Sunday, 15th December 2024

ಸ್ವೇಚ್ಛಾಚಾರಿಗಳಿಗೆ ಕಡಿವಾಣ ಎಲ್ಲಿ ?

ಮೊನ್ನೆಯಷ್ಟೇ ಹೊಸವರ್ಷದ ಸಂಭ್ರಮಾಚರಣೆ ಮುಗಿದಿದೆ. ಹಳ್ಳಿ-ಪಟ್ಟಣ-ನಗರ ಎಂಬ ಭೇದವಿಲ್ಲದೆ ರಾಜ್ಯದ ಉದ್ದಗಲಕ್ಕೂ ಜನರು ಈ ‘ಕ್ಯಾಲೆಂಡರ್ ಬದಲಾವಣೆಯ ಪರ್ವಕಾಲ’ವನ್ನು ತಮ್ಮದೇ ಆದ ರೀತಿಯಲ್ಲಿ ಸ್ವಾಗತಿಸಿದ್ದಾರೆ, ಸಂಭ್ರಮಿಸಿದ್ದಾರೆ.

ನಿಜ, ಸಂತಸದಿಂದಿರಲು, ಸಂಭ್ರಮಿಸಲು ಕಾರಣಗಳೇನೂ ಬೇಕಿಲ್ಲ; ಅದು ನಮ್ಮ ದೇಹದ ಒಂದೊಂದು ಜೀವಕೋಶದಲ್ಲೂ ಕೆನೆಗಟ್ಟಿರಬೇಕಾದ ಭಾವ. ಆದರೆ ಅದರ ಅಭಿವ್ಯಕ್ತಿಗೊಂದು ‘ಹದ’ ಇರಬೇಕಲ್ಲವೇ? ಈ ಅಭಿವ್ಯಕ್ತಿಯ ಪರಿಹದ ತಪ್ಪಿದರೆ, ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯ ಎಲ್ಲೆ ಮೀರಿದರೆ ಅದನ್ನು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಲೇಬೇಕು. ಈ ಮಾತನ್ನು ಇಲ್ಲಿ ಹೀಗೆ ಹೇಳುತ್ತಿರುವುದಕ್ಕೆ ಕಾರಣವಾಗಿರುವುದು, ಹೊಸವರ್ಷದ ಸಂಭ್ರಮಾ
ಚರಣೆಯ ನೆಪದಲ್ಲಿ ಕುಡಿತದ ನಶೆಯಲ್ಲಿ ಮುಳುಗಿದ್ದ ನಮ್ಮ ಯುವಪೀಳಿಗೆ; ಅದರಲ್ಲೂ ನಿರ್ದಿಷ್ಟವಾಗಿ ಹೆಣ್ಣು ಮಕ್ಕಳು ಅಂದು ರಾತ್ರಿ ಮೈಮೇಲೆ
ಹತೋಟಿಯಿಲ್ಲದಂತೆ ವರ್ತಿಸುತ್ತಿದ್ದ, ಎಲ್ಲೆಂದರಲ್ಲಿ ಬಿದ್ದಿದ್ದ ಚಿತ್ರಣಗಳು.

ದೃಶ್ಯಮಾಧ್ಯಮಗಳಲ್ಲಿ ಈ ಅವತಾರಗಳನ್ನು ನೋಡಿ ಕಸಿವಿಸಿಗೊಂಡ ಸಹೃದಯಿಗಳು ಸಾಕಷ್ಟಿದ್ದಾರೆ. ಸ್ವಾತಂತ್ರ್ಯಕ್ಕೂ ಸ್ವೈರತೆಗೂ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಅರಿಯದಿದ್ದಾಗ ಇಂಥ ಅಪಸವ್ಯಗಳು ಸಂಭವಿಸುವುದಿದೆ. ನಶೆಯೇರಿಸಿಕೊಂಡೇ ಹೊಸವರ್ಷವನ್ನು ಸ್ವಾಗತಿಸಬೇಕೆಂಬ, ಆ
ನೆಪದಲ್ಲಿ ಸ್ವೇಚ್ಛಾಚಾರ ಮೆರೆಯಬೇಕೆಂಬ ನಿಯಮವೇನೂ ಇಲ್ಲ; ಆದರೂ, ಬೇಡ ಬೇಡವೆಂದೂ ಬೆಂಕಿಯ ಸಂಗ ಮಾಡಲು ಹಾತೊರೆಯುವ
ಪತಂಗಗಳಂತೆ ನಮ್ಮ ಯುವಪೀಳಿಗೆ ತವಕಿಸುವುದೇಕೋ ಗೊತ್ತಾಗುತ್ತಿಲ್ಲ.

ದೇಶವೊಂದನ್ನು ಕಟ್ಟಬೇಕಾದ್ದು ಯುವಶಕ್ತಿಗಳೇ; ಆದರೆ ಇವು ತಮ್ಮತನವನ್ನು ಹೀಗೆ ನಶೆಯ ದಾಸ್ಯಕ್ಕೆ ಒಡ್ಡಿಕೊಂಡುಬಿಟ್ಟರೆ ಕಟ್ಟುವಿಕೆಯಾಗಲೀ ಸಾಧನೆಯಾಗಲೀ ಬಿಸಿಲ್ಗುದುರೆಯಾಗುವುರದಲ್ಲಿ ಸಂಶಯವಿಲ್ಲ. ಆಳುಗ ವ್ಯವಸ್ಥೆಯಲ್ಲಿನ ದೋಷಗಳನ್ನು ಪ್ರಶ್ನಿಸಿ ಸರಿದಾರಿಗೆ ತರಬೇಕಾದ ಯುವ ಪೀಳಿಗೆಯನ್ನು ಹೀಗೆ ಅಮಲಿನ ಲೋಕಕ್ಕೆ ತಳ್ಳಿ, ತಮ್ಮ ಗುಪ್ತ ಕಾರ್ಯಸೂಚಿಯನ್ನು ಸಾಧಿಸಿಕೊಳ್ಳುವವರಿದ್ದಾರೆ. ಪ್ರಶ್ನಿಸುವವರೇ ಇಲ್ಲವೆಂದ ಮೇಲೆ, ಸ್ವೇಚ್ಛಾಚಾರಿ ಗಳಿಗೆ ಕಡಿವಾಣ ಎಲ್ಲಿದ್ದೀತು? ಈ ಕಹಿವಾಸ್ತವವನ್ನು ನಮ್ಮ ಯುವಪೀಳಿಗೆ, ಅದರಲ್ಲೂ ಹೆಣ್ಣು ಮಕ್ಕಳು ಅರ್ಥಮಾಡಿ ಕೊಳ್ಳದಿರುವುದು ವಿಷಾದನೀಯ. ಸಾಧನೆಗೆ, ಸಾಹಸಗಾಥೆಗೆ ವಸ್ತುವಾಗಬೇಕಾದವರೇ ವ್ಯಥೆಯ ಹೂರಣವಾದರೆ, ಯಾರನ್ನು ದೂಷಿಸಬೇಕು?!