Sunday, 15th December 2024

ಸ್ಥಳೀಯರಿಗೆ ಉದ್ಯೋಗ ಸಿಗಲಿ

ರಾಜ್ಯದಲ್ಲಿರುವ ಅನೇಕ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ನಮ್ಮ ನೆಲ, ಜಲ ಮತ್ತು ಇತರ ಸಂಪನ್ಮೂಲಗಳನ್ನು ಬಳಸಿಕೊಂಡು, ನಮಗೇ ಉದ್ಯೋಗ ನಿರಾಕರಿಸುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಹಲವು ಕೈಗಾರಿಕೆಗಳಲ್ಲಿ ಕನ್ನಡೇತರರದ್ದೇ ಪಾರುಪತ್ಯವಾಗಿದೆ. ಹೀಗಾಗಿ, ಸ್ಥಳೀಯರು ಉದ್ಯೋಗಕ್ಕಾಗಿ ಬೆಂಗಳೂರು, ಮೈಸೂರಿನಂತಹ ಮಹಾನಗರ ಗಳಿಗೆ ಗುಳೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಸರಕಾರವು ಕೈಗಾರಿಕೆಗಳನ್ನು ಸ್ಥಾಪಿಸಲು ರೈತರಿಂದ ಭೂಮಿ ವಶಪಡಿಸಿಕೊಂಡ ನಂತರ ಅವರಿಗೆ ಆ ಕೈಗಾರಿಕೆಗಳಲ್ಲಿ ಉದ್ಯೋಗ ನಿರಾಕರಿಸು ತ್ತಿರುವ ಪ್ರಸಂಗಗಳೂ ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಯ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ತಾಕೀತು ಮಾಡಿರುವುದು ಸಕಾರಾತ್ಮಕ ಬೆಳವಣಿಗೆ. ಇನ್ನು ನಿರುದ್ಯೋಗ ನಿವಾರಣೆಗಾಗಿ ಬೆಂಗಳೂರಿನಲ್ಲಿ ಜನವರಿ ಕೊನೆಯ ವಾರ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಅದಕ್ಕಾಗಿ ಸಚಿವರ ತಂಡ ರಚಿಸಲು ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳು ಉದ್ಯೊಗದ ಅನ್ವೇಷಣೆಯಲ್ಲಿದ್ದಾರೆ. ಈ ಉದ್ಯೊಗ ಮೇಳದಿಂದ ಉದ್ಯೊಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಮೇಳಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಸರಕಾರವು ಸಾರಿಗೆ, ವಸತಿ, ಊಟೋಪಚಾರದ ವ್ಯವಸ್ಥೆ ಮಾಡಬೇಕು. ಉದ್ಯೋಗದಾತರು ಉದ್ಯೋಗ ಮೇಳ ಮುಗಿದ ದಿನವೇ ತಾವು ಎಷ್ಟು ಮಂದಿಗೆ ಉದ್ಯೋಗ ನೀಡಿದ್ದೇವೆ ಎಂಬ ವಿವರವನ್ನು ಸರಕಾರಕ್ಕೆ ತಿಳಿಸಬೇಕು. ನಂತರ, ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಉದ್ಯೋಗದಾತರು ಉದ್ಯೋಗ ನೀಡಿದ್ದಾರೆಯೇ ಎಂಬುದನ್ನು ಸರಕಾರ ಖಚಿತಪಡಿಸಿಕೊಳ್ಳ ಬೇಕು. ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತರೆ, ಯುವನಿಧಿ ಗ್ಯಾರಂಟಿಗೆ ಸರಕಾರ ಮಾಡಬೇಕಾದ ವೆಚ್ಚ ಕಡಿಮೆ ಆಗುತ್ತದೆ. ಜತೆಗೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ಉದ್ಯೊಗ ಮೇಳವನ್ನು ಕಾಟಾಚಾರಕ್ಕೆ ಮಾಡದೆ, ನಿರೀಕ್ಷೆ ಇಟ್ಟುಕೊಂಡು ಬಂದವರಿಗೆ ಉದ್ಯೋಗ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ಮಾಡಬೇಕು. ಸ್ಥಳೀಯರಿಗೆ ಅಥವಾ ಅರ್ಹ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿ ಸರಕಾರದ ಉದ್ದೇಶ ಈಡೇರಬೇಕು.