Friday, 20th September 2024

‘ನಂಬಿಕೆ’ಗಿಂತ ಮಿಗಿಲಾದ ದಾಖಲಾತಿ ಬೇರೆ ಬೇಕೆ?

ಅಭಿಮತ

ಡಾ.ಕೆ.ಪಿ.ಪುತ್ತುರಾಯ, ಅಂಕಣಕಾರರು

ಆರೇಳು ದಶಕಗಳ ಹಿಂದಿನ ಮಾತು. ರಾಮ ರಾಜ್ಯ ದಂತಿದ್ದ ಕಾಲದಲ್ಲಿ ನಮ್ಮೂರು ದಕ್ಷಿಣ ಕನ್ನಡದಲ್ಲಿ ಬಹುಪಾಲು ಜನರು ಪ್ರಾಮಾಣಿಕರಾಗಿದ್ದರು. ಬೆಳಗ್ಗೆೆ 8 ಗಂಟೆಗೆ ಸರಿಯಾಗಿ ‘‘ಬಾಣಾರೆ ಇನಿತ್ತ ಬೇಲೆ ದಾನೆ’’ ಅಯ್ಯಾ ಇವತ್ತಿನ ಕೆಲಸವೇನು? ಎಂದು ಅಂಗಳದ ಬದಿಯಲ್ಲಿ ನಿಂತು ಕೈಕಟ್ಟಿಕೊಂಡು ಕೇಳುವ ಕೆಲಸದವರಿಂದ ಹಿಡಿದು, ಹೊಲ-ಗದ್ದೆ ತೋಟದಲ್ಲಿ ಕೂಲಿ ಕೆಲಸ ಮಾಡುವ ಯಾರನ್ನು ಮೇಲ್ವಿಚಾರಣೆ ಮಾಡುವ ಅವಶ್ಯಕತೆಯೇ ಇಲ್ಲವಾಗಿತ್ತು.

ಹಳ್ಳಿಗಳಲ್ಲಿ ಪರ ಊರಿಗೆ ಪ್ರಯಾಣ ಮಾಡುವಾಗ, ಜನರು ತಮ್ಮ ಮನೆಗಳಿಗೆ ಬೀಗವನ್ನು ಹಾಕುವ ಪದ್ಧ ತಿಯೇ ಇಲ್ಲವಾಗಿತ್ತು. ನಾಯಿ, ಹಸುಗಳು ಮನೆಯೊಳಗೆ ಬರದಿರಲೆಂದು, ಮಾತ್ರ ಬರೇ ಚಿಲಕವನ್ನು ಎಳೆದುಕೊಂಡು ಹೋಗುತ್ತಿದ್ದರು. ಮನೆಯ ಹೊರಗೆ ತಂತಿಗಳಲ್ಲಿ ಒಣಗಲು ಹಾಕಿದ ಬಟ್ಟೆ ಬರೆಗಳು, ಸೀರೆಗಳು, ಕೃಷಿಗೆ ಬೇಕಾದ ಉಪಕರಣಗಳು ಹಾಗೆಯೇ ಇರುತ್ತಿದ್ದವು. ಅವೆಲ್ಲ ತಮ್ಮದಲ್ಲದ ಕಾರಣ, ಯಾರೂ ಅವನ್ನು ಮುಟ್ಟುತ್ತಿರಲಿಲ್ಲ. ಕಳ್ಳತನ ಮಾಡಿದರೆ. ಶಿಕ್ಷೆ ತಪ್ಪದು ಎಂಬ ದೈವ ದೇವರು ಗಳ ಭಯವೂ ಜನರ ಮನಸ್ಸಿನಲ್ಲಿ ಮನೆ ಮಾಡಿತ್ತು. ಅಂಗಡಿಗಳಲ್ಲಿ ಕಳಪೆ ವಸ್ತುಗಳು, ಕಲಬೆರಕೆ ಎಂಬುದೇ ಇರುತ್ತಿರಲಿಲ್ಲ. ತೂಕದಲ್ಲಿ ಮೋಸವಿಲ್ಲ, ಕೊಟ್ಟ ಮಾತಿಗೆ ತಪ್ಪುವವರಿಲ್ಲ. ಸರಕಾರಿ ಕಛೇರಿಗಳಲ್ಲಿ ಲಂಚವೆಂಬುದೇ ಜನರಿಗೆ ಅಪರಿಚಿತ ವಾಗಿತ್ತು. ವಿದ್ಯಾರ್ಥಿಗಳಿಗೆ, ಈಗಿನ ಕಾಲದಲ್ಲಿರುವಂತೆ coaching centre, tuition centre ಗಳೇ ಇಲ್ಲವಾಗಿತ್ತು. ಕಾರಣ, ಉರಿ ಬಿಸಿಲೇ ಇರಲಿ; ಬಿಡದೆ ಸುರಿಯುವ ಭಾರೀ ಮಳೆಯೇ ಇರಲಿ, ಜೀವ ಇದ್ದರೆ, ಶಿಕ್ಷಕರು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಬಂದು ಸೇರುತ್ತಿದ್ದರು ಹಾಗೂ ಅತ್ಯಂತ ದಕ್ಷತೆಯಿಂದ ಪಾಠಗಳನ್ನು ಮಾಡುತ್ತಿದ್ದರು.

