಾಸುಮ್ಮನೆ ಸಂಘರ್ಷ ಬಿಡಬೇಕು. ರೈತರ ಹಿತರಕ್ಷಣೆಯ ದೃಷ್ಟಿಯಿಂದ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದು, ಪಡೆಯುವುದು ಈಗ ಉಭಯ ಸರಕಾರಗಳ ಆದ್ಯತೆ ಯಾಗಬೇಕು.  ರಾಜ್ಯದ ಬಿಜೆಪಿ ಸಂಸದರು ಕೂಡ ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರವಿರುವುದರಿಂದ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸಬೇಕು.