Tuesday, 26th November 2024

ಇಷ್ಟು ವರ್ಷ ಪೊಲೀಸರು ಏನು ಮಾಡುತ್ತಿದ್ದರು ?

ಅಯೋಧ್ಯೆಯಲ್ಲಿ ೧೯೯೨ರ ಡಿಸೆಂಬರ್‌ನಲ್ಲಿ ನಡೆದ ಕರಸೇವೆಗೂ ಮುನ್ನ ಅದೇ ತಿಂಗಳ ೫ರಂದು ಹುಬ್ಬಳ್ಳಿಯಲ್ಲೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ೯ ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.

ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು.
ಬಳಿಕ ಪ್ರಕರಣ ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಈಗ ೩೧ ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಜೀವ ಕೊಟ್ಟಿದ್ದು, ಹುಬ್ಬಳ್ಳಿ  ಪೊಲೀಸರಿಂದ ಅಂದಿನ ಆರೋಪಿಗಳಿಗಾಗಿ ಏಕಾಏಕಿ ಹುಡುಕಾಟ ಆರಂಭವಾಗಿದೆ. ೩೧ ವರ್ಷದ ಬಳಿಕ ಒಬ್ಬ ಆರೋಪಿಯನ್ನು ಪೊಲೀಸರು
ಬಂಧಿಸಿದ್ದಾರೆ.

ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲೇ ಇಷ್ಟು ಹಳೆಯ ಕಡತಕ್ಕೆ ಮರುಜೀವ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ. ಪ್ರಕರಣ ದಾಖಲಾದಾಗ ಆರೋಪಿತರು ೩೦ರಿಂದ ೩೫ ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ ೬೫-೭೦ ವರ್ಷಗಳಾಗಿವೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬದುಕಿನಲ್ಲಿ ನೆಲೆ ಕಂಡಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆಯ ವಿಳಂಬ ಹಾಗೂ ನ್ಯಾಯ ದ್ರೋಹದ ಉದಾಹರಣೆಯೂ ಆಗಿದೆ. ಆಗಿಂದಾಗಲೇ ತನಿಖೆ, ವಿಚಾರಣೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ ನ್ಯಾಯ ಸಂದಂತೆ ಆಗುತ್ತಿತ್ತು.

ಇದೀಗ ಸಂತ್ರಸ್ತರೂ ಪ್ರಕರಣವನ್ನು ಮರೆತಿರಬಹುದು, ಆರೋಪಿಗಳಂತೂ ಹೇಗೂ ಮರೆತು ಮುಂದೆ ಹೋಗಿದ್ದಾರೆ. ಸಂತ್ರಸ್ತ-ಆರೋಪಿಗಳಿಬ್ಬರಿಗೂ ಬೇಡ ವಾದ ಪ್ರಕರಣಕ್ಕೆ ಮರುಜೀವ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹಳೆಯ ಪ್ರಕರಣಗಳಿಗೆ ಮರುಜೀವ ಕೊಟ್ಟು, ಸಂತ್ರಸ್ತರಿಗೆ ನ್ಯಾಯ ಒದಗಿಸುವುದೇ ಇವರ ನಿಜವಾದ ಉದ್ದೇಶವಾಗಿದ್ದರೆ, ಇದಕ್ಕಿಂತಲೂ ಗಂಭೀರವಾದ ಪ್ರಕರಣಗಳಿವೆ. ಅನೇಕ ಕೊಲೆ ಪ್ರಕರಣಗಳು, ವಂಚನೆಗಳ
ಕಡತಗಳು ಕಾಲದ ಪ್ರವಾಹದಲ್ಲಿ ಮುಚ್ಚಿಹೋಗಿವೆ. ಅವುಗಳನ್ನು ಕೈಗೆತ್ತಿಕೊಳ್ಳಬಹುದು. ೩೧ ವರ್ಷಗಳ ಬಳಿಕ ಪ್ರಕರಣ ರಿಓಪನ್ ಎಂದರೆ ಇಷ್ಟು ವರ್ಷ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕರು ಕೇಳುವಂತಾಗಬಾರದು?