ಪರೀಕ್ಷೆಗಳನ್ನು ನಡೆಸುವ ವೇಳೆ, ವಿದ್ಯಾರ್ಥಿಗಳ ಮೇಲ್ವಿಚಾರಣೆ ಮಾಡಲು supervisor ಗಳೆಂಬುವವರೇ ಇಲ್ಲವಾಗಿತ್ತು. ಪರೀಕ್ಷೆ ಆರಂಭವಾಗುವ ಮುನ್ನ ಮುಖ್ಯೋಪಾಧ್ಯಾಯರು ಬಂದು ಹೇಳುವವರು ‘‘ಮಕ್ಕಳೇ ಇದು ಪರೀಕ್ಷೆ. ಆಚೆ ಈಚೆ ನೋಡಿ, ಕಾಪಿ ಹೊಡೆಯದೆ, ಇಲ್ಲವೇ ಬಳಿ ಇದ್ದ ಪಠ್ಯ ಪುಸ್ತಕಗಳನ್ನು ಮುಟ್ಟದೇ, ಪ್ರಾಮಾಣಿಕತೆಯಿಂದ ಉತ್ತರ ಬರೆಯಿರಿ. ನಾವ್ಯಾರೂ ಮೇಷ್ಟ್ರುಗಳು ನಿಮ್ಮನ್ನುಯ ಕಾಯಲು ಇರೋದಿಲ್ಲ. ನಾವು ನಿಮ್ಮನ್ನು ನಂಬಿದ್ದೇವೆ’’. ಉತ್ತರವಾಗಿ ಎಲ್ಲಾ ವಿದ್ಯಾರ್ಥಿಗಳು ಒಕ್ಕೂರಿಲಿನಿಂದ ಹೇಳುವವರು ‘‘ಖಂಡಿತವಾಗಿ, ನೀವು ನಮ್ಮನ್ನು ನಂಬಬಹುದು ಸಾರ್. ನಮಗೆ ಗೊತ್ತು ಇದು ಪರೀಕ್ಷೆ; ಆದ ಕಾರಣ ಕಾಪಿ ಹೊಡೆಯಬಾರದೆಂದು! ತಾವು ನಿಶ್ಚಿಂತೆಯಿಂದ ಹೋಗಿ ತಮ್ಮ ತಮ್ಮ ಕೆಲಸವನ್ನು ಮಾಡುತ್ತಿರಿ. ನಮ್ಮನ್ನು ಕಾಯುತ್ತ ತಮ್ಮ ಸಮಯವನ್ನು ವ್ಯರ್ಥಮಾಡದಿರಿ.

ಪರೀಕ್ಷೆಯ ಅವಧಿ ಮುಗಿಯುತ್ತಲೇ, ಬಂದು ಉತ್ತರ ಪತ್ರಿಕೆಗಳನ್ನು collect ಮಾಡುವಿರಂತೆ!’’ ಹೀಗೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದ ಪರೀಕ್ಷಾ ಸಮಯದಲ್ಲಿ ಒಮ್ಮೆ ಧಿಡೀರನೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, inspection ಗೆಂದು ಶಾಲೆಗೆ ಬಂದರು. ಬಂದವರೇ ಪರೀಕ್ಷಾ ಕೊಠಡಿಗೆ ಬಂದು, ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವೀಕ್ಷಿಸತೊಡಗಿದರು. ಅಷ್ಟರಲ್ಲಿ ಉತ್ತರ ಬರೆಯು ತ್ತಿದ್ದ ನಾನು ಒಂದು ಕಡೆ ತಪ್ಪು ಮಾಡಿದ್ದೆ. ಇದನ್ನು ಗಮನಿಸಿದ ನಮ್ಮ ಕ್ಲಾಸ್ ಟೀಚರ್, ನನ್ನ ಬಳಿ ಬಂದು, ಮೆತ್ತಗೆ ನನ್ನ ಕಾಲನ್ನು ಅವರ ಕಾಲಿನಿಂದ ಒತ್ತಿ ‘‘ದಡ್ಡ ತಪ್ಪು ಮಾಡಿದ್ದೀಯ: ಪಕ್ಕದವನ ಉತ್ತರವನ್ನು ನೋಡಿ ಸರಿ ಮಾಡಿಕೋ’’ ಎಂದು ಮೆಲ್ಲಗೆ ಹೇಳಿ ಮುಂದೆ ಸಾಗಿದ್ರು. ಆದರೆ, ನಾನು ಹಾಗೆ ಮಾಡಲಿಲ್ಲ. ಪರೀಕ್ಷೆ ಮುಗಿದ ನಂತರ ‘‘ಏನಪ್ಪಾ ನಾನು ನಿನಗೆ ನಿನ್ನ ತಪ್ಪನ್ನು ಸೂಕ್ಷ್ಮವಾಗಿ ತಿಳಿಸಿ, ಪಕ್ಕದವನ ಉತ್ತರವನ್ನು ನೋಡಿ ತಿದ್ದಿಕೋ ಎಂದು ಹೇಳಿದರೂ, ನೀನು ಸರಿಮಾಡಿಕೊಳ್ಳಲೇ ಇಲ್ಲವಲ್ಲಾ ಯಾಕೆ? ಎಂದು ನನ್ನನ್ನು ಕೇಳಿದರು. ವಿನಮ್ರತೆಯಿಂದ ನಾನೆಂದೆ ‘‘ಸಾರ್, ಇದು ಪರೀಕ್ಷೆಯಲ್ಲವೇ, ಇಲ್ಲಿ ಕಾಪಿ ಹೊಡೆಯೋದಿಲ್ಲವೆಂದು ನಾವೆಲ್ಲ ಮುಖ್ಯೋಪಾಧ್ಯಾಯರಿಗೆ ಮಾತು ಕೊಟ್ಟಿದ್ದೇವೆ. ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ವಿರುದ್ಧವಾಗಿ ನಡೆದರೆ ಅಪಚಾರವಲ್ಲವೇ? ಅಪರಾಧವಲ್ಲವೇ?’’ ನನ್ನ ಮಾತುಗಳನ್ನು ಕೇಳಿದ ಕ್ಲಾಸ್ ಟೀಚರ್ ಮೌನರಾದರು.

