Sunday, 15th December 2024

ಮೇಕೇದಾಟು: ನಿರ್ಧಾರಕ್ಕೆ ಸಕಾಲ

ಇದನ್ನು ಯಾವ ರೀತಿಯಲ್ಲಿ ನ್ಯಾಯ ಎಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಇತ್ತ ಕರ್ನಾಟಕದಲ್ಲಿ ಮಳೆಯೇ ಇಲ್ಲದೇ ಹಲವು ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿವೆ. ಅಂತೂ ೨೦೨೩ರ ಕೊನೆಗೆ ಒಂದಷ್ಟು ಮಳೆ ಸುರಿದ ಪರಿಣಾಮ, ಬತ್ತಿ ಹೋಗುತ್ತಿದ್ದ ನದಿ, ಕೆರೆ, ಹಳ್ಳಕೊಳ್ಳಗಳು ಅಲ್ಪಸ್ವಲ್ಪ ತುಂಬಿವೆ.

ಅತ್ತ ತಮಿಳುನಾಡಿನಲ್ಲಿ ಮಳೆ ಆರಂಭದಲ್ಲೇ ಅಬ್ಬರಿಸಿದ ಪರಿಣಾಮ, ಪ್ರವಾಹ ಉಕ್ಕೇರುತ್ತಿದೆ. ತುಂಬಿಕೊಂಡಿರುವ ನೀರು ಹರಿದುಹೋಗಿ  ಖಾಲಿ ಯಾದರೆ ಸಾಕಪ್ಪಾ ಎಂಬಂಥ ಸ್ಥಿತಿ ಇದೆ. ಇಷ್ಟಾದರೂ ಕೇವಲ ಪ್ರತಿಷ್ಠೆಗಾಗಿ ತಮಿಳುನಾಡು ಕಾವೇರಿ ವಿಚಾರದಲ್ಲಿ ಕಿರಿಕ್ ತೆಗೆಯುತ್ತಿದೆ. ಹೀಗಾಗಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಮತ್ತೆ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ತಮಿಳುನಾಡಿನಲ್ಲಿ ಈಗ ಮಳೆಗಾಲ; ಅದೂ ಸಾಲದೆಂಬಂತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು ಬಹುತೇಕ ಜಿಗಳಲ್ಲಿ ಭಾರೀ ಮಳೆ ಬಿದ್ದಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೆಟ್ಟೂರು ಜಲಾಶಯವೂ ತುಂಬಿ ಹೆಚ್ಚುವರಿ ಒಳಹರಿವನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ.

ಪ್ರತಿ ಬಾರಿ ಕಾವೇರಿ ತಗಾದೆ ಆರಂಭವಾದಾಗಲೂ ಮೆಟ್ಟೂರು ಜಲಾಶಯದಲ್ಲಿನ ನೀರಿನ ಮಟ್ಟವನ್ನು ಮುಂದೊಡ್ಡಿಯೇ ಆ ರಾಜ್ಯ ನೀರು ಕೇಳುತ್ತದೆ. ನ್ಯಾಯಮಂಡಳಿಯಲ್ಲಿ ತೀರ್ಪು ಸಹ ಇದನ್ನು ಆಧರಿಸಿಯೇ ಹೊರಬೀಳುವುದು. ಏಕೆಂದರೆ ಕಾವೇರಿ ನದಿಗೆ ತಮಿಳುನಾಡು ರಾಜ್ಯದಲ್ಲಿ ಕಟ್ಟಿರುವ ಏಕೈಕ ದೊಡ್ಡ ಡ್ಯಾಂ ಇದು. ಸುಮಾರು ೧೨೦ ಅಡಿಯ ಮೆಟ್ಟೂರು ಜಲಾಶಯದಲ್ಲಿ ಈಗ ೭೦.೯೭ ಅಡಿ ನೀರು ಸಂಗ್ರಹವಾಗಿದೆ. ೧,೫೬೯ ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ೨೫೦ ಕ್ಯುಸೆಕ್ ನೀರು ಹೊರಗೆ ಹೋಗುತ್ತಿದೆ. ಇಷ್ಟಿದ್ದರೂ ಈಗ ಕರ್ನಾಟಕದಿಂದ ನೀರು ಬಿಡಲು ಒತ್ತಡ ಹಾಕಲಾಗುತ್ತಿರುವುದು ಸರ್ವಥಾ ಅಪರಾಧ ಎನಿಸುತ್ತದೆ.

ಕರ್ನಾಟಕ ತನ್ನ ದುರ್ಭರ ಸ್ಥಿತಿಯ ಬಗೆಗೆ ಎಷ್ಟೇ ಹೇಳಿಕೊಂಡರೂ, ಎಷ್ಟೆ ಮನವಿ ಮಾಡುತ್ತಿದ್ದರೂ ಇದನ್ನು ತಮಿಳುನಾಡಾಗಲೀ, ನ್ಯಾಯಮಂಡಳಿ ಗಳಾಗಲೀ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ನಮಗೆ ಕುಡಿಯುವ ನೀರಿಗೂ ತತ್ವಾರ ಕಾಣಿಸಿಕೊಳ್ಳುವ ಆತಂಕದ ಜೊತೆಗೆ ಕರ್ನಾಟಕದ ರೈತರು ಇದೇ ಕಾರಣಕ್ಕೆ ಮತ್ತೊಮ್ಮೆ ಆಕ್ರೋಶ ಹೊರಹಾಕುವ, ಸಿಡಿದೇಳುವ ಸಾದ್ಯತೆಗಳಿವೆ. ಈ
ಹಿನ್ನೆಲೆಯಲ್ಲಿ ಈಗಾದರೂ ಕರ್ನಾಟಕ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡಿ, ಉಭಯ ರಾಜ್ಯಗಳ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ.