Sunday, 15th December 2024

ಕನ್ನಡದ ಬಗ್ಗೆ ಅಸಡ್ಡೆ ತೋರುವುದು ಖಂಡನೀಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳ ಕಾಯಿದೆ ಪ್ರಕಾರ ಅಂಗಡಿ, ಹೋಟೆಲ್, ಕಂಪನಿ ಮತ್ತು ಇತರ ಎಲ್ಲ ಬಗೆಯ ವ್ಯಾಪಾರಿಗಳು ನಾಮಫಲಕದಲ್ಲಿ ಕನ್ನಡದಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ೨೦೧೯ರಲ್ಲಿಯೇ ಬಿಬಿಎಂಪಿ ಆಯುಕ್ತರು ಈ ಸಂಬಂಧ ಆದೇಶ ಹೊರಡಿಸಿದ್ದರೂ ಅದು ಇನ್ನೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ.

ಬೆಂಗಳೂರು ಮಾತ್ರವಲ್ಲ ರಾಜ್ಯದ ಎಲ್ಲ ಕಡೆಯೂ ವ್ಯಾಪಾರ ವಹಿವಾಟು ನಡೆಸುವವರಿಗೆ ಕನ್ನಡದಲ್ಲಿ ನಾಮಫಲಕ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಎಲ್ಲಿಯೂ ಸರಿಯಾಗಿ ಅದು ಜಾರಿಗೆ ಬಂದಿಲ್ಲ. ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಕನ್ನಡದಲ್ಲಿ ನಾಮಫಲಕ ಬರೆಸದೆ ಕನ್ನಡದ ಬಗ್ಗೆ ಅಸಡ್ಡೆ ತೋರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದು, ೨೦೨೪ರ -.೨೮ರೊಳಗೆ ವಾಣಿಜ್ಯ ಮಳಿಗೆಗಳ ನಾಮ-ಲಕದಲ್ಲಿ ಶೇ.೬೦ ಕನ್ನಡ ಭಾಷೆಯಲ್ಲಿ ಇರಬೇಕೆಂದು ಗಡುವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಸ್ವಾಗತಾರ್ಹ.

ಆದರೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ನಡೆಸಿದ ಜಾಗೃತಿ ಮೆರವಣಿಗೆ ಕೆಲವು ಕಡೆಗಳಲ್ಲಿ ಅಹಿತಕರ ಘಟನೆಗೆ ಕಾರಣವಾಗಿದೆ. ನಾಡು, ನುಡಿ ವಿಚಾರ ಬಂದಾಗ ಯಾವುದೇ ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರಾದರೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಪ್ರತಿಭಟನೆ ಮಾಡಲಿ, ಧಿಕ್ಕಾರ ಕೂಗಲಿ. ಆದರೆ ಅಂಗಡಿಗಳಿಗೆ ಬೆಂಕಿ ಹಚ್ಚುವುದು, ಹೊರ ರಾಜ್ಯದ ವ್ಯಾಪಾರಿಗಳಿಗೆ ಧಮ್ಕಿ ಹಾಕುವುದು ಸರಿಯಲ್ಲ.

ಕಾನೂನು ಚೌಕಟ್ಟಿನಲ್ಲಿಯೇ ತಮ್ಮ ಒತ್ತಾಯವನ್ನು ಮಂಡಿಸಬೇಕೇ ವಿನಾ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ. ಹೊರ ರಾಜ್ಯದ
ಅನೇಕರು ಬೆಂಗಳೂರಿನಲ್ಲಿ ಬಂದು ಬಂಡವಾಳ ಹೂಡಿಕೆ ಮಾಡಿದ್ದಾರೆ. ಅದರಿಂದಾಗಿ ಇಲ್ಲಿನ ಜನರಿಗೂ ಉದ್ಯೋಗ ಸೇರಿದಂತೆ ಮತ್ತಿತರ ಸೌಲಭ್ಯಗಳೂ ಸಿಕ್ಕಿವೆ ಎಂಬುದನ್ನು ಮರೆಯಬಾರದು. ಕನ್ನಡ ಗೊತ್ತಿಲ್ಲದಿದ್ದವರಿಗೆ ಕನ್ನಡ ಕಲಿಸೋಣ.