ಈ ಪ್ರಾಮಾಣಿಕತೆ, ನನ್ನಲ್ಲಿ ರಕ್ತಗತವಾಗಿ ಬರಲು ನಮ್ಮ ಮನೆಯಲ್ಲಿ ನಡೆದ ಇನ್ನೊೊಂದು ಘಟನೆ ಕಾರಣವಾಗಿತ್ತು. ಅಂದಿನ ವಿತ್ತಸಚಿವರಾದ ಮೊರಾರ್ಜಿ ದೇಸಾಯಿಯವರು, gold coutral ನ್ನು ಜಾರಿಗೆ ತಂದಿದ್ದ ಕಾಲವದು. ಈ ಕಾನೂನಿನ್ವಯ ಚಿನ್ನದ ವ್ಯಾಪಾರಿಗಳು ಅಧಿಕ ಪ್ರಮಾಣದಲ್ಲಿ ಚಿನ್ನವನ್ನು ಸಂಗ್ರಹಿಸಿ, ದಾಸ್ತಾನು ಮಾಡುವಂತಿಲ್ಲವಾಗಿತ್ತು. ನಮ್ಮೂರಲ್ಲಿ, ಶೆಟ್ಟಿಯೊ ಬ್ಬರು ದೊಡ್ಡ ಚಿನ್ನದ ವ್ಯಾಪಾರಿಯಾಗಿದ್ದರು. ನನ್ನ ತಂದೆಯವರು ಇವರ ಆಪ್ತ ಗೆಳೆಯರಾಗಿದ್ದರು; ನಂಬಿಕೆಯ ಮಿತ್ರರಾಗಿ ದ್ದರು. ಒಂದು ದಿನ ಶೆಟ್ರು ತನ್ನ ಹೆಗಲಿಗೆ ಹಾಕಿದ್ದ ಭಾರದವಾದ ಚೀಲದೊಂದಿಗೆ, ನಮ್ಮ ತಂದೆಯವರನ್ನು ಕಾಣಾಲು ನಮ್ಮ ಮನೆಗೆ ಬರುತ್ತಾರೆ. ಉಭಯಕುಶಲೋಪರಿ ಮಾತುಗಳ ನಂತರ ಶೆಟ್ರು ಹೇಳುತ್ತಾರೆ ‘‘ಭಟ್ರೇ ಈ ಚೀಲದೊಳಗೆ ಸ್ವಲ್ಪ ಚಿನ್ನ ಇದೆ. ಕೆಲ ಕಾಲ ನಿಮ್ಮ ಬಳಿ ಇಟ್ಟುಕೊಂಡಿರಿ. ಚಿನ್ನದ ಮೇಲಿನ ನಿರ್ಬಂಧ ತೆರವು ಆದಾಗ, ಮತ್ತೆ ಬಂದು ಒಯ್ಯುವೆ’’ ಎನ್ನುತ್ತಾ ತಂದ ಚೀಲವನ್ನು ನಮ್ಮ ತಂದೆಯವರ ಕೈಗೆ ಒಪ್ಪಿಸುತ್ತಾ ಹೊರಟು ಹೋದರು. ನಮ್ಮ ಅಪ್ಪ ನನ್ನನ್ನು ಕರೆದು, ನಮ್ಮ ಮನೆಯ ಮಾಳಿಗೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಯೊಂದರಲ್ಲಿ ಈ ಚೀಲವನ್ನು ಸುರಕ್ಷಿತವಾಗಿ ಇಡಲು ಮುಂದಾಗುತ್ತಾರೆ.

ಅಷ್ಟರಲ್ಲಿ, ಆ ಚೀಲದೊಳಗೆ ಏನಿರಬಹುದೆಂದು ಕುತೂಹಲ ನನಗೆ ಉಂಟಾಗಿ ‘‘ಒಮ್ಮೆ, ಆ ಚೀಲವನ್ನು ತೆರೆದು ನೋಡಬಹುದೇ, ಅಪ್ಪಾ?’’ ಎಂದು ನಾನು ಒತ್ತಾಯಿಸಿದ್ದಕ್ಕೆ ಆ ಚೀಲವನ್ನು ತೆರೆದು ನೋಡಲಾಗಿ ಅದರಲ್ಲಿ ಆ ಕಾಲಕ್ಕೆ ಲಕ್ಷಾಂತರ ರೂಗಳ ಬೆಲೆ ಬಾಳುವ ಪಳ ಪಳಿಸುವ 8 ಚಿನ್ನದ ಗಟ್ಟಿಗಳಿದ್ದವು. ಜೀವನದಲ್ಲಿ ಮೊದಲ ಬಾರಿಗೆ ಚಿನ್ನದ ಗಟ್ಟಿಗಳನ್ನು ನೋಡಿ ಪುಳಕಿತನಾದ ನನಗೆ, ಗಟ್ಟಿಗಳನ್ನು ಮತ್ತೊಮ್ಮೆ ಎಣಿಸಿ, ನನಗೆ ತೋರಿಸಿ, ಚೀಲವನ್ನು ಬಿಗಿದು ಪೆಟ್ಟಿಗೆಯ ಒಳಗಿಟ್ಟು ಬೀಗ ಹಾಕಿದರು ನಮ್ಮಪ್ಪ. ಆಶ್ಚರ್ಯಗೊಂಡ ನಾನು ಅಪ್ಪನನ್ನು ಕೇಳಿದ ‘‘ಅಲ್ಲಪ್ಪ ಆ ಶೆಟ್ರು ಇಷ್ಟೊಂದು ಬೆಲೆ ಬಾಳುವ ಈ ಚಿನ್ನದ ಗಟ್ಟಿಗಳನ್ನು ನಿಮ್ಮೆದುರು ಎಣಿಸಿಕೊಡಲಿಲ್ಲ.

ನೀವು ಕೂಡಾ ಎಣಿಸಿ ತಗೊಂಡಿಲ್ಲ. ಮೇಲಾಗಿ ಅವರು ಕೊಟ್ಟಿದ್ದಕ್ಕೆ ಮತ್ತು ನೀವು ಅವರಿಂದ ಸ್ವೀಕರಿಸಿದ್ದಕ್ಕೆ ಯಾವ ಪತ್ರ ಪುರಾವೆಗಳೂ ಇಲ್ಲ. ನಾವೇನಾದರೂ ಒಂದೇ ಒಂದು ಗಟ್ಟಿಯನ್ನು ಗಿಟ್ಟಿಸಿದರೂ ಸಾಕು; ದಾಖಲಾತಿಗಳಿಲ್ಲದ ಆ ಶೆಟ್ರಿಂದ ಏನೂ ಮಾಡಲು ಸಾಧ್ಯವಿಲ್ಲ! ಇದೆಂತಹ ವ್ಯವಹಾರ?’’. ಉತ್ತರವಾಗಿ ನಮ್ಮ ಹೇಳಿದ ‘‘ಮಗಾ ಕಾನೂನು ದೃಷ್ಟಿಯಲ್ಲಿ ವ್ಯವಹಾರದ ದೃಷ್ಟಿಯಿಂದ ನೀನು ಹೇಳಿದ್ದೇನೋ ಸರಿ. ಆದರೆ, ಈ ಶೆಟ್ರು ನನ್ನನ್ನು ನಂಬಿದ್ದಾರೆ; ನಂಬಿಕೆಗಿಂತ ಮಿಗಿಲಾದ ದಾಖಲಾತಿ ಬೇರೆ ಬೇಕೆ? ನಂಬಿಕೆ ದ್ರೋಹ ನಾನು ಕನಸಲ್ಲೂ ಎಣಿಸದ ವಿಚಾರ. ಈ ಬಗ್ಗೆ ನಮಗಿಬ್ಬರಿಗೂ ಯಾವ ಭಯ ಸಂಶಯವೂ ಇಲ್ಲ. ಇನ್ನೊಂದು ಮಾತು ಮಗನೆ. ಈ ವಿಷಯ ನಿನಗೂ ತಿಳಿದಿರಲೆಂದು, ನಾನು ನಿನ್ನನ್ನು ಜೊತೆಗೆ ಕರಕೊಂಡು ಬಂದೆ. ಒಂದು ವೇಳೆ, ಮಧ್ಯೆೆ ನಾನೇನಾದರೂ ಸತ್ತು ಹೋದರೆ, ಶೆಟ್ಟಿಗೆ ಈ ಚೀಲವನ್ನು ಹೇಗಿತ್ತೋ ಹಾಗೆಯೇ ಹಿಂತಿರುಗಿಸುವ ಜವಬ್ದಾರಿ ನಿನ್ನದು. ನಾನು ನಿನ್ನನ್ನು ನಂಬಿದ್ದೇನೆ’’.

ಇದನ್ನು ಕೇಳಿದ ನನ್ನ ಕಣ್ಣುಗಳು ತುಂಬಿ ಬಂದವು. ‘‘ಶೆಟ್ರು ನಿನ್ನ ಮೇಲೆ ಇಟ್ಟಿರುವ ನಂಬಿಕೆಗೆ ನೀನು ಹೇಗೆ ಅವರಿಗೆ ಮೋಸ ಮಾಡೋದಿಲ್ಲವೋ, ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನೂ ನಿನಗೆ ಖಂಡಿತವಾಗಿ ಮೋಸ ಮಾಡಲಾರೆ ಅಪ್ಪ’’ ಎನ್ನುತ್ತಾ ಅವನನ್ನು ಬಿಗಿದಪ್ಪಿದೆ. ಹೌದು; ಹಾಗೇ ನೋಡಿದರೆ, ಈ ಜಗತ್ತಿನ ಎಲ್ಲಾ ವ್ಯವಹಾರಗಳು, ಸಂಬಂಧಗಳು, ಕಾರ್ಯ ಕೂಪಗಳು ಕೇವಲ ನಂಬಿಕೆಯ ಆಧಾರದ ಮೇಲೆ ನಡೆಯುತ್ತಿರುತ್ತವೆ. ಬೇರೆ ಯಾವ ದಾಖಲಾತಿಗಳು ಇರೋದಿಲ್ಲ. ಜೀವನದಲ್ಲಿ ಹೆತ್ತವರು ಎಂದೂ ನಮ್ಮ ಕೈಬಿಡಲಾರರು ಎಂಬುದು ಮಕ್ಕಳ ನಂಬಿಕೆಯಾದರೆ, ವೃದ್ಧಾಪ್ಯದಲ್ಲಿ ಮಕ್ಕಳು ಕೈ ಕೊಡಲಾರರು ಎಂಬುದು ಹೆತ್ತವರ ನಂಬಿಕೆ.

ಸುಖೀ ದಾಂಪತ್ಯ ಜೀವನಕ್ಕೆ ಗಂಡ ಹೆಂಡತಿಗೆ ಒಬ್ಬರಿಗೆ ಇನ್ನೊಬ್ಬರ ಮೇಲಿರುವ ನಂಬಿಕೆಯೇ ಮೂಲಾಧಾರ. ತಮ್ಮ ಜೀವವನ್ನೇ ವೈದ್ಯರ ಕೈಗೆ ನೀಡುವ ರೋಗಿಗಳಿಗೆ ವೈದ್ಯರ ಮೇಲೆ ನಂಬಿಕೆ; ಕೋರ್ಟು ಕಛೇರಿಗಳಲ್ಲಿ, ಕಕ್ಷಿದಾರರಿಗೆ, ತಮ್ಮ ಪರ ವಾದಿಸುವ ವಕೀಲರ ಮೇಲೆ ನಂಬಿಕೆ; ವಕೀಲರಿಗೆ ನ್ಯಾಯಾಧೀಶರ ಮೇಲೆ ನಂಬಿಕೆ. ದಿನನಿತ್ಯದ ವ್ಯವಹಾರಗಳಲ್ಲಿ ನಾವು ಎಲ್ಲರನ್ನೂ ನಂಬುತ್ತೇವೆ- ನಮ್ಮ ಕತ್ತನ್ನೇ ಅವನ ಕೈಗೆ ಕೊಟ್ಟಿರುವ ಕ್ಷೌರಿಕನಿಂದ ಹಿಡಿದು ಮಕ್ಕಳಿಗೆ ಪಾಠ ಹೇಳುವ ಗುರುಗಳನ್ನು ಮನೆ ಕೆಲಸದವರನ್ನು ವ್ಯಾಪಾರಿಗಳನ್ನು ನಮ್ಮ ಪರವಾಗಿ ಪೂಜೆ ಮಾಡುವ ಪುರೋಹಿತರನ್ನು, ನಾವು ಕುಳಿತಿರುವ ಕಾರು, ಬಸ್ಸು, ರೈಲು, ವಿಮಾನಗಳನ್ನು ಓಡಿಸುವ ಚಾಲಕರನ್ನು ನಮ್ಮ ಅಡಿಗೆಯವರನ್ನು – ಹೀಗೆ ನಂಬಿಕೆಗಳ ಮೇಲೆಯೇ ಈ ಜಗತ್ತು ಸಾಗು ತ್ತಿರುತ್ತದೆ. ನಂಬಿಕೆಯೊಂದಿದ್ದರೆ, ಇನ್ನಿತರ ಯಾವುದೇ ಸಾಕ್ಷ್ಯ ಪುರಾವೆಗಳ ಅವಶ್ಯಕತೆ ಇಲ್ಲ. ಆದರೆ, ನಂಬಿಕೆಯ ಕಂಬ ಗಳು ಅಲುಗಾಡಿದಾಗ ವ್ಯವಹಾರಗಳು, ಸಂಬಂಧಗಳು ಕುಸಿದು ಬೀಳುತ್ತವೆ. ಆದುದರಿಂದ, ಎಂದೂ ನಂಬಿಕೆಗೆ ದ್ರೋಹ ವೆಸಗಬಾರದು; ನಂಬಿದವರನ್ನು ಕೈಬಿಡಬಾರದು!